ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಸವ ನೆಲೆಗಳ ಸಮಗ್ರಅಭಿವೃದ್ಧಿಗೆ ಬಸವ ಸಂಗಮ ಯೋಜನೆ

By Staff
|
Google Oneindia Kannada News

Basavannaಬೆಂಗಳೂರು : ಬಸವ ಕಲ್ಯಾಣ, ಕೂಡಲ ಸಂಗಮ ಹಾಗೂ ಚಿಕ್ಕ ಸಂಗಮ ಮತ್ತು ಬಸವನ ಬಾಗೇವಾಡಿ ಪ್ರದೇಶಗಳ ಸಮಗ್ರ ಅಭಿವೃದ್ಧಿ ಕಾರ್ಯವನ್ನು ಬಸವ ಸಂಗಮ ಅಭಿವೃದ್ಧಿ ಯೋಜನೆಯಡಿ ಕೈಗೆತ್ತಿಕೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಎಸ್‌.ಎಂ.ಕೃಷ್ಣ ತಿಳಿಸಿದ್ದಾರೆ.

ಬಸವ ಜಯಂತಿ ಪ್ರಯುಕ್ತ ಗುರುವಾರ ಬಸವ ವೇದಿಕೆ ಆಯೋಜಿಸಿದ್ದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು. ಜಾತಿ ಜಾತಿ ಎಂದು ಕಚ್ಚಾಡದೆ ಒಂದಾಗಿ, ಮೌಢ್ಯತೆಯಿಂದ ಹೊರಬನ್ನಿ ಎಂಬ ತತ್ತ್ವಗಳನ್ನು 800 ವರ್ಷಗಳ ಹಿಂದೆಯೇ ಪ್ರತಿಪಾದಿಸಿದ್ದ ದೊಡ್ಡ ವ್ಯಕ್ತಿ ಬಸವಣ್ಣ. ಅವರ ವಚನಗಳು ಅಂತರಂಗ ಶುದ್ಧಿ ಮಾಡುವಂಥವು. ಇಂಥಾ ಮಹಾನ್‌ ವ್ಯಕ್ತಿಯ ಬಗ್ಗೆ ಸರ್ಕಾರ ಪೂರ್ಣ ನಂಬುಗೆ ಇರಿಸಿರುವುದರಿಂದಲೇ ಬಸವ ಪುರಸ್ಕಾರ ನೀಡಲು ನಿರ್ಧರಿಸಿರುವುದು ಎಂದು ಕೃಷ್ಣ ಹೇಳಿದರು.

ಪುಟವಿಟ್ಟ ಬಂಗಾರ : ಇದಕ್ಕೂ ಮುನ್ನ ಶಿಕ್ಷಣ ತಜ್ಞ ಎಚ್‌.ನರಸಿಂಹಯ್ಯ ಅವರಿಗೆ ಮುಖ್ಯಮಂತ್ರಿ ಕೃಷ್ಣ ಬಸವ ಶ್ರೀ ಪ್ರಶಸ್ತಿ ಪ್ರದಾನ ಮಾಡಿದರು. ಗ್ರಂಥಪಾಲಕ ಹಾಗೂ ಸಂಶೋಧಕ ಡಾ.ಎಸ್‌.ಆರ್‌.ಗುಂಜಾಳ್‌ ಅವರಿಗೆ ಸಾಹಿತ್ಯ ಶ್ರೀ ಪ್ರಶಸ್ತಿ ಪ್ರದಾನ ಮಾಡಿದ ಕೆಪಿಸಿಸಿ ಅಧ್ಯಕ್ಷ ಹಾಗೂ ತೋಟಗಾರಿಕಾ ಸಚಿವ ಅಲ್ಲಂ ವೀರಭದ್ರಪ್ಪ, ರಾಜ್ಯಾಂಗದಲ್ಲಿ ಯಾವ ತಿದ್ದುಪಡಿ ಬೇಕಾದರೂ ಮಾಡಬಹುದು. ಆದರೆ ಪುಟವಿಟ್ಟ ಬಂಗಾರದಂತಿರುವ ಬಸವಣ್ಣನವರ ವಚನಗಳ ಒಂದೇ ಒಂದು ಪದವನ್ನೂ ಬದಲಿಸುವ ಪ್ರಮೇಯ ಈವರೆಗೆ ಬಂದಿಲ್ಲ ಅಂದರು. ಇದೇ ಸಂದರ್ಭದಲ್ಲಿ ಅವರು ಬಸವೇಶ್ವರರ ಭಾವಚಿತ್ರ ಅನಾವರಣ ಮಾಡಿದರು.

