ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಬಿ.ಸಿ. ರೋಡಿನ ಟ್ರಾಫಿಕ್‌ ಜ್ಯಾಮ್‌ ಸಮಸ್ಯೆ

By Super
|
Google Oneindia Kannada News

-ಮಂ-ಗ-ಳೂ-ರು : ಬೆಂಗಳೂರಿನಿಂದ ನಿಮ್ಮನ್ನು ಮಂಗಳೂರಿಗೆ ಹೊತ್ತೊಯ್ಯುವ ಎಲ್ಲಾ ಬಸ್‌ಗಳು ಬಿ.ಸಿ. ರೋಡು ಹತ್ತಿರಾಗುತ್ತಿರುವಂತೆ ಗಕ್ಕನೆ ನಿಂತು ಬಿಡುತ್ತವೆ. ಅಲ್ಲಿಯವರೆಗೆ ಟ್ರಾಫಿಕ್‌ ಜ್ಯಾಮ್‌ನ ತೊಂದರೆ ಇಲ್ಲದೆ ಓಡಿದ ನಿಮ್ಮ ಬಸ್ಸಿಗೇನಾಯಿತು ಎಂದು ಗಮನಿಸಿದರೆ ವಾಹನಗಳ ದೊಡ್ಡ ಕ್ಯೂ ಕಾಣುತ್ತದೆ. ಬಿ.ಸಿ. ರೋಡಿನಲ್ಲಿರುವ ನೇತ್ರಾವತಿ ಸೇತುವೆಯಲ್ಲಿ ಏಕ ಕಾಲಕ್ಕೆ ವಾಹನಗಳು ಎರಡೂ ಕಡೆಯಿಂದಲೂ ಪ್ರವೇಶಿಸಲಾರವು. ಸೇತುವೆಯ ಆ ತುದಿಯಿಂದ ವಾಹನಗಳು ಬರುತ್ತಿರಬೇಕಾದರೆ ಈ ಕಡೆಯಲ್ಲಿ ವಾಹಗಳು ಕೆಂಪು ದೀಪ ಉರಿಸಿಕೊಂಡು ನಿಂತಿರಬೇಕು. ಈ ಸಮಸ್ಯೆ ನಿವಾರಿಸಲು ಪಕ್ಕದಲ್ಲಿಯೇ ಹೊಸ ಸೇತುವೆ ನಿರ್ಮಾಣ ಕಾರ್ಯ ಭರದಿಂದ ಸಾಗುತ್ತಿದೆ. ಡಿಸೆಂಬರ್‌ ಹೊತ್ತಿಗೆ ವಾಹನಗಳು ಹೊಸ ಸೇತುವೆಯ ಮೇಲೆ ಓಡಬಹುದೆಂದು ನಿರ್ಮಾಣದ ಹೊಣೆ ಹೊತ್ತವರು ಹೇಳುತ್ತಾರೆ.

ಮಂಗಳೂರು- ಬೆಂಗಳೂರು ಬಸ್‌ಗಳು ಓಡಾಡುವ ರಾಷ್ಟ್ರೀಯ ಹೆದ್ದಾರಿ 48ರ ಮೇಲೆ ಈ ಸೇತುವೆಯನ್ನು ಕಟ್ಟಲಾಗಿದೆ. ಕುಮಾರಧಾರ ನದಿಗೆ ಕಟ್ಟಲಾಗಿರುವ ಸೇತುವೆ ಅತೀ ದೊಡ್ಡದೆಂಬ ಹೆಗ್ಗಳಿಕೆ ಪಡೆದರೆ, ಎರಡನೆಯ ಸ್ಥಾನ ಈ ಹೊಸ ಸೇತುವೆಗೆ ಸಲ್ಲುತ್ತದೆ. ಹೊಸ ಸೇತುವೆಯ ನಿರ್ಮಾಣ ಕಾಮಗಾರಿ 1996ರಲ್ಲಿಯೇ ಆರಂಭವಾಗಿತ್ತು . ಕುಮಾರಧಾರ ನದಿಗೆ ದಕ್ಷಿಣ ಕನ್ನಡದ ಉಪ್ಪಿನಂಗಡಿಯಲ್ಲಿ ಕಟ್ಟಿರುವ ಸೇತುವೆ ನಿರ್ಮಾಣಕ್ಕೆ 14 ವರ್ಷಗಳು ಸವೆದಿದ್ದರೆ, ಈ ಸೇತುವೆಗೆ ಕೆಲಸಗಾರರು ನಾಲ್ಕು ವರ್ಷಗಳಿಂದ ಮಣ್ಣು ಹೊರುತ್ತಿದ್ದಾರೆ. 1986ರಲ್ಲಿ ಸೇತುವೆ ನಿರ್ಮಾಣಕ್ಕೆ ಅನುಮತಿ ನೀಡಿದಾಗ ಇದು 7 ಮಿಲಿಯನ್‌ ರೂಪಾಯಿಗಳ ಯೋಜನೆಯಾಗಿತ್ತು. ಆದರೆ ಸೇತುವೆ ನಿರ್ಮಾಣ ಕಾರ್ಯ ಮುಗಿಯುವ ಹೊತ್ತಿಗೆ 20. 6 ಮಿಲಿಯನ್‌ ರೂಪಾಯಿಗಳು ಖರ್ಚಾಗಿವೆ ಎಂದು ರಾಷ್ಟ್ರೀಯ ಹೆದ್ದಾರಿ ಮೂಲಗಳು ತಿಳಿಸುತ್ತವೆ.

