ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಚಲನಚಿತ್ರ ಮಂಡಳಿಯೆದುರು ಜನಸಾಗರ, ರಾಜ್‌ಗೆ ಜಯಕಾರ

By Staff
|
Google Oneindia Kannada News

ಬೆಂಗಳೂರು : ರಾಜ್ಯದ ರಾಜಧಾನಿ ಬೆಂಗಳೂರೂ ಸೇರಿದಂತೆ, ನಾಡಿನ ಮೂಲೆ ಮೂಲೆಗಳಲ್ಲೂ ರಾಜ್‌ ಅಭಿಮಾನಿಗಳು, ರಾಜ್‌ಕುಮಾರ್‌ ಭಾವಚಿತ್ರಗಳನ್ನು ಹಿಡಿದು, ರಸ್ತೆಗಳಲ್ಲಿ ಮೆರವಣಿಗೆ ನಡೆಸಿ, ಸಿಹಿ ಹಂಚಿ ಜಯಕಾರ ಹಾಕುತ್ತಾ ವಿಜಯೋತ್ಸವ ಆಚರಿಸುತ್ತಿದ್ದಾರೆ.

ಡಾ. ರಾಜ್‌ಕುಮಾರ್‌ ಅವರ ಸದಾಶಿವ ನಗರ ಮನೆಯೆದರು, ಸಾ.ರಾ. ಗೋವಿಂದು ಅವರ ನೇತೃತ್ವದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಸೇರಿದ್ದ ಅಭಿಮಾನಿಗಳು ಪಟಾಕಿ ಸಿಡಿಸಿ, ನೃತ್ಯ ಮಾಡಿ, ಸಿಹಿ ಹಂಚಿ, ಜಯಕಾರ ಮಾಡುತ್ತಾ ಸಂತಸವನ್ನು ಹಂಚಿಕೊಂಡರು. ರಾಜ್‌ ಬಿಡುಗಡೆಯ ಸುದ್ದಿ ಪ್ರಕಟವಾಗುತ್ತಿದ್ದಂತೆಯೇ ನಗರದ ಕೆಲವು ಶಾಲೆಗಳಿಗೆ ರಜೆ ಘೋಷಿಸಲಾಯಿತು.

ಬೆಂಗಳೂರಿನಲ್ಲಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ಎದುರು ಬುಧವಾರ ಮಧ್ಯಾಹ್ನ ಜನಸಾಗರ. ಎಲ್ಲರ ಕೈಯಲ್ಲೂ ಡಾ. ರಾಜ್‌ಕುಮಾರ್‌ ಅವರ ವರ್ಣ ಚಿತ್ರಗಳು, ಎಲ್ಲರ ಬಾಯಲ್ಲೂ ಅಣ್ಣಾವ್ರಿಗೆ ಜೈ, ರಾಜ್‌ಕುಮಾರ್‌ಗೆ ಜೈ ಎಂಬ ಘೋಷಣೆ. ನಾಡಿನಲ್ಲಿ ಎಲ್ಲಿಲ್ಲದ ಸಂಭ್ರಮ. ಕಳೆದ 109 ದಿನಗಳಿಂದಲೂ ಮಂಕಾಗಿದ್ದ ಕರ್ನಾಟಕದಲ್ಲಿ ಒಮ್ಮೆಲೆ ವಿದ್ಯುತ್‌ ಸಂಚಾರವಾಗಿದೆ.

ಕಳೆಗುಂದಿದ್ದ ಹಬ್ಬಗಳೆಲ್ಲವೂ ಒಮ್ಮಿಂದೊಮ್ಮೆಲೆ ಸಂಭ್ರಮ ಸಡಗರದಿಂದ ಕಂಗೊಳಿಸಿದವು. ವಾಣಿಜ್ಯ ಮಂಡಳಿ ಎದುರು, ತಂಡೋಪತಂಡವಾಗಿ ಬಂದು ಸೇರಿದ ರಾಜ್‌ ಅಭಿಮಾನಿಗಳು, ಚಿತ್ರನಟಿ ಜಯಂತಿ, ರಾಜ್‌ ಅಭಿಮಾನಿಗಳ ಸಂಘದ ಅಧ್ಯಕ್ಷ ಸಾ.ರಾ. ಗೋವಿಂದು, ವಾಣಿಜ್ಯ ಮಂಡಳಿ ಅಧ್ಯಕ್ಷ ಕೆ.ಸಿ.ಎನ್‌. ಚಂದ್ರಶೇಖರ್‌ ಅವರಿಗೆ ಮಾಲಾರ್ಪಣೆ ಮಾಡಿ, ಸಿಹಿ ಹಂಚಿ ಸಂಭ್ರಮ ವ್ಯಕ್ತಪಡಿಸಿದರು.