ವಿಶೇಷ ಸಂಚಿಕೆ ಬಿಡುಗಡೆ : ಸಮಾರಂಭದ ವಿಶೇಷ ಸಂಚಿಕೆ ಬಿಡುಗಡೆ ಮಾಡಿ ಮಾತಾಡಿದ ಸಹಕಾರ ಸಚಿವ ಡಿ.ಕೆ.ಶಿವಕುಮಾರ್‌, ಬಸವ ಕ್ಷೇತ್ರಗಳ ಅಭಿವೃದ್ಧಿಗೆ ಜೆ.ಎಚ್‌.ಪಟೇಲರು ಪ್ರಾರಂಭಿಸಿದ ಯೋಜನೆಯನ್ನು ನಮ್ಮ ಸರ್ಕಾರ ಮುಂದುವರೆಸಲಿದೆ ಎಂದರು. ಪ್ರಶಸ್ತಿಗೆ ಭಾಜನರಾದ ಎಚ್ಚೆನ್‌ ಹಾಗೂ ಗುಂಜಾಳ್‌, ತಮಗಿತ್ತಿರುವ ಪುರಸ್ಕಾರಕ್ಕೆ ಕೃತಜ್ಞತೆ ಸಲ್ಲಿಸಿದರು.

ಸಿದ್ಧಗಂಗಾ ಮಠಾಧ್ಯಕ್ಷ ಡಾ. ಶಿವಕುಮಾರ ಸ್ವಾಮಿ ಸಮಾರಂಭದ ಸಾನ್ನಿಧ್ಯ ವಹಿಸಿದ್ದರು. ವಿಧಾನ ಪರಿಷತ್‌ ಸದಸ್ಯ ಎಂ.ವಿ.ರಾಜಶೇಖರ್‌ ಅವರಿಗೆ ಅಧ್ಯಕ್ಷ ಗೌರವ ನೀಡಲಾಗಿತ್ತು. ಉಪ ಮೇಯರ್‌ ಬಿ.ಎಸ್‌.ಪುಟ್ಟರಾಜು, ಶಾಸಕರಾದ ಬಸವರಾಜ ಬೊಮ್ಮಾಯಿ, ವಿ.ಸೋಮಣ್ಣ ಮೊದಲಾದವರು ಸಮಾರಂಭದಲ್ಲಿ ಹಾಜರಿದ್ದರು.

ಈ ಕಾರ್ಯಕ್ರಮಕ್ಕೆ ಮುನ್ನ ನಗರದ ಬಸವೇಶ್ವರ ವೃತ್ತದಲ್ಲಿರುವ ಅಶ್ವಾರೂಢ ಬಸವೇಶ್ವರರ ಪ್ರತಿಮೆಗೆ ಮುಖ್ಯಮಂತ್ರಿ ಕೃಷ್ಣ ಬೃಹತ್‌ ಮಾಲೆಯನ್ನು ಅರ್ಪಿಸಿದರು. ಅಲ್ಲಿಯೂ ಬಸವಣ್ಣನವರ ಅಪ್ರತಿಮ ವ್ಯಕ್ತಿತ್ವವನ್ನು ಕೃಷ್ಣ ಕೊಂಡಾಡಿದರು.

(ಇನ್ಫೋ ವಾರ್ತೆ)

ಮುಖಪುಟ / ಇವತ್ತು... ಈ ಹೊತ್ತು...

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X