ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವನ್ನಿಯಾರ್‌ಗಳ ರಾಬಿನ್‌ ಹುಡ್‌, ಶಾಂತಿಪ್ರಿಯ ಕನ್ನಡಿಗರ ಖಳನಾಯಕ

By Super
|
Google Oneindia Kannada News

ಬೆಂಗಳೂರು : ವೀರಪ್ಪನ್‌, ಈತ ಕರ್ನಾಟಕ ಹಾಗೂ ತಮಿಳುನಾಡಿನ ಗಡಿಯಲ್ಲಿರುವ 20 ಸಾವಿರ ಚದರ ಕಿ.ಮೀ. ಕಾಡಿನ ಅನಭಿಷಕ್ತ, ಸ್ವಯಂ ಘೋಷಿತ ದೊರೆ. ಪೊಲೀಸರ ದೃಷ್ಟಿಯಲ್ಲಿ ಒಬ್ಬ ಭಯೋತ್ಪಾದಕ, ತಾನು ವಾಸಿಸುವ ಕಾಡಿನ ಜನರಿಗೆ ರಾಬಿನ್‌ ಹುಡ್‌.

ವನ್ನಿಯಾರ್‌ಗಳ ನೆಚ್ಚಿನ ಮಾಮ : ವೀರಪ್ಪನ್‌ಗೆ ಮೋಳುಕ್ಕನ್‌ ಎಂಬ ಹೆಸರೂ ಉಂಟು. ಹುಟ್ಟೂರು ಗೋಪಿನಾಥಂ. ಕರ್ನಾಟಕದ ಕೊಳ್ಳೆಗಾಲ, ತಮಿಳುನಾಡಿನ ಸತ್ಯಮಂಗಳಂ ಹಾಗೂ ಸೇಲಂ ಪ್ರದೇಶಗಳ ಕಾಡಿನ ಸ್ವಯಂ ಘೋಷಿತ ದೊರೆ ಈತ. ಸ್ಥಳೀಯ ಜನರಿಗೆ ಈತ ನೆಚ್ಚು. 'ಮಾಮ (ಅಲ್ಲಿನ ಜನ ವೀರಪ್ಪನ್‌ ಅನ್ನು ಮಾಮ, ಪೆರಿಪ್ಪ, ಅಣ್ಣ ಎಂದೇ ಕರೆಯುವುದು) ನಮ್ಮ ಕಷ್ಟಕ್ಕಾಗ್ತಾರೆ. ಅವ್ರು ದಂತ ಕದೀಬೋದು. ಕೊಲೆ ಮಾಡಬೋದು. ಆದರೆ ನಮ್ಮ ಕಷ್ಟಕ್ಕಾಗೋದು ಅವರೇ, ಸರ್ಕಾರ ಅಲ್ಲ" ಎಂಬುದು ವನ್ನಿಯಾರ್‌ ಸಮುದಾಯದ ಶೇಕಡ 90ರಷ್ಟು ಜನರ ಅಭಿಪ್ರಾಯ.

ಫೇಮಸ್‌ ಆಗಿದ್ದು 1990ರಲ್ಲಿ : ವೀರಪ್ಪನ್‌ ದಂತ ಕದಿಯಲು ಪ್ರೇರೇಪಿಸಿದ್ದು ಆತನ ಪೋಷಕ ಸೆಲ್ವಿಯನ್‌ ಗೌಂಡರ್‌, ಪಡಿಯಾಚಿ ಗೌಂಡರ್‌ ಸಮುದಾಯಕ್ಕೆ ಸೇರಿದವ. ದಂತಗಳ್ಳತನದಲ್ಲಿ ಚೆನ್ನಾಗಿ ಪಳಗಿರುವ ವೀರಪ್ಪನ್‌ ಉತ್ತಮ ಕಾರ್ಯ ತಂತ್ರಜ್ಞ. ಈತ ತನ್ನ ಸುತ್ತಮುತ್ತಲ ಜನಕ್ಕೆ ಸಾಕೆನ್ನುವಷ್ಟು ಹಣ ಕೊಡಬಲ್ಲ. ಹೀಗಾಗೇ ಈತನಿಗೆ ಪ್ರಾಣ ಕೊಡಲೂ ಜನ ಸಿದ್ಧ. 1990ರಲ್ಲಿ ಹೊಗೆನಿಕಲ್‌ ಜಲಪಾತದ ಬಳಿ ಐವರು ಪೊಲೀಸರನ್ನು ಕೊಂದ ಬಳಿಕವೇ ಈತ ಫೇಮಸ್‌ ಆದದ್ದು. ಆವತ್ತಿನಿಂದ ಈವತ್ತಿನವರೆಗೆ ಸುಮಾರು 120 ಜನರ ಹೆಣ ಉರುಳಿಸಿದ್ದಾನೆ. ಪೊಲೀಸ್‌ ಅಧಿಕಾರಿಗಳು, ಮುಗ್ಧ ದಾರಿಹೋಕರು, ಪತ್ರಕರ್ತರು ಇವನ ಬಂದೂಕಿಗೆ ಗುರಿಯಾಗಿದ್ದಾರೆ. 2000ಕ್ಕಿಂತ ಹೆಚ್ಚು ಆನೆಗಳನ್ನು ಕೊಂದಿದ್ದಾನೆಂದರೆ ಈತನ ಭಂಡಧೈರ್ಯ ಎಷ್ಟೆಂಬುದು ತಿಳಿದೀತು.

ವೀರಪ್ಪನ್‌ ಬಂಧಿಯಾಗೇ ಇರಲಿಲ್ಲವೇ?
ಉತ್ತರ ಹೌದು. 1986ರಲ್ಲಿ ಬೆಂಗಳೂರಿನಲ್ಲಿ ಸಾರ್ಕ್‌ ಸಮ್ಮೇಳನ ನಡೆಯುತ್ತಿದ್ದ ಸಂದರ್ಭ. ಶಸ್ತ್ರಾಸ್ತ್ರಗಳನ್ನು ಖರೀದಿಸಲು ನಗರದ ಹೊಟೇಲೊಂದಕ್ಕೆ ಬಂದಿದ್ದ ವೀರಪ್ಪನ್‌ನನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು. ಆದರೆ ಪೊಲೀಸರಿಗೆ ಚಳ್ಳೆಹಣ್ಣು ತಿನ್ನಿಸಿ ತಪ್ಪಿಸಿಕೊಂಡ. ನಂತರ ಅವಿರತವಾಗಿ ರಕ್ತದ ಕೋಡಿ ಹರಿಸಲು ಅನುವಾದ. ಇವನನ್ನು ಬಂಧಿಸಲು ಹೋದ ತಂಡದ ಎಷ್ಟೋ ಮಂದಿ ಹಿಂದಿರುಗಿ ಬರಲೇ ಇಲ್ಲ. ಕಳೆದೊಂದು ದಶಕದಲ್ಲಿ ಇವನನ್ನು ಹಿಡಿಯಲು ಸರ್ಕಾರ ಮಾಡಿರುವ ಖರ್ಚು ತಿಂಗಳಿಗೆ ಕೇವಲ 11 ಕೋಟಿ ರುಪಾಯಿ! ಇವನ ತಲೆಗೆ ಇಟ್ಟಿರುವ ಬಹುಮಾನ 1 ಲಕ್ಷದ 30 ಸಾವಿರ ಡಾಲರ್‌ಗಳು. ಸರ್ಕಾರ ಏನೇ ತಿಪ್ಪರಲಾಗ ಹಾಕಿದರೂ ಇದುವರೆಗೂ ಇವನನ್ನು ಹಿಡಿಯುವಲ್ಲಿ ಯಶಸ್ವಿಯಾಗಿಲ್ಲ.

ಉದುರಿದ ಹೆಣಗಳು, ಬದಲಾದ ವರಸೆ : ತನ್ನ ಪ್ರದೇಶದ ಜನರನ್ನು ಕಾನೂನಿಗೆ ನೆರವಾಗುವಂತೆ ಒಲಿಸಲು ಯತ್ನಿಸಿದ ಅರಣ್ಯಾಧಿಕಾರಿಯಾಬ್ಬರನ್ನು 1991ರಲ್ಲಿ ಕೊಂದ. 1992ರಲ್ಲಿ ಎಸ್‌ಪಿ ಹರಿಕೃಷ್ಣನ್‌ ಇವನ ಬಂದೂಕಿನ ಗುಂಡಿಗೆ ಎದೆಯಾಡ್ಡಿದರು. ಇದಾದ ಕೆಲವೇ ದಿನಗಳಲ್ಲಿ ಚಾಮರಾಜ ನಗರ ಜಿಲ್ಲೆಯ ರಾಮಪುರ ಪೊಲೀಸ್‌ ಸ್ಟೇಷನ್ನಿನಲ್ಲಿ ಐವರು ಪೊಲೀಸರನ್ನು ಕೊಂದನು. 1993ರಲ್ಲಿ ಬಾಂಬ್‌ಗಳನ್ನು ಸಿಡಿಸಿ ಕರ್ನಾಟಕ ಹಾಗೂ ತಮಿಳುನಾಡಿನ ಪಡೆಗಳ 22 ಕಮಾಂಡೋಗಳನ್ನು ಛಿದ್ರ ಮಾಡಿದ. ಈಚಿನ ಕೆಲವು ವರ್ಷಗಳಲ್ಲಿ ಈತ ತನ್ನ ವರಸೆ ಬದಲಿಸಿದ. ಛಾಯಾಚಿತ್ರಕಾರರು, ವಿಜ್ಞಾನಿಗಳು ಹಾಗೂ ಅರಣ್ಯಾಧಿಕಾರಿಗಳನ್ನು ಅಪಹರಿಸಿ ಸರ್ಕಾರದ ಮುಂದೆ ಬೇಡಿಕೆಗಳನ್ನು ಇಡತೊಡಗಿದ.

