ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೃಷ್ಣನ ಮಾಯೆಯಾ, ಬಿಯರಿನ ಹೊಳೆಯಾ..ಕರ್ನಾಟಕ ಸುಧೆಯಾ..

By Staff
|
Google Oneindia Kannada News

ಬೆಂಗಳೂರು : ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಮಂಡಿಸಿರುವ 2001-02 ಸಾಲಿನ ಮುಂಗಡ ಪತ್ರ ಯಾರಿಗೆ ಖುಷಿ ನೀಡಿದೆಯಾ ಇಲ್ಲವೊ ಬಿಯರ್‌ ಪ್ರಿಯರ ಪಾಲಿಗಂತೂ ಆಪ್ಯಾಯಮಾನ ಅನ್ನಿಸಿದೆ. ಇನ್ನುಮುಂದೆ ಅವರೆಲ್ಲ - ಇದು ಕೃಷ್ಣನ ಮಾಯೆಯಾ, ಬಿಯರಿನ ಹೊಳೆಯಾ.. ಕರ್ನಾಟಕ ಸುಧೆಯಾ.. ಎಂದು ಹಾಡಿದರೂ ಅಚ್ಚರಿಯಿಲ್ಲ .

ಸೋನಾ ಮಸೂರಿ, ಶಿವಲಿಂಗ್‌ ತೊಗರಿ, ಕಾಲ್ಗೇಟ್‌ಗಳೊಂದಿಗೆ ಬಿಯರ್‌ ಬಾಟಲಿ . ಮನೆಯಾಡತಿ ತರುವ ತಿಂಗಳ ರೇಷನ್‌ ಲಿಸ್ಟ್‌ನಲ್ಲಿ ಬಿಯರ್‌ . ಇಂಥದ್ದೊಂದು ದೃಶ್ಯವನ್ನು ಕೇವಲ ಎರಡು ದಿನದ ಕೆಳಗೆ ಹೇಳಿದ್ದರೆ ಯಾರೂ ನಂಬುತ್ತಿರಲಿಲ್ಲ . ಸಿನಿಮಾದಲ್ಲಿ ಕೂಡ ಇಂಥಾ ದೃಶ್ಯಕ್ಕೆ, ಆಗಾಗ ಸಮಾಜ ಸ್ವಾಸ್ಥ್ಯವ ನೆನೆವ ಸೆನ್ಸಾರ್‌ ಮಂಡಳಿ ಅವಕಾಶ ಕೊಡುತ್ತದೆಂದು ನಿರೀಕ್ಷಿಸುವುದು ಕಷ್ಟವೇ. ಈಗ ಅದೆಲ್ಲ ನಿಜವಾಗಿದೆ. ನಾಡಿನ ಮುಖ್ಯಮಂತ್ರಿ ಕಿರಾಣಿ ಅಂಗಡಿಗಳಿಗೆ ಬಿಯರ್‌ ಹಾಗೂ ವೈನ್‌ ತಂದಿದ್ದಾರೆ. ಚಿಯರ್ಸ್‌ !

ಬಿಯರ್‌ ಹಾಗೂ ವೈನ್‌ನ ಚಿಲ್ಲರೆ ಮಾರಾಟಕ್ಕೆ ಅನುಮತಿ ಕಲ್ಪಿಸುವ ತಮ್ಮ ಕ್ರಮವನ್ನು ಕೃಷ್ಣ ಸಮರ್ಥಿಸಿಕೊಂಡಿದ್ದಾರೆ. ಹೊಸ ಪದ್ಧತಿಯನ್ನು -

  • ಯುವಜನತೆಯನ್ನು ಹಾರ್ಡ್‌ ಲಿಕ್ಕರ್‌ನಿಂದ ದೂರವಿಡುವ ಉದ್ದೇಶದಿಂದ
  • ಅಕ್ರಮ ದಾಸ್ತಾನನ್ನು ತಡೆಗಟ್ಟುವ ಉದ್ದೇಶದಿಂದ
  • ಕೆಲವೆಡೆ ನಿಗದಿತ ದರಕ್ಕಿಂತ ಹೆಚ್ಚಿನ ಬೆಲೆಗೆ ಮಾರುವುದನ್ನು ತಡೆಗಟ್ಟಲು
  • ಮಧ್ಯಮ ವರ್ಗಕ್ಕೆ ಸುಲಭವಾಗಿ ದೊರೆಯುವಂತಾಗಲು - ರೂಪಿಸಲಾಗಿದೆ.
ಮದ್ಯೋದ್ಯಮ ಕೂಡ ಕೃಷ್ಣ ಅವರ ಬೆಂಬಲಕ್ಕಿದೆ. ಮುಖ್ಯಮಂತ್ರಿ ಸರಿಯಾದ ಹೆಜ್ಜೆಯನ್ನೇ ಇಟ್ಟಿದ್ದಾರೆ. ಆದರೆ, ಲೈಸನ್ಸ್‌ಗಳ ಸಂಖ್ಯೆ ಹೆಚ್ಚಿಸಬೇಕು ಅನ್ನುತ್ತಾರೆ ಯುಬಿ ಕಂಪನಿಯ ವಿಭಾಗೀಯ ಉಪಾಧ್ಯಕ್ಷ ಶೇಖರ್‌ ರಾಮಮೂರ್ತಿ. ವಿರೋಧಪಕ್ಷಗಳದು ಮಾತ್ರ ಮುಖ್ಯಮಂತ್ರಿಗಳದು ಅತಿಯಾಯಿತು ಅನ್ನುವ ಟೀಕಾಸ್ತ್ರ . ಇದು ಅಮೇರಿಕಾ ಸಂಸ್ಕೃತಿ, ಮದ್ಯಪಾನವನ್ನು ಸಾರ್ವತ್ರೀಕರಿಸುವ ಹುನ್ನಾರ ಅನ್ನುವುದು ಅವರ ಕೂಗು.

ಲೈಸನ್ಸ್‌ಗಳ ಸಂಖ್ಯೆ ಸೀಮಿತವಿದೆ : ಲೈಸನ್ಸ್‌ ಹೊಂದಿರುವ ಡಿಪಾರ್ಟ್‌ಮೆಂಟಲ್‌ ಸ್ಟೋರ್ಸ್‌ ಹಾಗೂ ಕಿರಾಣಿ ಅಂಗಡಿಗಳಲ್ಲಿ ವೈನ್‌ ಹಾಗೂ ಬಿಯರ್‌ ಮಾರಾಟ ಮಾಡುವ ಹೊಸ ಪದ್ಧತಿಯ ಪ್ರಕಾರ - ವ್ಯಾಪಾರ ನಡೆಯುವುದು ಬಾಟಲಿಗಳ ಮೂಲಕ ಮಾತ್ರ. ಅಂದರೆ, ಸ್ಥಳದಲ್ಲಿ ಕುಡಿಯಲು ಅವಕಾಶವಿಲ್ಲ . ಸದ್ಯಕ್ಕೆ, ಸೀಸೆಗಳಲ್ಲಿ ಬಿಯರ್‌ ಮಾರಲು 300 ಲೈಸನ್ಸ್‌ ಹಾಗೂ ವೈನ್‌ ಮಾರಾಟಕ್ಕೆ 50 ಲೈಸನ್ಸ್‌ ನೀಡಲಾಗುವುದು.

