ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಖ್ಯಮಂತ್ರಿ ತವರು ಜಿಲ್ಲೆಯ ಕೆಸ್ತೂರು ಶಾಲೆಗೆ ಬಂತು ಕಂಪ್ಯೂಟರ್‌

By Staff
|
Google Oneindia Kannada News

ಕೆಸ್ತೂರು : ಹಳ್ಳಿಗಳಿಗೆ ಕಂಪ್ಯೂಟರ್‌ ಸಾಕ್ಷರತೆ ಒಯ್ಯುವ ಸರ್ಕಾರದ ಮಾಹಿತಿ ಸಿಂಧು ಕಾರ್ಯಕ್ರಮಕ್ಕೆ ಮುಖ್ಯಮಂತ್ರಿಗಳ ತವರು ಜಿಲ್ಲೆ ಕೆಸ್ತೂರಿನಲ್ಲಿ ಸೋಮವಾರ ಚಾಲನೆ ದೊರೆಯಿತು.

ಕೆಸ್ತೂರಿನ ಶಾಲೆಯಲ್ಲಿ ಕಂಪ್ಯೂಟರ್‌ ಕಲಿಕಾ ಕೇಂದ್ರವನ್ನು ಉದ್ಘಾಟಿಸಿದ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ - ಗ್ರಾಮೀಣ ಜನತೆಯನ್ನು ಕಂಪ್ಯೂಟರ್‌ ಸಾಕ್ಷರರನ್ನಾಗಿಸುವ ನಿಟ್ಟಿನಲ್ಲಿ ಸರ್ಕಾರ ಈ ಕಾರ್ಯಕ್ರಮ ಹಮ್ಮಿಕೊಂಡಿದೆ.

ಮಾರ್ಚ್‌ ತಿಂಗಳ ಕೊನೆಯ ವೇಳೆಗೆ ಮಾಹಿತಿ ಸಿಂಧು ಕಾರ್ಯಕ್ರಮದಡಿ ರಾಜ್ಯದ 1000 ಗ್ರಾಮೀಣ ಪ್ರದೇಶದಲ್ಲಿನ ಸರ್ಕಾರಿ ಶಾಲೆಗಳಲ್ಲಿ ಕಂಪ್ಯೂಟರ್‌ ಕಲಿಕಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು ಎಂದು ಮುಖ್ಯಮಂತ್ರಿ ಹೇಳಿದರು.

ವಿಶ್ವದಲ್ಲಿ ಬಳಸಲಾಗುತ್ತಿರುವ ಸಾಫ್ಟ್‌ವೇರ್‌ನಲ್ಲಿ ಶೇ.40 ರಷ್ಟು ಸಾಫ್ಟ್‌ವೇರ್‌ ಭಾರತದಲ್ಲಿಯೇ ತಯಾರಾಗುತ್ತಿದೆ. ಆ 40 ರಲ್ಲಿ ರಾಜ್ಯದ ಪಾಲು 30 ರಷ್ಟಿದೆ ಎಂದು ರಾಜ್ಯದಲ್ಲಿನ ಐಟಿ ಅಗ್ಗಳಿಕೆಯನ್ನು ಕೃಷ್ಣ ಬಣ್ಣಿಸಿದರು. ಶಿಕ್ಷಣ ಸಚಿವ ಎಚ್‌. ವಿಶ್ವನಾಥ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ನೀರಾವರಿ ಸಚಿವ ಎಚ್‌.ಕೆ. ಪಾಟೀಲ್‌ ಕಾರ್ಯಕ್ರಮದಲ್ಲಿ ಹಾಜರಿದ್ದರು.

ಮಕ್ಕಳ ಸಂಭ್ರಮ : ಒಂದೆಡೆ ಬ್ರಹ್ಮಾಂಡವನ್ನೊಳಗೊಂಡ ಬಾಲಕೃಷ್ಣನ ಬಾಯಿಯಂಥಾ ಕಂಪ್ಯೂಟರ್‌, ಮತ್ತೊಂದೆಡೆ ಜಿಲ್ಲೆಯವರೇ ಆದ ಮುಖ್ಯಮಂತ್ರಿಗಳು- ಕೆಸ್ತೂರು ಶಾಲೆಯ ಮಕ್ಕಳಿಗೆ ಇಬ್ಬಗೆಯ ರೋಮಾಂಚನ. ಮಕ್ಕಳೊಂದಿಗೆ ಗ್ರಾಮದ ದೊಡ್ಡವರೂ ಸಂಭ್ರಮದಲ್ಲಿ ಭಾಗಿಯಾಗಿದ್ದರು. ಊರಿಗೆ ಕಂಪ್ಯೂಟರ್‌ ಬಂದದ್ದು , ತಮ್ಮ ಮಕ್ಕಳೂ ಮೌಸ್‌ ಹಿಡಿದು ಕಂಪ್ಯೂಟರ್‌ ಚಲಾಯಿಸುತ್ತಾರೆಂಬ ಖುಷಿ ಪೋಷಕರದ್ದು .

ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳೊಂದಿಗೆ ಇಬ್ಬರು ಸಚಿವರೂ ಭಾಗವಹಿಸಿದ್ದರು. ಇದರಿಂದಾಗಿ ಕಾರ್ಯಕ್ರಮಕ್ಕೆ ಸಹಜವಾಗಿಯೇ ಹೈಟೆಕ್‌ ಟಚ್‌ ಲಭ್ಯವಾಗಿತ್ತು .

ಗುಲ್ಬರ್ಗಾದಲ್ಲಿ ಕಂಪ್ಯೂಟರ್‌ ಕಲಿಕಾ ಕೇಂದ್ರ : ಗುಲ್ಬರ್ಗಾದ ಸರ್ಕಾರಿ ಬಾಲಕಿಯರ ಮಹಾ ವಿದ್ಯಾಲಯದಲ್ಲಿ ಮಾಹಿತಿ ಸಿಂಧು ಕಾರ್ಯಕ್ರಮದಡಿ ಕಂಪ್ಯೂಟರ್‌ ಕಲಿಕಾ ಕೇಂದ್ರವನ್ನು ಗೃಹ ಸಚಿವ ಮಲ್ಲಿಕಾರ್ಜುನ ಖರ್ಗೆ ಸೋಮವಾರ ಉದ್ಘಾಟಿಸಿದರು. ಸರ್ಕಾರ ಸ್ಥಾಪಿಸುತ್ತಿರುವ ಈ ಕಲಿಕಾ ಕೇಂದ್ರಗಳ ಪ್ರಯೋಜನವನ್ನು ಗ್ರಾಮೀಣರು ಉಪಯೋಗಿಸಿಕೊಳ್ಳಬೇಕೆಂದು ಅವರು ಕರೆ ನೀಡಿದರು.

(ಇನ್ಫೋ ವಾರ್ತೆ)

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X