ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೋಲ್ಕತಾ ಮಗು, ಬೆಂಗಳೂರು ವೈದ್ಯ; ಕುಂತಲ್ಲೇ ಚಿಕಿತ್ಸೆ !

By Staff
|
Google Oneindia Kannada News

ಬೆಂಗಳೂರು : ನಾರಾಯಣ ಹೃದಯಾಲಯದ ಹೃದ್ರೋಗ ತಜ್ಞ ದೇವೀಶೆಟ್ಟಿ ಮಗುವೊಂದನ್ನು ಪರೀಕ್ಷಿಸುತ್ತಿದ್ದಾರೆ. ಆದರೆ ಮಗು ಅವರ ಬಳಿಯಿಲ್ಲ. ದೇವೀಶೆಟ್ಟಿ ಇಲ್ಲಿ, ಬೆಂಗಳೂರಲ್ಲಿ ; ಮಗು ಅಲ್ಲಿ, ಕೋಲ್ಕತಾದಲ್ಲಿ.

ಬೆಂಗಳೂರು ವಿಶ್ವ ವಿದ್ಯಾಲಯ ‘ಜ್ಞಾನಭಾರತಿ’ಯಲ್ಲಿ ನಡೆಯುತ್ತಿರುವ ಭಾರತೀಯ ವಿಜ್ಞಾನ ಕಾಂಗ್ರೆಸ್‌ನ 90ನೇ ಮೇಳದಲ್ಲಿನ ‘ಬಾಹ್ಯಾಕಾಶ ಶೃಂಗಸಭೆ’ಯಲ್ಲಿ ದೇವೀಶೆಟ್ಟಿ ಟೆಲಿ ಮೆಡಿಸಿನ್‌ನ ಪ್ರಾತ್ಯಕ್ಷಿಕೆ ಕೊಟ್ಟರು. ಎಕ್ಸ್‌ರೇ, ಇಸಿಜಿ, ಎಕೋ ರಿಪೋರ್ಟ್‌- ಮೊದಲಾದವನ್ನು ಕೋಲ್ಕತಾದಿಂದ ತೋರಿಸಿದ್ದು ಅಲ್ಲಿನ ವೈದ್ಯ ಡಾ. ಗಡ್‌. ಅವನ್ನು ಬೆಂಗಳೂರಲ್ಲೇ ಕೂತು ನೋಡಿದ್ದು ದೇವೀಶೆಟ್ಟಿ. ಎಲ್ಲವನ್ನೂ ನೋಡಿದ ಬಳಿಕ, ‘ಈ ಪರೀಕ್ಷೆಗಳನ್ನು ನೋಡಿದರೆ ಮಗುವಿನ ಹೃದಯದಲ್ಲಿ ಸಮಸ್ಯೆ ಇದೆ ಅನ್ನೋದು ಖಾತ್ರಿಯಾಗುತ್ತದೆ. ಮುಖ್ಯ ರಕ್ತನಾಳ ಕಾಣುತ್ತಿಲ್ಲ. ಇನ್ನು 10 ದಿನದಲ್ಲಿ ಮಗುವಿಗೆ ತೆರೆದ ಹೃದಯದ ಶಸ್ತ್ರ ಚಿಕಿತ್ಸೆ ಮಾಡಬೇಕು’ ಎಂದರು.

ಮಗುವಿನ ತಾಯಿ ಕೋಲ್ಕತಾದಲ್ಲಿ ಬಿಕ್ಕಲಾರಂಭಿಸಿದ್ದು ಇಲ್ಲೂ ಕೇಳಿಸಿತು. ಮಗುವಿನ ತಂದೆ- ಆಪರೇಷನ್‌ಗೆ ಸಾಕಷ್ಟು ಹಣವಿಲ್ಲ. ಯಾರಾದರೂ ಸಹಾಯ ಮಾಡುವರೇ ಎಂದು ಅಲ್ಲಿಂದಲೇ ಬಂಗಾಳಿ ಭಾಷೆಯಲ್ಲಿ ಕೇಳಿದರು. ಮಗು ಹಾಗೂ ತಂದೆ- ತಾಯಿಯನ್ನು ಬೆಂಗಳೂರಿಗೆ ಕಳುಹಿಸಿಕೊಡಿ ಎಂದು ಡಾ. ಗಡ್‌ ಅವರಿಗೆ ದೇವೀಶೆಟ್ಟಿ ಹೇಳಿದರು.

ಇದೊಂದು ಪ್ರಾತ್ಯಕ್ಷಿಕೆ. ಉಪಗ್ರಹದ ನೆರವಿನಿಂದ ದೂರದ ಯಾವುದೋ ಹಳ್ಳಿಯ ಹೃದ್ರೋಗಿಯನ್ನೂ ಪರೀಕ್ಷಿಸುವುದು ಎಷ್ಟು ಸರಳವಾಗುತ್ತದೆ ಎಂಬುದನ್ನು ದೇವೀಶೆಟ್ಟಿ ರುಜುವಾತು ಮಾಡಿದ್ದು ಹೀಗೆ. ಭಾರತದಲ್ಲಿ ಈಚೆಗೆ ಮಕ್ಕಳ ಹೃದ್ರೋಗ ಸಮಸ್ಯೆಗಳು ಹೆಚ್ಚಾಗುತ್ತಿವೆ. ಬಡತನ ಇರುವ ಮಕ್ಕಳ ತಂದೆ- ತಾಯಂದಿರು ಚಿಕಿತ್ಸೆ ಕೊಡಿಸಲಾಗದೆ, ದೊರೆಯುವ ಸಹಾಯದ ಅರಿವೂ ಇಲ್ಲದೆ ಒದ್ದಾಡುತ್ತಿದ್ದಾರೆ. ಈ ಸಮಸ್ಯೆ ಪರಿಹಾರಕ್ಕೆ ‘ಟೆಲಿ ಮೆಡಿಸನ್‌’ ವರದಾನವಾಗಿದೆ.

ಅಸ್ಸಾಂ, ಪಶ್ಚಿಮ ಬಂಗಾಳ ಹಾಗೂ ಕರ್ನಾಟಕದ ಚಾಮರಾಜ ನಗರ ಜಿಲ್ಲೆಯಲ್ಲಿ ಈ ಸೌಕರ್ಯವಿರುವ ಹೃದ್ರೋಗ ಚಿಕಿತ್ಸಾ ಕೇಂದ್ರಗಳನ್ನು ಈಗಾಗಲೇ ತೆರೆಯಲಾಗಿದೆ. ಮುಂದಿನ ದಿನಗಳಲ್ಲಿ ಹೆಚ್ಚು ಚಿಕಿತ್ಸಾ ಕೇಂದ್ರಗಳು ತಲೆ ಎತ್ತಲಿದ್ದು, ಬಡವರಿಗೂ ಹೃದ್ರೋಗ ಚಿಕಿತ್ಸೆ ಎಟುಕಲಿದೆ ಎಂದು ದೇವೀಶೆಟ್ಟಿ ತಿಳಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X