ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಶಿಕ್ಷಕರ ದಿನದಂದು ಮಹಿಳಾ ಟೀಚರ್ಸ್‌ ಬೇಜಾರು ಮಾಡಿಕೊಂಡಿದ್ದಾರೆ!

By Staff
|
Google Oneindia Kannada News

ಬೆಂಗಳೂರು : ಶಿಕ್ಷಕರ ದಿನದಂದು ಮಹಿಳಾ ಶಿಕ್ಷಕರು ತೀರಾ ಬೇಜಾರು ಮಾಡಿಕೊಂಡಿದ್ದಾರೆ! ವಿದ್ಯಾರ್ಥಿಗಳು ಅಭಿನಂದಿಸಲಿಲ್ಲ ಎಂದಲ್ಲ. ಅಥವಾ ವೇತನ, ಸೌಲಭ್ಯಗಳಿಗೆ ಸಂಬಂಧ ಪಟ್ಟ ವಿಷಯವೂ ಅಲ್ಲ. ತಮ್ಮ ಸಂಘಟನೆಯನ್ನು ಸರಕಾರ ಗುರುತಿಸಿಲ್ಲ, ಅಲ್ಲದೆ ಸರಕಾರದಿಂದ ರೆಕಗ್ನಿಷನ್‌ ಸಿಗದಂತೆ ಪುರುಷ ಶಿಕ್ಷಕರು ಪಿತೂರಿ ನಡೆಸಿದ್ದಾರೆ ಎಂಬುದು ಅವರ ಸದ್ಯದ ದೂರು.

ರಾಜ್ಯದಲ್ಲಿ ಲೆಕ್ಕ ಹಾಕಿ ನೋಡಿದರೆ ಮಹಿಳಾ ಟೀಚರ್‌ಗಳೇ ಹೆಚ್ಚಾಗಿರುವುದು. ಶಿಕ್ಷಕ ಶಿಕ್ಷಣ ಸಂಸ್ಥೆಗಳೂ ಮಹಿಳೆಯರದ್ದೇ ಹೆಚ್ಚು. ಈಗಾಗಲೇ ರಾಜ್ಯ ಪ್ರಾಥಮಿಕ ಶಾಲಾ ಟೀಚರ್ಸ್‌ ಅಸೋಸಿಯೇಷನ್‌ ಅಸ್ತಿತ್ವದಲ್ಲಿದೆ. ಮಹಿಳಾ ಶಿಕ್ಷಕರೆಲ್ಲ ಸೇರಿಕೊಂಡು ‘ರಾಜ್ಯ ಪ್ರಾಥಮಿಕ ಶಾಲಾ ಮಹಿಳಾ ಶಿಕ್ಷಕರ ಅಸೋಸಿಯೇಷನ್‌’ ಅಂತ ಯಾಕೆ ನಿರ್ಮಿಸಬಾರದು ಹೇಳಿ, ಅದರಲ್ಲೂ ಮಹಿಳೆಯರು....ಎಂದರೆ ಸಾಲು ಸಮಸ್ಯೆಗಳು ಬೇಡಿಕೆಗಳೂ ಇದ್ದೇ ಇರುತ್ತವೆ ಅನ್ನುವುದು ಮೇಡಂಗಳ ಪ್ರಶ್ನೆ.

ಇದನ್ನೆಲ್ಲಾ ರಾಜ್ಯ ಶಿಕ್ಷಕರ ಸಂಘ ಕಿವಿ ಕೊಟ್ಟು ಕೇಳುತ್ತದಾ ?

ಸಂಘ ಕಟ್ಟ ಕೊಳ್ಳುವ ಹಕ್ಕು ಎಲ್ಲರಿಗೂ ಇದೆಯಪ್ಪಾ ಎಂದು ಪುರುಷ ಶಿಕ್ಷಕರು ಹೇಳಿದರೂ, ಟೀಚರ್‌ಗಳ ಹೊಸದೊಂದು ಮಹಿಳಾ ಮಂಡಳಿ ಹುಟ್ಟಿಕೊಳ್ಳುವುದು ಅವರಿಗೆ ಇಷ್ಟವಿಲ್ಲ ಎನ್ನುವುದು ಮಹಿಳಾ ಶಿಕ್ಷಕರ ಆಪಾದನೆ. ಸಂಘದಲ್ಲಿ ಶೇ 60ರಷ್ಟು ಮಂದಿ ಮಹಿಳೆಯರಿದ್ದಾರೆ. ನಮ್ಮ ಯಾವುದೇ ಸಮಸ್ಯೆಗಳನ್ನು ವೇದಿಕೆ ಚರ್ಚಿಸುತ್ತಿಲ್ಲ. ಲೈಂಗಿಕ ಕಿರುಕುಳ ಮತ್ತಿತರ ತೊಂದರೆಗಳನ್ನು ಕೇಳುವವರು ಗತಿಯಿಲ್ಲ ಎಂಬುದು ಪ್ರಸ್ತುತ ಇರುವ ಶಿಕ್ಷಕರ ಸಂಘದ ದಲ್ಲಿ ಭಿನ್ನ ಮತಿಯರಾದ ಮಹಿಳಾ ಟೀಚರ್‌ಗಳ ಅಳಲು.

