ಕ್ರಿಸ್‌ಮಸ್ ಮರ ಎಷ್ಟೊಂದು ಎತ್ತರ
ಬೆಂಗಳೂರು : ಚಿತ್ರಕಲಾ ಪರಿಷತ್ತಿನಲ್ಲಿ ಎತ್ತರದೊಂದು ಎಕ್ಸ್‌ಮಾಸ್ ಅರ್ಥಾತ್ ಕ್ರಿಸ್‌ಮಸ್ ಮರ ಶುಕ್ರವಾರ ನಗುತ್ತಿದೆ. 12 ಅಡಿ ಎತ್ತರ, 156 ಕೊಂಬೆಗಳಲ್ಲಿ 2865 ಟಿಸಿಲು. 240 ಸೆಂ.ಮೀ. ಸುತ್ತಳತೆ. ತೂಕ ಮಾತ್ರ ಸಪೂರ ಷೋಡಶಿಯಷ್ಟು; ಮೂವತ್ತೆಂಟೇ ಕೇಜಿ. ದಕ್ಷಿಣ ಭಾರತದ ಅತಿ ದೊಡ್ಡ ನಕಲಿ ಮರವಿದು. ಅಸಲಿಗೆ ಕ್ರಿಸ್‌ಮಸ್ಸಿಗಾಗಿ.
ಬೆಂಗಳೂರಲ್ಲಿ ಮಾರಾಟದ ಭರಾಟೆ. ಕ್ರಿಸ್‌ಮಸ್ಸಿಗೆ ಒಂದು ತಿಂಗಳು ಮುನ್ನವೇ ಕ್ರಿಶ್ಚಿಯನ್ನರ ಬೇಕುಗಳಿಗೆ ಸ್ಪಂದನ. ವರ್ಷಕ್ಕೊಂದೇ ಹಬ್ಬ. ಅದಕ್ಕಾಗೇ ತಯಾರಿ ಅಬ್ಬಬ್ಬಾ. ಕ್ರಿಸ್‌ಮಸ್ ಮರವೇ ಹಬ್ಬದ ಮುಖ್ಯ ಮೆರುಗು. ದಸರಾ ಬೊಂಬೆಯ ಸಿಂಗರಿಸುವಾಗ ತೋರುವಷ್ಟೇ ಆಸ್ಥೆಯನ್ನು ಕ್ರಿಶ್ಚಿಯನ್ನರು ಈ ಮರ ಸಿಂಗರಿಸಲು ತೋರುತ್ತಾರೆ. ಮರವೇ ಎಲ್ಲ. ತಾರೆಗಳ ತೋಟ. ಅದೇ ಟ್ವಿಂಕಲ್ ಟ್ವಿಂಕಲ್. ಬಣ್ಣ ಬಣ್ಣದ ಕಾಗದ. ಮೇಲಗಡೆ ಒಂದು ಚಂದ್ರ. ಅದಕ್ಕೆ ಒರಗಿ ನಿಂತ ಒಂದು ಸಾಂತಾಕ್ಲೂಸ್ ಬೊಂಬೆ. ದೀಪಾಲಂಕಾರವೂ ಉಂಟು. ಮಿರಮಿರ ಮರ.
ಮರದೆತ್ತರ ದೊಡ್ಡದಾದಷ್ಟೂ ಅಲಂಕಾರಕ್ಕೆ ಹೆಚ್ಚು ಅವಕಾಶ. ಬೆಂಗಳೂರಿನ ಕುಸಾಲ್ ಇನ್‌ಡೋರ್ ಗಾರ್ಡನ್ ಸಂಸ್ಥೆ ಇಂಥಾ ಮರಗಳನ್ನು ಮಾರುಕಟ್ಟೆಗೆ ತಂದಿದೆ. ಈ ಎತ್ತರದ ಮರ ಮಾಡಿದ್ದೂ ಇದೇ ಸಂಸ್ಥೆ. ಕಡು ಹಸುರು ಬಣ್ಣದ ಪಾಲಿಫೈಬರ್‌ನಲ್ಲಿ ಮಾಡಿರುವ ಈ ಮರ ವೆದರ್ ಪ್ರೂಫ್. ಬೆಂಕಿ ಪ್ರೂಫ್ ಕೂಡ. ಇನ್ನೂ ಹಲವಾರು ಕ್ರಿಸ್‌ಮಸ್‌ಗಳಲ್ಲೂ ಬಳಕೆಗೆ ಬರುತ್ತದೆ. 4 ಅಡಿಯಿಂದ 12 ಅಡಿ ಎತ್ತರದವರೆಗೆ ಮರಗಳಿಗೆ ಆರ್ಡರ್ ಕೊಡಬಹುದು.
ಅಂದಹಾಗೆ, ದೊಡ್ಡ ಮರವನ್ನು ಬೆಂಗಳೂರಿನ ಹೊಟೇಲ್ ಒಂದು ಖರೀದಿಸಿದೆ. ಮರವನ್ನು ಬಿಡಿಸಿದರೆ ಮೂರು ಭಾಗವಾಗುತ್ತದೆ. ಹೊತ್ತಯ್ಯಲು ಸುಲಭವಾಗಲಿ ಎಂಬ ಕಾರಣಕ್ಕೆ ಕುಸಾಲ್ ಇನ್‌ಡೋರ್ ಗಾರ್ಡನ್‌ನ ಪ್ರದೀಪ್ ಈ ರೀತಿ ಮಾಡಿದ್ದಾರೆ. ಈ ಬಾರಿ ಪ್ರದೀಪ್ ಅವರಿಗೆ 30 ಮರಗಳ ಆರ್ಡರ್ ಸಿಕ್ಕಿದೆ.
(ಇನ್ಫೋ ಇನ್‌ಸೈಟ್)
ಮುಖಪುಟ / ಲೋಕೋಭಿನ್ನರುಚಿ












Click it and Unblock the Notifications