Iran Vs US and Israel Conflict: ಅಮೆರಿಕ - ಇಸ್ರೇಲ್ ಎಣಿಕೆ ಸುಳ್ಳಾಗಿದೆ; ಇರಾನಿನ ಹುತಾತ್ಮರ ಪುಟ್ಟ ಇತಿಹಾಸ: ಹರೀಶ್ ಗಂಗಾಧರ್
Iran vs US and Israel Conflict: ಅಮೆರಿಕ - ಇಸ್ರೇಲ್ ಎಣಿಕೆ ಸುಳ್ಳಾಗಿದೆ; ಇರಾನಿನ ಹುತಾತ್ಮರ ಪುಟ್ಟ ಇತಿಹಾಸದ ಬಗ್ಗೆ ಬರಹಗಾರ ಹರೀಶ್ ಗಂಗಾಧರ್ ಅವರ ಬರಹ ಇಲ್ಲಿದೆ.
ಅಮೆರಿಕ - ಇಸ್ರೇಲ್ ಎಣಿಕೆ ಸುಳ್ಳಾಗಿದೆ. ಯುದ್ಧದಲ್ಲಿ ನಿರೀಕ್ಷೆಯಂತೆ ಇರಾನ್ ಸುಲಭದ ತುತ್ತಾಗಿಲ್ಲ. ದೇಶದ ಸರ್ವೋಚ್ಚ ನಾಯಕನ ಹತ್ಯೆಯೂ ಸೇರಿದಂತೆ ಹಲವು ಪ್ರಮುಖ ನಾಯಕರ ಹತ್ಯೆಯ ನಂತರವೂ ಇರಾನ್ ದಿಟ್ಟ ಪ್ರತಿರೋಧ ಎಲ್ಲರನ್ನೂ ಚಕಿತಗೊಳಿಸಿದೆ. ಅಮೆರಿಕದ decapitation- (ಶಿರಚ್ಛೇದನ) ತಂತ್ರದಿಂದ ದಾಳಿಗೊಳಗಾದ ದೇಶದಲ್ಲಿ ಅರಾಜಕತೆ, ಅಶಾಂತಿ ಮೂಡಿ ರೋಷಭರಿತ ಜನ ಬೀದಿಗಿಳಿದು ಪ್ರತಿಭಟಿಸಿ ಬದಲಾವಣೆ ತಂದು ಕೊನೆಗೆ ಇಂಪೀರಿಯಲ್ ಅಮೆರಿಕ/ಇಸ್ರೇಲ್ ಕೈಗೊಂಬೆ ಆಡಳಿತವನ್ನು ಸ್ಥಾಪಿಸುವ ಚಿರಪರಿಚಿತ ಪ್ಲಾನ್ ಸದ್ಯಕಿಲ್ಲಿ ಕೆಲಸ ಮಾಡಿಲ್ಲ ಅನಿಸುತ್ತಿದೆ.

2020ರ ಜನವರಿ 3ರಂದು ಹತರಾದ ಪ್ರಭಾವಿ ಸೇನಾ ನಾಯಕ ಕಾಸೆಂ ಸುಲೇಮಾನಿ, ಇರಾನಿನ ಪರಮಾಣು ವಿಜ್ಞಾನಿಗಳಿಂದ ಆರಂಭವಾದ ಪೂರ್ವಯೋಜಿತ ಹತ್ಯೆಗಳು ಖಮೇನಿ, ಲಾರಿಜಾನಿ, ಹಸನ್ ಹಸನ್ಜಡೆವರೆಗೂ ಬಂದಿದೆ. ಹತ್ಯೆಗಳು ದಿನಂಪ್ರತಿ ನಡೆಯುತ್ತಿದ್ದರೂ, ಅವರ ಇಲ್ಲದಿರುವಿಕೆಯಿಂದ ದೇಶಕ್ಕೆ ತೀವ್ರ ಹಿನ್ನಡೆಯಾದರೂ, ಅದು ಇರಾನ್ ದೇಶವನ್ನು ಕಾಡಿದಂತೆ ಕಾಣುತ್ತಿಲ್ಲ. ನಾಯಕರ ಅಕಾಲಿಕ ಸಾವು ಅನುಯಾಯಿಗಳ ಮನದಲ್ಲಿ ಆತಂಕ ಆವರಿಸುವಂತೆ ಮಾಡಿಲ್ಲ.
ದೇಶವನ್ನು ಸಮರ್ಥವಾಗಿ ಮುನ್ನಡೆಸುವ ಕಲೆಯ ಬಹಳ ದೊಡ್ಡ ಇತಿಹಾಸ ಇರಾನಿಗಿದೆ. ಅದು ಶಿಯಾ ಇಸ್ಲಾಂ ಪಂಥದ ಮೂಲ ತತ್ವ ಸಿದ್ಧಾಂತಗಳಲ್ಲೇ ಹಾಸುಹೊಕ್ಕಾಗಿದೆ. ಹದಿನಾರನೇ ಶತಮಾನದಲ್ಲಿ ಸಫಾವಿದ್ ರಾಜವಂಶ ಶಿಯಾ ಇಸ್ಲಾಂನನ್ನು ಪರ್ಷಿಯನ್ ಸಾಮ್ರಾಜ್ಯದ ರಾಜಧರ್ಮವೆಂದು ಒಪ್ಪಿಕೊಂಡ ನಂತರ ಇರಾನ್ ಶಿಯಾ ಬಹುಸಂಖ್ಯಾತ ಮುಸಲ್ಮಾನರ ನಾಡಾಯಿತು.
ರೆಝಾ ಪೆಹಲಾವಿ ಏಕಾಧಿಪತ್ಯದ ದಿನಗಳನ್ನು ಅಂತ್ಯಗೊಳಿಸಿದ 1979ರ ಇಸ್ಲಾಮಿಕ್ ಕ್ರಾಂತಿಯ ನಂತರದ ಯುಗದಲ್ಲಿ ಪೊಲಿಟಿಕಲ್ ಶಿಯಾವಾದ ಮತ್ತು ರಾಷ್ಟ್ರವಾದಗಳೆಂಬ ಎರಡು ಸದೃಢ ಸ್ತಂಭಗಳ ಮೇಲೆ ದೇಶ ನಿರ್ಮಾಣವಾಯಿತು. ಇಂತಹ ಪೊಲಿಟಿಕಲ್ ಶಿಯಾವಾದ ಮತ್ತು ರಾಷ್ಟ್ರವಾದದ ಹುತಾತ್ಮರನ್ನು ಕೊಂಡಾಡುತ್ತದೆ. ಹುತಾತ್ಮರಾಗುವ ಸೌಭಾಗ್ಯ ಪ್ರತಿಯೊಬ್ಬರಿಗೂ ಸಿಗದು ಎಂದು ಅಚಲವಾಗಿ ನಂಬಿರುವ ಶಿಯಾ ಪಂಥದಲ್ಲಿ ಹುತಾತ್ಮರಿಗೆ ಸಿಗುವ ಗೌರವ, ಮೇರು ಸಮ್ಮಾನಗಳು ಬಹುಶಃ ಬೇರಾರಿಗೂ ಸಿಗದು! ಇಸ್ರೇಲ್ ಮತ್ತು ಅಮೆರಿಕ ಈ ನಾಯಕರುಗಳನ್ನು ಕೊಂದು ಅವರನ್ನು ಇರಾನಿ ಜನರ ಕಣ್ಣುಗಳಲ್ಲಿ ಅತ್ಯಂತ ಮೇರು ಸ್ಥಾನಕ್ಕೇರಿಸಿವೆ. ಇಲ್ಲಿ ನಾಯಕರ ಇಲ್ಲದಿರುವಿಕೆ ನಿರ್ವಾತ, ಶೂನ್ಯವನ್ನು ಸೃಷ್ಟಿಸುವುದಿಲ್ಲ, ಬದಲಿಗೆ ಯುವಕರನ್ನು ಕದನಕ್ಕಿಳಿಯಲು ಪ್ರೇರೇಪಿಸುತ್ತದೆ.
