ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಕಾಶವಾಣಿ : ಇಂಟರ್‌ನೆಟ್‌ ಯುಗದಲ್ಲೂ ಸಲ್ಲುವ ಸುದ್ದಿವಾಹಿನಿ

By Staff
|
Google Oneindia Kannada News

Radio news still matter
ಬೆಂಗಳೂರು, ಸೆ. 01, 2000 : ಟೀವಿ ಮಾಧ್ಯಮದಿಂದ ಪತ್ರಿಕೆಗಳಿಗೆ ಕುತ್ತು ಎಂದು ವಾದಿಸುವ ಅನೇಕ ಮಂದಿಯಿರುವಂತೆ ಇಂಟರ್‌ನೆಟ್‌ ಯುಗದಲ್ಲಿ ರೇಡಿಯೋಗೇನು ಕೆಲಸ ಎಂದು ವಾದಿಸುವವರೂ ಬಹಳ ಮಂದಿ ಸಿಗುತ್ತಾರೆ. ರಾಜ್ಯವನ್ನು ಅಲ್ಲ ಕಲ್ಲೋಲ ಮಾಡಿದ ಜನಪ್ರಿಯ ನಟ ಡಾ. ರಾಜ್‌ ಅವರ ಅಪಹರಣವಾಗಿ ತಿಂಗಳು ಮುಗಿದಿರುವಾಗ ಆಕಾಶವಾಣಿ ವಹಿಸುತ್ತಿರುವ ಪಾತ್ರವನ್ನು ಕಿವಿಯಾರೆ ಕೇಳುವ ಯಾರೂ ಆಕಾಶವಾಣಿ ಬಗ್ಗೆ ಹಗುರವಾಗಿ ಮಾತನಾಡುವುದಿಲ್ಲ.

ತಾನು ಎಲ್ಲ ಕಾಲಕ್ಕೂ ಅನಿವಾರ್ಯ ಎಂದು ಪರೋಕ್ಷವಾಗಿ ಆಕಾಶವಾಣಿ ಇವತ್ತು ಸಾರುತ್ತಿದೆ. ಅಪಹರಣ ಪ್ರಕರಣವಷ್ಟೇ ಅಲ್ಲದೆ ರೇಡಿಯೋ ಇವತ್ತಿಗೂ ಗ್ರಾಮೀಣರ ಬದುಕಿನಲ್ಲಿ ವಹಿಸುತ್ತಿರುವ ಪಾತ್ರವನ್ನು ಸಮೀಕ್ಷೆಯ ಫಲಿತಾಂಶಗಳ ಮೂಲಕ ತಿಳಿದಾಗ ಅಚ್ಚರಿಯಾಗುತ್ತದೆ. ಆಕಾಶವಾಣಿ ಯುಗ ಮುಗಿದೇ ಹೋಗಿದೆ ಎಂದು ತಿಳಿದ ಕೆಲವರು, ಮೊನ್ನಿನ ಅಪಹರಣ ಪ್ರಕರಣದ ಪ್ರಾರಂಭದ ದಿನಗಳಲ್ಲಿ , ಇಂಟರ್‌ನೆಯ್‌ ಯುಗವನ್ನು ಆಕಾಶವಾಣಿ ಕಾಲಕ್ಕೆ ಹಿಂದಕ್ಕೊಯ್ದ ಖ್ಯಾತಿ ವೀರಪ್ಪನದು ಎಂಬಂತೆ ಪ್ರತಿಕ್ರಿಯಿಸಿದರು. ಆದರೆ ವಾಸ್ತವವೇ ಬೇರೆ. ಅದೇನೇ ಇದ್ದರೂ ಅಪಹರಣ ಪ್ರಕರಣದಲ್ಲಿ ಎರಡನೇ ಸಂಧಾನಕಾರನಂತೆ ಕೆಲಸ ಮಾಡುತ್ತಿರುವ ಆಕಾಶವಾಣಿಯ ತ್ರಿವಿಕ್ರಮ ಶಕ್ತಿಯನ್ನು ಯಾರೂ ಅಲ್ಲಗಳೆಯಲು ಸಾಧ್ಯವಿಲ್ಲ .

