• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಸಂಧ್ಯಾವಂದನೆಗೆ ವೈಜ್ಞಾನಿಕ ಆಧಾರವಿದೆ -ಲಕ್ಷ್ಮೀನಾರಾಯಣ ಭಟ್‌

By Staff
|

*ಶ್ರೀವತ್ಸ ಜೋಶಿ

Who are these ? see at the end‘ತಾನೊಬ್ಬ ಬ್ರಾಹ್ಮಣ ಎಂದು ಹೇಳಿಕೊಳ್ಳಲು ಇಂದು ಬ್ರಾಹ್ಮಣರೇ ಸಂಕೋಚಪಡುವ ದಿನಗಳು ಬಂದಿವೆ. ಬ್ರಾಹ್ಮಣ್ಯದ ಸಂಕೇತಗಳನ್ನೆಲ್ಲ ತೊರೆದು ಅಧ್ಯಾತ್ಮಿಕ-ನೈತಿಕ ಬಡತನವನ್ನು ನಾವೇ ತಂದುಕೊಂಡಿದ್ದೇವೆ. ಸಂಧ್ಯಾವಂದನೆ, ಗಾಯತ್ರಿ ಮಂತ್ರದಂತಹ ಅತ್ಯುತ್ತಮ ಸಂಸ್ಕಾರಗಳು ನಮಗೆ ವಂಶಪಾರಂಪರ್ಯವಾಗಿ ಬಂದಿದ್ದರೂ ಇಂದು ನಮಗೆ ಬೇಡವಾಗಿವೆ. ಯಾಂತ್ರೀಕೃತ ಜೀವನದ ತುದಿಗಾಲ ಓಟದಲ್ಲಿ ಆತ್ಮ ಶುದ್ಧಿ ಕಾರ್ಯಕ್ಕೆ ನಮಗೆ ಪುರುಸೊತ್ತಿಲ್ಲವಾಗಿದೆ. ಇದು ಹೀಗೆ ಮುಂದುವರಿಯಬಾರದು. ವೈಜ್ಞಾನಿಕವಾಗಿ ವಿಶ್ಲೇಷಿಸಿದರೂ ಬಹಳ ಆರೋಗ್ಯಕರವಾದ ಸಂಧ್ಯಾವಂದನೆಯಂತಹ ಸಂಸ್ಕಾರವನ್ನು ನಾವು ಉಳಿಸಿ ಬೆಳೆಸಬೇಕು. ಬ್ರಾಹ್ಮಣ ಸಂಘಟನೆ ಇರುವುದು ಇತರರ ವಿರುದ್ಧ ಹೋರಾಟಕ್ಕಲ್ಲ, ಬದಲಾಗಿ ನಮ್ಮದೇ ಅಂತಃಸತ್ವ ವೃದ್ಧಿಗಾಗಿ ಇರಬೇಕು’ ಎಂಬ ಅಭಿಪ್ರಾಯ ವ್ಯಕ್ತಪಡಿಸಿದವರು 25 ವರ್ಷ ಭೌತಶಾಸ್ತ್ರ ಪ್ರಾಧ್ಯಾಪಕರಾಗಿದ್ದು ನಿವೃತ್ತಿಯ ನಂತರ ಈಗ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಕಾರ್ಯದರ್ಶಿಯಾಗಿರುವ ಎಚ್‌.ಎಸ್‌. ಲಕ್ಷ್ಮೀನಾರಾಯಣ ಭಟ್‌.

ಸಂದರ್ಭ, ಡಿಸೆಂಬರ್‌ 25ರಂದು ಬೆಂಗಳೂರಿನ ಚಿತ್ಪಾವನ ಸಮಾಜವು ಮಲ್ಲೇಶ್ವರಂನಲ್ಲಿ ಏರ್ಪಡಿಸಿದ್ದ ವಾರ್ಷಿಕ ಸ್ನೇಹ ಸಮ್ಮಿಲನ - ಪ್ರತಿಭಾ ಪುರಸ್ಕಾರ ಕಾರ್ಯಕ್ರಮ. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಲಕ್ಷ್ಮೀನಾರಾಯಣ ಭಟ್‌ರ ಭಾಷಣ- ಕೆ.ಎಸ್‌.ನರಸಿಂಹ ಸ್ವಾಮಿಯವರ ಕವನಗಳು, ಮಂಕುತಿಮ್ಮನ ಕಗ್ಗದಿಂದ ಕೆಲವು ಸಾಲುಗಳೊಂದಿಗೆ ಇನ್ನೂ ಇನ್ನೂ ಕೇಳೋಣವೆಂದೆನಿಸುವಂತಿತ್ತು.

