ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನೋಡ್ರೀ ಜಂಬೂಸವಾರಿ

By Staff
|
Google Oneindia Kannada News

* ಇನ್ಫೋ ಇನ್‌ಸೈಟ್‌

ಮೈಸೂರು : ಬರದ ಛಾಯೆ. ಅದನ್ನು ಕರಗಿಸುತ್ತಿದ್ದೇನೆ ಎಂದು ಸಾರುವಂತೆ ಚುಮುಚುಮು ಮಳೆ. ಸಿಂಗರಗೊಂಡ ಬಲರಾಮನ ಬಣ್ಣ ಮಾಸೀತೆಂಬಂತೆ ಕೊಂಚ ಹೊತ್ತಿನ ನಂತರ ಮಳೆಯೂ ಮಾಯ. ಅಷ್ಟು ಹೊತ್ತಿಗೆ ಚಿನ್ನದ ಅಂಬಾರಿ ಹೊತ್ತ ಬಲರಾಮನ ಸವಾರಿ ಸಾಗಿತ್ತು. ಸೋನ್‌ಪಪ್ಪಡಿ ವೃಷ್ಟಿ ತಪ್ಪಿಸಿದ್ದು ಹೆಲಿಕಾಪ್ಟರ್‌ನಿಂದ ಬಲರಾಮನಿಗಾಗಬೇಕಿದ್ದ ಪುಷ್ಪ ವೃಷ್ಟಿಯನ್ನ. ಸ್ತಬ್ಧ ಚಿತ್ರಗಳು ಮೈಸೂರು ರಸ್ತೆ ಮೇಲೆ ಇರದಿದ್ದರೂ, ವೃಷನಾಮನ ವಿಜಯದಶಮಿಯ ಕಳೆಗಟ್ಟಿಸಿದ್ದು ವಾಯುಪಡೆಯ ಯೋಧರ ಆಗಸದಲ್ಲಿನ ತಾಲೀಮು !

ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ 3 ಗಂಟೆಗೆ ಸರಿಯಾಗಿ ಶ್ವೇತವಸ್ತ್ರಧಾರಿಗಳಾಗಿ ಹಾಜರ್‌. ಅರಮನೆಯ ಬಲಭಾಗದ ಆಂಜನೇಯನ ದೇವಾಲಯದ ಎದುರಿನ ನಂದಿಕಂಬಕ್ಕೆ ಅವರಿಂದ ಪೂಜೆ. ಅಷ್ಟರಲ್ಲಿ ಮಳೆಯ ಸದ್ದು ಕೊಂಚ ಹೆಚ್ಚಾಯಿತು. ಚಾಮುಂಡೇಶ್ವರಿ ತಾಯಿಯನ್ನು ಹೊತ್ತ ಬಲರಾಮ ತನ್ನ ಸಹಜ ಗಾಂಭೀರ್ಯದಿಂದ ಸಿದ್ಧವಾಗಿದ್ದ. ಮಳೆ ನಿಲ್ಲುವುದೆಂಬ ಆಸೆಯಿಂದ ಮುಖ್ಯಮಂತ್ರಿ 20 ನಿಮಿಷ ಕಾದು ನೋಡಿದರು.

ಸೋನ್‌ಪಪ್ಪಡಿ ಮಳೆ ನಿರೀಕ್ಷೆಯನ್ನು ಹುಸಿಯಾಗಿಸಿತು. ಛತ್ರಿಯಡಿ ಬಂದ ಮುಖ್ಯಮಂತ್ರಿ ಕೃಷ್ಣ ಹಾಗೂ ಅವರ ಪತ್ನಿ ಪ್ರೇಮಾ, ರಾಜವಂಶಸ್ಥ ನರಸಿಂಹರಾಜ ಒಡೆಯರ್‌ ಹಾಗೂ ಸಂಪುಟ ಸಚಿವರುಗಳ ಜೊತೆಗೆ ವೇದಿಕೆ ಹತ್ತಿದರು. ಅಂಬಾರಿಯಾಳಗಿನ ಚಾಮುಂಡೇಶ್ವರಿ ಉತ್ಸವ ಮೂರ್ತಿಗೆ ಪುಷ್ಪಾರ್ಚನೆ. ರಂಗೇರಿದ ಮೈಸೂರನ್ನು ಕಂಡ ಮಳೆ ಮಾಯ. ಸಂಪ್ರದಾಯದಂತೆ 21 ಕುಶಾಲ ತೋಪುಗಳು ಆಗಸದತ್ತ ಹಾರಿದವು. ಕೋಕಿಲಾ- ಸರೋಜಿನಿ ನಡುವೆ ನಿಂತಿದ್ದ ಬಲರಾಮ ಅಡಿಯಿಡತೊಡಗಿದ. ಸರಳ ದಸರೆಯ ಜಂಬೂಸವಾರಿ ಹೊರಟಿತು ರಾಜಬೀದಿಯಲಿ.