ಸೂರ್ಯನ ಕಿರಣಗಳು ತೂರದ ಕಾಡಿನೊಳಕ್ಕೆ : ಈಗ ಮೊಬೈಲ್‌ನಲ್ಲಿ ಇಂಟರ್‌ನೆಟ್‌ ಸೌಲಭ್ಯವಿರುವ ಕಾಲ. ಭೂಮಿಯ ಉತ್ತರ ಧ್ರುವದ ಕೊನೆಯಲ್ಲಿ ಕುಳಿತವನು ದಕ್ಷಿಣ ಧ್ರುವದ ಕೊನೆಯಲ್ಲಿರುವವನಿಗೆ ಕ್ಷಣಮಾತ್ರದಲ್ಲಿ ತನ್ನ ಸಂದೇಶ ಮುಟ್ಟಿಸಬಹುದು. ಆದರೆ ಇವರಿಬ್ಬರಿಗೂ ಒಂದೇ ರೀತಿಯ ಯಾವುದಾದರೂ ಒಂದು ವಿಧದ ಸಂಪರ್ಕ ಇರಲೇಬೇಕು. ಇವೆಲ್ಲಕ್ಕಿಂತ ಸುಲಭವಾಗಿ ಸಂದೇಶ ಒಯ್ಯಬಹುದಾದ , ಕಡಿಮೆ ಖರ್ಚಿನ ಸಾಧನ ರೇಡಿಯೋ. ಸೂರ್ಯನ ಕಿರಣಗಳೂ ತೂರದ ಕಾಡಿನೊಳಕ್ಕೆ ನುಗ್ಗಿದ ರೇಡಿಯೋ ತರಂಗಗಳು ರಾಜ್‌ ಅಪಹರಣ ಪ್ರಕರಣದಲ್ಲಿ ಡಾಕ್ಟರ್‌ನಂತೆ, ಸಂಧಾನಕಾರನಂತೆ ಕೆಲಸ ನಿರ್ವಹಿಸುತ್ತಲೇ ಇವೆ. ಇತರ ಎಲ್ಲ ಮಾಧ್ಯಮಗಳಿಗಿಂತ, ಮನುಷ್ಯರಿಗಿಂತ ವೀರಪ್ಪನ್‌ಗೆ ಹೆಚ್ಚು ನಂಬಿಕಾರ್ಹ ವಸ್ತು ರೇಡಿಯೋ ಎಂದು ಗೊತ್ತಾದ ಕೂಡಲೇ ನಮ್ಮ ಹೈಟೆಕ್‌ ಮುಖ್ಯಮಂತ್ರಿ ಕೃಷ್ಣ ಅವರು ಹಲೋ ವೀರಪ್ಪನ್‌ ಅವರೆ ಎಂದು ಆಕಾಶವಾಣಿಯಲ್ಲಿ ಮಾತನಾಡಿದರು.

