‘ವಾಜಪೇಯಿ ಮುಂದೆ, ನಾವೆಲ್ಲ ಹಿಂದೆ’-ಉಪ ಪ್ರಧಾನಿ ಅಡ್ವಾಣಿ
ನವದೆಹಲಿ : ಇನ್ನು ಮುಂದೆಯೂ ವಾಜಪೇಯಿ ದೇಶವನ್ನು ಮುನ್ನಡೆಸುತ್ತಾರೆ ಎಂದು ಸ್ಪಷ್ಟಪಡಿಸಿರುವ ನೂತನ ಉಪ ಪ್ರಧಾನಿ ಎಲ್.ಕೆ.ಅಡ್ವಾಣಿ, ವಾಜಪೇಯಿ ಅವರ ನೇತೃತ್ವದಲ್ಲಿಯೇ ಮುಂದಿನ ಚುನಾವಣೆಯನ್ನೂ ಪಕ್ಷ ಎದುರಿಸುತ್ತದೆ ಎಂದು ಘೋಷಿಸಿದ್ದಾರೆ.
ತಮಗೆ ದೊರೆತ ಹೊಸ ಜವಾಬ್ದಾರಿಯಿಂದಾಗಿ ವಾಜಪೇಯಿ ವಿರುದ್ಧವಾಗಿ ಪರ್ಯಾಯ ಅಧಿಕಾರ ಶಕ್ತಿಯ ಬೆಳವಣಿಗೆಯಾಗುತ್ತದೆನ್ನುವ ವದಂತಿಗಳನ್ನು ತಳ್ಳಿಹಾಕಿದ ಅವರು, ತಮಗೆ ದೊರೆತ ಉಪ ಪ್ರಧಾನಿ ಸ್ಥಾನದಿಂದ ತಾವು ಆಶ್ಚರ್ಯಚಕಿತರಾಗಿಲ್ಲ ಎಂದರು. ಈ ಕುರಿತು ಪ್ರಧಾನಿ ತಿಂಗಳ ಹಿಂದೆಯೇ ನಿರ್ಧರಿಸಿದ್ದರು. ಆದರೆ, ಈ ಕುರಿತು ಯಾರೊಂದಿಗೂ ಅವರು ಚರ್ಚಿಸಿರಲಿಲ್ಲ ಎಂದು ಸುದ್ದಿಸಂಸ್ಥೆಯಾಂದರ ಜೊತೆ ಭಾನುವಾರ ಮಾತನಾಡಿದ ಅಡ್ವಾಣಿ ಹೇಳಿದರು.
ಗೃಹಮಂತ್ರಿಯಾಗಿ ಮುಂದುವರಿಯುತ್ತೇನೆ. ಉಪ ಪ್ರಧಾನಿ ಹುದ್ದೆಯಿಂದಾಗಿ ಈವರೆಗಿನ ಕಾರ್ಯ ಚಟುವಟಿಕೆಗಳಲ್ಲೇನೂ ವ್ಯತ್ಯಾಸವಿಲ್ಲ ಎಂದ ಅಡ್ವಾಣಿ, ಹೊಸ ಹುದ್ದೆಯಿಂದಾಗಿ ದೇಶದಲ್ಲಿ ಎರಡು ಶಕ್ತಿಗಳು ಬೆಳವಣಿಗೆಯಾಗುತ್ತವೆ ಎನ್ನುವುದನ್ನು ಸಾರಾ ಸಗಟಾಗಿ ನಿರಾಕರಿಸಿದರು. ಈ ಮುನ್ನ ಕೂಡ ಆರು ಮಂದಿ ಉಪ ಪ್ರಧಾನಿಗಳನ್ನು ದೇಶ ಕಂಡಿದೆ. ನೆಹರೂ ಅವರು ಪ್ರಧಾನಿಯಾಗಿದ್ದಾಗ ಸರ್ದಾರ್ ಪಟೇಲ್ ಉಪ ಪ್ರಧಾನಿಯಾಗಿದ್ದರು ಎಂದು ಅಡ್ವಾಣಿ ಹಳೆಯ ಘಟನೆಗಳನ್ನು ನೆನಪಿಸಿಕೊಂಡರು.
ತಮ್ಮ ಹಾಗೂ ವಾಜಪೇಯಿ ಅವರ ನಡುವೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ . ತಾವು ಯಾವುದೇ ಷಡ್ಯಂತ್ರಗಳಿಗೆ ಬಲಿಯಾಗಿಯೂ ಇಲ್ಲ ಎಂದು ಅಡ್ವಾಣಿ ಸ್ಪಷ್ಟಪಡಿಸಿದರು. ಮುಂದಿನ ಚುನಾವಣೆಯಲ್ಲಿಯೂ ಕೂಡ ವಾಜಪೇಯಿ ಪಕ್ಷವನ್ನು ಮುನ್ನಡೆಸುವರು. ಇದು ತಮ್ಮ ಹಾಗೂ ಪ್ರತಿಯಾಬ್ಬರ ಅಭಿಪ್ರಾಯವಾಗಿದೆ ಎಂದು ಅಡ್ವಾಣಿ ಬಣ್ಣಿಸಿದರು.(ಏಜೆನ್ಸೀಸ್)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications