ಗುರುತಿನ ಚೀಟಿ ಕೊಡೋವರೆಗೆ ನ್ಯಾಯಯುತ ಚುನಾವಣೆ ಅಸಾಧ್ಯ
ಬೆಂಗಳೂರು : ಮತದಾರರ ರುಜುವಾತು ದಾಖಲೆಗಳನ್ನು ಎಲ್ಲಿವರೆಗೆ ದೇಶ ಸಂಗ್ರಹಿಸುವುದಿಲ್ಲವೋ, ಎಲ್ಲಾ ಮತದಾರರಿಗೂ ಗುರುತಿನ ಚೀಟಿ ಕೊಡುವುದಿಲ್ಲವೋ ಅಲ್ಲಿವರೆಗೆ ಇಲ್ಲಿ ನಡೆಯುವ ಚುನಾವಣೆಗಳನ್ನು ನ್ಯಾಯಯುತ ಚುನಾವಣೆಗಳು ಎನ್ನಲಾಗದು ಎಂದು ಚುನಾವಣಾ ಆಯೋಗದ ಮಾಜಿ ಸಚಿವ ಟಿ.ಎನ್.ಶೇಷನ್ ಅಭಿಪ್ರಾಯ ಪಟ್ಟಿದ್ದಾರೆ.
ಘಜಿಯಾಬಾದ್‌ನ ಇನ್ಸ್‌ಟಿಟ್ಯೂಟ್ ಆಫ್ ಮೇನೇಜ್‌ಮೆಂಟ್ ಟೆಕ್ನಾಲಜಿ ಆಯೋಜಿಸಿದ್ದ ‘ಇ- ಆಡಳಿತ ಹಾಗೂ ಒಗ್ಗೂಡಿಸುವಿಕೆ’ ಎಂಬ ವಿಷಯ ಕುರಿತ ವಿಚಾರ ಸಂಕಿರಣ ಉದ್ಘಾಟಿಸಿ ಶುಕ್ರವಾರ ಅವರು ಮಾತನಾಡುತ್ತಿದ್ದರು. ಬಹಳ ವರ್ಷಗಳ ಹಿಂದೆಯೇ ಸತ್ತು ಹೋಗಿರುವವರ ಹೆಸರುಗಳೂ ಮತದಾರರ ಪಟ್ಟಿಯಲ್ಲಿವೆ. 18 ವರ್ಷ ವಯೋಮಾನದ ಎಷ್ಟೋ ಯುವಕರು ಹೆಸರನ್ನೇ ನೋಂದಾಯಿಸಿಲ್ಲ. ಎಲ್ಲಿ ನೋಂದಾಯಿಸಬೇಕೆಂಬುದೂ ಎಷ್ಟೋ ಮಂದಿಗೆ ಗೊತ್ತಿಲ್ಲ. ಇಂಥಾದರಲ್ಲಿ ನ್ಯಾಯಯುತ ಚುನಾವಣೆ ನಡೆಯಲು ಸಾಧ್ಯವೇ ಎಂದು ಪ್ರಶ್ನಿಸಿದ ಶೇಷನ್, ತಮ್ಮ ಅಧಿಕಾರಾವಧಿಯಲ್ಲಿ ಗುರುತಿನ ಚೀಟಿ ಜಾರಿಗೆ ತರುವ ಉದ್ದಿಶ್ಯವನ್ನು ಪೂರ್ಣವಾಗಿ ಈಡೇರಿಸಲಾದುದಕ್ಕೆ ವಿಷಾದಿಸಿದರು.
ಇ- ಗವರ್ನೆನ್ಸನ್ನು ಇ- ಗವರ್ನ್‌ಮೆಂಟ್ ಎಂದು ತಪ್ಪು ಅರ್ಥ ಮಾಡಿಕೊಳ್ಳಕೂಡದು. ದೇಶ ಸ್ವತಂತ್ರವಾಗಿ 52 ವರ್ಷ ಉರುಳಿವೆಯಾದರೂ ವಸಾಹತುಶಾಹಿ ಹ್ಯಾಂಗ್‌ಓವರ್‌ನಿಂದ ನಾವು ಇನ್ನೂ ಹೊರಬಂದಿಲ್ಲ. ದೇಶದ ಅಧಿಕಾರದ ಎಲ್ಲಾ ಸ್ಥರಗಳಲ್ಲಿ ಒಂದಲ್ಲ ಒಂದು ರೀತಿಯ ಅಪನಂಬಿಕೆ ಬೇರೂರಿ ಬಿಟ್ಟಿದೆ. ಅದು ಹೋಗೋವರೆಗೆ ವ್ಯವಸ್ಥೆಯಲ್ಲಿ ಸುಧಾರಣೆ ಅಸಾಧ್ಯ ಎಂದರು.
(ಯುಎನ್‌ಐ)












Click it and Unblock the Notifications