• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ತಾತಾ, ಆ ಸಾಫ್ಟ್ ಕರ್ಚೀಫು ನನಗೆ ಮಾರ್ತೀರಾ?

By ಮಾಧವ ವೆಂಕಟೇಶ್
|

ಅವರು ಒಬ್ಬರೇ ರೂಮಿನ ಮೂಲೆಯ ಗೋಡೆಗೆ ಒರಗಿಕೊಂಡು ಕಾಲನ್ನು ಮುಂದಿರಿಸಿ ನೆಲದ ಮೇಲೆ ಕೂತಿದ್ದಾರೆ. ತಲೆಯ ಮೇಲೆ ಒಂದು ಕಪ್ಪು ಬಟ್ಟೆಯ ಚೀಲ ಹಾಕಲಾಗಿದೆ. ಅವರ ದುರ್ಬಲ ಮೈಕಟ್ಟನ್ನು ಒಂದಿಷ್ಟು ಹರಕಲು ಬಟ್ಟೆ ಮುಚ್ಚಿಟ್ಟಿದೆ. ತಲೆ ಚೀಲದ ಒಳಗಿನಿಂದ ಕಷ್ಟ ಪಟ್ಟು ಉಸಿರಾಡುತ್ತಿರುವ ಶಬ್ದ ಕೇಳಿ ಬರುತ್ತಿದೆ. ಸುಮಾರು ಏಳೆಂಟು ವರ್ಷದ ಹುಡುಗ ಕೋಣೆಯ ಇನ್ನೊಂದು ಮೂಲೆಯಿಂದ ಅವರನ್ನು ಆತಂಕದಿಂದ ನೋಡುತ್ತಿದ್ದಾನೆ. ಅವರ ಉಸಿರು ನಿಧಾನವಾಗುತ್ತದೆ. "ಬೇಡಾ!" ಹುಡುಗ ಅಳುತ್ತಾ ಚೀರುತ್ತಾನೆ.

ಪ್ರಹ್ಲಾದ ರಾವ್ ರವರಿಗೆ ಥಟ್ಟನೆ ಎಚ್ಚರವಾಯಿತು. ಹಣೆ ಮುಟ್ಟಿಕೊಂಡರೆ ಬೆವರು. ಸುತ್ತಮುತ್ತ ನೋಡಿದರು. ವಾತಾವರಣವೇನೂ ಬದಲಾಗಿಲ್ಲ. ಕಾರಿನಲ್ಲಿ ಮುಂದೆ ಡ್ರೈವರ್, ಹಿಂದಿನ ಸೀಟಿನಲ್ಲಿ ಅವರು ಮತ್ತು ಅವರ ಲ್ಯಾಪ್ಟಾಪ್ ಚೀಲ. ಹೊರಗೆ ಅಮಾವಾಸ್ಯೆ ರಾತ್ರಿಯ ಕತ್ತಲೆ.

ಎಷ್ಟೊತ್ತು ನಿದ್ರೆಯಲ್ಲಿ ಮೈಮರೆತ್ತಿದ್ದೆ ಎಂದು ನೋಡಲು ಪ್ರಹ್ಲಾದರು ಅವರ ರೊಲೆಕ್ಸ್ ವಾಚ್ ಕಡೆಗೆ ನೋಡಿದರು. ಸುಮಾರು ಅರ್ಧ ಘಂಟೆಯ ಛಿದ್ರ ನಿದ್ರೆ. "ಏನಿದು ವಿಚಿತ್ರ ಕನಸು? ಯಾಕೆ ನನ್ನನ್ನ ಮೊನ್ನೆಯಿಂದ ಕಾಡ್ತಾಯಿದೆ?", ಪ್ರಹ್ಲಾದರು ಒಮ್ಮೆ ಯೋಚಿಸಿದರು. ಅಷ್ಟೊತ್ತರಲ್ಲಿ ಅವರ ಬ್ಲಾಕ್ಬೆರಿ ಮೊಬೈಲು ಅವರ ಗಮನವನ್ನು ಬೇಡಿತು.

"verifone press conference announced. 2 days from now".