ಈಗಿರುವ ಸೇತುವೆ, ಎಂಆರ್‌ಎಲ್‌, ಕೆಐಓಸಿಎಲ್‌, ಮಂಗಳೂರು ಬಂದರಿನಿಂದ ಭಾರಿ ಲಗ್ಗೇಜ್‌ಗಳನ್ನು ಹೊತ್ತು ಕೊಂಡು ಬರುವ ವಾಹನಗಳ ಭಾರವನ್ನು ತಡೆದುಕೊಳ್ಳುವ ಸ್ಥಿತಿಯಲ್ಲಿಲ್ಲ . ಅಲ್ಲದೆ, 30 ಟನ್‌ಗಳಿಗೂ ಅಧಿಕ ಭಾರದ ಎಲ್‌ಪಿಜಿ ಗ್ಯಾಸ್‌, ಗ್ರಾನೈಟ್‌ ಶಿಲೆಗಳನ್ನು, ಮರದ ದಿಮ್ಮಿಗಳನ್ನು ಹೊತ್ತು ಸಾಗುವ ವಾಹನಗಳು ರಸ್ತೆಯಲ್ಲಿ ಚಲಿಸುವುದು ಸಾಧ್ಯವಾಗುತ್ತಿಲ್ಲ. ತಜ್ಞರ ಪ್ರಕಾರ 50 ಟನ್‌ಗಳಿಗಿಂತ ಹೆಚ್ಚು ಭಾರ ಹೊತ್ತ ವಾಹನಗಳು ಚಲಿಸಿದಲ್ಲಿ ಸೇತುವೆ ಕುಸಿದುಬಿಡುತ್ತದೆ. ಕೈಗಾರಿಕೆ ಮತ್ತು ವಾಣಿಜ್ಯ ಕ್ಷೇತ್ರದಲ್ಲಿ ಬೆಳೆಯುತ್ತಿರುವ ಕರಾವಳಿಯ ಪ್ರವೇಶಕ್ಕೆ ಉತ್ತಮವಾದ, ದ್ವಿಮುಖ ಸಂಚಾರಕ್ಕೆ ಅನುಕೂಲವಿರುವ ಸೇತುವೆಯ ಅಗತ್ಯವಿದೆ. ನಿರ್ಮಾಣವಾಗುತ್ತಿರುವ ಹೊಸ ಸೇತುವೆ ಈ ಎಲ್ಲಾ ಅಗತ್ಯಗಳನ್ನು ಪೂರೈಸಲಿದೆ. ವಿದ್ಯುತ್‌, ಪೆಟ್ರೋಲ್‌ ಉತ್ಪನ್ನಗಳಿಗೆ ಸಂಬಂಧಿಸಿದ ಕಾರ್ಖಾನೆಗಳು ಮಂಗಳೂರು ಸಮುದ್ರಕ್ಕೆ ತಾಕಿಕೊಂಡಿರುವುದರಿಂದ ಮಂಗಳೂರಿಗೆ ರಸ್ತೆ ವ್ಯವಸ್ಥೆಯ ಅಗತ್ಯವಿದೆ. ಮಂಗಳೂರಿನ ಆರ್ಥಿಕ ಚಟುವಟಿಕೆಗಳಿಗೆ ವೇಗವರ್ಧಕವಾಗಿ ಎದ್ದು ನಿಲ್ಲುವ ನೇತ್ರಾವತಿ ಸೇತುವೆ ಮಂಗಳೂರು ಉದ್ಯಮ ಕ್ಷೇತ್ರದ ಅಡಿಪಾಯದಲ್ಲಿರುವ ಕಲ್ಲು ಎಂದರೆ ತಪ್ಪಲ್ಲ .

English summary
New bridge on netravati to open soon
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X