ಮುಂಗಾರ ಮಳೆಯೇನೋ ಹನಿಯಿತು, ಆದರೆ ಇಳೆ ತಣಿಯಲಿಲ್ಲ !
ಮುಂಗಾರ ಮಳೆಯೇನೋ ಹನಿಯಿತು, ಆದರೆ ಇಳೆ ತಣಿಯಲಿಲ್ಲ !
ಮಳೆಯ ಕಣ್ಣಾಮುಚ್ಚಾಲೆಯಲ್ಲಿ ಕತ್ತಲೆಗಟ್ಟುತ್ತಿರುವ ಕೃಷಿಕರ ಭವಿಷ್ಯ
ಮಳೆ ಬರಲಿಲ್ಲ ಎಂದು ಈಗ ಸರಕಾರದ ಬಳಿ ಹೇಳಿಕೊಳ್ಳುವ ಕಾಲ ಮುಗಿದುಹೋಯಿತು. ಸತತ ಮೂರನೇ ವರ್ಷವೂ ರಾಜ್ಯಕ್ಕೆ ಬರ ಬಡಿಯುತ್ತಿದೆ ಎಂಬ ಸುದ್ದಿಯಿಂದ ಭಯಗೊಂಡಿರು ಜನರೀಗ ದೇವರ ಮೊರೆ ಹೊಕ್ಕಿದ್ದಾರೆ !
ಜೂನ್ ಆರಂಭವಾಗಿದೆ. ಆದರೆ, ಗಂಗಾವತರಣವಾಗದೇ ಇರುವುದು, ಅಂಡಮಾನ್‌ನಲ್ಲೇ ಗಿರಕಿ ಹೊಡೆಯುತ್ತಿರುವ ಮಳೆಯ ಮಾರುತಗಳು ರಾಜ್ಯಕ್ಕೆ ಪ್ರವೇಶಿಸಲು ಮೀನ ಮೇಷ ಎಣಿಸುತ್ತಿರುವುದನ್ನು ಕಂಡು ಜನತೆಗೆ ಇನ್ನಷ್ಟು ಗಾಬರಿ. ಹೋಮ ಹವನ, ಪೂಜೆ ಪ್ರಾರ್ಥನೆಗಳ ಸಾಲುಗಳು ಮುಂದುವರೆಯುತ್ತಲೇ ಇದೆ. ಈ ನಡುವೆ ಬಂದೇ ಬಿಟ್ಟಿದೆ ಮಳೆ !
ಆದರೆ ಬಂದ ಮಳೆ ಇಳೆಯ ತಣಿಸಿತೇ ?
ಇಲ್ಲ. ಎರಡು ವರ್ಷಗಳಿಂದ ಒಣಗಿ ಹೋದ ಮಣ್ಣು ಮಿದುವಾಗುವಷ್ಟು ಮಳೆ ಸುರಿದಿಲ್ಲ. ಕರಾವಳಿಯಲ್ಲಿ ಒಂದಿಷ್ಟು ಮಳೆ ಸುರಿಯುತ್ತಿರುವುದು ಬಿಟ್ಟರೆ ರಾಜ್ಯದಲ್ಲಿ ಕರೆ ಕಟ್ಟೆಗಳು, ಹೊಳೆ ನದಿಗಳು ತುಂಬಿ ಹರಿಯುವಷ್ಟು ಮಳೆ ಸುರಿದೇ ಇಲ್ಲ. ಉತ್ತರ ಕರ್ನಾಟಕದ ಮಂದಿಗೆ ಇನ್ನೂ ಕುಡಿಯುವ ನೀರಿನ ಪರದಾಟ ಮುಗಿದಿಲ್ಲ. ಆದರೆ ಮಳೆಯ ತಿಂಗಳು ಜೂನ್ ಆಗಲೇ ಅರ್ಧವಾಸಿ ಮುಗಿದಿದೆ.
ಮಲಪ್ರಭಾ ಜಲಾಶಯ ತುಂಬಿ ಹರಿದಿಲ್ಲ. ಜೋಗದಲ್ಲಿ ನೀರು ಇಂದು ಬರುತ್ತದೆ, ನಾಳೆ ಬರುತ್ತದೆ ಅಂತ ಕಾಯುವಿಕೆ ಮುಂದುವರಿದಿದೆ. ನೀರು ಸರಬರಾಜು ಮತ್ತು ಒಳಚರಂಡಿ ವಿಭಾಗ ಉತ್ತರ ಕರ್ನಾಟಕದ ಅವಳಿ ನಗರಗಳಲ್ಲಿ ನೀರು ಪೂರೈಸಲು ಹೆಣಗಾಡುತ್ತಲೇ ಇದೆ.