ಪ್ರಹ್ಲಾದರಿಗೆ ಮೆಸೇಜ್ ನೋಡಿ ಸ್ವಲ್ಪ ಕಿರಿಕಿರಿಯಾಯಿತು. ಅವರ ಆಸೆ ಏನೆಂದರೆ, ತಮ್ಮ ಕಂಪನಿಯಾದ ವೈನಿಯಂ ಅನ್ನು ಭಾರತದ ನಂಬರ್ ಒನ್ ಟೆಲಿಕಾಂ ಕಂಪನಿಯನ್ನಾಗಿ ಮಾಡಬೇಕು, ಜೊತೆಗೆ ಭಾರತೀಯರು ಜಗತ್ತಿನಲ್ಲಿ ಎಲ್ಲೇ ಇದ್ದರೂ ಅವರ ಕುಟುಂಬದವರೊಂದಿಗೆ ನಿರರ್ಗಳವಾಗಿ ಮಾತಾಡಬಹುದಾದ ಒಂದು ತಾಂತ್ರಿಕ ಸೇವೆಯನ್ನು ನೀಡಬೇಕು ಎಂದು. ಮೊದಲ ಗುರಿಯನ್ನು ಅವರು ಇತ್ತೀಚೆಗೆ ಮುಟ್ಟಿದ್ದಾಯಿತು. ಅವರ ಈ ರಾತ್ರಿಯ ಕಿರಿಕಿರಿ ಎರಡನೇ ಗುರಿಗೆ ಸಂಬಂಧಿಸಿದ್ದು.

ಯೂರೋಪಿನ ಅತಿ ಶ್ರೇಷ್ಠ ಟೆಲಿಕಾಂ ಕಂಪನಿ ವೆರಿಫೋನ್ ಜೊತೆ ನಮ್ಮ ಕಂಪನಿ ಪಾಲುದಾರಿಕೆ ಮಾಡಿಕೊಂಡರೆ, ಯುರೋಪ್ ಮತ್ತು ಅಮೆರಿಕಾ ಎರಡೂ ಪ್ರದೇಶಗಳ ಭಾರತೀಯರ ಫೋನ್ ಸೇವೆಯನ್ನು ನಾವೇ ನೀಡಬಹುದು, ಎಂಬುದು ಪ್ರಹ್ಲಾದರ ಲೆಕ್ಕಾಚಾರ. ಆದರೆ ವೆರಿಫೋನ್ ಈಗ ಪ್ರಹ್ಲಾದರ ಕಂಪನಿಯ ಪ್ರತಿಸ್ಪರ್ಧಿಯ ಜೊತೆ ಪಾಲುದಾರಿಕೆ ಮಾಡಿಕೊಳ್ಳಲು ಮುಂದಾಗಿದೆ. ಈ ಒಪ್ಪಂದವನ್ನು ಖಚಿತಗೊಳಿಸುವ ಹಂತಕ್ಕೆ ಮಾತುಕತೆ ಮುಂದುವರೆದುಬಿಟ್ಟಿದೆ. ಪ್ರತಿಸ್ಪರ್ಧಿಯ ಒಪ್ಪಂದವನ್ನು ತಪ್ಪಿಸಿ ವೈನಿಯಂ ಜೊತೆ ಒಪ್ಪಂದವನ್ನು ಮಾಡಿಕೊಳ್ಳಲು ವೆರಿಫೋನ್ ನ ದಿಗ್ಗಜರನ್ನು ಪ್ರೇರೇಪಿಸುವುದಕ್ಕಾಗೇ ಅವರ ಈ ರಾತ್ರಿಯ ಲಂಡನ್ ಪಯಣ.

