ತನ್ನ ಮದುವೆಯಂದು ರಕ್ತದಾನ ಶಿಬಿರ ಏರ್ಪಡಿಸಿದ ಕೋಲ್ಕತ್ತದ ವಧು!
ಪ್ರತಿ ಮಹಿಳೆಗೂ ಆಕೆಯ ಮದುವೆ ದಿನವೆಂದರೆ ಎಂದೂ ಮರೆಯಲಾಗದ ದಿನ. ಈ ದಿನ ತಮಗೆ ಮಾತ್ರವಲ್ಲ, ಉಳಿದ ಎಷ್ಟೋ ಜನರಿಗೆ ನೆನಪಿನಲ್ಲಿರುವಂಥ ದಿನವಾಗಬೇಕು ಎಂದು ಆದರ್ಶ ಕೆಲಸವೊಂದನ್ನು ಮಾಡಿದ್ದಾರೆ ಪಶ್ಚಿಮ ಬಂಗಾಳದ ಕೋಲ್ಕತ್ತಾದ ಈ ವಧು.
ಸೌಮಿತಾ ಮೊಂಡಾಲ್ ಎಂಬ ಇಂಜಿನಿಯರ್ ಯುವತಿ ತನ್ನ ಮದುವೆಯ ದಿನ ರಕ್ತದಾನ ಶಿಬಿರವನ್ನು ಏರ್ಪಡಿಸಿ, ರಕ್ತದ ಅಗತ್ಯವಿರುವ ಹಲವರಿಗೆ ರಕ್ತ ಸಿಗುವಂತೆ ಮಾಡಿದ್ದಾರೆ. ಅರ್ಪಣ್ ಹಜ್ರಾ ಎಂಬುವವರನ್ನು ಮದುವೆಯಾದ ಸೌಮಿತ್ ತಮ್ಮ ತಂದೆ-ತಾಯಿ ಮಳಿ ಕೇಳಿದ್ದಿಷ್ಟೆ. 'ನನಗೆ ಯಾವುದೇ ಆಭರಣಗಳು ಬೇಡ. ಅದಕ್ಕೆ ಖರ್ಚು ಮಾಡುವ ಹಣದಲ್ಲೇ ಒಂದು ರಕ್ತದಾನ ಶಿಬಿರ ಮಾಡಿ. ಅದು ನನ್ನ ಮದುವೆಯ ದಿನವೇ ನಡೆಯಲಿ' ಎಂದು. ಮಗಳ ಮಾತಿಗೆ ಎಂದಿಗೂ ಒಲ್ಲೆ ಎನ್ನದ ಅಪ್ಪ-ಅಮ್ಮ ಸೌಮಿತ್ ಹೇಳಿದಂತೆಯೇ ಆಕೆಯ ಮದುವೆ ದಿನ ರಕ್ತದಾನ ಶಿಬಿರ ಏರ್ಪಡಿಸಿದ್ದರು.

30 ಕ್ಕೂ ಹೆಚ್ಚು ಜನ ಅಂದು ರಕ್ತದಾನ ಮಾಡಿದ್ದೆ. 'ನಮ್ಮ ದೇಶದಲ್ಲಿ ರಕ್ತದ ಅಭಾವ ತೀರಾ ಇದೆ. ಆದರೆ ಈ ಬಗ್ಗೆ ಹಲವರಿಗೆ ಗೊತ್ತಿಲ್ಲ. ರಕ್ತದಾನದಿಂದ ನಮಗೆ ಅಪಾಯ ಎಂಬಿತ್ಯಾದಿ ಮೂಢನಂಬಿಕೆಯಿಂದ, ಅವೈಜ್ಞಾನಿಕ ಚಿಂತನೆಯಿಂದ ಹೊರಬಂದು ರಕ್ತದಾನ ಮಾಡಿ. ನೀವು ದಾನ ಮಾಡುವ ರಕ್ತದಿಂದ ಎಷ್ಟೋ ಜೀವಗಳು ಉಳಿಯಬಹುದು' ಎನ್ನುತ್ತಾರೆ ಸೌಮಿತ್.
ಬೆಲೆಬಾಳುವ ಒಡವೆ, ದುಬಾರಿ ಸೀರೆ ಎನ್ನುತ್ತ ಹಲವರು ತಮ್ಮ ಮದುವೆ ಬಗ್ಗೆ ಬಣ್ಣ ಬಣ್ಣದ ಕನಸು ಕಾಣುತ್ತಿದ್ದರೆ ಸೌಮಿತ್ ಮಾತ್ರ, ಈ ಎಲ್ಲಕ್ಕಿಂತ ಹೊರತಾದ ಆದರ್ಶ ಕನಸು ಕಂಡು ಅದನ್ನು ನನಸಾಗಿಸಿಕೊಂಡಿದ್ದಾರೆ.
ಇವರ ಕಾರ್ಯ ಉಳಿದವರಿಗೂ ಆದರ್ಶವಾಗಲಿ.












Click it and Unblock the Notifications