• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಜೂನ್‌ 15 : ನಮ್ಮ ನಿಮ್ಮ ಬೆಂಗಳೂರು ಉಳಿಸಲಿಕ್ಕೆ ಲಕ್ಷ್ಮಣರೇಖೆ

By Staff
|

An example of Pollution@Bangaloreನೀವು ಯಾವತ್ತಾದರೂ ಬೆಂಗಳೂರಿನ ಟ್ರಾಫಿಕ್ಕು- ವಾಯು ಮಾಲಿನ್ಯದ ಬಗ್ಗೆ ಗೊಣಗದೆ ಮನೆಗೆ ಹೋದದ್ದುಂಟಾ ? ನಿಮ್ಮ ಕರವಸ್ತ್ರ ಇಂಗಾಲದಿಂದ ಮಂಕಾಗದ ದಿನ ನೆನಪಿದೆಯಾ ?

ಹೌದು, ಈ ಹೊತ್ತು ಮಾಲಿನ್ಯ ನಗರಿಯೆಂದೇ ರಾಜಧಾನಿ ಹೆಸರಾಗಿದೆ. ದೇಶದ ಮಾಲಿನ್ಯ ನಗರಿಗಳ ಲಿಸ್ಟಿನಲ್ಲಿ ಚೆನ್ನೈನೊಂದಿಗೆ ಮೂರನೇ ರ್ಯಾಂಕ್‌ಗೆ ಸೆಣಸುತ್ತಿದೆ. ಉಬ್ಬಸ ರೋಗಿಗಳು ಮನೆ ಮನೆಗಳಲ್ಲೂ ಸಾಮಾನ್ಯವಾಗುತ್ತಿದ್ದಾರೆ. ಈ ಮಾಲಿನ್ಯದ ಕಾವಿನ ನಡುವೆಯೇ ಜನಸಂಖ್ಯೆ ಮತ್ತೂ ಹೆಚ್ಚುತ್ತಿದೆ. ಇದು ನಮ್ಮ ನಿಮ್ಮ ಬೆಂಗಳೂರು.

ಈ ಬೆಂಗಳೂರಿನ ಉಬ್ಬಸವನ್ನ , ಉಸಿರ ಬಿಸಿಯನ್ನ ಯಾವತ್ತಾದರೂ ಕಡಿಮೆ ಮಾಡಲು ನೀವು ಯೋಚಿಸಿದ್ದುಂಟಾ? ಹಳೆಯ ಕಥೆ ಬಿಡಿ, ನಗರ ಮಾಲಿನ್ಯದ ಬಗ್ಗೆ ಈಗ ಚಿಂತಿಸದಿದ್ದಲ್ಲಿ - ದನಿಯೆತ್ತದಿದ್ದಲ್ಲಿ ನೀವು ಮುಂದೆಂದೂ ಧೂಮರಹಿತ ಬೆಂಗಳೂರಿನ ಬಗ್ಗೆ ಯೋಚಿಸುವಂತೆಯೇ ಇಲ್ಲ . ಜೂನ್‌ 15 ನಿಮ್ಮ ಯೋಚನೆಗಳಿಗೆ ಕೊನೆಯ ದಿನ.

ವಿಷಯ ಇಷ್ಟು - ವಾಯು ಮಾಲಿನ್ಯ ನಿಯಂತ್ರಣ ಹಾಗೂ ಮುಂಜಾಗರೂಕತೆಯ ಬಗೆಗೆ ಸಂಬಂಧಪಟ್ಟ ಪ್ರಾಧಿಕಾರಗಳು ಅಗತ್ಯ ಕ್ರಮ ಕೈಗೊಂಡಿಲ್ಲ ವಾದ್ದರಿಂದ, ನಾಗರಿಕರು ನಿರಂತರವಾಗಿ ವಾಯು ಮಾಲಿನ್ಯ ದಾಳಿಗೆ ತುತ್ತಾಗಬೇಕಿದೆ ಎಂದು ಬಿ. ಕೃಷ್ಣರಾವ್‌ ಎನ್ನುವ ಮಹನೀಯರು ರಾಜ್ಯ ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿದ್ದಾರೆ. ಬಹುಶಃ ಇಂಥದೊಂದು ಅರ್ಜಿ ನ್ಯಾಯಾಲಯದ ಕಟ್ಟೆ ಹತ್ತಿರುವುದು ಇದೇ ಮೊದಲು. ವಾಹನಗಳ ಕಳಪೆ ನಿರ್ವಹಣೆ, ಕಲಬೆರಕೆ ಇಂಧನದ ಬಳಕೆ, ಸೈರನ್‌ಗಳನ್ನೊಳಗೊಂಡ ಹಾರ್ನ್‌ ಬಳಕೆ ಮುಂತಾದವುಗಳನ್ನು ಕೃಷ್ಣಭಟ್‌ ತಮ್ಮ ಅರ್ಜಿಯಲ್ಲಿ ಪ್ರಸ್ತಾಪಿಸಿದ್ದಾರೆ.

ಮಾಲಿನ್ಯವಾ? ನ್ಯಾಯಮೂರ್ತಿಗಳಿಗೆ ನಿಮ್ಮ ಅಭಿಪ್ರಾಯ ಬೇಕಂತೆ

ಅರ್ಜಿದಾರರ ವಾದವನ್ನು ಗಂಭೀರವಾಗಿ ಪರಿಗಣಿಸಿರುವ ನ್ಯಾಯಮೂರ್ತಿ ಎ.ಜೆ. ಸದಾಶಿವ ಅವರು, ಪ್ರಕರಣದ ಬಗೆಗೆ ಸಾರ್ವಜನಿಕರ ಅಭಿಪ್ರಾಯಗಳನ್ನು ಆಹ್ವಾನಿಸಿದ್ದಾರೆ. ಅಭಿಪ್ರಾಯ- ಅಹವಾಲು ಸಲ್ಲಿಕೆಗೆ ಜೂನ್‌ 15 ಕೊನೆಯ ದಿನ. ಆದರೆ, ಈವರೆಗೆ ಯಾರೊಬ್ಬರೂ ಅಭಿಪ್ರಾಯವನ್ನು ಕಳುಹಿಸುವ ಗೋಜಿಗೆ ಹೋಗಿಲ್ಲ . ಅಸಲಿಗೆ, ಇಂಥದೊಂದು ಘಟನೆ ನಗರದಲ್ಲಿ ನಡೆಯುತ್ತಿರುವ ಬಗ್ಗೆ ಅನೇಕರಿಗೆ ಮಾಹಿತಿಯೇ ಇಲ್ಲ . ಇದ್ದವರದ್ದು ಸಮಸ್ಯೆ ನಮ್ಮದಲ್ಲವೆನ್ನುವ ದಿವ್ಯ ನಿರ್ಲಕ್ಷ್ಯ.

15 ವರ್ಷಕ್ಕಿಂತಲೂ ಹೆಚ್ಚು ಹಳೆಯದಾದ ವಾಹನಗಳ ಒಡೆಯರನ್ನು (ಸರ್ಕಾರಿ- ಖಾಸಗಿ) ಹಾಗೂ ಚಾಲಕರನ್ನು , ತಮ್ಮ ಪ್ರತಿನಿಧಿಗಳ ಕಳುಹಿಸುವಂತೆ ನ್ಯಾಯಾಲಯ ಸೂಚಿಸಿದೆ. ಇವರೆಲ್ಲರ ವಿಚಾರಣೆ- ಅಭಿಪ್ರಾಯ ಸಂಗ್ರಹದ ನಂತರವೇ ಪ್ರಕರಣದ ಬಗ್ಗೆ ನ್ಯಾಯಾಲಯ ತೀರ್ಪು ನೀಡುವುದು. ಅಂದಹಾಗೆ, ಸಾರ್ವಜನಿಕರಿಂದ ಅಭಿಪ್ರಾಯ ಸಂಗ್ರಹಿಸುವ ಇಂಥಾ ವಿಧಾನ ತುಂಬಾ ಅಪರೂಪದ್ದು . ಆದರೆ, ಇದೇನು ಹೊಸ ಪರಿಕಲ್ಪನೆಯಲ್ಲ ಎನ್ನುತ್ತಾರೆ ನ್ಯಾಯಮೂರ್ತಿ ಸದಾಶಿವ. ಸಾರ್ವಜನಿಕರಿಗೆ ಸಮಾಧಾನ ತರುವ ವಿಷಯಕ್ಕೆ ಸಂಬಂಧಿಸಿದಂತೆ ಅವರ ಅಭಿಪ್ರಾಯ ಪಡೆಯುವುದೇ ಸೂಕ್ತ ಎನ್ನುವುದವರ ನಿಲುವು.

ಆದರೆ ಆಗುತ್ತಿರುವುದೇನು ? - ಬೆಂಗಳೂರಿನ ನಾಗರಿಕರೆಲ್ಲ ಗಾಢ ನಿದ್ರೆಯಲ್ಲಿದ್ದಾರೆ (ಈಗ ಚಳಿಗಾಲವೂ ಅಲ್ಲ !). ‘ ಸಾರ್ವಜನಿಕರ ಯಾವ ಆಕ್ಷೇಪವೂ ಇಲ್ಲದಿದ್ದಲ್ಲಿ , ನ್ಯಾಯಾಲಯದಿಂದ ವ್ಯತಿರಿಕ್ತ ತೀರ್ಪು ಬರುವ ಸಾಧ್ಯತೆಯಿದೆ’ ಎನ್ನುತ್ತಾರೆ ಕರ್ನಾಟಕ ರಾಜ್ಯ ಕಾನೂನು ಸೇವೆ ಪ್ರಾಧಿಕಾರ (ಕೆಎಸ್‌ಎಲ್‌ಎಸ್‌ಎ) ದ ಡೆಪ್ಯುಟಿ ಸೆಕ್ರಟರಿ ಎಸ್‌.ಎನ್‌. ಕೆಂಪೇಗೌಡ. ಅವರ ಪ್ರಕಾರ, ‘ಕಾನೂನು ಹೇಳುವಂತೆ ಇಂಥಾ ತೀರ್ಮಾನಗಳಲ್ಲಿ ಪ್ರತಿಯಾಬ್ಬರ ಸಹಕಾರವೂ ಅಗತ್ಯ. ಇಲ್ಲದೆ ಹೋದಲ್ಲಿ ತಕ್ಕಡಿ ಒಂದೆಡೆಯೇ ತೂಗುತ್ತದೆ. ಆದರೆ, ನ್ಯಾಯಮೂರ್ತಿಗಳು ಸೂಕ್ಷ್ಮಗ್ರಾಹಿಗಳು, ಅವರು ಪ್ರಕರಣದ ಪ್ರಾಮುಖ್ಯತೆಯನ್ನು ಗ್ರಹಿಸುತ್ತಾರೆಂದು ನಿರೀಕ್ಷಿಸುವ’ .

ವಾಯುಮಾಲಿನ್ಯ ತಡೆಗಟ್ಟುವ ಕುರಿತು, ಮಹಾನಗರ ಪಾಲಿಕೆ ಆಯುಕ್ತ ಅಶೋಕ್‌ ದಳವಾಯಿ ಅವರದ್ದು ಬೇರೆಯೇ ವಾದ. ಬೆಂಗಳೂರಿನಲ್ಲಿ ವೈಯಕ್ತಿಕ ವಾಹನಗಳ ಸಂಖ್ಯೆ ಹೆಚ್ಚಾಯಿತು, ಆಟೋಗಳಂತೂ ಸೀಮೆಎಣ್ಣೆ ಬಳಸುತ್ತವೆ ಎಂದು ದೂರುವ ದಳವಾಯಿ- ಇದಕ್ಕೆಲ್ಲ ಸಮೂಹ ಸಾರಿಗೆಯೇ ಮದ್ದೆನ್ನುತ್ತಾರೆ. ಮೋಟಾರ್‌ ವೆಹಿಕಲ್‌ ಆಕ್ಟ್‌ನಲ್ಲಿ ತಿದ್ದುಪಡಿ ತರುವ ಮೂಲಕ ಎಲ್‌ಪಿಜಿಯನ್ನು ಇಂಧನವಾಗಿ ಬಳಸಬೇಕೆನ್ನುವುದು ಅವರ ಇರಾದೆ.

ಮಾಲಿನ್ಯ ನಿಯಂತ್ರಣ ಮೇಲ್ವರ್ಗದವರ ಅಗತ್ಯವಾ ?

ಮಾಲಿನ್ಯ ಎನ್ನುವುದು ಸಮಸ್ಯೆಯಾಗಿ ಬೆಳೆದದ್ದು ಇತ್ತೀಚೆಗಷ್ಟೇ. ಈಗ ಕೂಡ ಮೇಲ್ವರ್ಗದ ಮಂದಿ ಮಾತ್ರ ಮಾಲಿನ್ಯದ ಬಗ್ಗೆ ತಲೆ ಕೆಡಿಸಿಕೊಳ್ಳುತ್ತಾರೆ. ಮಧ್ಯಮ ವರ್ಗದ ಮಂದಿಗೆ, ಸೊಳ್ಳೆಗಳ ನಿಯಂತ್ರಣ, ನಾಯಿ ಕಾಟ ಹಾಗೂ ಮೂಲಭೂತ ಸಮಸ್ಯೆಗಳ ಪೂರೈಕೆಯತ್ತಲೇ ಹೆಚ್ಚಿನ ಗಮನ ಎನ್ನುತ್ತಾರೆ ದಳವಾಯಿ. ಪರಿಸರ ಮಾಲಿನ್ಯ ಕುರಿತಾದ ಜಾಗೃತಿ ಸಾರ್ವತ್ರಿಕವಾಗಬೇಕು. ಆಗಷ್ಟೇ ಏನಾದರೂ ಆಗಲು ಸಾಧ್ಯ ಎನ್ನುವುದು ದಳವಾಯಿ ಸ್ಪಷ್ಟ ಅಭಿಪ್ರಾಯ.

ಇನ್ನು ಶಬ್ದ ಮಾಲಿನ್ಯದತ್ತ ಹೊರಳುವುದಾದರೆ, ಅದರ ಯಶಸ್ವೀ ನಿಯಂತ್ರಣ ಸಾಧ್ಯವಿದೆ ಎನ್ನುತ್ತಾರೆ ಡಾ. ಕುಮುದವಲ್ಲಿ. ಅವರು ಹೇಳುವಂತೆ ‘ಕರ್ಕಶ ಸದ್ದಿನ ಹಾಗೂ ಸೈಲೆನ್ಸರ್‌ಗಳಿಲ್ಲದ ಆಟೋ ಹಾಗೂ ಬೈಕ್‌ಗಳ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಪ್ರಸ್ತುತ ಲಭ್ಯವಿರುವ ಶಬ್ದದ ತೀವ್ರತೆಯನ್ನು ಗುರ್ತಿಸುವ ಮಾಪಕವನ್ನು (ಬೆಲೆ 20 ಸಾವಿರ ರು.) ಸರ್ಕಾರ ಬಳಸಿಕೊಳ್ಳಬೇಕು’.