ಪ್ರಹ್ಲಾದರ BMW ಬೆಂಗಳೂರಿನ ಏರ್ಪೋರ್ಟ್ ನಲ್ಲಿ ಬಂದು ನಿಂತಿತು. ಡ್ರೈವರ್ ಬಾಗಿಲನ್ನು ತೆಗೆದ ನಂತರ ಪ್ರಹ್ಲಾದರು ಲಗೇಜ್ ಇಳಿಸಿಕೊಂಡು ಬ್ಲಾಕ್ಬೆರ್ರಿಯನ್ನು ಮೆಸೇಜ್ ಗಾಗಿ ನೋಡುತ್ತಾ ಏರ್ಪೋರ್ಟ್ ಪ್ರವೇಶಿಸಿದರು. ಅವರು ಪ್ರವೇಶಿಸುತ್ತಿದ್ದಂತೆಯೇ ಬ್ರಿಟಿಷ್ ಏರ್ವೇಸ್ ನ ಸಿಬ್ಬಂದಿ ಅವರನ್ನು ಸ್ವಾಗತಿಸಿ, ಸೆಕ್ಯೂರಿಟಿ ವಿಧಾನಗಳನ್ನೆಲ್ಲಾ ಬೇಗ ಬೇಗನೆ ಮುಗಿಸಲು ಸಹಾಯ ಮಾಡಿದರು. ನಂತರ ಪ್ರಹ್ಲಾದರನ್ನು ಕಾರ್ಪೊರೇಟ್ ಲೌಂಜ್ ಗೆ ಕರೆದುಕೊಂಡು ಹೋದರು. ಬಾಕಿ ಟರ್ಮಿನಲ್ ಗಳಲ್ಲಿ ಎಷ್ಟೇ ನೂಕು ನುಗಲು ಇದ್ದರೂ ಈ ಜಾಗದಲ್ಲಿ ಇರುವುದೇ ಮೂರು ಮತ್ತೊಂದು ಪ್ರಯಾಣಿಕರು. ಈ ಲೌಂಜ್ ನ ಪೂರ್ತಿ ನಿಚ್ಚಳ ಮೌನ. ಪ್ರಹ್ಲಾದರಿಗೆ ಈ ಮೌನ ಇಷ್ಟವಾಗುತ್ತದೆ.

ಇನ್ನು ಅರ್ಧ ಗಂಟೆಗೆ ಫ್ಲೈಟ್ ಹೊರಡಬೇಕು. ಸುಮ್ಮನೆ ಲ್ಯಾಪ್ಟಾಪ್ ಹಿಡಿದು ಪ್ರಹ್ಲಾದರು ಒಂದು ಈಜಿ ಚೇರ್ನಲ್ಲಿ ಕೂತರು. ಮುಂದೆ ಲ್ಯಾಪ್ಟಾಪ್ ಇದ್ದರೂ ಅವರ ಗಮನ ಇನ್ನೆಲ್ಲೋ ಹೋಯಿತು. ಗ್ರಹಗತಿ ಜ್ಯೋತಿಷ್ಯ ಯಾವುದನ್ನು ನಂಬದಿದ್ದರೂ ಪ್ರಹ್ಲಾದರಿಗೆ ಯಾಕೋ ಕಳೆದ ಒಂದು ವರ್ಷದಿಂದ ಅವರ ಟೈಮು ಚೆನ್ನಾಗಿಲ್ಲ ಎನಿಸಿತು. ಅವರ ಕಂಪನಿಯ ಮೇಲೆ ಹಾಕಿದ ಮೊನಾಪಲಿಯ ಕೇಸು ಈಗ ಸುಪ್ರೀಂ ಕೋರ್ಟ್ ತಲುಪಿತ್ತು. ಕಳೆದ ತಿಂಗಳು ತಮ್ಮ ಮನೆಯ ಮೇಲೆ ಇನ್ಕಮ್ ಟ್ಯಾಕ್ಸ್ ಅಧಿಕಾರಿಗಳು ಎರಡನೇ ಬಾರಿ ರೇಡ್ ಮಾಡಿದ್ದರು.

MBA ಓದಲು ಹಾರ್ವರ್ಡ್ ವಿಶ್ವವಿದ್ಯಾಲಯಕ್ಕೆ ಕಳಿಸಿದ್ದ ಮಗ ನೋಡಿದರೆ ಕ್ಲಾಸ್ಮೇಟ್ ಒಬ್ಬಳನ್ನು ಪ್ರೀತಿಸಿ ಅವಳನ್ನೇ ಮದುವೆಯಾಗುತ್ತೇನೆಂದು ಹಠ ಹಿಡಿದಿದ್ದ. ಕಾಲೇಜ್ ಲೆಕ್ಚರರ್ ಮಗಳನ್ನು ಈ ಭೂಪತಿ ಮದುವೆಯಾದರೆ ನಮ್ಮ ಕುಟುಂಬಕ್ಕೂ ಹುಡುಗಿ ಮನೆಯವರ ಮಧ್ಯಮ ವರ್ಗದ ವಾತಾವರಣಕ್ಕೂ ಸ್ವಲ್ಪವಾದರೂ ಹೊಂದಾಣಿಕೆ ಇರಲು ಸಾಧ್ಯವಾ? ಎಂದು ಯೋಚಿಸಿ ಯೋಚಿಸಿ ಪ್ರಹ್ಲಾದರ ಕೂದಲು ಇನ್ನೂ ಸ್ವಲ್ಪ ಬೆಳ್ಳಗಾಗಿತ್ತು. ಕೊನೆಪಕ್ಷ ಯೂರೋಪಿನ ವೆರಿಫೋನ್ ಜೊತೆಗಿನ ಒಪ್ಪಂದವಾದರೂ ಈ ದುರಾದೃಷ್ಟಕರ ಹಂತಕ್ಕೆ ಮುಕ್ತಿ ದೊರಕಿಸಬಹುದೇನೋ ಎಂದು ಪ್ರಹ್ಲಾದರು ಆಸೆ ಪಡುವುದಕ್ಕೂ, ಅವರ ಕಂಪನಿಯ ಪ್ರತಿಸ್ಪರ್ಧಿ ಅದಕ್ಕೆ ಕಲ್ಹಾಕುವುದಕ್ಕೂ ಸರಿ ಹೋಯಿತು. ಇದನ್ನೆಲ್ಲಾ ಚಿಂತಿಸಿ ಪ್ರಹ್ಲಾದರು ಒಮ್ಮೆ ನಿಟ್ಟುಸಿರು ಬಿಟ್ಟರು.