ಹುತಾತ್ಮರನ್ನು ಹಾಡಿ ಹೊಗಳುವ, ಅವರ ಪ್ರಾಣತ್ಯಾಗ ಅನುಕರಣೀಯ ಎಂದು ಪ್ರತಿಪಾದಿಸುವ ಸಮಾಜ ಸೃಷ್ಟಿಯಾದದ್ದು ಹೇಗೆ, ಪ್ರವಾದಿ ಮೊಹಮ್ಮದರ ಕಾಲ ನಂತರ ಅವರ ಅನುಯಾಯಿಗಳಲ್ಲಿ ಗೊಂದಲ ಶುರುವಾಯಿತು. ಉಮ್ಮಾ(ಮುಸ್ಲಿಂ ಸಮುದಾಯ)ವನ್ನು ಯಾರು ಮುನ್ನಡೆಸಬೇಕೆಂಬ ಚರ್ಚೆ ಶುರುವಾಯಿತು. ಪ್ರವಾದಿಗಳ ಸೋದರ ಸಂಬಂಧಿ/ಅಳಿಯ, ಅಲಿಯವರನ್ನು ಒಂದು ಬಳಗ ಸಮರ್ಥಿಸಿದರೆ ಮತ್ತೊಂದು ಬಳಗ ಪ್ರವಾದಿಗಳ ಆಪ್ತ ಅಬು ಬಕ್ರ್ ಪರವಾಗಿ ನಿಂತಿತು. ಮುಂದುವರಿದು ಅಬು ಬಕ್ರ್ ಮೊದಲ ಖಾಲಿಫ್ ಆದರು. ಅಲಿ ನಾಲ್ಕನೇ ಖಾಲಿಫ್ ಆದರು. ಅಲಿ ಬೆಂಬಲಕ್ಕೆ ನಿಂತ ಬಣ ಶಿಯಾ ಎಂದಾದರೆ (ಶಿಯಾಟ್ ಅಲಿ), ರಶೀದುನ್ ಖಾಲಿಫ್ಸ್ (ಅಬು ಬಕ್ರ್, ಉಮರ್, ಉತ್ಮನ್, ಅಲಿ) ಸುನ್ನಿ ಸಂಪ್ರದಾಯವನ್ನು ಸೃಷ್ಟಿಸಿದರು.
ಮುಂದುವರಿದು ಅಲಿ ಹತರಾಗಿ ಶಿಯಾಗಳಿಗೆ ಮೊದಲ ಹುತಾತ್ಮರೆಂದೂ ಪ್ರಿಯರಾದರು. ಅಲಿಯವರ ಪುತ್ರ ಹಸನ್ ಕೆಲ ಕಾಲ ಶಿಯಾ ಇಮಾಮನಾಗಿ ಖಾಲಿಫೇಟ್ ನೋಡಿಕೊಂಡರೂ, ಉಮ್ಮಯ್ಯದರ ಒತ್ತಡಕ್ಕೆ ಮಣಿದು ಅಧಿಕಾರ ತ್ಯಾಗ ಮಾಡಬೇಕಾಯಿತು. ಅಲಿಯ ಕಿರಿಯ ಪುತ್ರರಾದ ಹುಸೇನ್ ಉಮ್ಮಯ್ಯದ ರಾಜ ಯಾಝಿದ್ ಆಡಳಿತವನ್ನು ಒಪ್ಪದೆ ತೀವ್ರ ಪ್ರತಿರೋಧವೊಡ್ಡಿದ. 680ರಲ್ಲಿ ಹುಸೇನ್ ಮತ್ತವರ 72 ಸಂಗಡಿಗರು ಇರಾಕಿನ ಕರ್ಬಲಾ ಎಂಬಲ್ಲಿ ಯಾಝಿದ್ ಸೇನೆಯ ವಿರುದ್ಧ ವೀರಾವೇಶದಿಂದ ಹೋರಾಡಿ ಹುತಾತ್ಮರಾದರು.
ಅಂದಿನಿಂದ ಶಿಯಾಗಳಿಗೆ ಕರ್ಬಲಾ ಕದನ ಅತ್ಯಂತ ಮಹತ್ವದ ಘಟನೆಯಾಯಿತು. ಶಿಯಾ ಪಂಥವನ್ನು ನಂಬುವವರಿಗೆ ಪ್ರಾಣವನ್ನು ಲೆಕ್ಕಿಸದೆ ಬಲಿಷ್ಠ ಸೇನೆಯನ್ನು ಎದುರಿಸಿ ಹುತಾತ್ಮರಾದ ಹುಸೇನ್ ಮಾದರಿಯಾದರು. ಹುಸೇನ್ ಉತ್ಕೃಷ್ಟ ತ್ಯಾಗದ ಪ್ರತೀಕವಾದರು. ಹೀಗೆ ಇದು ಇರಾನಿನ ಪೊಲಿಟಿಕಲ್ ಶಿಯಾವಾದದ ಅಚಲ ತತ್ವವಾಯಿತು. ಇಂದಿಗೂ ಹುಸೇನ್ ಪ್ರಾಣತ್ಯಾಗ ನೆನೆಯುತ್ತಾ ಪ್ರತಿ ವರುಷ ಸರಿಯಾಗಿ ಮೊಹರಂ ಆಚರಣೆಯ ಹತ್ತು ದಿನಕ್ಕೆ ಶಿಯಾಗಳು ಅಶುರಾ ಆಚರಿಸುತ್ತಾರೆ.