ಆಕಾಶದಲ್ಲಿ ಮಾಯಗಾರರ ಚಿತ್ತಾರ

ಹತ್ತು ನಿಮಿಷಗಳಾಗಿರಬಹುದು. ಬಲರಾಮನತ್ತ ದಿಟ್ಟಿ ಇಟ್ಟಿದ್ದ ಮಂದಿಯ ಕಣ್ಣುಗಳು ಒಮ್ಮೆಲೇ ಆಗಸದತ್ತ ತಿರುಗಿದವು. 11 ಸಾವಿರ ಅಡಿ ಎತ್ತರದಲ್ಲಿ ಎಂ.ಐ.ಹೆಲಿಕಾಫ್ಟರ್‌ನಿಂದ 6 ಯೋಧರು ಹೊರಗೆ ಜಿಗಿದರು. ತಕ್ಷಣವೇ ಪ್ಯಾರಾಚ್ಯೂಟ್‌ ತೆಗೆಯದೆ ಗಾಳಿಯಲ್ಲೇ ತೇಲಿದರು. ಮೋಡಗೊಳೊಡನೆ ಆಡಿದರು. ಮೂರು ನಿಮಿಷದ ನಂತರ ತೆರೆದುಕೊಂಡ ಪ್ಯಾರಾಚೂಟ್‌ಗಳೋ ಬಣ್ಣ ಬಣ್ಣ. ಅದರಲ್ಲಿ ಭಾರತ ಧ್ವಜದ ತ್ರಿವರ್ಣವೂ ಇತ್ತು. ಕೆಲವು ನಿಮಿಷಗಳ ಕಾಲ ರಂಜಿಸಿದ ಈ ಆಕಾಶಗಂಗೆಗಳು ಅರಮನೆ ಆವರಣದಲ್ಲಿ ಇಳಿದಾಗ, ಅವರಿಗೆ ಜನರ ಶಹಭಾಸ್‌ಗಿರಿ.

ಇನ್ನೊಂದು ತಂಡ ಆಗಸದ ಹೆಲಿಕಾಫ್ಟರ್‌ನಿಂದ ಹೊರಧುಮುಕಿತು. ಐವರು ಯೋಧರು. ಮೂರೇ ಪ್ಯಾರಾಚ್ಯೂಟ್‌. ಈ ಪೈಕಿ ಒಂದು ಪ್ಯಾರಾಚ್ಯೂಟ್‌ ಗಾಳಿಯಲ್ಲಿ ತೇಲುತ್ತಲೇ ಇದೆ; ತುಂಬಾ ಹೊತ್ತು. ಇಬ್ಬರು ಲ್ಯಾಂಡ್‌ ಆದರು. ಉಳಿದವರು ಎಲ್ಲಿ ಹೋದರು. ಜನರ ಕಣ್ಣುಗಳಿಗೆ ಮನದಣಿಯೆ ಮನರಂಜನೆ. ಬಿರುಸಿನಾಟಕ್ಕೆ ಬಿಡುವಿಲ್ಲದ ನೋಟ.

ಸ್ತಬ್ಧ ಚಿತ್ರಗಳಿಲ್ಲವಾದರೇನು, ಇದ್ದವಲ್ಲ ಕಂಡಾಪಟ್ಟೆ ಕುಣಿತಗಳು

ಜಂಬೂಸವಾರಿ ದಿನ ಸ್ತಬ್ಧ ಚಿತ್ರಗಳೇ ಮುಖ್ಯ ಆಕರ್ಷಣೆ. ಆದರೆ ಈ ಬಾರಿ ಬರ. ಹೀಗಾಗಿ ಅವು ಬೇಡ ಅಂದಿತ್ತು ಸರ್ಕಾರ. ಆದರೇನಂತೆ. ಜನಮನ ತುಂಬಲು ಜಾನಪದ ತಂಡಗಳಿದ್ದವಲ್ಲ. ಸಾಂಸ್ಕೃತಿಕ ಕಾರ್ಯಕ್ರಮಗಳು, ಕುಣಿತಗಳು ಇದ್ದವಲ್ಲ. ವೀರಗಾಸೆ, ನಾದಸ್ವರ, ನಂದಿಧ್ವಜ, ಪೂಜಾಕುಣಿತ, ಗಾರುಡಿ ಗೊಂಬೆ, ಹೋಳಿ ಕುಣಿತ, ಕೋರಗರ ಡೊಳ್ಳು, ಭೂತಕುಣಿತ, ಸೋಮನ ಕುಣಿತ, ತಟ್ಟಿರಾಯ ಬೊಂಬೆ ಹೆಜ್ಜೆ, ಚಿಟ್ಟೆಮೇಳ, ಕೋಲಾಟ, ವೀರಭದ್ರ ನೃತ್ಯ, ಪಂಚ ಕಳಸ ಕುಣಿತ, ಕಂಗೀಲು ಕುಣಿತ... ಹೀಗೆ ಸಾಲು ಸಂಭ್ರಮ. ಜೊತೆಗೆ ಸ್ಕೌಟ್ಸ್‌ ಮತ್ತು ಗೈಡ್ಸ್‌, ಅಗ್ನಿ ಶಾಮಕ ದಳ, ಗೃಹ ರಕ್ಷಕ ದಳ, ರೇಲ್ವೆ ರಕ್ಷಣಾ ದಳ, ಆನೆಗಾಡಿ, ಅರಮನೆ ಫಿರಂಗಿ ಗಾಡಿಗಳು. ಪ್ರದರ್ಶನದ ಬಣ್ಣಕ್ಕೇನೂ ಬರವಿರಲಿಲ್ಲ.

