ಕಾಶೀ ವಿಶ್ವನಾಥ, ಮಥುರಾ ಕೃಷ್ಣನಿಗೆ ಭಯೋತ್ಪಾದಕರ ದಾಳಿಯ ಭಯ !
ಲಖನೌ : ಕಾಶೀ ವಿಶ್ವನಾಥನ ದರುಶನಕೆ ಇದು ಸಕಾಲವಲ್ಲ. ಮಥುರೆ ನೋಡುವ ಕನಸೂ ಈಗಲೇ ನನಸಾಗುವುದು ಬೇಡ. ಉತ್ತರ ಪ್ರದೇಶದ ದೇವಾಲಯಗಳಲ್ಲಿ ಈಗ ಭಯೋತ್ಪಾದಕರ ದಾಳಿಯ ಭಯ. ಎಲ್ಲೆಡೆ ಬಿಗಿ ಪೊಲೀಸ್ ಪಹರೆ.
ಜಮ್ಮುವಿನ ರಘುನಾಥ ದೇವಾಲಯದಲ್ಲಿ ಇತ್ತೀಚೆಗೆ ನಡೆದ ದಾಳಿಯಿಂದ ಉತ್ತರ ಪ್ರದೇಶ ಸರ್ಕಾರ ಎಚ್ಚೆತ್ತುಕೊಂಡಿದೆ. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ನೆರೆಯುವ ದೇವಸ್ಥಾನಗಳಲ್ಲೆಲ್ಲಾ ಬಿಗಿ ಪೊಲೀಸ್ ಬಂದೋಬಸ್ತ್ ಮಾಡುವಂತೆ 70 ಜಿಲ್ಲಾ ಮ್ಯಾಜಿಸ್ಟ್ರೇಟರುಗಳಿಗೆ ಆದೇಶ ಕೊಟ್ಟಿದೆ. ಕೃಷ್ಣನ ಜನ್ಮಭೂಮಿ ಮಥುರೆ ಹಾಗೂ ಕಾಶೀ ವಿಶ್ವನಾಥ ಸೇರಿದಂತೆ ಪ್ರಮುಖ ಸ್ಥಳಗಳ ದೇವಸ್ಥಾನಗಳ ಕನಿಷ್ಠ ಮೂರು ಹಿಂದೂ ಮೂರ್ತಿಗಳನ್ನು ಪಾಕಿಸ್ತಾನ ಪ್ರಾಯೋಜಿತ ಉಗ್ರರು ಉಡಾಯಿಸುವ ಆತಂಕವಿದೆ ಎಂಬುದು ಬೇಹುಗಾರಿಕಾ ದಳಗಳಿಗೆ ಗೊತ್ತಾಗಿದೆ.
ಅಯೋಧ್ಯೆಯಲ್ಲಿ ಈಗಾಗಲೇ ಬಿಗಿ ಪೊಲೀಸ್ ಬಂದೋಬಸ್ತ್ ಇದೆ. ಉತ್ತರ ಪ್ರದೇಶದ ಪ್ರಮುಖ 30 ದೇವಾಲಯಗಳಿರುವ ಸ್ಥಳಗಳ ಮೇಲೆ ತೀವ್ರ ನಿಗಾ ವಹಿಸುವಂತೆ ಆಯಾ ಜಿಲ್ಲೆಗಳ ಪೊಲೀಸ್ ಮುಖ್ಯಸ್ಥರಿಗೆ ಅಪರ ಪೊಲೀಸ್ ಮಹಾ ನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಎ.ಕೆ. ಮಿತ್ರ ಆದೇಶ ಕೊಟ್ಟಿದ್ದಾರೆ. ಅಲಹಾಬಾದ್, ಮೀರತ್, ಕಾನ್ಪುರ, ಸಹರಾನ್ಪುರ, ಬರೈಲಿ, ಮೊರಾದಾಬಾದ್ ಮತ್ತು ಘಜಿಯಾಬಾದ್ಗಳಲ್ಲಿ ಹೆಚ್ಚಿನ ಪೊಲೀಸ್ ತುಕಡಿಗಳನ್ನು ನಿಯೋಜಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...


Click it and Unblock the Notifications