1979ರ ಇಸ್ಲಾಮಿಕ್ ಕ್ರಾಂತಿಯ ದಿನಗಳಲ್ಲಿ ಅಯತೊಲ್ಲಾ ಖಮೇನಿ, ಹುಸೇನರ ತ್ಯಾಗವನ್ನು, ಅಪರಿಮಿತ ಧೈರ್ಯವನ್ನು ಪದೇ ಪದೆ ನೆನೆದರು. ಹುಸೇನರ ಗತಕಾಲದ ಸಾಹಸ ಇರಾನಿನ ಜನಗಳಿಗೆ ಸ್ಫೂರ್ತಿಯಾಯಿತು. ದೊರೆ ರೆಝಾ ಪೆಹಲಾವಿ ಪತನಕ್ಕೂ ಅದು ಕಾರಣವಾಯಿತು. ಖಮೇನಿಯ ಕಣ್ಣುಗಳಲ್ಲಿ ದೊರೆ ರೆಝಾ ರಾಜ, ಯಾಝಿದ್ ಪ್ರತಿರೂಪವೇ ಆಗಿದ್ದ. ದೊರೆಯ ಕಾಲ್ತುಳಿತಕ್ಕೆ ನಲುಗಿದ್ದ ಹುಸೇನರ ಅನುಯಾಯಿಗಳು ಉಗ್ರ ಹೋರಾಟಕ್ಕಿಳಿಯಬೇಕೆಂದು ಕರೆ ಖಮೇನಿ ನೀಡಿದರು. ಇರಾನಿನ ಜನತೆ ಆ ಕರೆಯನ್ನು ಕಡೆಗಣಿಸಲಿಲ್ಲ. ಕ್ರಾಂತಿ ಘಟಿಸಿತು.
ಕ್ರಾಂತಿ ಏನೋ ಆಗಿಹೋಯಿತು, ಆದರೆ ಧರ್ಮಾಧಾರಿತ ಆಡಳಿತ ಬಹುದಿನ ಬಾಳುವುದಿಲ್ಲವೆಂಬ ಅನಿಸಿಕೆ ಎಲ್ಲರದ್ದಾಗಿತ್ತು. ಕ್ರಾಂತಿಯಾದ ಮುಂದಿನ ವರ್ಷವೇ ಶಿಯಾ ಆಡಳಿತವನ್ನು ಆದಷ್ಟು ಬೇಗ ಕೊನೆಗೊಳಿಸುವ ಇರಾದೆಯಿಂದ ಇರಾಕಿನ ಪಡೆಗಳನ್ನು ಇರಾನಿ ನೆಲಕ್ಕೆ ಸದ್ದಾಂ ನುಗ್ಗಿಸಿದ. ಎಡಪಂಥೀಯರು, ಉದ್ದಿಮೆದಾರರ ಸಂಘಟನೆ, ಕಾರ್ಮಿಕರು, ಇಸ್ಲಾಮಿಯರು ಮತ್ತು ಉದಾರವಾದಿಗಳು ಒಟ್ಟಾಗಿ ದೊರೆ ರೆಝಾ ಶಾನನ್ನು ವಿರೋಧಿಸಿ ಯಶಸ್ವಿಯಾದ ಕ್ರಾಂತಿಯೊಂದು ಫಲ ನೀಡುವ ಮೊದಲೇ ಕಮರಿಹೋಗುವ ಭೀತಿಯಲ್ಲಿತ್ತು. ಇಸ್ಲಾಮಿಯರ ಬಲ ಹೆಚ್ಚಾದಂತೆಲ್ಲಾ ಕ್ರಾಂತಿಗೆ ಒಟ್ಟಾಗಿದ್ದ ಬಳಗಗಳಲ್ಲಿ ಬಿರುಕು ಕಾಣತೊಡಗಿತು.
