ಬಡ ಬಿಸ್ಮಿಲ್ಲ ಖಾನ್‌ಗೆ ಹುಷಾರಿಲ್ಲ, ಚಿಕಿತ್ಸೆಗೆ ಸಾಕಷ್ಟು ಹಣವಿಲ್ಲ
ಬಡ ಬಿಸ್ಮಿಲ್ಲ ಖಾನ್‌ಗೆ ಹುಷಾರಿಲ್ಲ, ಚಿಕಿತ್ಸೆಗೆ ಸಾಕಷ್ಟು ಹಣವಿಲ್ಲ
‘ಇನ್ನು ನನ್ನ ಕೈಯಲ್ಲಿ ಶಹನಾಯಿ ನುಡಿಸೋಕೆ ಆಗಲ್ಲ’
ಬಿಸ್ಮಿಲ್ಲಾ ಖಾನ್ ಅವರಿಗೀಗ ತೊಂಬತ್ತು ವಯಸ್ಸು. ವಯೋ ಸಹಜ ನಿತ್ರಾಣದ ಜೊತೆಗೆ ಜ್ವರದ ಬೇಗೆ ಅವರನ್ನು ಹಾಸಿಗೆಯಿಂದ ಏಳದಂತೆ ಮಾಡಿದೆ. ಈ ವಿಷಯದಿಂದ ಕಲಾವಿದರು ಅಷ್ಟೇನೂ ಆಘಾತಗೊಳ್ಳಲಿಲ್ಲ. ಆದರೆ, ಬಿಸ್ಮಿಲ್ಲಾ ಖಾನ್ ಬಡವರು ಎಂಬುದು ಇಡೀ ಕಲಾರಂಗವನ್ನು ಬೆಚ್ಚಿ ಬೀಳಿಸಿದೆ. ಅಷ್ಟು ವರ್ಷಗಳ ಕಾಲ ಶಹನಾಯಿಗೆ ಜೀವ ತುಂಬಿದ, ‘ಭಾರತ ರತ್ನ’ದಂಥ ದೊಡ್ಡಾತಿ ದೊಡ್ಡ ಪ್ರಶಸ್ತಿಗಳ ಬುಟ್ಟಿಗೆ ಹಾಕಿಕೊಂಡ ಕಲಾವಿದನ ಬಳಿ ವೈದ್ಯರ ಹತ್ತಿರ ಹೋಗಲು ಹಣವಿಲ್ಲದ ಸ್ಥಿತಿ.
‘ನೀವೇನೂ ಯೋಚನೆ ಮಾಡಬೇಡಿ. ನಿಮ್ಮ ಚಿಕಿತ್ಸೆಗೆ ಬೇಕಾದ ಹಣವನ್ನು ಕೊಡಿಸುತ್ತೇನೆ ಅಂತ ಕಳೆದ ವರ್ಷ ಆಗಸ್ಟ್ 15ನೇ ತಾರೀಕು ಪ್ರಧಾನಿ ವಾಜಪೇಯಿ ಭರವಸೆ ಕೊಟ್ಟಿದ್ದರು. ಆದರೆ, ಈವರೆಗೂ ಅವರಿಂದ ಚಿಕ್ಕಾಸೂ ಸಿಕ್ಕಿಲ್ಲ’ ಎಂದು ಬಿಸ್ಮಿಲ್ಲ ಅಲವತ್ತುಕೊಳ್ಳುತ್ತಾರೆ.
‘ಮಂತ್ರಿ ಮಹೋದಯರಿಗೆ ಐಷಾರಾಮಿ ಸೌಕರ್ಯ ಕೊಡುವ ಸರ್ಕಾರಕ್ಕೆ ಕಲಾವಿದರೆಂದರೆ ಅಷ್ಟಕ್ಕಷ್ಟೆ. ಉಸ್ತಾದ್ ಬಿಸ್ಮಿಲ್ಲ ಭಾರತ ರತ್ನ. ಅಂಥವರನ್ನು ಹೀಗಾ ನಿರ್ಲಕ್ಷಿಸೋದು. ಕಲಾವಿದರನ್ನು ಹೇಗೆ ನೋಡಿಕೊಳ್ಳಬೇಕು ಅಂತ ಬೇರೆ ದೇಶಗಳನ್ನು ನೋಡಿ ನಮ್ಮ ಸರ್ಕಾರ ತಿಳಿಯಲಿ’ ಎಂದು ಸರೋದ್ ಮಾಂತ್ರಿಕ ಅಮ್ಜದ್ ಅಲಿ ಖಾನ್ ಕಿಡಿ ಕಾರಿದ್ದಾರೆ. ಶಾಸ್ತ್ರೀಯ ನರ್ತಕಿ ಸೋನಾಲ್ ಮಾನ್‌ಸಿಂಗ್ ಕೂಡ ಈ ವಿಷಯದಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಅನೇಕ ಕಲಾವಿದರು ಬಿಸ್ಮಿಲ್ಲಾ ಖಾನ್ ಅವರ ಮನೆಗೆ ಹೋಗಿ, ಅವರ ಆರೋಗ್ಯವನ್ನು ವಿಚಾರಿಸಿಕೊಂಡು ಬರುತ್ತಿದ್ದಾರೆ. ಆದರೆ, ಅವರ ಚಿಕಿತ್ಸೆಗೆ ಬೇಕಾದ ಖರ್ಚು ಮಾತ್ರ ಗಿಟ್ಟುತ್ತಿಲ್ಲ.
(ಇನ್ಫೋ ವಾರ್ತೆ)
ಮುಖಪುಟ / ವಾರ್ತೆಗಳು












Click it and Unblock the Notifications