ವಿಶ್ವಶ್ರೇಷ್ಠ ನಗರ ಪಾಲಿಕೆಗಳಲ್ಲಿಬೆಂಗಳೂರೂ ಒಂದು !ನೀವು ನಂಬುವುದಿಲ್ಲ ನಮಗೆ ಗೊತ್ತು. ಆದರೆ ಪ್ರಶಸ್ತಿಗಳು ಪುಕ್ಕಟೆ ಬರುವುದಿಲ್ಲ ತಿಳಿಯಿರಿ
ಸಿಬು ಸಿಟಿ : ನಿಮಗೆ ಬೆಂಗಳೂರು ಮಹಾನಗರ ಪಾಲಿಕೆ ಗೊತ್ತಲ್ಲ. ಹಿಂದೆ ಇದನ್ನು ಬಿ.ಸಿ.ಸಿ ( ಬೆಂಗಳೂರು ಸಿಟಿ ಕಾರ್ಪೋರೇಷನ್) ಎಂದು ಕರೆಯುತ್ತಿದ್ದರು. ಆ ಕಾಲದಲ್ಲಿ ಪಾಲಿಕೆ ಬೆಂಗಳೂರಿಗರಿಂದ ವಾಚಾಮಗೋಚರ ಬೈಸಿಕೊಳ್ಳುತ್ತಿತ್ತು. ಏಕೆಂದರೆ ಅದರ ಕಾರ್ಯ ವೈಖರಿಯೇ ಹಾಗಿತ್ತು. ಬಿ.ಸಿ.ಸಿ. ಯು ಬೆಂಗಳೂರು ಮಹಾ ನಗರ ಪಾಲಿಕೆ (ಬಿ.ಎಂ.ಪಿ) ಎಂದು ಹೊಸ ಹೆಸರು ಪಡೆದ ಮೇಲೆ ಸ್ವಲ್ಪ ಮಟ್ಟಿಗೆ ಜನಮೆಚ್ಚಿಗೆಗೂ ಕಾರಣವಾಯಿತು.
ಅಷ್ಟೇಕೆ ವಿಶ್ವಮಟ್ಟದಲ್ಲೂ ಹೆಸರು ಗಳಿಸಿತು. ಈಗ ವಿಶ್ವದ ಮೂರು ಶ್ರೇಷ್ಠ ಮಹಾನಗರ ಪಾಲಿಕೆಗಳ ಸಾಲಿನಲ್ಲಿ ಸ್ಥಾನ ಗಿಟ್ಟಿಸಿಕೊಂಡ ಹಿರಿಮೆಯೂ ಬೆಂಗಳೂರು ಮಹಾನಗರ ಪಾಲಿಕೆಯದಾಗಿದೆ. ಬೆಂಗಳೂರು ಮಹಾನಗರ ಪಾಲಿಕೆಯ ಸೇವಾ ನಿರ್ವಹಣೆ ಜಾಗತಿಕ ಮಟ್ಟದಲ್ಲಿ ಅತ್ಯುನ್ನತವಾಗಿದ್ದು, ಇದುವೇ ಪಾಲಿಕೆಯು ವಿಶ್ವಶ್ರೇಷ್ಠರ ಸಾಲಿನಲ್ಲಿ ಸೇರಲು ಕಾರಣವಾಗಿದೆ.
ಈ ಸೇವಾ ನಿರ್ವಹಣೆಯನ್ನು ಮೆಚ್ಚಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಬೆಂಗಳೂರು ಮಹಾನಗರ ಪಾಲಿಕೆಯನ್ನು ವಿಶ್ವದ ಶ್ರೇಷ್ಠ ಮೂರು ಮಹಾನಗರ ಪಾಲಿಕೆಗಳಲ್ಲಿ ಒಂದೆಂದು ಘೋಷಿಸಿದೆ. ಈ ವಿಶ್ವಶ್ರೇಷ್ಠರ ಸಾಲಿನಲ್ಲಿ ಸೇರಿರುವ ಮತ್ತೆರಡು ಪಾಲಿಕೆಗಳೆಂದರೆ, ಶ್ರೀಲಂಕಾದ ಕೊಲಂಬೋ ಹಾಗೂ ಫಿಲಿಫೈನ್ಸ್‌ನ ಸಿಬು ಸಿಟಿ.
ನಗರವಾಸಿಗಳಿಗೆ ಪಾಲಿಕೆಗಳು ನೀಡುವ ಉತ್ತಮ ಸೇವಾ ನಿರ್ವಹಣೆಯನ್ನು ಆಧಾರವಾಗಿಟ್ಟುಕೊಂಡು ಹಾಗೂ ಬದಲಾಗುತ್ತಿರುವ ಗ್ರಾಹಕರ ಬೇಡಿಕೆಗಳಿಗೆ ಪಾಲಿಕೆಗಳು ಹೇಗೆ ಪರಿಣಾಮಕಾರಿಯಾಗಿ ಸ್ಪಂದಿಸುತ್ತವೆ ಎಂಬ ಅಂಶಗಳನ್ನು ಗಮನಿಸಿ ಏಷ್ಯಾ ಅಭಿವೃದ್ಧಿ ಬ್ಯಾಂಕ್ ಈ ಆಯ್ಕೆ ಮಾಡಿದೆ ಎಂದು ಸಿಬು ಸಿಟಿಯ ಮೇಯರ್ ಅಲ್ವೀನ್ ಗಾರ್ಸಿಯಾ ಮಂಗಳವಾರ ತಿಳಿಸಿದ್ದಾರೆ.
1998ರಲ್ಲಿ ಪ್ರಾದೇಶಿಕ ತಾಂತ್ರಿಕ ಸಹಕಾರ ಕಾರ್ಯಕ್ರಮ ಯೋಜನೆಯಡಿ ಎಡಿಬಿ ಹತ್ತು ಮಹಾ ನಗರಗಳನ್ನು ಆಯ್ಕೆ ಮಾಡಿತ್ತು. ಈ ಸಹಕಾರ ಕಾರ್ಯಕ್ರಮ ಕಳೆದ ಜೂನ್‌ನಲ್ಲಿ ಅಂತ್ಯಗೊಂಡಿತು. ಈ ಹತ್ತು ಪಾಲಿಕೆಗಳಲ್ಲಿ ಎಡಿಬಿ ಸಲಹೆ ಮಾಡಿದ್ದ ಮಾರ್ಗದರ್ಶಿ ಸೂತ್ರಗಳನ್ನು ಪರಿಣಾಮಕಾರಿಯಾಗಿ ಬಳಸಿಕೊಂಡು ನಗರಿಗರ ಸೇವೆಗೆ ನಿಂತು ಪೌರ ಸೇವೆಯಲ್ಲಿ ಸೈ ಎನಿಸಿಕೊಂಡ ಪಾಲಿಕೆಗಳು ಬೆಂಗಳೂರು ಮಹಾನಗರ ಪಾಲಿಕೆ, ಕೊಲಂಬೋ ಪಾಲಿಕೆ ಹಾಗೂ ಸಿಬು ಸಿಟಿ ಪಾಲಿಕೆ ಮಾತ್ರ ಎಂದು ಅವರು ಹೇಳಿದರು.
ಮುಖಪುಟ / ಇವತ್ತು... ಈ ಹೊತ್ತು...












Click it and Unblock the Notifications