ಉದ್ಯೋಗಕ್ಕಾಗಿ ಮಾಲ್ಡೀವ್ಸ್ಗೆ ತೆರಳುವ ಅಭ್ಯರ್ಥಿಗಳಿಗೆ ರಾಜ್ಯದ ಎಚ್ಚರಿಕೆ
ಬೆಂಗಳೂರು: ಮಾಲ್ಡೀವ್ಸ್ನಲ್ಲಿ ಭಾರತೀಯ ಉದ್ಯೋಗಾರ್ಥಿಗಳನ್ನು ಮೋಸಮಾಡುವ ಪ್ರಕರಣಗಳು ಹೆಚ್ಚಾಗುತ್ತಿದ್ದು, ಉದ್ಯೋಗಕ್ಕಾಗಿ ಮಾಲ್ಡೀವ್ಸ್ಗೆ ತೆರಳುವ ಅಭ್ಯರ್ಥಿಗಳಿಗೆ ರಾಜ್ಯ ಸರಕಾರ ಎಚ್ಚರಿಕೆ ನೀಡಿದೆ.
ಉದ್ಯೋಗಕ್ಕಾಗಿ ಮಾಲ್ಡೀವ್ಸ್ಗೆ ತೆರಳಿದವರಿಗೆ ಹಾಗೂ ಅಲ್ಲಿರುವ ಭಾರತೀಯ ಉದ್ಯೋಗಿಗಳಿಗೆ ಏಜೆನ್ಸಿಗಳು ತೊಂದರೆನೀಡುತ್ತಿರುವ ಹಲವು ಪ್ರಕರಣಗಳು ರಾಜ್ಯದ ಉದ್ಯೋಗ ಮತ್ತು ತರಬೇತಿ ಕೇಂದ್ರದ ಗಮನಕ್ಕೆ ಬಂದಿರುವುದಾಗಿ ವರದಿಯಾಗಿದೆ. ಉದ್ಯೋಗ ನೀಡಿದ ಸಂಸ್ಥೆ ಹಾಗೂ ಭಾರತೀಯ ಉದ್ಯೋಗಿಗಳ ನೇಮಕಾತಿಯಲ್ಲಿ ಮಧ್ಯವರ್ತಿಗಳಾಗಿ ಕೆಲಸ ನಿರ್ವಹಿಸಿದ ಏಜೆನ್ಸಿಗಳ ನಡುವಿನ ತಕರಾರುಗಳು ಹೆಚ್ಚುತ್ತಿವೆ. ಆದ್ದರಿಂದ ಉದ್ಯೋಗ ಗಿಟ್ಟಿಸಿಕೊಳ್ಳುವ ಸಂದರ್ಭದಲ್ಲಿ ಭಾರತೀಯ ಅಭ್ಯರ್ಥಿಗಳು ತುಂಬಾ ಎಚ್ಚರಿಕೆಯಿಂದಿರಬೇಕು ಎಂದು ರಾಜ್ಯ ಸರಕಾರದ ಪ್ರಕಟಣೆ ತಿಳಿಸಿದೆ.
ಮಾಲ್ಡೀವ್ಸ್ನಲ್ಲಿನ ಉದ್ಯಮಗಳು ಹಾಗೂ ಇತರ ಸಂಸ್ಥೆಗಳು ಭಾರತೀಯ ಉದ್ಯೋಗಿಗಳೊಂದಿಗೆ ಒರಟಾಗಿ ವರ್ತಿಸುತ್ತಿರುವುದರಿಂದ ಅಲ್ಲಿಗೆ ತೆರಳುವ ಅಭ್ಯರ್ಥಿಗಳು ನೌಕರಿಗೆ ಸೇರುವ ಮುನ್ನ ಅಗತ್ಯ ಮುನ್ನೆಚ್ಚರಿಕೆ ತೆಗೆದುಕೊಳ್ಳಬೇಕು. ಅಲ್ಲಿನ ಕಾರ್ಮಿಕ ಇಲಾಖೆಯೆಯ ಅಧಿಕಾರಿಗಳೊಂದಿಗೆ ಸಂಪರ್ಕವಿರಿಸಿಕೊಂಡು ಉದ್ಯೋಗದ ಬಗ್ಗೆ ಖಾತರಿ ಪಡೆದುಕೊಳ್ಳಬೇಕು ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.
(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...


Click it and Unblock the Notifications
