ನಂದಿನಿ ಹಾಲು : ಮಾರ್ಚ್ 1 ರಿಂದ 1 ಲೀಟರ್‌ಗೆ 1 ರುಪಾಯಿ ದುಬಾರಿ
ಬೆಂಗಳೂರು : ಶುಕ್ರವಾರ(ಮಾ.1) ದಿಂದ ನಂದಿನಿ ಹಾಲಿನ ಬೆಲೆಯಲ್ಲಿ ಲೀಟರ್‌ಗೆ 1 ರುಪಾಯಿ ಹೆಚ್ಚಳವಾಗಲಿದೆ. ಇದರಿಂದಾಗಿ ಈ ಮುನ್ನ 11 ರುಪಾಯಿ ಇದ್ದ ಲೀಟರ್ ಹಾಲಿನ ಬೆಲೆ 12 ರುಪಾಯಿ ಆಗಲಿದೆ.
ಬೆಂಗಳೂರು, ಕೋಲಾರ, ಮಂಡ್ಯ, ತುಮಕೂರು ಒಕ್ಕೂಟಗಳು ಹಾಗೂ ಮದರ್ ಡೈರಿ ವತಿಯಿಂದ ವಿತರಿಸಲಾಗುತ್ತಿರುವ ನಂದಿನಿ ಹಾಲಿನ ದರ ಮಾರ್ಚ್ 1 ರಿಂದ 1 ರುಪಾಯಿ ಹೆಚ್ಚಾಗಲಿದೆ ಎಂದು ಬೆಂಗಳೂರು ಗ್ರಾಮಾಂತರ ಜಿಲ್ಲಾ ಸಹಕಾರಿ ಹಾಲು ಉತ್ಪಾದಕರ ಸಂಘಗಳ ಒಕ್ಕೂಟದ ಅಧ್ಯಕ್ಷ ಪಿ.ನಾಗರಾಜ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹಾಲಿನ ಶೇಖರಣೆ, ಸಾಗಾಣಿಕೆ, ಸಂಸ್ಕರಣೆ ವೆಚ್ಚಗಳು ದುಬಾರಿಯಾದ ಕಾರಣ ಹಾಲಿನ ಬೆಲೆ ಹೆಚ್ಚಿಸುವುದು ಅನಿವಾರ್ಯವಾಗಿದೆ. ಅಲ್ಲದೆ 1999 ರಿಂದ ಹಾಲಿನ ದರದಲ್ಲಿ ಪರಿಷ್ಕರಣೆಯಾಗಿಲ್ಲ. ವಿದ್ಯುತ್, ಡೀಸೆಲ್ ಹಾಗೂ ಕುಲುಮೆ ಎಣ್ಣೆಯ ಬೆಲೆಯೂ ಹೆಚ್ಚಾಗಿರುವುದರಿಂದ ಹಾಲಿನ ಬೆಲೆ ಹೆಚ್ಚಿಸದೆ ವಿಧಿಯಿಲ್ಲ ಎಂದು ನಾಗರಾಜ್ ಹೇಳಿದ್ದಾರೆ.
ನೆರೆಯ ರಾಜ್ಯಗಳಲ್ಲಿ ಹಾಲಿನ ಬೆಲೆ ಇನ್ನೂ ಹೆಚ್ಚು . ಮಹಾರಾಷ್ಟ್ರದಲ್ಲಿ ಲೀಟರ್‌ಗೆ 14 ರುಪಾಯಿ ಇದ್ದರೆ, ಆಂಧ್ರಪ್ರದೇಶ, ತಮಿಳುನಾಡು, ಕೇರಳ ಹಾಗೂ ಗುಜರಾತ್‌ಗಳಲ್ಲಿ 13 ರುಪಾಯಿ ಇದೆ ಎಂದು ರಾಜ್ಯದಲ್ಲಿ ನಂದಿನಿ ಹಾಲು ಬೆಲೆ ಹೆಚ್ಚಳವನ್ನು ನಾಗರಾಜ್ ಸಮರ್ಥಿಸಿಕೊಂಡಿದ್ದಾರೆ.(ಇನ್ಫೋ ವಾರ್ತೆ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications