ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕರುನಾಡ ನಂದನವನವಾಗಿಸುವ ಕನಸಿನಲ್ಲಿ ಆದಿಚುಂಚನಗಿರಿ ಸ್ವಾಮೀಜಿ

By Staff
|
Google Oneindia Kannada News

ಹಾಸನ : ಕನ್ನಡಿಗನಿಗೊಂದು ಗಿಡದಂತೆ 5 ಕೋಟಿ ಗಿಡಗಳನ್ನು ನೆಡಲು ಉದ್ದೇಶಿಸಿರುವ ಆದಿ ಚುಂಚನಗಿರಿ ಸಂಸ್ಥಾನದ ಮಹತ್ವಾಕಾಂಕ್ಷೆಯ ಯೋಜನೆಗೆ ಸರ್ಕಾರ 3 ಕೋಟಿ ರುಪಾಯಿ ಬಿಡುಗಡೆ ಮಾಡಿದ್ದು , ಗಿಡಗಳನ್ನು ನೆಡುವ ಕಾರ್ಯವನ್ನು ಯಾವಾಗ ಪ್ರಾರಂಭಿಸಬೇಕು ಎನ್ನುವುದನ್ನು ಸದ್ಯದಲ್ಲಿಯೇ ನಿರ್ಧರಿಸಲಾಗುವುದು ಎಂದು ಆದಿ ಚುಂಚನಗಿರಿ ಮಠಾಧೀಶ ಬಾಲಗಂಗಾಧರನಾಥ ಸ್ವಾಮೀಜಿ ಹೇಳಿದ್ದಾರೆ.

ಹಾಸನದಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮವೊಂದರಲ್ಲಿ ಭಾಗವಹಿಸಲು ಆಗಮಿಸಿದ್ದ ಸ್ವಾಮೀಜಿ ಸುದ್ದಿಗಾರರೊಂದಿಗೆ ಮಾತನಾಡಿದರು. ಎಲ್ಲ ಧರ್ಮ, ಮಠಗಳ ಪ್ರತಿನಿಧಿಗಳನ್ನೊಳಗೊಂಡ ಸರ್ವ ಧರ್ಮ ಟ್ರಸ್ಟ್‌ ಗಿಡ ನೆಡುವ ಅವಧಿಯ ಬಗ್ಗೆ ತೀರ್ಮಾನ ಕೈಗೊಳ್ಳುವುದು. ಈಗಾಗಲೇ ಎಲ್ಲಾ ಜಿಲ್ಲೆಗಳಲ್ಲೂ ಗಿಡ ನೆಡುವ ಕುರಿತು ಸಿದ್ಧತೆಗಳನ್ನು ಮಾಡಿಕೊಂಡಿದ್ದು , ಜಿಲ್ಲೆಗಳ ಮಠಾಧೀಶರು ಗಿಡ ನೆಡುವ ಕಾರ್ಯಕ್ರಮದ ನೇತೃತ್ವ ವಹಿಸುವರು ಎಂದು ಸ್ವಾಮೀಜಿ ಹೇಳಿದರು.

ನೆಡಲು ಉದ್ದೇಶಿಸಿರುವ 5 ಕೋಟಿ ಗಿಡಗಳ ಪೈಕಿ ಈಗಾಗಲೇ ಎರಡು ಕೋಟಿ ಗಿಡಗಳನ್ನು ಸಂಸ್ಥಾನ ಸಿದ್ಧ ಪಡಿಸಿಕೊಂಡಿದೆ. ಹಳ್ಳಿಗಳಲ್ಲಿನ ಜನರಿಗೆ ಎಲ್ಲ ವಿಧವಾದ ಹಣ್ಣುಗಳು ತಿನ್ನಲು ಸಿಗಲಿ ಎನ್ನುವುದು ನಮ್ಮ ಉದ್ದೇಶ ಎಂದರು.

ಗಿಡ ಬೆಳೆಸುವುದರೊಂದಿಗೆ ಅಂತರ್ಜಲ ವೃದ್ಧಿ

ಅಂತರ್ಜಲ ವೃದ್ಧಿ ಸಂಸ್ಥಾನದ ಮುಂದಿನ ಆದ್ಯತೆಗಳಲ್ಲಿ ಒಂದಾಗಿದ್ದು , 5 ವರ್ಷಗಳಲ್ಲಿ ರಾಜ್ಯದ ಎಲ್ಲಾ ಕೆರೆಗಳ ಹೂಳನ್ನು ತೆಗೆಯಲಾಗುವುದು. ಈ ಸಂಬಂಧ ಜಲಾನಯನ ಪ್ರದೇಶ ಅಭಿವೃದ್ಧಿ ಮಂಡಳಿಯ ನಿರ್ದೇಶಕ ಮದನ್‌ ಗೋಪಾಲ್‌ ಅವರೊಂದಿಗೆ ಚರ್ಚೆ ನಡೆಸಲಾಗಿದ್ದು , ಇಲಾಖೆಯ ಮೂಲಕವೇ ಯೋಜನೆಯನ್ನು ಕಾರ್ಯಗತಗೊಳಿಸಲಾಗುವುದು ಎಂದು ಸ್ವಾಮೀಜಿ ಹೇಳಿದರು. ಗಿಡ ಬೆಳೆಸುವ ಹಾಗೂ ಅಂತರ್ಜಲ ಮಟ್ಟ ಹೆಚ್ಚಿಸುವ ಕೆಲಸ ವೈಜ್ಞಾನಿಕವಾಗಿ ಹೆಚ್ಚು ಮಹತ್ವ ಹೊಂದಿದೆ ಎಂದು ಬಾಲಗಂಗಾಧರನಾಥ ಸ್ವಾಮಿ ಅಭಿಪ್ರಾಯ ಪಟ್ಟರು.

ಮಠದ ಹಣ ದುರುಪಯೋಗವಾಗಿಲ್ಲ

ಮಠದ ಶಾಲೆಗಳನ್ನು ಹಾಗೂ ಕಲ್ಯಾಣ ಮಂಟಪದ ವ್ಯವಸ್ಥೆಯನ್ನು ನೋಡಿಕೊಳ್ಳುವ ಸಲುವಾಗಿ ಸದ್ಯದಲ್ಲಿಯೇ ವಿಶ್ರಾಂತ ಶಿಕ್ಷಕ ಮರಿಯಪ್ಪ ಅವರನ್ನು ಆಡಳಿತಾಧಿಕಾರಿಯನ್ನಾಗಿ ನೇಮಿಸಲಾಗುವುದು ಎಂದು ಸ್ಪಷ್ಟಪಡಿಸಿದ ಸ್ವಾಮೀಜಿ, ಮಠದ ಹಣ ದುರುಪಯೋಗವಾಗಿದೆ ಎನ್ನುವ ಸುದ್ದಿಗಳು ಆಧಾರ ರಹಿತ ಹಾಗೂ ದುರುದ್ದೇಶಪೂರಕ ಎಂದು ಬಣ್ಣಿಸಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X