1997ರಲ್ಲಿ ವೀರಪ್ಪನ್‌ನಿಂದ ಕೃಷಿವಿಜ್ಞಾನಿ ಡಾ. ಮೈಥಿ ಹಾಗೂ ಛಾಯಾಗ್ರಾಹಕರಾದ ಕೃಪಾಕರ, ಸೇನಾನಿ ಅಪಹೃತರಾಗಿದ್ದಾಗ ಮೊದಲ ಬಾರಿಗೆ ವೀರಪ್ಪನ್‌ ಉದ್ದೇಶಿಸಿ ಆಕಾಶವಾಣಿಯಲ್ಲಿ ಮೈಥಿ ಅವರ ಪತ್ನಿ ಮಾತನಾಡಿದ್ದರು. ರೇಡಿಯೋ ಕೇಳುವುದು ವೀರಪ್ಪನ ದಿನಚರಿಯ ಅವಿಭಾಜ್ಯ ಅಂಗ. ಎಲ್ಲಕ್ಕೂ ಅವನಿಗೆ ಆಕಾಶವಾಣಿಯೇ ಹೊರಜಗತ್ತನ್ನು ತೋರಿಸುವ ಸರ್ವಶಕ್ತ ಸಾಧನ. ಕೃಪಾಕರ, ಸೇನಾನಿ ಅವರ ಪ್ರಕಾರ ತನ್ನ ಸುತ್ತಾ ಭದ್ರತಾಪಡೆಯವರಾಗಲಿ, ಪೊಲೀಸರಾಗಲಿ ಸುತ್ತುತ್ತಿದ್ದಾರೆ ಎಂಬ ವಿಷಯ ಸುದ್ದಿ ಮೂಲಕ ಗೊತ್ತಾದರೆ ವೀರಪ್ಪನ್‌ ವ್ಯಗ್ರನಾಗುತ್ತಿದ್ದ. ಅಂದರೆ ಆಕಾಶವಾಣಿಯ ಪ್ರತಿ ಸುದ್ದಿ ವೀರಪ್ಪನ್‌ನ ನಿರ್ಧಾರಗಳನ್ನು ನಿರ್ಧರಿಸುತ್ತಿತ್ತು. ಈಗಲೂ ನಿರ್ಧರಿಸುತ್ತಿದೆ.

ಅಂದಹಾಗೆ ವೀರಪ್ಪನ್‌ ಆಧುನಿಕ ಡಿಜಿಟಲ್‌ ರೇಡಿಯೋ ಹೊಂದಿದ್ದಾನೆ. ಈಗ ರಾಜ್‌ ಅವರಿಗೂ ಒಂದು ರೇಡಿಯೋ ನೀಡಿರುವುದನ್ನು ಎರಡೂ ರಾಜ್ಯಗಳ ಅಧಿಕೃತ ಸಂಧಾನಕಾರ ಗೋಪಾಲ್‌ ಸ್ಪಷ್ಟಪಡಿಸಿದ್ದಾರೆ.

ಆಪತ್ಕಾಲಕ್ಕೊಬ್ಬ ಆಪದ್ಭಾಂದವ : ಅಪಹರಣದ ಸಂಬಂಧ ರಾಜ್‌ ಕುಟುಂಬದವರು, ಅಪಹೃತರಲ್ಲೊಬ್ಬರಾದ ನಾಗಪ್ಪ ಅವರ ಕುಟುಂಬದವರು ಸೇರಿದಂತೆ ಮುಖ್ಯಮಂತ್ರಿ ಕೃಷ್ಣ ಅವರ ಮಾತುಗಳನ್ನು ಬಿತ್ತರಿಸಲಾಗಿದೆ. ಹಾಗೂ ಗೋಪಾಲ್‌ ಅವರ ಸಂದರ್ಶನವನ್ನೂ ಪ್ರಸಾರ ಮಾಡಲಾಗಿದೆ. ಅಪಹರಣದ ಸಂಬಂಧ ಆಕಾಶವಾಣಿ ಬಿತ್ತರಿದ ತೀರಾ ಇತ್ತೀಚಿನ ವರದಿ ಎಂದರೆ ವಾರದ ದಿನಗಳ ಹಿಂದೆ ಡಾ. ರಾಜ್‌ ಅವರ ಪತ್ನಿ ಪಾರ್ವತಮ್ಮ ಅವರು ತಮ್ಮ ಪತಿಯನ್ನು ಸಾಧ್ಯವಾದಷ್ಟೂ ಮುಂಚೆ ಬಿಡುಗಡೆ ಮಾಡುವಂತೆ ತೀರಾ ದುಃಖದ ದನಿಯಲ್ಲಿ ಕೇಳಿಕೊಂಡಿದ್ದು,