ಲ್ಯಾಪ್ಟಾಪ್ ಅನ್ನು ಮುಚ್ಚಿ ಸೂಟ್ ಧರಿಸುವುದಕ್ಕಾಗಿ ಶೌಚಾಲಯದ ಕಡೆ ನಡೆದರು. ವಿಶಾಲವಾದ ಶೌಚಾಲಯದಲ್ಲಿ ಸೂಟನ್ನು ಧರಿಸಿ ಕನ್ನಡಿಯಲ್ಲಿ ಒಮ್ಮೆ ಮುಖ ನೋಡಿಕೊಂಡರು. ಜೀವನದ ಪ್ರತಿ ಹಂತದಲ್ಲೂ ಗೆಲುವನ್ನು ಕಂಡಿದ್ದ ಅವರ ಐವತ್ತೈದು ವರ್ಷದ ಮುಖ ಈಗ ಯಾಕೋ ಸೋತಂತೆ ಕಾಣುತ್ತಿತ್ತು. ಕಣ್ಣಿನ ಕೆಳಗೆ ಮತ್ತು ಕತ್ತಲ್ಲಿ ಸುಕ್ಕುಗಳು ಕಾಣಿಸುತ್ತಿದ್ದವು. ತಲೆಯ ಬಿಳಿ ಕೂದಲಿಗೆ ಮುನ್ನೂರು ರೂಪಾಯಿಯ ಹೇರ್ಕಟ್ ಬೇಕಿತ್ತಾ ಎನಿಸಿತು. ಟೈ ಅನ್ನು ಒಮ್ಮೆ ಸರಿ ಮಾಡಿಕೊಂಡು ತಮ್ಮ ಪತ್ನಿ ಕಳಿಸಿದ್ದ ರೇಷ್ಮೆಯ ಕರವಸ್ತ್ರವನ್ನು ಸೂಟಿನ ಮುಂದಿನ ಜೇಬಲ್ಲಿ ಅಲಂಕಾರಕ್ಕಾಗಿ ಹಾಕಿಕೊಂಡರು. ಬ್ಯಾಗಿನಲ್ಲಿದ್ದ ಬಿಪಿ ಮಾತ್ರೆಯನ್ನು ನೀರಿನ ಜೊತೆ ನುಂಗಿಕೊಂಡು ಒಂದು ಬಾರಿ ದಿಟ್ಟಿಸಿ ಕನ್ನಡಿಯಲ್ಲಿ ಅವರ ಪ್ರತಿಬಿಂಬವನ್ನು ನೋಡಿಕೊಂಡರು.

ಮತ್ತೆ ಲೌಂಜಿಗೆ ಹಿಂತಿರುಗಿದ ಪ್ರಹ್ಲಾದರು, ಒಂದು ಸಣ್ಣ ಕುಟುಂಬ ಲೌಂಜಿನ ಇನ್ನೊಂದು ಕೊನೆಯಲ್ಲಿ ಬಂದು ಕೂತಿರುವುದನ್ನು ಗಮನಿಸಿದರು. ಗಂಡ, ಹೆಂಡತಿ, ಮತ್ತು ಮಗು - ಅವರ ಪಾಡಿಗೆ ಫ್ಲೈಟ್ ಗಾಗಿ ಕಾಯುತ್ತಾ ಕುಳಿತಿದ್ದರು. ಕುಟುಂಬವನ್ನು ಸಂಕ್ಷಿಪ್ತವಾಗಿ ಗಮನಿಸಿ ಪ್ರಹ್ಲಾದರು ತಮ್ಮ ಕಣ್ಣುಗಳನ್ನು ಮೊಬೈಲ್ ಹತ್ತಿರ ಸೆಳೆದರು. ಅವರು ಶೌಚಾಲಯಕ್ಕೆ ಹೋದಾಗ, ತಮ್ಮ ತೊಂಬತ್ತು ವರ್ಷ ವಯಸ್ಸಿನ ತಂದೆಯಿಂದ ಮಿಸ್ಡ್ ಕಾಲ್ ಬಂದಿತ್ತು. ಒಮ್ಮೆ ಸಮಯವನ್ನು ನೋಡಿದರು. ಫ್ಲೈಟ್ ಹತ್ತುವುದಕ್ಕೆ ಇನ್ನು ಇಪ್ಪತ್ತು ನಿಮಿಷ. ಲಂಡನ್ ನಲ್ಲಿ ಹೋಟೆಲ್ ಗೆ ಹೋದ ನಂತರ ಕರೆ ಮಾಡಿ, ಅಪ್ಪನ ಜೊತೆ ನಿಧಾನಕ್ಕೆ ಮಾತಾಡೋಣ ಎಂದುಕೊಂಡು ಸುಮ್ಮನಾದರು.

ಲ್ಯಾಪ್ಟಾಪ್ ಅಲ್ಲಿ ಕೆಲಸ ಮಾಡಬೇಕೆನಿಸಿದರೂ, ನೂರೆಂಟು ಯೋಚನೆಗಳು ಪ್ರಹ್ಲಾದರನ್ನು ಬಂದು ಆವರಿಸಿದವು. ಲಂಡನ್ ನ ಅವರ ಮೀಟಿಂಗ್ ಏನಾದರೂ ವಿಫಲವಾದರೆ, ಶೇರುದಾರರು ಕಂಪನಿ ಮೇಲಿಟ್ಟ ನಂಬಿಕೆ ಕುಸಿಯುತ್ತದೆ. ಜೊತೆಗೆ ಕಂಪನಿಯ ಶೇರಿನ ಮೌಲ್ಯವೂ ಕುಸಿಯುತ್ತದೆ. ಮುಂದಿನ ವಾರ ಕಂಪನಿ ಮೇಲಿನ ಮೊನಾಪಲಿ ಕೇಸಿನ ತೀರ್ಪಿದೆ. ಕೇಸಿನಲ್ಲೇನ್ನಾದರೂ ಸೋತರೆ, ಇಪ್ಪತ್ತು ವರ್ಷದಿಂದ ಕಷ್ಟ ಪಟ್ಟು ಬೆಳೆಸಿದ ತಮ್ಮ ಟೆಲಿಕಾಂ ಸಾಮ್ರಾಜ್ಯವನ್ನು ಉರುಳಿಸಲು, ಪ್ರತಿಸ್ಪರ್ಧಿಗಳಿಗೆ ಹೆಚ್ಚು ಸಮಯವೇನೂ ಬೇಕಾಗುವುದಿಲ್ಲ. ಅನಿದ್ರಾರೋಗಿಯಾದ ಪ್ರಹ್ಲಾದರಿಗೆ ಸ್ವಲ್ಪ ಮೈಗ್ರೇನ್ ಶುರುವಾಯಿತು. ರೀಡಿಂಗ್ ಗ್ಲಾಸ್ಸನ್ನು ತೆಗೆದು, ಹಣೆಯನ್ನು ಮಸಾಜ್ ಮಾಡುತ್ತಾ ಕಣ್ಣು ಮುಚ್ಚಿದ್ದರು...