ಮುಂಬಯಿಗೆ ಬಂದಿದೆ ಮಾಲಿನ್ಯ ರಹಿತ ವಾಹನ - ‘ಬಿಜ್ಲೀ’

ಮಹೀಂದ್ರ ಅಂಡ್‌ ಮಹೀಂದ್ರ ಕಂಪನಿ ರೂಪಿಸಿರುವ 9 ಸೀಟುಗಳ ‘ಬಿಜ್ಲೀ’ ಎನ್ನುವ ವಾಹನ ಮುಂಬಯಿಯ ರಸ್ತೆಗಳಲ್ಲೀಗ ಪ್ರಾಯೋಗಿಕವಾಗಿ ಸಂಚರಿಸುತ್ತಿದೆ. ಶಬ್ದ - ಸೊನ್ನೆ , ಮಾಲಿನ್ಯ- ಸೊನ್ನೆ ಎನ್ನುವ ಅಗ್ಗಳಿಕೆಯ ಈ ವಾಹನ, ಎಲೆಕ್ಟ್ರಿಕ್‌ ಕಾರ್‌ನ ಸುಧಾರಿತ ಮಾದರಿ. ಕ್ಲಚ್‌ ಹಾಗೂ ಗೇರ್‌ ರಹಿತ ಬಿಜ್ಲೀ ಗಂಟೆಗೆ 40 ಕಿಮೀ ವೇಗದಲ್ಲಿ ಓಡುತ್ತದೆ. ಪ್ರಯಾಣಿಕನಿಗೆ, ಕಿಲೋ ಮೀಟರ್‌ಗೆ 50 ಪೈಸೆ ತಗುಲುವ ಬಿಜ್ಲಿಯ ನಿರ್ವಹಣಾ ವೆಚ್ಚವೂ ಕಡಿಮೆಯೇ.

ಬಿಜ್ಲೀ ಯಶಸ್ವಿಯಾಗುತ್ತದೋ, ಬೆಂಗಳೂರಿಗೆ ಯಾವಾಗ ಬರುತ್ತದೋ- ಅವೆಲ್ಲಕ್ಕಿಂತ ಈಗ ಜೂನ್‌ 15 ರೊಳಗೆ ಮಾಲಿನ್ಯ ವಿರುದ್ಧ ನಿಮ್ಮ ದನಿಯನ್ನು ನ್ಯಾಯಮೂರ್ತಿಗಳಿಗೆ ತಲುಪಿಸಬೇಕಾದುದು ಅತ್ಯಂತ ಜರೂರು. ಇಲ್ಲದೆ ಹೋದಲ್ಲಿ ಮುಂದೊಂದು ದಿನ ಮಕ್ಕಳು- ಮೊಮ್ಮಕ್ಕಳಿಂದ ಬೈಸಿ ಕೊಳ್ಳುತ್ತೀರಿ.

ನೀವೇ ನೇರವಾಗಿ ನ್ಯಾಯಮೂರ್ತಿಗಳನ್ನು ಸಂಪರ್ಕಿಸಲು ಸಾಧ್ಯವಾಗದಿದ್ದಲ್ಲಿ , ನಿಮ್ಮ ಅಭಿಪ್ರಾಯ- ಅವಹಾಲುಗಳನ್ನು ನಮಗೆ ಇ- ಮೇಲ್‌ ಮೂಲಕ ಕಳುಹಿಸಿ. ವ್ಯವಸ್ಥೆ , ಸಮಾಜವನ್ನು ಸಂಪರ್ಕಿಸುವ ಕೆಲಸದಲ್ಲಿ ಕನ್ನಡ.ಇಂಡಿಯಾಇನ್ಫೋ.ಕಾಂ ಯಾವತ್ತು ಹಿಂದಾಗಿದೆ ಹೇಳಿ...

ವಾರ್ತಾ ಸಂಚಯ

ಮುಖಪುಟ / ಲೋಕೋಭಿನ್ನರುಚಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more