ಇದೇ ಕಾರ್ಯಕ್ರಮದಲ್ಲಿ, ಚಿತ್ಪಾವನ ಸಮಾಜದ ಹೆಮ್ಮೆ - ವೈದಿಕ ಶಿರೋಮಣಿ ವೇದರತ್ನ ಕೇಶವ ಸೀತಾರಾಮ ಜೋಗಳೇಕರ್‌ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಗೋಕರ್ಣದಲ್ಲಿ ಕ್ಷೇತ್ರ ಪುರೋಹಿತರಾಗಿರುವ, ಸುಮಾರು 40 ವರ್ಷಗಳ ಹಿಂದೆಯೇ ಕಾಶೀ ಸಂಸ್ಥಾನದಿಂದ ‘ರತ್ನಕಂಕಣ’ ಅಭಿದಾನಪಾತ್ರರಾಗಿರುವ (ಕಾಶೀ ಮಹಾರಾಜರ ವಿದ್ವತ್‌ ಸಭೆಯಲ್ಲಿ ದಶಪಾಠಗಳನ್ನು ಕಂಠಪಾಠ ಒಪ್ಪಿಸುವ ಘನವಿದ್ವಾಂಸರಿಗಷ್ಟೇ ರತ್ನಕಂಕಣ ಪುರಸ್ಕಾರ ದೊರಕುತ್ತದೆ) ಜೋಗಳೇಕರ್‌ ಅವರು ಸನ್ಮಾನಕ್ಕೆ ಉತ್ತರವಾಗಿ, ತನಗೆ ದೊರೆತ ಪುರಸ್ಕಾರ ಗೌರವಗಳೆಲ್ಲವೂ ವೈದಿಕ ಸಂಸ್ಕೃತಿಗೆ ಸಿಕ್ಕಿದ ಮನ್ನಣೆಯೇ ಹೊರತು ತಾನೊಬ್ಬ ನಿಮಿತ್ತ ಮಾತ್ರ ಎಂಬ ಉದಾತ್ತ ಚಿಂತನೆಯಾಂದಿಗೆ ‘ತುಂಬಿದ ಕೊಡ ತುಳುಕುವುದಿಲ್ಲ’ ಎಂಬ ನಾಣ್ಣುಡಿಗೆ ಸಂಕೇತವೆನಿಸಿದರು.

ಇನ್ನೊಬ್ಬ ಮುಖ್ಯ ಅತಿಥಿ, ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘದ ಅಧ್ಯಕ್ಷ ಬಾಲಚಂದ್ರ ಡೋಂಗ್ರೆಯವರು ಮಾತನಾಡುತ್ತ ಮುಂದಿನ ವರ್ಷ ಮೈಸೂರಲ್ಲಿ ಹಮ್ಮಿಕೊಂಡಿರುವ ಚಿತ್ಪಾವನ ಸಮ್ಮೇಳನದ ರೂಪುರೇಷೆಗಳು ಸಿದ್ಧವಾಗುತ್ತಿವೆ, ಸಮಾಜ ಬಾಂಧವರೆಲ್ಲರ ಸಹಕಾರದಿಂದ ಮಾತ್ರವೇ ಇಂತಹ ಸಂಘಟನೆಗಳು ಸಾರ್ಥಕತೆ ಪಡೆಯಬಲ್ಲವು ಎಂದರು.

ಸಂತಗಾನ ಸೌರಭ

Who are these ? see at the endಬೆಳಿಗ್ಗೆ ಹತ್ತೂವರೆ ಗಂಟೆಗೆ ತಲಾರೆ ಗಣಪತಿ ಗೋವಿಂಡೆಯವರು ದೀಪ ಬೆಳಗಿಸಿ ಉದ್ಘಾಟಿಸಿದ ಈ ಸ್ನೇಹ-ಸಮ್ಮಿಲನ ಕಾರ್ಯಕ್ರಮದಲ್ಲಿ ವೇದಿಕೆಯ ಒಂದು ಪಾರ್ಶ್ವದಲ್ಲಿ ಸತ್ಯನಾರಾಯಣ ಪೂಜೆ ಜರುಗುತ್ತಿದ್ದಂತೆಯೇ ಇನ್ನೊಂದು ಕಡೆ ಚಿತ್ಪಾವನ ಸಮಾಜದ ಹಿರಿಯ ಸಂಗೀತ ವಿದುಷಿ ಶ್ಯಾಮಲಾ ಜಿ. ಭಾವೆಯವರ ನಿರ್ದೇಶನದಲ್ಲಿ ‘ಸಂತಗಾನ ಸೌರಭ’ವೆಂಬ ಕರ್ಣಾನಂದಕರ ಸಂಗೀತ ಕಾರ್ಯಕ್ರಮ ನಡೆಯಿತು. ಕನ್ನಡ, ಮರಾಠಿ, ಹಿಂದಿ ಭಕ್ತಿಗೀತೆಗಳನ್ನು ಸುಶ್ರಾವ್ಯವಾಗಿ ಹಾಡಿದ ಶ್ಯಾಮಲಾ ಭಾವೆ ‘ಉಭಯಗಾನ ವಿದುಷಿ’ ಎಂಬ ತಮ್ಮ ಬಿರುದನ್ನು ಸಭೆಗೆ ಪರಿಚಯಿಸಿದರು.