ಹುಡುಗ ಆ ದುರ್ಬಲ ವ್ಯಕ್ತಿಯ ಹತ್ತಿರಕ್ಕೆ ಬಂದಿದ್ದ. ಅವರ ಉಸಿರಾಟ ಇನ್ನಷ್ಟು ನಿಧಾನವಾಗಿತ್ತು. ಕಪ್ಪು ಚೀಲದಿಂದ ಆವರಿಸಿದ ಅವರ ತಲೆ, ನರಳಿಕೆಯಿಂದ, ಅಲ್ಲಿ ಇಲ್ಲಿ ತೂಗಾಡುತ್ತಿತ್ತು. ಹುಡುಗ ಅವರಿಗೆ ಸಹಾಯ ಮಾಡಲು ಸ್ವಲ್ಪ ಮುಂದೆ ಹೋದನು. "ಆ", ಎಂದು ಅವರು ಕ್ಷೀಣವಾಗಿ ನೋವಿನಿಂದ ಕೂಗುತ್ತಾ ಕೇವಲ ಮೂಳೆಯಿಂದ ಕೂಡಿದ ತಮ್ಮ ಎಡಗೈಯನ್ನು ಹುಡುಗನ ಕಡೆ ತೋರಿದರು. ಅವನು ಅವರ ಕೈಯನ್ನು ಹಿಡಿಯಲು ಮುಂದೆ ಬಗ್ಗಿದನು...

ಪ್ರಹ್ಲಾದರಿಗೆ ಇದ್ದಕ್ಕಿದ್ದಂತೆ ಎಚ್ಚರವಾಯಿತು. ಮೈಗ್ರೇನ್ ನೋವು ಸ್ವಲ್ಪ ಜಾಸ್ತಿಯಾಗಿತ್ತು. ಕಳೆದ ಕೆಲವು ದಿನಗಳಿಂದ ಬೀಳುತ್ತಿದ್ದ ಈ ವಿಚಿತ್ರ ಕನಸಿನ ಮುಂದುವರಿಕೆಯಿಂದ ಪ್ರಹ್ಲಾದರಿಗೆ ಸ್ವಲ್ಪ ಗೊಂದಲವಾಯಿತು. ಸ್ವಲ್ಪ ಭಯವೂ ಆಯಿತು. ಆದರೆ ಆ ಮನುಷ್ಯನ ಕೈಯನ್ನು ಎಲ್ಲೋ ನೋಡಿದ ಹಾಗೆ... ಪ್ರಹ್ಲಾದರ ಚಿಂತನೆಯ ಪ್ರಕ್ರಿಯೆ ದಿಕ್ಕುತಪ್ಪಿತು. ಕೆಳಗೆ ಕಾಲನ್ನು ಯಾರೋ ಎಳೆದಂತಾಯಿತು. ಕಾಲಿನ ಹತ್ತಿರ ಕೆಳಗೆ ಬಗ್ಗಿ ನೋಡಿದರೆ ಏಳೆಂಟು ವರ್ಷದ ಪುಟ್ಟ ಹುಡುಗಿ ಪ್ರಹ್ಲಾದರ ಸೀಟಿನ ಕೆಳಗೆ ಮಲಗಿಕೊಂಡು, "ಎತ್ತಿಕೊ", ಎಂಬಂತೆ ಕೈಯನ್ನು ಮೇಲೆ ಚಾಚಿದ್ದಳು.

ಪ್ರಹ್ಲಾದರು ಹುಡುಗಿಯನ್ನು ಎತ್ತಿಕೊಂಡು ಲೌಂಜಿನ ಇನ್ನೊಂದು ಕೊನೆಯಲ್ಲಿ ಕೂತಿದ್ದ ಗಂಡ ಹೆಂಡತಿಯ ಕಡೆ ನೋಡಿದರು. ಇಬ್ಬರು ನಗುತ್ತಾ ಪ್ರಹ್ಲಾದರ ಕಡೆ ನೋಡುತ್ತಿದ್ದರು. ಪ್ರಹ್ಲಾದರು ಪ್ರತಿಯಾಗಿ ಮುಗುಳ್ನಕ್ಕರು. ನಂತರ ಹುಡುಗಿಯನ್ನು ಕೆಳಗಿಳಿಸುತ್ತಾ, "ಏನ್ ನಿನ್ ಹೆಸ್ರು?" ಎಂದು ಕೇಳಿದರು. "ಪ್ರೀತಿ ಅಂತ. ನಿಮ್ ಹೆಸ್ರೇನು ತಾತ?" ಎಂದಳು ಮುದ್ದುಮುದ್ದಾಗಿ ಹುಡುಗಿ. "ಏಯ್! ನಾ ನಿಂಗೆ ತಾತನ ತರ ಕಾಣಿಸ್ತಾಯಿದ್ದೀನಾ?" ಪ್ರಹ್ಲಾದರು ಹುಸಿಮುನಿಸಿನಿಂದ ಕೇಳಿದರು. ಇದ್ದನ್ನು ಕೇಳಿದ ಪ್ರೀತಿಗೆ ಎಷ್ಟು ನಗು ಬಂತೆಂದರೆ ಅವಳು ಉಸಿರಾಡುವುದಕ್ಕೆ ಸ್ವಲ್ಪ ಸಮಯ ತೆಗೆದುಕೊಂಡು, "ಹಲೋ ತಾತ!" ಎಂದು ಹೇಳುತ್ತಾ ಪ್ರಹ್ಲಾದರಿಗೆ ಟಾಟಾ ಮಾಡುತ್ತಾ ಹಿಂದೆ ಹಿಂದೆ ನಡೆಯಲು ಶುರು ಮಾಡಿದಳು. ಅವರು ಎದ್ದು ನಿಂತು ಅವಳನ್ನು ಸ್ವಲ್ಪ ದೂರ ಅಟ್ಟಿಸಿಕೊಂಡು ಹೋಗಿ, ಅವಳನ್ನು ಹಿಡಿದು ಮತ್ತೊಂದು ಚೇರಿನಲ್ಲಿ ಕೂತರು.