ಒಂದಂತೂ ನಿಜ. ‘ಈ ಬಾರಿ ಬರ ಕಣ್ರೀ, ಆನೆ ಅಂಬಾರಿ ಜೋರಾಗಿರಲ್ರೀ’ ಅಂತ ಮೊದಲೇ ಹಬ್ಬಿದ ಸುದ್ದಿಯಿಂದ ಪ್ರವಾಸಿಗರ ಸಂಖ್ಯೆಗೆ ಹೊಡೆತ ಬಿದ್ದಿತು. ಅರಮನೆ ಹಾಗೂ ಸಯ್ಯಾಜಿ ರಾವ್‌ ರಸ್ತೆಯಲ್ಲಿ ನೂಕುನುಗ್ಗಲೇನೋ ಇತ್ತು. ಆದರೆ ಜನ ಒಬ್ಬರ ಮೇಲೊಬ್ಬರು ಮುಗಿ ಬೀಳುವಷ್ಟು ಸಾಂದ್ರತೆ ಅಲ್ಲಿರಲಿಲ್ಲ.

ಪಟಾಕಿ ಸದ್ದಿಗೆ ಪೇರಿ ಕಿತ್ತ ರಂಗ : ಜಂಬೂ ಸವಾರಿಗೆ ಮುನ್ನ. ಮೆರವಣಿಗೆಯ ಜಂಬೂಗಳೆಲ್ಲಾ ಸಾಲುನಿಲ್ಲುವ ಸಮಯ. ರಂಗ ಎಂಬ ಜಂಬೂ ಬರುತ್ತಿದ್ದ. ಪಟಪಟನೆ ಸಿಡಿಯಿತು, ಪಟಾಕಿ. ಬೆಚ್ಚಿದ ರಂಗ ದಡಬಡಾಯಿಸಿದ. ಜನ ಅವನಿಗೆ ಜಾಗೆ ಮಾಡಿಕೊಟ್ಟರು. ಮಾವುತರು ಬೆಚ್ಚಿದ ರಂಗನಿಗೆ ಧೈರ್ಯ ಹೇಳಿದರು. ಕೊಂಚ ಹೊತ್ತಿನ ನಂತರ ರಂಗ ಬಂದು ತಂಡ ಸೇರಿಕೊಂಡ. ಇದನ್ನು ನೋಡಲು ಎದ್ದು ನಿಂತ ಜನಕ್ಕೆ ಕುರ್ಚಿಗಳೇ ಕೊಡೆಗಳಾದವು. ಮತ್ತೆ ಮಳೆಯ ಪಿರಿಪಿರಿ.

ಪ್ರಶಸ್ತಿ ಪ್ರದಾನ : ರಾಜ್ಯ ಸಂಗೀತ ವಿದ್ವಾನ್‌ ಪ್ರಶಸ್ತಿ ವಿತರಣೆ ಅಕ್ಟೋಬರ್‌ 25ರಂದೇ ಆಗಬೇಕಿತ್ತು. ಮಾಜಿ ಸಚಿವ ಟಿ.ಎನ್‌.ನರಸಿಂಹನ್‌ ಅವರ ಸಾವಿನಿಂದಾಗಿ ಆ ಕಾರ್ಯಕ್ರಮ ರದ್ದಾಗಿತ್ತು. ಸರೋದ್‌ವಾದಕ ಆರ್‌.ಕೆ. ಬಿಜಾಪುರ್‌ ಅವರಿಗೆ ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಶುಕ್ರವಾರ ಮಳೆಯ ನಡುವೆಯೇ ಪ್ರಶಸ್ತಿ ಪ್ರದಾನ ಮಾಡಿದರು.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X