ಸಭಾ ಕಾರ್ಯಕ್ರಮದಲ್ಲಿ ಪ್ರಾರ್ಥನೆಯ ನಂತರ, ಸುಮಾರು ಹದಿಮೂರು ವರ್ಷದ ಬಾಲಕಿ ಮೇಘನಾ ಫಾಟಕ್‌ ಉಚ್ಚರಿಸಿದ ವೇದಘೋಷ ಕಾರ್ಯಕ್ರಮ ಎಲ್ಲರ ಗಮನ ಸೆಳೆಯಿತು. ಈ ಪುಟ್ಟ ಹುಡುಗಿಯಂತೆಯೇ ಇನ್ನುಳಿದವರೂ ವೇದಪಠನದಲ್ಲಿ ಆಸಕ್ತಿ ತೋರಿ ಹೊಸ ಪರಂಪರೆಗೆ ನಾಂದಿಯಾಗಬೇಕೆಂದು ವೇದಿಕೆಯಲ್ಲಿದ್ದ ಗಣ್ಯರೆಲ್ಲ ಮುಕ್ತಕಂಠದಿಂದ ಮೇಘನಾಳ ಸಾಧನೆಯನ್ನು ಪ್ರಶಂಸಿಸಿದರು.

ಎಸೆಸ್ಸೆಲ್ಸಿ, ಪಿ.ಯೂ.ಸಿ, ಪದವಿ ಮತ್ತು ವೃತ್ತಿಪರ ಶಿಕ್ಷಣದಲ್ಲಿ ಉತ್ತಮ ಸಾಧನೆ ತೋರಿದ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಮತ್ತು ಡಿಸೆಂಬರ್‌ 15ರಂದು ಸಮಾಜದ ಮಕ್ಕಳು, ಮಹಿಳೆಯರು ಹಾಗೂ ಪುರುಷರಿಗಾಗಿ ನಡೆಸಿದ್ದ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ವಿತರಣೆಯೂ ಕಾರ್ಯಕ್ರಮದ ಅಂಶಗಳಾಗಿದ್ದುವು. ಬೆಂಗಳೂರು ಚಿತ್ಪಾವನ ಸಮಾಜದ ಅಧ್ಯಕ್ಷ ನರಹರಿ ಖರೆಯವರ ಅಧ್ಯಕ್ಷತೆಯಲ್ಲಿ ನಡೆದ ಸಭೆಗೆ ಸ್ವಾಗತ ಕೋರಿದವರು ಸಮಾಜದ ಕಾರ್ಯದರ್ಶಿ, ಭಾರ್ಗವವಾಣಿ ಪತ್ರಿಕೆಯ ಸಂಪಾದಕ ದಿವಾಕರ ಡೋಂಗ್ರೆ; ವಂದನಾರ್ಪಣೆ ಸಲ್ಲಿಸಿದವರು ಶ್ರೀಕರ ಮರಾಠೆ. ‘ಚಿತ್ಪಾವನ ವಿಳಾಸ ದರ್ಶಿನಿ’, ‘ಭಾರ್ಗವ ದಿನ ದರ್ಶಿನಿ - 2003’, ಹಾಗೆಯೇ ಮಹಾರಾಷ್ಟ್ರದ ಸೋಲಾಪುರದಿಂದ ಪ್ರಕಟವಾಗುವ ‘ದಾತೆ ಪಂಚಾಂಗ’ದ ಕನ್ನಡ ಆವೃತ್ತಿ ಮತ್ತಿತರ ಧಾರ್ಮಿಕ ಪುಸ್ತಕಗಳ ಮಾರಾಟವೂ ಸಭಾಗೃಹದ ಮೂಲೆಯಾಂದರಲ್ಲಿ ಭರದಿಂದ ನಡೆದಿತ್ತು.

ಹೋಳಿಗೆ-ಬಿಸಿಬೇಳೆಭಾತ್‌-ಮೊಸರನ್ನ-ವಡೆಯ ಸವಿಭೋಜನಾನಂತರ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ತಮ್ಮ ಪ್ರತಿಭೆ ತೋರಿಸಿ ಮನಸ್ಸಿಗೆ ಸಿಹಿ ಹಂಚಿದವರು ಸಮಾಜದ ಸದಸ್ಯರು ಮತ್ತು ಮಕ್ಕಳು. ಭರತನಾಟ್ಯ, ಹಾಡು, ಮಿಮಿಕ್ರಿ, ಸ್ವರಚಿತ ಚುಟುಕುಗಳ ಪ್ರಸ್ತುತಿ, ಚಂದ್ರಶೇಖರ್‌ ಶೇಂಡ್ಯೆ ಅವರ ಜಾದೂ ಪ್ರದರ್ಶನ ವಿಶೇಷವಾಗಿ ಮಕ್ಕಳ ಮನಸೂರೆಗೊಳ್ಳುವಲ್ಲಿ ಯಶಸ್ವಿಯಾದುವು; ಕ್ರಿಸ್ಮಸ್‌ ರಜಾದಿನವನ್ನು ಇಂತಹದೊಂದು ಸ್ನೇಹ ಸಮ್ಮಿಲನದಲ್ಲಿ ಕಳೆದ ಸಂತಸ ಭಾವ ನೆರೆದಿದ್ದ ಮುನ್ನೂರೈವತ್ತು-ನಾಲ್ನೂರು ಮಂದಿಯಲ್ಲೂ ಮೂಡುವಂತಾಯಿತು.

ಸಮಾಜದ ಬಂಧು ಬಾಂಧವ ಸ್ನೇಹಿತರೆಲ್ಲ ಒಂದೆಡೆ ಕಲೆತು ದಿನವಿಡೀ ಮನರಂಜನೆಯಲ್ಲಿ ಕಳೆವ ಇಂಥದೊಂದು ಸವಿನೋಟ. ಮಾರನೇ ದಿನದಿಂದ ಹೇಗೂ ಇದ್ದದ್ದೇ - ಅದೇ ಆಫೀಸು, ಅದೇ ಶಾಲೆ-ಟ್ಯೂಷನ್‌, ಅದೇ ಟ್ರಾಫಿಕ್‌ ಜಾಮ್‌. ದೈನಂದಿನ ಜೀವನದ ಅದೇ ಓಟ...

*

ಚಿತ್ರಗಳು:

1. ವೇದಿಕೆಯ ಮೇಲೆ ಎಡದಿಂದ ಬಲಕ್ಕೆ: ನರಹರಿ ಖರೆ, ಅಧ್ಯಕ್ಷರು ಚಿತ್ಪಾವನ ಸಮಾಜ ಬೆಂಗಳೂರು; ಉಭಯಗಾನ ವಿದುಷಿ ಶ್ಯಾಮಲಾ ಜಿ. ಭಾವೆ; ವೈದಿಕ ಶಿರೋಮಣಿ ವೇದರತ್ನ ಕೇಶವ ಸೀತಾರಾಮ ಜೋಗಳೇಕರ್‌; ಎಚ್‌.ಎಸ್‌ ಲಕ್ಷ್ಮೀನಾರಾಯಣ ಭಟ್‌, ಕಾರ್ಯದರ್ಶಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ; ಎಂ.ಬಾಲಚಂದ್ರ ಡೋಂಗ್ರೆ, ಅಧ್ಯಕ್ಷರು ಅಖಿಲ ಕರ್ನಾಟಕ ಚಿತ್ಪಾವನ ಬ್ರಾಹ್ಮಣ ಸಂಘ; ದಿವಾಕರ ಡೋಂಗ್ರೆ, ಕಾರ್ಯದರ್ಶಿ ಚಿತ್ಪಾವನ ಸಮಾಜ ಬೆಂಗಳೂರು.

2. ಶ್ಯಾಮಲಾ ಜಿ.ಭಾವೆ ಮತ್ತು ಬಳಗದವರಿಂದ ‘ಸಂತಗಾನ ಸೌರಭ’ ಸಂಗೀತ ಕಾರ್ಯಕ್ರಮ.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X