ಸದ್ದಾಂ ದಾಳಿ ಒಂದು ರೀತಿಯಲ್ಲಿ ಇಸ್ಲಾಮಿಯರಿಗೆ ವರವಾಯಿತು. ಇರಾನಿನ ಜನತೆ ರಾಷ್ಟ್ರಧ್ವಜ ಹಿಡಿದು ನಿಂತಿತು. ಸದ್ದಾಂ, ಆಧುನಿಕ ಯುಗದ ಯಾಝಿದ್ ಎಂದು ಇರಾನಿನ ಜನತೆ ಪರಿಗಣಿಸಿತು. ಯುದ್ಧದ ನಡುವೆ ಭೀಕರವಾಗಿ ಎಡಪಂಥೀಯರನ್ನು, ಉದಾರವಾದಿಗಳನ್ನು ಸದೆಬಡಿಯಲಾಯಿತು. ಯುದ್ಧ, ಧರ್ಮೋನ್ಮಾದ, ಎಲ್ಲವನ್ನೂ ಮರೆಮಾಚಿತ್ತು. ಇರಾನ್ ಇಸ್ಲಾಮಿಯರ ಬಿಗಿಮುಷ್ಟಿಯಲ್ಲಿ ಬಂಧಿಯಾಗಲು ಎಂಟು ವರ್ಷದ ಇರಾನ್-ಇರಾಕ್ ಯುದ್ಧ ಸಹಕರಿಸಿತು.
ಇತ್ತೀಚಿಗೆ ಇರಾನಿನ ಸರ್ವೋಚ್ಚ ನಾಯಕ ಖಮೇನಿ ಹತರಾದಾಗ "ಇಮಾಮ್ ಹುಸೇನನ ಮಕ್ಕಳು ಯಾರಿಗೂ ಹೆದರಲ್ಲ" ಎಂದು ಇರಾನಿನ ಸುಪ್ರೀಂ ನ್ಯಾಷನಲ್ ಸೆಕ್ಯೂರಿಟಿ ಕೌನ್ಸಿಲ್ ಕಾರ್ಯದರ್ಶಿ ಅಲಿ ಲಾರಿಜಾನಿ ಹೇಳಿಕೆ ನೀಡಿದರು. ಮುಂದುವರಿದು "ನಮ್ಮ ಜನರ ನೆತ್ತರು ಇಸ್ಲಾಂ ಎಂಬ ಹೆಮ್ಮರದ ಬೇರುಗಳಲ್ಲಿ ಇಳಿದಾಗ ಆ ಮರ ಮತ್ತಷ್ಟು ಸದೃಢವಾಗುತ್ತದೆ" ಎಂಬ ಹೇಳಿಕೆಯನ್ನ ಲಾರಿಜಾನಿಯೇ ಹತರಾದಾಗ ಈಗಿನ ಸರ್ವೋಚ್ಚ ನಾಯಕ ಮೋಹ್ತಬ ಖಮೇನಿ ನೀಡಿದರು!
ಕ್ರಾಂತಿಯ ನಂತರ ಕಳೆದ ನಲವತ್ತೇಳು ವರುಷಗಳಲ್ಲಿ ಇರಾನ್ ಇಂತಹ ಸವಾಲನ್ನು ಎದುರಿಸಿರಲಿಲ್ಲ. ಹೋರಾಟ ತೊರೆದು ಪಲಾಯನ ಮಾಡುವುದು ಇರಾನಿಗಳ ಇತಿಹಾಸದಲ್ಲೇ ಇಲ್ಲ. ಇಸ್ಲಾಮಿಕ್ ಕ್ರಾಂತಿಯ ಸಿದ್ಧಾಂತ, ನಂಬಿಕೆ, ಧರ್ಮವೆಲ್ಲವೂ ಅವರನ್ನು ಅಖಾಡಕ್ಕೆ ಸನ್ನದ್ಧವಾಗಿಸಿ ವೀರ ಮರಣವನ್ನು ಅಪ್ಪಲು ಮುಂದಾಗುವಂತೆ ಮಾಡಿದೆ. ಈಗ ಸದ್ಯಕ್ಕೆ ಅವರಲ್ಲಿ ಹುತಾತ್ಮರ ದಂಡೆ ಸಿದ್ಧವಾಗಿದೆ... ಪ್ರತಿರೋಧಕ್ಕೆ, ತ್ಯಾಗಕ್ಕೆ ಮತ್ತು ಸೇಡಿಗೆ.