ಬೆಂಗಳೂರಿನಲ್ಲಿ ಹನಿ ನೆಲಕ್ಕಿಳಿಯದಿದ್ದರೂ- ಅದ್ಯಾವ ಪಾಟಿ ಮಳೆ ಸುರಿದಿದೆಯೋ ಎನ್ನುವಂತೆ ಥಂಡಿಗಾಳಿ ನೆಲಮಟ್ಟ ಬೀಸುತ್ತಲೇ ಇದೆ.
ಚಿಕ್ಕಮಗಳೂರಿನಲ್ಲಿ ಕಾಫಿ ಗಿಡಗಳು ಒಣಗಿ ಹೋಗುತ್ತಿವೆ. ಅಡಿಕೆ ಬೆಳೆಗಾರರು ಬೆಲೆ ಕುಸಿತ ಹಾಗೂ ಕೊಳೆ ರೋಗದಿಂದ ನೆಲ ಕಚ್ಚಿದರೆ ಕಾಫಿ ಬೆಳೆಗಾರರು ಬೆಲೆ ಕುಸಿತದ ಬೆನ್ನಿಗೆ ಮಳೆ ಕೊರತೆಯಿಂದ ಬಳಲುವಂತಾಗಿದೆ. ನೀರನ್ನು ಎಲ್ಲಿಂದ ತರುವುದು ಎಂಬುದು ಎಲ್ಲರ ಯೋಚನೆ. ಕೊನೆಯದಾಗಿ ಕಾಣಿಸುವ ಪರಿಹಾರ ಮಳೆಯಾಂದೇ. ಆದರೆ ಬಾರದ ಮಳೆಯನ್ನು ಎಲ್ಲಿಂದ ಹಿಡಿದು ತರುವುದು?
ಬರ ಪರಿಹಾರಕ್ಕೋಸ್ಕರ ರಾಜ್ಯ ಸರಕಾರ ಹಣ ಬಿಡುಗಡೆ ಮಾಡುತ್ತಿದೆ. ಕೇಂದ್ರ ಸರಕಾರದ ಬಳಿ ಇನ್ನಷ್ಟು ಹೆಚ್ಚು ಹಣ ಕೊಡುವಂತೆ ಒತ್ತಾಯಿಸುತ್ತಿದೆ. ಆದರೆ ಹಣ ಕೊಟ್ಟು ಮಳೆ ತರುವುದಕ್ಕಾಗುವುದಿಲ್ಲ !
ಸಾಲು ಮರಗಳನ್ನು, ಕಾಡು ವನಗಳನ್ನು ಕಡಿದು ಹಾಕುತ್ತಲೇ ಇರುವ ಸರಕಾರಕ್ಕೆ ಮೂರು ಬಾರಿಯಲ್ಲ ಹತ್ತು ಬಾರಿ ಕ್ಷಾಮ ಬಂದರೂ ಬುದ್ಧಿ ಬರುವುದು ಅಷ್ಟರಲ್ಲೇ ಇದೆ. ಇತ್ತ ಮಳೆ ಕೈ ಕೊಟ್ಟಿರುವ ಕಾರಣ ಹುಡುಕುವ ಗೋಜಿಗೆ ಯಾರೂ ಹೋಗಿಲ್ಲ. ರಾಜ್ಯದಲ್ಲಿ ಕಡಿಮೆಯಾಗಿರುವ ಹಸಿರು ಸಂಪತ್ತಿಗೆ ಸರಕಾರದ ನಿರ್ಲಕ್ಷ್ಯ ಹಾಗೂ ತಪ್ಪುನೀತಿಗಳೇ ಕಾರಣ ಎಂಬುದರಲ್ಲಿ ತಕರಾರಿಲ್ಲ. ಆದರೆ ಕೆಟ್ಟ ಮೇಲೂ ಸರಕಾರಕ್ಕೆ ಬುದ್ಧಿ ಬರುವ ಹಾಗೆ ಕಾಣಿಸುತ್ತಿಲ್ಲ.
ಮುಖಪುಟ / ವಾರ್ತೆಗಳು












Click it and Unblock the Notifications