ಭಾರತ, ಪಾಕ್ ಮಾತುಕತೆ ಮುಂದುವರಿಯಲಿ- ಜರ್ಮನ್ ಚಾನ್ಸಲರ್
ನವದೆಹಲಿ : ಆಗ್ರಾ ಶೃಂಗಸಭೆ ನಂತರ ಸ್ಥಗಿತಗೊಂಡಿರುವ ಭಾರತ ಹಾಗೂ ಪಾಕಿಸ್ತಾನ ನಡುವಣ ದ್ವಿಪಕ್ಷೀಯ ಮಾತುಕತೆಗಳು ಮುಂದುವರಿಯಬೇಕು ಎಂದು ಜರ್ಮನ್ ಚಾನ್ಸಲರ್ ಗ್ರೆಹಾರ್ಡ್ ಷ್ರೋಡರ್ ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರಪತಿ ಭವನದಲ್ಲಿ ನಡೆದ ಸಮಾರಂಭದಲ್ಲಿ ಪ್ರಧಾನಿ ವಾಜಪೇಯಿ ಹಾಗೂ ಅವರ ಸಂಪುಟ ಸಹೋದ್ಯೋಗಿಗಳಿಂದ ಸ್ವಾಗತ ಸ್ವೀಕರಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಷ್ರೋಡರ್, ಭಾರತ- ಪಾಕ್ ನಡುವಣ ಸಂಬಂಧ ಸುಧಾರಿಕೆಗೆ ಮಾತುಕತೆ ಮುಂದುವರಿಕೆ ಅಗತ್ಯ ಎಂದರು.
ರಾಜಕೀಯವಾಗಿ ಭಾರತ ಹಾಗೂ ಜರ್ಮನಿ ನಡುವಣ ಸಂಬಂಧ ಬಲವಾಗಿದೆ. ಉಭಯ ರಾಷ್ಟ್ರಗಳೂ ಅಭಿವೃದ್ಧಿಶೀಲ ಆರ್ಥಿಕತೆ ಹೊಂದಿವೆ. ಭಾರತೀಯ ಮಾರುಕಟ್ಟೆ ಹಾಗೂ ಜರ್ಮನಿಯ ಕೈಗಾರಿಕಾ ಶಕ್ತಿಯನ್ನು ಗಮನದಲ್ಲಿಟ್ಟುಕೊಂಡು ದ್ವಿಪಕ್ಷೀಯ ಆರ್ಥಿಕ ಸಂಬಂಧಗಳು ಬಲಗೊಳ್ಳಬೇಕಾಗಿದೆ ಎಂದು ಷ್ರೋಡರ್ ಹೇಳಿದರು.
ಜಾಗತಿಕ ಭಯೋತ್ಪಾದಕತೆ ನಿರ್ಮೂಲನೆಯಲ್ಲಿ ಭಾರತ ಮಹತ್ವದ ಪಾತ್ರ ವಹಿಸಲಿದೆ ಎಂದು ಪ್ರಶ್ನೆಯಾಂದಕ್ಕೆ ಅವರು ಉತ್ತರಿಸಿದರು. ಇಸ್ಲಮಾಬಾದ್‌ನಲ್ಲಿ ಪಾಕ್ ಅಧ್ಯಕ್ಷ ಪರ್ವೇಜ್ ಮುಷರ್ರಫ್ ಅವರೊಂದಿಗೆ ಚರ್ಚೆ ನಡೆಸಿದ ನಂತರ ಷ್ರೋಡರ್ ಭಾನುವಾರ ಸಂಜೆ ಭಾರತಕ್ಕೆ ಆಗಮಿಸಿದ್ದರು.
(ಏಜೆನ್ಸೀಸ್)