ಬಿಯರ್‌ ಮಾರಾಟದ ಲೈಸನ್ಸ್‌ ಪಡೆಯಲಿಕ್ಕೆ, ಬೆಂಗಳೂರು ನಗರದಲ್ಲಾದರೆ 1 ಲಕ್ಷ ರುಪಾಯಿ, ಇತರ ಜಿಲ್ಲಾ ಕೇಂದ್ರಗಳಲ್ಲಿ 75 ಸಾವಿರ ರು ಹಾಗೂ ಇತರ ಸ್ಥಳಗಳಲ್ಲಿ 50 ಸಾವಿರ ರು ವಾರ್ಷಿಕ ಶುಲ್ಕ ಪಾವತಿಸಬೇಕು. ವೈನ್‌ ಮಾರಾಟಕ್ಕೆ 15 ಸಾವಿರ ರು. ಶುಲ್ಕ ಸಲ್ಲಿಸಿದರೆ ಲೈಸನ್ಸ್‌ ಲಭ್ಯ. ಇದೇ ವೇಳೆಯಲ್ಲಿ ಢಾಬಾ ಮುಂತಾದೆಡೆ ಮುಚ್ಚಿಟ್ಟು ನಡೆಯುವ ಮದ್ಯ ಮಾರಾಟವನ್ನು ಸರ್ಕಾರ ನಿಷೇಧಿಸಿದೆ ಹಾಗೂ ನಕಲಿ, ಕಲಬೆರಕೆ ಮದ್ಯಮಾರಾಟ ತಡೆಗಟ್ಟುವ ಉದ್ದೇಶದಿಂದ ಬಾಟಲಿಗಳಿಗೆ ಹ್ಯಾಲೋಗ್ರಾಂ ಹಚ್ಚುವುದನ್ನು ಕಡ್ಡಾಯಪಡಿಸಿದೆ.

ಕೃಷ್ಣ ಮಾರ್ಗ ಶುರುವಾದದ್ದು ರಾಮಕೃಷ್ಣರಿಂದ : ಮದ್ಯದಂಗಡಿಗಳನ್ನು ಬೀದಿಗೊಂದರಂತೆ ಹಬ್ಬಿಸಿದ ಖ್ಯಾತಿ ರಾಮಕೃಷ್ಣ ಹೆಗಡೆ ಅವರಿಗೆ ಸಲ್ಲಬೇಕು. ವಿದ್ಯಾರ್ಥಿಭವನದ ದೋಸೆಗೇ ರೋಮಾಂಚನಗೊಳ್ಳುವ ಮಡಿವಂತರ ಏರಿಯಾ ಗಾಂಧಿಬಜಾರಿನಲ್ಲಿ ಸಾಲು ಷರಾಬು ಅಂಗಡಿಗಳ ಏಳಿಸಿದ ಖ್ಯಾತಿ ಹೆಗಡೆ ಅವರದ್ದು. ಬೆಂಗಳೂರಿನ ಬನಶಂಕರಿ- ಕೋಣನಕುಂಟೆ ಮಾರ್ಗದಲ್ಲಿದ್ದ 4 ಮದ್ಯಂದಗಡಿಗಳ ಸಂಖ್ಯೆ 48 ಕ್ಕೇರಿದ್ದು ಹೆಗಡೆ ಕಾಲದಲ್ಲೇ. ಆ ಕಂಡಲ್ಲಿ ಗುಂಡಿನ ಹೆದ್ದಾರಿಯಲ್ಲಿ ಕೃಷ್ಣ ಮುಂದುವರಿದಿದ್ದಾರೆ. ಸಮರ್ಥನೆಗಳೇನೇ ಇದ್ದರೂ ಅವರ ನಿರ್ಧಾರದ ಹಿಂದಿರುವುದು ಅಪ್ಪಟ ವಾಣಿಜ್ಯ ಕಾರಣಗಳು. ಜನತೆ ಹೇಗೆ ಸ್ವೀಕರಿಸುತ್ತಾರೋ ಕಾಯಬೇಕು.

ಕೊನೆಯದಾಗಿ, ಸರ್ಕಾರದ ಕ್ರಮಕ್ಕೆ ಬಿಜೆಪಿ ಶಾಸಕ ಸುರೇಶ್‌ಕುಮಾರ್‌ ಪ್ರತಿಕ್ರಿಯೆ - ಸರ್ಕಾರ ಗೊಬ್ಬರದ ಅಂಗಡಿಗಳಲ್ಲೂ ವೈನ್‌ ಮಾರಲಿ. ರೈತ ಗೊಬ್ಬರ ಖರೀದಿಸಲು ಆಗಲ್ಲ . ವೈನಾದರೂ ಖರೀದಿಸಲಿ.

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X