ಆದರೆ ಪುರುಷ ಶಿಕ್ಷಕರು ಈ ಮಾತನ್ನು ತೆಗೆದು ಹಾಕುತ್ತಾರೆ. ನಾವೇನೂ ಮಹಿಳಾ ಶಿಕ್ಷಕರನ್ನು ಮೂಲೆಗೆ ತಳ್ಳಿಲ್ಲ. ಅಧಿಕಾರ ಬೇಕು ಎಂದು ಆಸೆ ಪಡುವ ಕೆಲವು ಮಹಿಳೆಯರಿಗೆ ಪ್ರತ್ಯೇಕ ಸಂಘಟನೆ ಕಟ್ಟಿಕೊಳ್ಳುವ ಬಯಕೆ. ಏನು ಮಾಡೋಣ ಹೇಳಿ ಎಂದು ಮರು ಪ್ರಶ್ನಿಸುವ ಸಂಘದ ಕಾರ್ಯದರ್ಶಿ ಎರ್ರೆ ಗೌಡರ ಪ್ರಕಾರ ಸಂಘದಲ್ಲಿ ಮಹಿಳೆಯರಿರುವುದು ಕೇವಲ 45 ಶೇಕಡದಷ್ಟು ಮಾತ್ರ. ಅದರಲ್ಲಿಯೂ 33 ಶೇಕಡಾ ಮಹಿಳಾ ಮೀಸಲಾತಿ ಪದ್ಧತಿಯನ್ನೂ ಅನುಸರಿಸಲು ನಿರ್ಧರಿಸಿದ್ದೇವೆ. ಆದರೂ ಅಧಿಕಾರಕ್ಕೇ ಇದೆಲ್ಲ ತಂತ್ರ ಎಂದು ಗೌಡರು ಸಂದರ್ಶನವೊಂದರಲ್ಲಿ ಹೇಳುತ್ತಾರೆ.

ನಾವೇನು ಮಹಿಳೆಯರನ್ನು ಕಡೆಗಣಿಸಿಲ್ಲ ಸ್ವಾಮಿ..

ಕಾರ್ಯಕಾರಿ ಸಮಿತಿಗೆ ಸುಮಾರು 25 ಮಂದಿ ಮಹಿಳೆಯರು ನಾಮಪತ್ರ ಸಲ್ಲಿಸಿದ್ದಾರೆ ಸ್ವಾಮಿ. ಆರು ಮಂದಿ ಈಗಾಗಲೇ ಸಮಿತಿಯಲ್ಲಿದ್ದಾರೆ. ಇದೆಲ್ಲವನ್ನು ನಾವು ಮಾಡುತ್ತಿರುವುದು ಮಹಿಳೆಯರನ್ನು ನಾವು ಕಡೆಗಣಿಸಿಲ್ಲ ಎಂದು ಪ್ರೂವ್‌ ಮಾಡಲಿಕ್ಕೇ. ಆದರೂ ಇವರು ಹೀಗೆ ವಾದ ಮಾಡಿದರೆ ಏನು ಮಾಡಲಿಕ್ಕೆ ಸಾಧ್ಯ ಹೇಳಿ ಎಂದು ಪುರುಷ ಶಿಕ್ಷಕರು ವಾದಿಸುತ್ತಾರೆ.

ಮಹಿಳೆಯರಿಗೂ ಪುರುಷರಿಗೂ ಸಮಾನ ಅವಕಾಶ ಇರಬೇಕಪ್ಪಾ ಅಂತ ಶಿಕ್ಷಣ ತಜ್ಞ ಡಿ.ಎಂ. ನಂಜುಂಡಪ್ಪ ಬುದ್ಧಿ ಹೇಳುತ್ತಾರೆ. ಬೆಂಕಿಯಿಲ್ಲದೇ ಹೊಗೆ ಬರುತ್ತದಾ ...ಜಗಳವಾದರೆ ಅಲ್ಲಿ ಏನೋ ಹೆಚ್ಚು ಕಮ್ಮಿ ಆಗಿದೆ ಎಂದರ್ಥ. ಅದನ್ನು ಸರಿಪಡಿಸಿಕೊಳ್ಳಬೇಕು ಎಂದು ನಂಜುಡಪ್ಪ ಸುಮ್ಮನಾಗುತ್ತಾರೆ.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X