ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರ್ನಾಟಕದಲ್ಲೂ ‘ಹಿಂದುತ್ವ’ದ ಹೋರಾಟ- ಬಿಜೆಪಿ

By Staff
|
Google Oneindia Kannada News

ಬೆಂಗಳೂರು : ಗುಜರಾತ್‌ ಚುನಾವಣೆಯ ಭಾರೀ ಯಶಸ್ಸಿನ ಹಿನ್ನೆಲೆಯಲ್ಲಿ ಹಿಂದುತ್ವದ ರುಚಿ ಹತ್ತಿರುವ ಭಾರತೀಯ ಜನತಾ ಪಕ್ಷ - ‘ಹಿಂದುತ್ವ’ದ ಹೋರಾಟವನ್ನು ಕರ್ನಾಟಕದಲ್ಲೂ ಪ್ರಾರಂಭಿಸಲು ಮುಂದಾಗಿದೆ.

ಕರ್ನಾಟಕ ಸೇರಿದಂತೆ ದೇಶಾದ್ಯಂತ ಹಿಂದುತ್ವದ ಆಧಾರದ ಮೇಲೆ ಹೋರಾಟ ನಡೆಸಲು ಬಿಜೆಪಿ ಸಜ್ಜಾಗಿದೆ ಎಂದು ಕೇಂದ್ರ ಬಡತನ ನಿರ್ಮೂಲನಾ ಸಚಿವ ಅನಂತಕುಮಾರ್‌ ಗುರುವಾರ (ಡಿ.27) ಘೋಷಿಸಿದರು. ರಾಜ್ಯ ಸರ್ಕಾರದ ವಿರುದ್ಧ ರಾಜ್ಯ ಬಿಜೆಪಿ ಆಯೋಜಿಸಿದ್ದ ಬೃಹತ್‌ ಪ್ರತಿಭಟನಾ ರ್ಯಾಲಿಯಲ್ಲಿ ಅವರು ಭಾಗವಹಿಸಿ ಮಾತನಾಡುತ್ತಿದ್ದರು.

ಹಿಂದುತ್ವದ ಆಧಾರದ ಮೇಲೆ ಹೋರಾಟ ನಡೆಸುತ್ತೇವೆ ಎಂದು ಹೇಳಿಕೊಳ್ಳಲು ನಮಗೆ ಯಾವುದೇ ಸಂಕೋಚವಿಲ್ಲ . ‘ನಾವು ಹಿಂದುಗಳು, ನಮ್ಮದು ಹಿಂದುತ್ವ, ನಾವು ಭಾರತೀಯರು’ ಎಂದು ಹೇಳಿಕೊಳ್ಳಲು ಸಂಕೋಚ ಪಡದಿರುವಂತೆ ನಮ್ಮ ಅಧ್ಯಕ್ಷರಾದ ವೆಂಕಯ್ಯನಾಯ್ಡು ತಿಳಿಸಿದ್ದಾರೆ. ಹಿಂದುತ್ವದ ಹೋರಾಟ ಕರ್ನಾಟಕದಲ್ಲಿ ಕಾಂಗ್ರೆಸ್‌ ಸರ್ಕಾರವನ್ನು ಅಧಿಕಾರದಿಂದ ಕೆಳಗಿಳಿಸಲಿದೆ ಎಂದು ಅನಂತಕುಮಾರ್‌ ಹೇಳಿದರು.

ಗುಜರಾತ್‌ ವಿಜಯದ ಸಂದರ್ಭದಲ್ಲಿ ನರೇಂದ್ರ ಮೋದಿ ಅವರಿಗೆ ಸಿಹಿ ತಿನ್ನಿಸಲು ಹೋದಾಗ, ಕರ್ನಾಟಕದ ವಿಧಾನಸೌಧದಲ್ಲಿ ಬಿಜೆಪಿ ಬಾವುಟ ಹಾರಿಸಿದ ನಂತರ ಸಿಹಿ ಪಡೆಯುವುದಾಗಿ ತಿಳಿಸಿದ್ದಾರೆ ಎಂದು ಅನಂತಕುಮಾರ್‌ ಹೇಳಿದರು.

ಬೃಹತ್‌ ರ್ಯಾಲಿ : ಎಸ್ಸೆಂ.ಕೃಷ್ಣ ಅವರ ಸರ್ಕಾರವನ್ನು ಅಧಿಕಾರದಿಂದ ಕಿತ್ತೊಯ್ಯುವವರೆಗೂ ವಿಶ್ರಮಿಸದಿರುವ ನಿರ್ಣಯವನ್ನು ಗುರುವಾರ ನಡೆದ ಬಿಜೆಪಿ ರ್ಯಾಲಿ ಕೈಗೊಂಡಿತು.

ಕಾಂಗ್ರೆಸ್‌ ಸರ್ಕಾರವನ್ನು ವೀರಪ್ಪನ್‌ ಸರ್ಕಾರ ಎಂದು ಬಣ್ಣಿಸಿದ ಬಿಜೆಪಿ ನಾಯಕರು, ರಾಜ್ಯ ಸರ್ಕಾರದ ವೈಫಲ್ಯಗಳನ್ನು ಜನತಾ ನ್ಯಾಯಾಲಯದ ಮುಂದಿಡಲು ಹಾಗೂ ಅಗತ್ಯ ಬಿದ್ದಲ್ಲಿ ಜೈಲ್‌ಭರೋ ಚಳವಳಿ ಹಮ್ಮಿಕೊಳ್ಳಲು ಸಿದ್ಧವಿರುವುದಾಗಿ ಪ್ರಕಟಿಸಿದರು.

ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ್ದ ಸಹಸ್ರಾರು ಬಿಜೆಪಿ ಕಾರ್ಯಕರ್ತರು ರ್ಯಾಲಿಯಲ್ಲಿ ಭಾಗವಹಿಸಿದ್ದರು. ಕೇಂದ್ರ ಸಚಿವರಾದ ಅನಂತಕುಮಾರ್‌, ಬಸನಗೌಡ ಪಾಟೀಲ್‌ ಯತ್ನಾಳ್‌, ಮಾಜಿ ಸಚಿವ ಧನಂಜಯಕುಮಾರ್‌, ಬಿಜೆಪಿ ರಾಜ್ಯ ನಾಯಕರಾದ ಬಿ.ಜಿ.ಬಣಕಾರ್‌, ಯಡಿಯೂರಪ್ಪ, ಕೆ.ಎಸ್‌.ಈಶ್ವರಪ್ಪ, ರಾಮಚಂದ್ರಗೌಡ ಮುಂತಾದವರು ರ್ಯಾಲಿಯಲ್ಲಿ ಹಾಜರಿದ್ದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X