ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಾಡಾದ ನಾಗಪ್ಪ ಹತ್ಯೆ

By Staff
|
Google Oneindia Kannada News

*ದಟ್ಸ್‌ಕನ್ನಡ ಬ್ಯೂರೊ

Inlay card of the cassette- Nagappana Savu Yarinda?ಹನೂರು : ಅಣ್ಣಾವ್ರ ಅಪಹರಣವಾಗಿ, ಬಿಡುಗಡೆಯಾದಾಗ- ಅದನ್ನೇ ಬಂಡವಾಳವಾಗಿಟ್ಟುಕೊಂಡು ಮಟ್ಟುಗಳನ್ನು ಹಾಕಿ, ವೀರಪ್ಪನ್‌ ಕುರಿತಂತೆ ತರಾವರಿ ಕೆಸೆಟ್ಟುಗಳು ಮಾರುಕಟ್ಟೆಗೆ ಬಂದವು; ಈಗ ಹತರಾದ ನಾಗಪ್ಪನವರ ಪಾಳಿ.

ಕೊಳ್ಳೆಗಾಲ, ಹನೂರು ಹಾಗೂ ಕಾಮಗೆರೆಯ ನಾಗಪ್ಪನವರ ಅಭಿಮಾನಿಗಳ ಮನೆಗಳಲ್ಲಿ ಈಗ ಹೊಸ ಕೆಸೆಟ್ಟೇ ಗುನುಗುತ್ತಿದೆ. ಮಾರ್ಸ್‌ ಸಂಸ್ಥೆ ಈ ಕೆಸೆಟ್ಟನ್ನು ಹೊರ ತಂದಿದ್ದು, ಇಡೀ ಪ್ರಕರಣವನ್ನು ಹಾಡುಗಳಾಗಿಸಿದೆ. ‘ನಾಗಪ್ಪನ ಸಾವು ಯಾರಿಂದ?’ ಅಂತ ಪದೇಪದೇ ಗುಂಗುಡುವ ಹಾಡುಗಳಲ್ಲಿ ಈ ಪ್ರಶ್ನೆಗೆ ಉತ್ತರ ಸಿಗೋದಿಲ್ಲ.

ಎಸ್‌ಟಿಎಫ್‌ ಸೋಲನ್ನು ಹೀನಾಮಾನ ತೆಗಳುವ, ನಾಗಪ್ಪನವರನ್ನು ಬಾಯಿತುಂಬಾ ಹೊಗಳುವ, ವೀರಪ್ಪನ್‌ನನ್ನು ಎಕ್ಕಾಮಕ್ಕಾ ಉಗಿಯುವ ಸಾಲುಗಳು ಕೆಸೆಟ್ಟಿನ ಹಾಡುಗಳಲ್ಲಿ ನಿಚ್ಚಳವಾಗಿವೆ.

ನಮೂನೆಗೆ-
ನಾಗಪ್ಪನವರು ತನಗಾಗಿ ವೀರಪ್ಪನ್‌ಗೆ ದುಡ್ಡು ಕೊಡಬೇಡಿ, ಬಿಡುಗಡೆಯಾದಾಗ ಆಗಲಿ ಎಂಬ ಮಾತು ಹೇಳಿದ್ದಾರೆಂದು ಹಾಡುಗಳಲ್ಲಿದೆ. ನಾಗಪ್ಪನವರ ಮನೆಯಂಗಳಕ್ಕೆ ವೀರಪ್ಪನ್‌ ಕಳುಹಿಸಿದ ಕೆಸೆಟ್ಟುಗಳು ಬಂದು ಬೀಳುವಾಗ ಪೊಲೀಸರು ಕಳ್ಳೇಪುರಿ ತಿನ್ನುತ್ತಿದ್ದರೆ, ವೀರಪ್ಪನ್‌ಗೆ ಸೆಲ್‌ಫೋನು, ಡಿಜಿಟಲ್‌ ಡೈರಿ ಅದು ಹೇಗೆ ತಲುಪಿತೋ, ಆತನಿರುವ ಕಾಡಿನ ಆಜೂಬಾಜು ಜನ ಅವನಾಟಕ್ಕೆ ಸುಮ್ಮನಿರುವುದೇಕೆ ಎಂಬ ಗಂಭೀರ ಪ್ರಶ್ನೆಗಳಿವೆ.

ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 230 ಕೆಸೆಟ್ಟುಗಳು ಬಿಕರಿಯಾಗಿವೆ. ಹನೂರು ಕೆಸೆಟ್‌ ಅಂಗಡಿಯ ಸತೀಶ್‌ ಹೇಳುವ ಪ್ರಕಾರ, ‘45 ನಿಮಿಷಗಳ ಈ ಕೆಸೆಟ್ಟಿನಲ್ಲಿರುವ ವಿಷಯಗಳು ಇಲ್ಲಿ ಜನರ ಬಾಯಲ್ಲಿ ಕೇಳಿಬರುತ್ತಿರುವಂಥವೇ. ಇವೆಲ್ಲಾ ಸತ್ಯಕ್ಕೆ ಕನ್ನಡಿ ಹಿಡಿಯುವಂಥವು. ವೀರಪ್ಪನ್‌ ಅಡ್ಡಾಡುವ ಕಾಡಿಗೆ ಹತ್ತಿರವಿರುವ ಊರುಗಳಲ್ಲಿ ನಿಜಾಂಶ ಚರ್ಚೆಯಾಗುತ್ತಲೇ ಇರುತ್ತದೆ. ಆದರೆ, ಸರ್ಕಾರ ಮಾತ್ರ ತಣ್ಣಗಿರುತ್ತೆ. ತಮಗೆ ಗೊತ್ತಿರುವ ವಿಷಯವನ್ನು ಹಾಡುಗಳಾಗಿ ಕೇಳುವುದು ಹಿತವಲ್ಲವೇ? ನಾನು ಇನ್ನೂ 50 ಕೆಸೆಟ್ಟುಗಳಿಗೆ ಆರ್ಡರ್‌ ಕೊಟ್ಟಿದ್ದೇನೆ.’

ವೀರಪ್ಪನ್‌ನನ್ನು ಬಯಲಿಗೆಳೆಯುವ ತನಕ ನಾಗಪ್ಪ ಅಭಿಮಾನಿಗಳು ತಣ್ಣಗಾಗಬಾರದು ಎಂಬ ಸಂದೇಶದೊಂದಿಗೆ ಕೆಸೆಟ್ಟಿನ ಹಾಡುಗಳು ಮುಗಿಯುತ್ತವೆ. ಪ್ರಾಯಶಃ ಮುಖ್ಯಮಂತ್ರಿ ಕೃಷ್ಣ, ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಕೂಡ ಕೋಣೆಯಲ್ಲಿ ಬಾಗಿಲು ಹಾಕಿಕೊಂಡು ಕೂತು ಈ ಕೆಸೆಟ್ಟನ್ನು ಕೇಳಬಹುದು ಅಂತ ಸ್ಥಳೀಯರೊಬ್ಬರು ಕೀಟಲು ನಗೆ ನಗುತ್ತಾ ಹೇಳುತ್ತಾರೆ!

ಪೂರಕ ಓದಿಗೆ-
ಮುಖಪುಟ / ವೀರಪ್ಪನ್‌ ಶಿಕಾರಿ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X