"ಉಫ್! ಏನ್ ಫಾಸ್ಟ್ ಆಗಿ ಓಡ್ತ್ಯಾ ನೀನು!"

"ಹೂಂ ಮತ್ತೆ! ನನ್ನ ಸ್ಕೂಲ್ ನ ರನ್ನಿಂಗ್ ರೇಸ್ ಅಲ್ಲಿ ನಾನೇ ಯಾವಾಗಲೂ ಫಸ್ಟ್ ಬರೋದು".

"ಮತ್ತೆ? ಈಗ ನನ್ ಕೈಯಲ್ಲಿ ಸಿಕ್ಕಾಕ್ಕೊಂಡ್ಯಲ್ಲಾ?" ಪ್ರಹ್ಲಾದರು ಛೇಡಿಸುವಂತೆ ಕೇಳಿದರು.

"ತಾತ ಅಲ್ವಾ. ಅದಕ್ಕೆ ಪಾಪ ಅಂತ ಸ್ವಲ್ಪ ಸ್ಲೋ ಆಗಿ ಓಡ್ದೆ".

"ಓಯ್! ಮತ್ತೆ ತಾತ ಅಂತ್ಯ?" ಎನ್ನುತ್ತಾ ಪ್ರಹ್ಲಾದರು ಅವಳಿಗೆ ಕಚುಗುಳಿ ಮಾಡಿದರು. ಇದರಿಂದ ಅವಳು ಕಿಲಿಕಿಲಿ ನಗುತ್ತಾ, "ಪ್ಲೀಸ್ ಉಪ್ಫಿ ಉಪ್ಫಿ" ಎಂದು ಚೀರಿದಳು. ಪ್ರಹ್ಲಾದರು ವಾಪಸ್ಸು ನೆಟ್ಟಗೆ ಕುಳಿತು ಸೂಟ್ ಸರಿ ಮಾಡಿಕೊಂಡರು.

ಪ್ರೀತಿ ಗೊಂದಲದ ಮುಖ ಮಾಡಿಕೊಂಡು, "ನಿಲ್ಲಿಸ್ ಬಿಟ್ರಿ ?", ಎಂದು ಕೇಳಿದಳು.

"ಉಪ್ಫಿ ಅಂದ್ಯಲಾ. ಅದಕ್ಕೆ ಪಾಪ ಅಂತ ಬಿಟ್ಟೆ". ಇದ್ದನ್ನು ಕೇಳಿದ ಪ್ರೀತಿ ಮತ್ತೆ ಕಿಲಿಕಿಲಿ ನಗುತ್ತಾ ತನ್ನ ಸೀಟಿನಲ್ಲಿದ್ದ ಒಂದು ಕರವಸ್ತ್ರವನ್ನು ಎತ್ತಿ ಹಿಡಿದು ಕುತೂಹಲದಿಂದ ನೋಡಿದಳು.

"ಏಯ್. ಎಷ್ಟ್ ಚೆನಾಗಿದೆ ಕರ್ಚೀಫು! ಸಾಫ್ಟ್ ಸಾಫ್ಟ್" ಎಂದು ಅದನ್ನು ತನ್ನ ಕೆನ್ನೆಯ ಹತ್ತಿರ ಹಿಡಿದಳು. ಪ್ರಹ್ಲಾದರು ಅವಳ ಕಡೆ ತಿರುಗಿದರು. ತಮ್ಮ ರೇಷ್ಮೆಯ ಕರವಸ್ತ್ರ, ಅವರು ಪ್ರೀತಿಗೆ ಕಚುಗುಳಿ ಮಾಡುತ್ತಿರುವಾಗ ಜಾರಿ ಅವಳ ಚೇರಿನಲ್ಲಿ ಬಿದ್ದಿತ್ತು.

