ವಿಹೆಚ್ಪಿ ನಾಯಕ ತೊಗಾಡಿಯ ವಿರುದ್ಧ ಕ್ರಮ
ಚಿಕ್ಕಮಗಳೂರು : ದತ್ತಪೀಠವನ್ನು ಕನಾಟಕದ ಅಯೋಧ್ಯೆ ಎಂದು ಬಣ್ಣಿಸಿರುವ ವಿಶ್ವ ಹಿಂದೂ ಪರಿಷತ್ನ ಅಂತರರಾಷ್ಟ್ರೀಯ ಕಾರ್ಯದರ್ಶಿ ಪ್ರವೀಣ್ ತೊಗಾಡಿಯ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಇತ್ತೀಚೆಗೆ ಜರುಗಿದ ದತ್ತ ಜಯಂತಿಯ ಎರಡನೇ ದಿನ (ಡಿ.18, 2002) ಕೋಮು ಸೌಹಾರ್ದ ಕದಡುವಂಥ ಪ್ರಚೋದನಕಾರಿ ಭಾಷಣ ಮಾಡಿದ ಹಿನ್ನೆಲೆಯಲ್ಲಿ ತೊಗಾಡಿಯ ವಿರುದ್ಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ದತ್ತ ಜಯಂತಿ ಸಂದರ್ಭದಲ್ಲಿ ವಿಹೆಚ್ಪಿ, ಭಜರಂಗದಳದ ಇನ್ನೂ ಕೆಲವು ನಾಯಕರು ಪ್ರಚೋದನಕಾರಿ ಭಾಷಣ ಮಾಡಿದ್ದು , ಅವರ ವಿರುದ್ಧವೂ ಕ್ರಮ ಕೈಗೊಳ್ಳಲು ಪೊಲೀಸರು ಯೋಚಿಸುತ್ತಿದ್ದಾರೆ.
ಎಲ್ಲ ಪ್ರಚೋದನಕಾರಿ ಭಾಷಣಗಳ ಟೇಪ್ಗಳನ್ನು ಸಂಗ್ರಹಿಸಿರುವ ಪೊಲೀಸರು, ಈ ಟೇಪುಗಳನ್ನು ಗೃಹ ಸಚಿವಾಲಯಕ್ಕೆ ಕಳಿಸಿದ್ದಾರೆ.
ಕಠಿಣ ಕ್ರಮ : ಪ್ರಚೋದನಕಾರಿ ಭಾಷಣ ಮಾಡಿದ ತೊಗಾಡಿಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಗುಲ್ಬರ್ಗಾದಲ್ಲಿ ಭಾನುವಾರ ತಿಳಿಸಿದ್ದಾರೆ. ಈ ಮುನ್ನ ತೊಗಾಡಿಯ ಮತ್ತೊಮ್ಮೆ ಕರ್ನಾಟಕಕ್ಕೆ ಕಾಲಿಟ್ಟರೆ ಕೈ ಕಾಲು ಮುರಿಸುವುದಾಗಿ ಸಚಿವೆ ಮೋಟಮ್ಮ ಧಮಕಿ ಹಾಕಿದ್ದರು.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...


Click it and Unblock the Notifications