ಅಪಹರಣ ಪ್ರಕರಣದ ವಿಷಯಗಳನ್ನು ಆಕಾಶವಾಣಿಯ ಜನಪ್ರಿಯ ಕಾರ್ಯಕ್ರಮವಾದ ಸ್ಪಂದನದಲ್ಲಿ ಪ್ರಸಾರ ಮಾಡಲಾಗುತ್ತಿದೆ. ಇದನ್ನು ಮೈಸೂರು, ತಮಿಳುನಾಡಿನ ಚೆನ್ನೈ, ತಿರುಚ್ಚಿ, ಕೊಯಮತ್ತೂರು ಕೇಂದ್ರಗಳಿಂದ ಮರುಪ್ರಾಸಾರ ಮಾಡಲಾಗುತ್ತಿದೆ ಎಂದು ಬೆಂಗಳೂರು ಆಕಾಶವಾಣಿ ನಿರ್ದೇಶಕ ಎಚ್‌. ಆರ್‌. ಕೃಷ್ಣಮೂರ್ತಿ ತಿಳಿಸಿದ್ದಾರೆ.

ಇಂಥದೇ ಅನೇಕ ಪ್ರಕರಣಗಳು ಸೇರಿದಂತೆ ಅನೇಕ ಹೆಗ್ಗಳಿಕೆಗಳಿಗೆ ಪಾತ್ರವಾಗಿರುವ ಬೆಂಗಳೂರು ಆಕಾಶವಾಣಿ, ಕಿರುಕುಳ ಅನುಭವಿಸುತ್ತಿದ್ದ ಉದ್ಯೋಗಸ್ಥ ಮಹಿಳೆಯಾಬ್ಬರನ್ನು ಪಾರುಮಾಡಿದ್ದು ಒಂದು ಮೈಲುಗಲ್ಲು . ವಿದೇಶದಲ್ಲಿದ್ದ ಆ ಮಹಿಳೆಯು ಭಾರತಕ್ಕೆ ಸುರಕ್ಷಿತವಾಗಿ ಬರಲು ಆಕಾಶವಾಣಿಯ ಒಂದು ಕಾರ್ಯಕ್ರಮ ಸಾಕಾಯಿತು ಎನ್ನುತ್ತಾರೆ ಆಕಾಶವಾಣಿಯ ಒಬ್ಬ ಉದ್ಯೋಗಿ.

ಟಿವಿ ಬಂದ ಹೊಸದರಲ್ಲಿ ಆಕಾಶವಾಣಿ ಕೇಳುಗರು ಸ್ವಲ್ಪ ಮಟ್ಟಿಗೆ ತಗ್ಗಿದ್ದೇನೋ ನಿಜ. ಆದರೆ, ಹೊಸ ಕೇಳುಗರು ಇದ್ದೇ ಇರುತ್ತಾರೆ. ಇತ್ತೀಚಿನ ಒಂದು ಅಂದಾಜಿನಂತೆ ರಾಜ್ಯದಲ್ಲಿ 1.2 ಕೋಟಿ ಕೇಳುಗರಿದ್ದಾರೆ. ಕಳೆದ ದಶಕಗಳಲ್ಲಿ ಕೇಳುಗರ ಸಂಖ್ಯೆ ಶೇ.13ರಿಂದ 45ಕ್ಕೇರಿದೆ. ಕೇಳುಗರನ್ನು ನಿರಂತರ ಸಂಪರ್ಕದಲ್ಲಿರಿಸಿಕೊಳ್ಳಲು ಹತ್ತಾರು ವಿಧದ ಕಾರ್ಯಕ್ರಮಗಳನ್ನು ಆಕಾಶವಾಣಿ ಹಾಕಿಕೊಡಿದೆ.

ನಿತ್ಯವೂ 13 ಆಕಾಶವಾಣಿ ಸುದ್ದಿ ಪ್ರಸಾರ ಕೇಳುತ್ತಾನೆ ವೀರಪ್ಪನ್‌

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X