ಜೀವವಿಮಾ ನಿಗಮದಿಂದ ಸಾಗರೋಲ್ಲಂಘನೆ: ಅಮೆರಿಕೆಯತ್ತ ಪಯಣ..
ಬೆಂಗಳೂರು : ಭಾರತೀಯ ಜೀವವಿಮಾ ನಿಗಮ (ಎಲ್‌ಐಸಿ) ಯುಕೆಯಲ್ಲಿ ತನ್ನ ಕಾರ್ಯವ್ಯಾಪ್ತಿ ವಿಸ್ತರಿಸಲು ಮತ್ತು ಅಮೆರಿಕೆಯಲ್ಲಿ ತನ್ನ ಕಚೇರಿ ಸ್ಥಾಪಿಸಲು ಉದ್ದೇಶಿಸಿದೆ. ಈ ವಿಷಯವನ್ನು ಯೋಜನೆಯ ಉಸ್ತುವಾರಿ ವಹಿಸಿರುವ ಎ. ರಾಮಮೂರ್ತಿ ಅವರು ಗುರುವಾರ ತಿಳಿಸಿದ್ದಾರೆ.
ಜಂಟಿ ಸಹಯೋಗಕ್ಕಾಗಿ ಅಮೆರಿಕ ಮತ್ತು ಯು.ಕೆ.ಗಳಲ್ಲಿ ಪಾಲುದಾರರನ್ನು ಗುರುತಿಸುವ ಕಾಯಕದಲ್ಲಿ ಎಲ್.ಐ.ಸಿ. ತೊಡಗಿದೆ ಎಂದರು. ಕಾನೂನಿನ ರೀತ್ಯ ಜೀವವಿಮಾ ನಿಗಮವು ಅಮೆರಿಕೆಯಲ್ಲಿ ಮೊದಲ ವರ್ಷ ಸಾಂಸ್ಥಿಕ ಏಜೆಂಟನಾಗಿ ಕಾರ್ಯ ನಿರ್ವಹಿಸುತ್ತದೆ ಎಂದೂ ಹೇಳಿದರು.
ಅಮೆರಿಕೆಯಲ್ಲಿ ಎಲ್.ಐ.ಸಿ. ಎರಡು ಕಚೇರಿಗಳನ್ನು ತೆರೆಯಲು ಯೋಜಿಸಿದೆ. ಸ್ಯಾನ್ ಫ್ರಾನ್ಸಿಸ್ಕೋ ಮತ್ತು ನ್ಯೂಜೆರ್ಸಿ ಅಥವಾ ನ್ಯೂಯಾರ್ಕ್‌ನಲ್ಲಿ ಈ ಕಚೇರಿ ತೆರೆಯುವ ಉದ್ದೇಶ ಸಂಸ್ಥೆಗಿದೆ. ಅನಿವಾಸಿ ಭಾರತೀಯರನ್ನೇ ದೃಷ್ಟಿಯಲ್ಲಿಟ್ಟುಕೊಂಡು ಎಲ್.ಐ.ಸಿ. ಈ ಯೋಜನೆ ರೂಪಿಸಿದೆ.
ಈಗಾಗಲೇ ಭಾರತೀಯ ಜೀವವಿಮಾ ನಿಗಮವು ಇಂಗ್ಲೆಂಡ್ ಫಿಜಿ, ಮಾರಿಷಸ್ ಮತ್ತು ಬಹರೇನ್‌ಗಳಲ್ಲಿ ತನ್ನ ಕಚೇರಿಗಳನ್ನು ಹೊಂದಿದೆ ಎಂದು ರಾಮಮೂರ್ತಿ ತಿಳಿಸಿದರು. ಭಾರತ ಸರಕಾರವು ಗುರುವಾರ ಮಂಡಿಸಿದ ಬಜೆಟ್‌ನಲ್ಲಿ ಮೂಚ್ಯುಯಲ್ ಫಂಡ್‌ಗಳಿಗೆ ನೀಡುತ್ತಿರುವ ತೆರಿಗೆ ವಿನಾಯಿತಿ ಮುಂದುವರಿಸಿರುವ ಹಿನ್ನೆಲೆಯಲ್ಲಿ ಹಾಗೂ ಇನ್ನಿತರ ಸುಧಾರಣೆ ಕ್ರಮಗಳಿಂದಾಗಿ, ಎಲ್‌ಐಸಿ ಮ್ಯೂಚುಯಲ್ ಫಂಡ್ ಲಾಭದಾಯಕವಾಗಿ ಮುಂದಡಿ ಇಡಲಿದೆ ಎಂಬ ಆಶಾಭಾವನೆಯನ್ನು ಅವರು ವ್ಯಕ್ತಪಡಿಸಿದರು.
(ಪಿ.ಟಿ.ಐ)
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications