ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

‘ಲಾಲೂ, ಜಯಾ ಇಲ್ಲದಿದ್ದರೆ ನಂಗೆ ಕೆಲಸವೇ ಇರ್ತಿರ್ಲಿಲ್ಲ’

By Staff
|
Google Oneindia Kannada News

*ನಾಡಿಗೇರ್‌ ಚೇತನ್‌

ಬೆಂಗಳೂರು : ಪ್ರಶಸ್ತಿ ಬಂದಿರೋದು ನನಗಲ್ಲ. ವ್ಯಂಗ್ಯಚಿತ್ರ ಬರೆಯೋದು ನನ್ನ ಹೊಟ್ಟೆ ಪಾಡು. ಸರ್ಕಾರದ ಆಲೋಚನಾ ರಹಿತ ನಿರ್ಧಾರಗಳೇ ನನ್ನ ಪ್ರತಿ ದಿನದ ಊಟ. ಒಂದು ವೇಳೆ ಸರ್ಕಾರ ಸರಿಯಾಗಿ ನಡೆದರೆ ನಾನಂದು ಉಪವಾಸ. ಒಬ್ಬ ಲಾಲೂ, ಒಬ್ಬ ಜಯಲಲಿತಾ; ಅವರ ನಡುವೆ ವಾಜಪೇಯಿ- ಇವರ ತೀರ್ಮಾನಗಳೇ ನನಗೆ ಪ್ರೇರಣೆ.
- ಆರ್‌.ಕೆ.ಲಕ್ಷ್ಮಣ್‌ ಚಾಟೋಕ್ತಿಗಳಲ್ಲೂ ಅವರ ವ್ಯಂಗ್ಯ ಚಿತ್ರಗಳ ಖದರಿತ್ತು. ಸಂದರ್ಭ- ಸೋಮವಾರ ರವೀಂದ್ರ ಕಲಾಕ್ಷೇತ್ರದಲ್ಲಿ 18 ಪತ್ರಕರ್ತರಿಗೆ ಪತ್ರಿಕಾ ಅಕಾಡೆಮಿ ಪ್ರಶಸ್ತಿ ಪ್ರದಾನ ಮಾಡಿದಾಗ. ಈ 18 ಸಾಧಕರ ಸಾಲಿನಲ್ಲಿ ಎದ್ದು ಕಂಡದ್ದು ಆರ್‌.ಕೆ.ಲಕ್ಷ್ಮಣ್‌.

ಕೆ. ಶ್ರೀಧರ ಆಚಾರ್‌, ವಿಠಪ್ಪ ಗೋರಂಟ್ಲಿ, ನಸ್ರೀನ್‌ ಭುರ, ಆರ್‌. ಅರವಿಂದಂ, ಎ. ಸೂರ್ಯ ಪ್ರಕಾಶ್‌, ವಿ. ನಾಗರಾಜ ರಾವ್‌, ಶಿವರಾಯ ಎ.ದೊಡ್ಮನಿ, ರಾಮಣ್ಣ ಹೆಚ್‌. ಕೋಡಿಹೊಸಳ್ಳಿ, ಕೆ. ಎಸ್‌. ನಾಗಭೂಷಣ, ರಾಮಚಂದ್ರ ಸ್ವಾಮಿ, ಡಿ. ಮಹದೇವಪ್ಪ, ಟಿ.ಕೆ. ಬಸವರಾಜು, ಎಸ್‌. ಪಟ್ಟಾಭಿರಾಮನ್‌, ಡಾ। ಸರಜೂ ಕಾಟ್ಕರ್‌ ಹಾಗೂ ಇವರೆಲ್ಲರ ನಡುವೆ ಆಕರ್ಷಣೆಯ ಕೇಂದ್ರ ಬಿಂದುವಾಗಿದ್ದ ವ್ಯಂಗ್ಯ ಚಿತ್ರಕಾರ ಆರ್‌. ಕೆ. ಲಕ್ಷ್ಮಣ್‌- ಮುಖ್ಯ ಮಂತ್ರಿ ಎಸ್‌.ಎಂ. ಕೃಷ್ಣ ಮತ್ತು ವಾರ್ತಾ ಸಚಿವ ಕಾಗೋಡು ತಿಮ್ಮಪ್ಪನವರಿಂದ ಪ್ರಶಸ್ತಿ ಸ್ವೀಕರಿಸಿದರು.