(ಸ್ಟ್ಯಾನ್ಲಿ ಜಾನಿ ಲೇಖನದಿಂದ ಸಾಕಷ್ಟು ಮಾಹಿತಿ ಪಡೆದು ಬರೆದು ಲೇಖನ)
- Harish Gangadhar / ಹರೀಶ್ ಗಂಗಾಧರ್, ಬರಹಗಾರರು
-
EPFO 3.0: ಇನ್ಮುಂದೆ UPI, ATM ಮೂಲಕವೇ ಪಿಎಫ್ ಹಣ ಪಡೆಯಬಹುದು; ಏಪ್ರಿಲ್ 1 ರಿಂದಲೇ ಹೊಸ ನಿಯಮ ಜಾರಿ -
Gold Rate : ಮಾರ್ಚ್ 29ರ ಚಿನ್ನ ಮತ್ತು ಬೆಳ್ಳಿ ಬೆಲೆ: ಪ್ರಮುಖ ನಗರಗಳ ಇಂದಿನ ದರ ಪಟ್ಟಿ ಹೀಗಿದೆ -
Pooja Gandhi: ಹಿಂದಿ ಒಂದು ಭಾಷೆಯಾಗಿ ಕಲಿಯಲಿ, ಆದ್ರೆ ಕನ್ನಡದ ಮಕ್ಕಳ ಮೇಲೆ ಹೇರಿಕೆ ಬೇಡ: ನಟಿ ಪೂಜಾ ಗಾಂಧಿ -
Chicken Leg Piece: ಚಿಕನ್ ಲೆಗ್ ಪೀಸ್ ಸಿಗಲಿಲ್ಲ ಎಂದು ಮದುವೆ ಮಂಟಪದಲ್ಲೇ ಮಾರಾಮಾರಿ, ವಿಡಿಯೋ ಇಲ್ಲಿದೆ -
ಆರ್ಸಿಬಿ ಗೆಲ್ಲಿಸಿದ ಕೊಹ್ಲಿ ಕಂಡು ಗ್ಯಾಲರಿಯಲ್ಲೇ ಕುಣಿದು ಕುಪ್ಪಳಿಸಿದ ಅನನ್ಯಾ ಬಿರ್ಲಾ: ಭಾರೀ ವೈರಲ್ -
April Monthly Horoscope: ಏಪ್ರಿಲ್ ಮಾಸ ಭವಿಷ್ಯ: ಉದ್ಯೋಗ, ಹಣಕಾಸು ಮತ್ತು ಆರೋಗ್ಯದ ಸೂಚನೆಗಳು -
Bengaluru: 19 ಸಾವಿರಕ್ಕೆ 2BHK ಮನೆ ಸಿಕ್ಕಿದ್ದೇಗೆ? 4 ವರ್ಷದಲ್ಲಿ 3 ಮನೆ ಬದಲಾಯಿಸಿದ ದಂಪತಿ ಹೇಳಿದ ಬಾಡಿಗೆ ಸೀಕ್ರೆಟ್ Viral -
Karnataka Weather: ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆ ಮುನ್ಸೂಚನೆ -
NWKRTC: ದಾಂಡೇಲಿ-ಬೆಂಗಳೂರು ಮಧ್ಯೆ ಪಲ್ಲಕ್ಕಿ ವೈಭವ: ಬಸ್ಗಳ ಸಂಚಾರಕ್ಕೆ ಗ್ರೀನ್ ಸಿಗ್ನಲ್, ಡಿಟೇಲ್ಸ್ -
Rishab Shetty: ಪತ್ನಿ ಪ್ರಗತಿ ಶೆಟ್ಟಿ ಹೊರತುಪಡಿಸಿ ಎಲ್ಲರನ್ನೂ ಅನ್ಫಾಲೋ ಮಾಡಿದ ನಟ ರಿಷಬ್ ಶೆಟ್ಟಿ -
March 30 Horoscope: ಕೆಲಸ ಮತ್ತು ಹಣದ ಸ್ಥಿತಿಯಲ್ಲಿ ಹೊಸ ಬದಲಾವಣೆ -
New Railway Line: ಗದಗ-ಹೊಟಗಿ ರೈಲು ಡಬ್ಲಿಂಗ್ ಪೂರ್ಣ, ಮಹಾರಾಷ್ಟ್ರವರೆಗೂ ಸಂಚಾರ ಸುಧಾರಣೆ












Click it and Unblock the Notifications