ಜಯಂತಿ ಪ್ರತಿಕ್ರಿಯೆ : ಕನ್ನಡ ನಾಡಿನ ಎಲ್ಲ ಜನರ ಹರಕೆ, ಪೂಜೆ ಪುನಸ್ಕಾರಗಳು ಫಲ ನೀಡಿವೆ. ರಾಜ್‌ ಬಿಡುಗಡೆ ಆಗಿದೆ. ಇಂದು ಅವರು ನಮ್ಮೊಂದಿಗಿದ್ದಾರೆ. ರಾಜ್‌ಕುಮಾರ್‌ ಅವರನ್ನು ಬಿಡುಗಡೆ ಗೊಳಿಸಲು ಶ್ರಮಿಸಿದ ಕರ್ನಾಟಕ ಸರಕಾರ, ತಮಿಳುನಾಡು ಸರಕಾರ, ಸಂಧಾನಕಾರರಿಗೆಲ್ಲಾ ನಾವು ಧನ್ಯವಾದ ಅರ್ಪಿಸಬೇಕು ಎಂದ ಅವರು, ಇಡೀ ಕನ್ನಡ ಚಲನ ಚಿತ್ರೋದ್ಯಮವೇ ನಾಡಿನ ಜನತೆಗೆ ಚಿರಋಣಿಯಾಗಿದೆ ಎಂದರು.

ಇಂದೇ ನಮಗೆ ದೀಪಾವಳಿ : ರಾಜ್‌ಕುಮಾರ್‌ ಬಿಡುಗಡೆ ಆದ ಈ ದಿನವೇ ನಮಗೆ ದೀಪಾವಳಿ ಎಂದ ಜಯಂತಿ. ಇಷ್ಟು ದಿನಗಳ ಕಾಲ ಶಾಂತಿ, ತಾಳ್ಮೆಯನ್ನು ಕಾಪಾಡಿಕೊಂಡ ಬಂದ ನಾಡಿನ ಜನತೆ ಮುಂದೆಯೂ ಶಾಂತಿ ಕಾಪಾಡುವಂತೆ ಮನವಿ ಮಾಡಿದರು. ಇಂದೇ ರಾಜ್ಯೋತ್ಸವ ಆಚರಿಸುವ ಸುದಿನ ಎಂದು ಅವರು ಹೇಳಿದರು.

ನೇಪಥ್ಯಕ್ಕೆ ಸರಿದ ನಾಗೇಶ್‌ ಕುಟುಂಬದ ಸಂಭ್ರಮ : ನಾಡಿನ ಜನತೆ ರಾಜ್‌ ಬಿಡುಗಡೆಯ ಸಂಭ್ರಮ ಪಡುತ್ತಿರುವಾಗ, ರಾಜ್‌ ಅವರೊಂದಿಗೆ 109 ದಿನ ಒತ್ತೆಯಲ್ಲಿದ್ದ ನಾಗೇಶ್‌ ಬಿಡುಗಡೆಯ ಸಂಭ್ರಮ ನೇಪಥ್ಯಕ್ಕೆ ಸರಿದಿದೆ. ನಾಗೇಶ್‌ ಕುಟುಂಬದವ ಸಂಭ್ರಮದ ಸುದ್ದಿಗಳು ಈವರೆಗೆ ಲಭ್ಯವಾಗಿಲ್ಲ.

ವಾರ್ತಾ ಸಂಚಯ
ಮುಖಪುಟ / ರಾಜ್‌ ಅಪಹರಣ

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X