ಇದಲ್ಲದೆ 3 ಪತ್ರಿಕೆಗಳು ಪ್ರಾಯೋಜಿಸಿದ ಪ್ರಶಸ್ತಿಗಳನ್ನು ನೀಡಲಾಯಿತು. ಈ ಪ್ರಶಸ್ತಿಗಳಿಗೆ ಭಾಜನರಾದವರು- ಜಿ.ವಿ. ಚೂಡನಾಥ ಐಯ್ಯರ್‌ (ಆಂದೋಲನ ಪ್ರಶಸ್ತಿ), ಡಿ. ಶ್ರೀಪಾದು (ಅಭಿಮಾನಿ ಪ್ರಶಸ್ತಿ), ಎನ್‌. ಜಯರಾಂ (ಮೈಸೂರು ದಿಗಂತ ಪ್ರಶಸ್ತಿ).

ವಿಶೇಷ ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಆರ್‌. ಕೆ. ಲಕ್ಷ್ಮಣ್‌, ದಯವಿಟ್ಟು ಛಾಯಚಿತ್ರಕಾರರು ನನ್ನ ಛಾಯಚಿತ್ರ ತೆಗೆದು ನನ್ನ ಭಾಷಣಕ್ಕೆ ಅಡಚಣೆ ಮಾಡಬೇಡಿ. ನಾನು ಯಾವುದೇ ಪೂರ್ವ ಸಿದ್ಧತೆಯಿಲ್ಲದೆ ಭಾಷಣ ಮಾಡುತ್ತಿದ್ದೇನೆ. ಅಡಚಣೆಯಾದರೆ ನಾನು ಏನು ಮಾತನಾಡುತ್ತೀನಿ ಎಂದು ನನಗೆ ತಿಳಿಯುವುದಿಲ್ಲ ಅಂದರು.

ಈ ದೇಶದಲ್ಲಿ ಲಾಲೂಗಳು, ಜಯಾಗಳು, ಉಗ್ರಗಾಮಿಗಳು, ಮತ್ತು ನೀರಿನ ಸಮಸ್ಯೆಗಳು ಇಲ್ಲದಿದ್ದರೆ ನಾನು ಸಂಪಾದನೆ ಮಾಡಲು ಆಗುತ್ತಿರಲಿಲ್ಲ. ಈ ದೇಶದ ರಾಜಕಾರಣಿಗಳ ಅಸಂಬದ್ಧ ಹೇಳಿಕೆಗಳು ನನಗೆ ಬಹಳ ಸಂತೋಷ ನೀಡುತ್ತವೆ. ಅವರ ಹೇಳಿಕೆಗಳು ಮತ್ತು ಅವರ ಕೆಲಸಗಳು ನನ್ನ ಕಾರ್ಟೂನ್‌ಗಳನ್ನು ಬರೆಸುತ್ತವೆ. ಕಳೆದ 54 ವರ್ಷಗಳಿಂದ ನಾನು ದಿನಕ್ಕೆರಡರಂತೆ ಕಾರ್ಟೂನ್ಗಳನ್ನು ಬರೆಯುತ್ತಿದ್ದೇನೆ. ಕಾರ್ಟೂನ್ಗಳನ್ನು ಹೇಳಿಕೊಡಲಾಗುವುದಿಲ್ಲ. ಅದು ನಮ್ಮೊಳಗೇ ಬರಬೇಕು. ಕಾರ್ಟೂನ್‌ ಬರೆಯಲು ಅತಿ ಮುಖ್ಯವಾದುದು ಅಬ್ಸೆರ್ವೇಶನ್‌ ಎಂದು ಲಕ್ಷ್ಮಣ್‌ ಕಿವಿಮಾತು ಹೇಳಿದರು.