187 ಜನರನ್ನು ಹಿಡಿದಿದ್ದಾರೆ, 60 ಜನರನ್ನು ಕೊಂದಿದ್ದಾರೆ, ವೀರಪ್ಪನ್‌ ಮಾತ್ರ ಸಿಕ್ಕಿಲ್ಲ : ಕರ್ನಾಟಕ ಹಾಗೂ ತಮಿಳುನಾಡಿನ ವಿಶೇಷ ಕಾರ್ಯ ಪಡೆ ಇದುವರೆಗೆ ವೀರಪ್ಪನ್‌ನ ಸಹಚರರೂ ಸೇರಿದಂತೆ 187 ಜನರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ. ಇವನ ತಂಡದ 60 ಸದಸ್ಯರನ್ನು ಕೊಂದಿದ್ದಾರೆ. ಕಳೆದ ಒಂದೆರಡು ವರ್ಷಗಳಲ್ಲಿ ಇವನ ಬಗೆಗೆ ಕೇಳಿಬರುತ್ತಿದ್ದ ಮಾತುಗಳು ಗಾಳಿಯಿಂದ ದೂರಾಗಿದ್ದವು. ಈ ವರ್ಷದ ಮಾರ್ಚ್‌ ನಲ್ಲಿ ತಾನು ಮತ್ತೆ ಧಾಳಿ ಶುರುವಿಡುವುದಾಗಿ ಹೇಳಿದ್ದ. ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಲಿಲ್ಲ. ತಮಿಳುನಾಡು ಸರ್ಕಾರವಂತೂ ವೀರಪ್ಪನ್‌ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿಲ್ಲ ಎಂಬ ಮಾತುಗಳು ಕೇಳಿಬರುತ್ತಿವೆ.

ಇದು ವೀರಪ್ಪನ್‌ ತೆಗೆದುಕೊಂಡಿರೋ ಲಾಸ್ಟ್‌ ಛಾನ್ಸೇ ? : ಈಗ ಫೀನಿಕ್ಸ್‌ ರೀತಿ ಎದ್ದಿರುವ ವೀರಪ್ಪನ್‌ ತಿಮಿಂಗಲಕ್ಕೇ ಬಲೆ ಬೀಸಿದ್ದಾನೆ. ರಾಜ್‌ ಸಾಮಾನ್ಯ ವ್ಯಕ್ತಿಯಲ್ಲ. ಅವರು ಕರ್ನಾಟಕದ ಜನರ ಮನಸ್ಸು, ಭಾವನೆ ಎಲ್ಲ. ವೀರಪ್ಪನ್‌ ಕೆಣಕಿರುವುದು ಕನ್ನಡ ಮನಸ್ಸುಗಳನ್ನು. ಇದರ ಬಿಸಿ ಕರ್ನಾಟಕಕ್ಕೆ ತಟ್ಟಿದೆ. ತಮಿಳುನಾಡಿಗೂ ತಟ್ಟದಿರದು. ಒಟ್ಟಿನಲ್ಲಿ ಮುಖ್ಯಮಂತ್ರಿ ಕೃಷ್ಣ ಬಗೆಹರಿಸಬೇಕಾದ ದೊಡ್ಡ ಪಜಲ್‌ ಇದಾಗಿದೆ. ವೀರಪ್ಪನ್‌ ಮಹಾತ್ವಾಕಾಂಕ್ಷೆಯ ಯತ್ನವೂ ಆಗಿರಬಹುದು. ಇದರ ಕೊನೆ ಹೇಗೆ ಎಂಬುದು ನಮ್ಮ ನಿಮ್ಮ ಮುಂದಿರುವ ಪ್ರಶ್ನೆ.

English summary
Veerappan vanniars Robinhood and a villian of peace
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X