ಮಡಿಕೇರಿಯಲ್ಲಿ ಡಿ.21ರಿಂದ ಕೊಡವ ಮೇಳ
ಬೆಂಗಳೂರು: ಮಡಿಕೇರಿಯಲ್ಲಿ ಆರನೇ ಕೊಡವ ಸಂಸ್ಕೃತಿ ಮೇಳ ಡಿಸೆಂಬರ್ 21 ಮತ್ತು 22ರಂದು ನಡೆಯಲಿದೆ.
ಕೊಡವ ಸಾಂಸ್ಕೃತಿಕ ಅಕಾಡೆಮಿಯ ಪಿ. ದೇವಯ್ಯ ಹಾಗೂ ಎಂ. ಎ. ವಸಂತ್ ಈ ವಿಷಯವನ್ನು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ಕೊಡವ ಸಾಹಿತ್ಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಜೀವಂತವಾಗಿಡುವ ಉದ್ದೇಶದಿಂದ ಕೊಡವ ಮೇಳವನ್ನು ನಡೆಸಲಾಗುತ್ತಿದೆ.
ಈ ಬಾರಿಯ ಮೇಳ , ಕೊಡವ ಸಮಾಜದ ಮೈದಾನದಲ್ಲಿ ನಡೆಯಲಿದೆ. ಮೇಳವನ್ನು ಯಶಸ್ವಿಯಾಗಿ ನಿರ್ವಹಿಸುವ ಸಲುವಾಗಿ ಜಿಲ್ಲಾ ಉಸ್ತುವಾರಿ ಸಚಿವ ಎಂ. ಎಂ. ನಾಣಯ್ಯ ಅವರನ್ನು ನಿರ್ವಹಣಾ ಸಮಿತಿಯ ಕಾರ್ಯದರ್ಶಿಯನ್ನಾಗಿ ಮಾಡಲಾಗಿದೆ.
ಡಿಸೆಂಬರ್ 21ರಂದು ಧ್ವಜಾರೋಹಣದ ಮೂಲಕ ಆರಂಭವಾಗುವ ಮೇಳದಲ್ಲಿ ಕೊಡವ ಸಂಸ್ಕೃತಿಯನ್ನು ಬಿಂಬಿಸುವ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಡಿಸೆಂಬರ್ 22ರಂದು ಶೋಭಾ ಯಾತ್ರೆ, ಪುಸ್ತಕ ಬಿಡುಗಡೆ ಹಾಗೂ ವಸ್ತುಪ್ರದರ್ಶನ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಕೊಡವ ಮೇಳದ ಒಟ್ಟು ವೆಚ್ಚ ಅಂದಾಜು ಐದು ಲಕ್ಷ ರೂ. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವೆ ರಾಣಿ ಸತೀಶ್ ಅವರನ್ನು ಮೇಳಕ್ಕೆ ಆಹ್ವಾನಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಕಾವೇರಿ ಕನ್ನಡಿ


Click it and Unblock the Notifications