ಪ್ರಶಸ್ತಿ ಪುರಸ್ಕೃತರ ಪರಿಚಯ ಕೃತಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಮುಖ್ಯ ಮಂತ್ರಿ ಎಸ್‌.ಎಂ. ಕೃಷ್ಣ , ‘ನಾನು ಈ ಕಾರ್ಯಕ್ರಮಕ್ಕೆ ಭಾಷಣವನ್ನು ಬರೆದುಕೊಂಡು ಬಂದಿದ್ದೆ. ಒಬ್ಬನೇ ಓದುತ್ತಾ ಕೂತಿದ್ದೆ. ಆರ್‌. ಕೆ. ಲಕ್ಷ್ಮಣ್‌ ನಾನೇನು ಮಾಡುತ್ತಿದ್ದೇನೆಂದು ಕೇಳಿದರು. ನಾನು ನನ್ನ ಭಾಷಣವನ್ನು ಓದಿಕೊಳ್ಳುತ್ತಿದ್ದೆ ಎಂದೆ. ಅದಕ್ಕವರು, 40 ವರ್ಷಗಳಿಂದ ಭಾಷಣ ಮಾಡುತ್ತಿದ್ದೀರ. ಬರೆದ ಭಾಷಣವೇ ಬೇಕ. ಹಾಗೆಯೇ ಮಾತಾಡಬಾರದಾ ಎಂದರು’ ಅಂದಾಗ ಸಭೆಯಲ್ಲಿ ಗೊಳ್ಳನೆ ನಗು.

ಲಕ್ಷ್ಮಣ್‌ ತಮ್ಮ ಭಾಷಣದಲ್ಲಿ ಜಯಲಲಿತಾ, ಲಾಲೂ ಹೆಸರು ಪ್ರಸ್ತಾಪ ಮಾಡಿ ನನ್ನ ಹೆಸರು ಹೇಳುವವರಿದ್ದರು. ನನ್ನ ಮುಖ ನೋಡಿ ತಕ್ಷಣ ನನ್ನ ಹೆಸರ ಬದಲಿಗೆ ನೀರಿನ ಸಮಸ್ಯೆಗಳು ಎಂದು ಹೇಳಿದರು ಅಂದಾಗ ಇನ್ನೊಂದು ನಗೆಯ ಬೋನಸ್ಸು.

ಪತ್ರಕರ್ತರು ಜನತೆಗೆ ಸಾಮಾಜಿಕ, ಸಾಂಸ್ಕೃತಿಕ ಮತ್ತು ರಾಜಕೀಯ ಸುದ್ದಿಗಳನ್ನು ಕೊಟ್ಟಿದ್ದಾರೆ. ಸಮಾಜದ ಪರಿವರ್ತನೆ ಹೇಗಾಯಿತೆಂದು ತಮ್ಮ ಲೇಖನಿ ಮತ್ತು ರೇಖಾ ಚಿತ್ರಗಳ ಮೂಲಕ ಜನತೆಗೆ ತಿಳಿಸಿದ್ದಾರೆ. ಜಾತಿ, ಮತ, ಕುಲ, ಧರ್ಮ ಮರೆತು ಸುದ್ದಿ ಮಾಧ್ಯಮ ಕೆಲಸ ಮಾಡಬೇಕು. ಅದನ್ನು ಯಶಸ್ವಿಯಾಗಿ ನಿರ್ವಹಿಸಿದ ಪ್ರತಿಭೆಗಳನ್ನು ನಾವು ಗುರುತಿಸುತ್ತಿಲ್ಲ , ಬದಲಾಗಿ ಗೌರವಿಸುತ್ತಿದ್ದೇವೆ. ಜನ ಈ ಪತ್ರಕರ್ತರನ್ನು ಬಹಳ ವರ್ಷಗಳಿಂದ ಗುರುತಿಸಿದ್ದಾರೆ. ನಾವು ಅಂತಹ ಪತ್ರಕರ್ತರಿಗೆ ಪ್ರಶಸ್ತಿ ಕೊಡುವ ಮೂಲಕ ಗೌರವ ಅರ್ಪಿಸುತ್ತಿದ್ದೇವೆ ಎಂದು ಕೃಷ್ಣ ಹೇಳಿದರು.

ಕರ್ನಾಟಕ ಪತ್ರಿಕಾ ಅಕಾಡೆಮಿ ಅಧ್ಯಕ್ಷ ಅರ್ಜುನ ದೇವ ಸ್ವಾಗತ ಭಾಷಣ ಮಾಡಿದರು. ಇದಕ್ಕೂ ಮುನ್ನ ಗಾಯಕಿ ಸಂಗೀತ ಕುಲಕರ್ಣಿ ತಮ್ಮ ಗಾಯನದಿಂದ ಜನರನ್ನು ರಂಜಿಸಿದರು.

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X