ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕಲ್ಲನಕಟ್ಟೆಯಲ್ಲಿ ಕಾಲೇಜು ಮಕ್ಕಳ ಮಳೆ ನೀರು ಕೊಯ್ಲು

By Staff
|
Google Oneindia Kannada News

ಶಿವಮೊಗ್ಗ : ಭದ್ರಾವತಿಯ ವಿಐಎಸ್‌ಎಸ್‌ಜೆ ಸರ್ಕಾರಿ ಪಾಲಿಟೆಕ್‌ನಿಕ್‌ ಕಾಲೇಜಿನ ಅರುವತ್ತು ವಿದ್ಯಾರ್ಥಿಗಳು ಆಡುತ್ತಾ, ಹಾಡುತ್ತಾ ಹತ್ತೇ ದಿನದಲ್ಲಿ ಕಲ್ಲನಕಟ್ಟೆಯ ಸರ್ಕಾರಿ ಶಾಲೆಯಲ್ಲಿ 20, 000 ಲೀಟರ್‌ ಮಳೆ ನೀರು ಕೊಯ್ಲು ಮಾಡುವಂಥ ಹೊಂಡ ತೆಗೆದು ಕುಣಿದಾಡಿದರು.

ರಾಷ್ಟ್ರೀಯ ಸ್ವಯಂ ಸೇವಾ ಯೋಜನೆಯಲ್ಲಿ ಊರು- ಕೇರಿಯನ್ನು ಉದ್ಧಾರ ಮಾಡುವ ಕೆಲಸ ಇದ್ದಿದ್ದೇ. ಆದರೆ, ಈ ವಿದ್ಯಾರ್ಥಿಗಳು ತಮ್ಮ ಕಾಲೇಜು ಯಾವತ್ತೂ ಮರೆಯಲಾಗದಂಥ ಕೆಲಸ ಮಾಡಿದ್ದಾರೆ. ಒಂದು ಹಳ್ಳಿಯ ಶಾಲೆಗೆ ಕುಡಿಯುವ ನೀರಿನ ಬರವೇ ತಟ್ಟದಂತೆ ಮಾಡಿದ್ದಾರೆ. ಮಳೆರಾಯ ಕೊಡುವ ನೀರು ಪೋಲಾಗದಂತೆ ಹಿಡಿದಿಡಲು ಇವರು ಮಾಡಿದ್ದಿಷ್ಟು- ಶಾಲೆಯ ಕಟ್ಟಡದ ಮೇಲೆ ಬೀಳುವ ಮಳೆ ನೀರು ಹೆಚ್ಚು ಹರಿದು, ಸುರಿಯುವ ಜಾಗೆಯಲ್ಲಿ ಪ್ಲಾಸ್ಟಿಕ್‌ ಪೈಪುಗಳನ್ನು ಹಾಕಿ, ಅವಕ್ಕೆ ಸೋಸು ಹಾಸುಗಳನ್ನು ಹಾಕಿದರು. ಇದರಿಂದ ಮಳೆನೀರಿನ ಕಸ ಅಲ್ಲೇ ನಿಂತು, ಶುದ್ಧ ನೀರು ಹೊರಕ್ಕೆ ಸುರಿಯುತ್ತದೆ. ಹೊರಕ್ಕೆ ಸುರಿಯುವ ನೀರು ಚರಂಡಿ ಪಾಲಾಗದಂತೆ, ಅಲ್ಲೊಂದು ದೊಡ್ಡ ಹಳ್ಳವನ್ನೇ ತೆಗೆದರು; ಬೀಳುವ ನೀರು ನೇರ ಹಳ್ಳ ಸೇರಬೇಕು ಹಾಗೆ. ಹತ್ತನೇ ದಿನದ ಕೊನೆಗೆ ಗೊತ್ತಾಯಿತು- ಈ ಹಳ್ಳ ಬರೋಬ್ಬರಿ 20 ಸಾವಿರ ಲೀಟರ್‌ ನೀರು ಹಿಡಿದಿಟ್ಟುಕೊಳ್ಳಬಲ್ಲುದು ಎಂದು. ಹಿಡಿದಿಟ್ಟ ನೀರು ಆವಿಯಾಗದಂತೆ ಹಳ್ಳಕ್ಕೆ ಹೊದಿಕೆಯನ್ನೂ ಮುಚ್ಚಲಾಯಿತು.

ಈ ಕಾಯಕಕ್ಕಾಗಿ ಬೆವರು ಹರಿಸಿದ ಅರುವತ್ತು ಸ್ವಯಂ ಸೇವಕರಲ್ಲಿ ಐವರು ಹುಡುಗಿಯರು. ಮಳೆಯಿಲ್ಲದ ಕಾಲದಲ್ಲಿ, ಸುಡು ಬೇಸಗೆಯಲ್ಲಿ ಈ ನೀರು ಕುಡಿಯಲೂ ಕೂಡ ಯೋಗ್ಯವಾಗಿರುತ್ತದೆ.

ಶಿಬಿರದ ಅಧಿಕಾರಿ ಎನ್‌.ಆರ್‌.ಶಿವರಾಂ ಕೆಲಸಕ್ಕೆ ಮಾರ್ಗದರ್ಶನ ಕೊಟ್ಟರು. ಮಳೆ ನೀರು ಮಂಡಳಿಗಾಗಿ ಕೆಲಸ ಮಾಡುವ ಚಿತ್ರದುರ್ಗದ ಎನ್‌.ಜಿ.ದೇವರಾಜ್‌ ಈ ಇಡೀ ಯೋಜನೆಯ ಯೋಚನೆ ಮಾಡಿ, ವಿದ್ಯಾರ್ಥಿಗಳ ಕೆಲಸದ ನೊಗಕ್ಕೆ ಹೆಗಲು ಕೊಟ್ಟರು.

ಈ ಕೆಲಸ ಒಂದಿಡೀ ಹಳ್ಳಿಯಲ್ಲೂ ಹೀಗೆ ನೀರಿನ ಕೊಯ್ಲು ಮಾಡುವುದು ಸಾಧ್ಯ ಅನ್ನುವುದಕ್ಕೆ ನಿದರ್ಶನವಾಗಬೇಕು ಅನ್ನೋದು ವಿದ್ಯಾರ್ಥಿಗಳ ಆಸೆ.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X