ಅವಳು ಪ್ರಹ್ಲಾದರನ್ನು ಗಮನಿಸುತ್ತಾ ಕೇಳಿದಳು, "ನಿಮ್ದಾ ಇದು?". "ಹೌದು. ಇಷ್ಟ ಆಯ್ತಾ?". "ಹೂಂ. ತುಂಬಾ ಇಷ್ಟಾಯ್ತು. ಸಾಫ್ಟ್ ಸಾಫ್ಟ್" ಎಂದು ಹೇಳಿ ಮತ್ತೊಮ್ಮೆ ಕರವಸ್ತ್ರವನ್ನು ತನ್ನ ಕೆನ್ನೆಯ ಹತ್ತಿರ ಹಿಡಿದಳು. ನಂತರ ಸ್ವಲ್ಪ ಹೊತ್ತು ಮುಂದೆ ನೋಡುತ್ತಾ, ದೀರ್ಘ ಆಲೋಚನೆ ಮಾಡುತ್ತಿರುವಂತೆ ಸುಮ್ಮನೆ ಕುಳಿತಳು. ಪ್ರಹ್ಲಾದರು ಏನೂ ಮಾತಾಡಲಿಲ್ಲ.

"ತಾತ ಒಂದ್ ವಿಷ್ಯ ಕೇಳ್ಲಾ?", ಎಂದಳು ಪ್ರೀತಿ. "ಕೇಳು". "ಈ ಕರ್ಚೀಫ್ ನ ನಿಮ್ಮಿಂದ ಖರೀದಿಸ್ಲಾ?".

ಪ್ರಹ್ಲಾದರು ಸ್ವಲ್ಪ ಆಶ್ಚರ್ಯದಿಂದ, "ಖರೀದಿಸ್ತ್ಯ?" ಎಂದು ಹೇಳಿ, ಯೋಚನೆ ಮಾಡುವಂತೆ ನಟಿಸಿದರು. ನಂತರ, "ಆಯ್ತು, ಆದ್ರೆ ನಂಗೆ ಏನು ಕೊಡ್ತಿ?" ಎಂದರು. ಇದನ್ನು ಕೇಳಿ ಪ್ರೀತಿಯ ಮುಖ ಅರಳಿತು. "ಒಂದ್ ನಿಮ್ಷ" ಎಂದು ಕರವಸ್ತ್ರವನ್ನು ವಾಪಸ್ಸು ಪ್ರಹ್ಲಾದರಿಗೆ ಕೊಟ್ಟು, ಅವಳ ಅಪ್ಪ ಅಮ್ಮ ಕೂತಿದ್ದ ಜಾಗಕ್ಕೆ ಓಡಿ ಹೋದಳು. ಪ್ರಹ್ಲಾದರು ಕುತೂಹಲದಿಂದ ನೋಡುತ್ತಿದ್ದಂತೆಯೇ ಪ್ರೀತಿ ಅವಳ ತಂದೆಯಿಂದ ಒಂದು ಚೀಲವನ್ನು ತೆಗೆದುಕೊಂಡು ವಾಪಸ್ಸು ಪ್ರಹ್ಲಾದರ ಹತ್ತಿರ ಓಡಿ ಬಂದಳು. ಅವಳ ಭುಜದ ಮೇಲೆ ಒಂದು ಪುಟ್ಟ ಚೀಲ ನೇತಾಡುತ್ತಿತ್ತು. ಬಟ್ಟೆಯ ಆ ಚೀಲದ ಮೇಲೆ ಚಿಣಿಮಿಣಿಯಿಂದ ಮಾಡಿದ ನವಿಲಿನ ಚಿತ್ರ ಮಿಂಚುತ್ತಿತ್ತು. ಪ್ರೀತಿ ಚೀಲದಲ್ಲಿ ಏನನ್ನೋ ಗುಪ್ತವಾಗಿ ಹುಡುಕಿ ತನ್ನ ಅಂಗೈಯಲ್ಲಿ ಅದನ್ನು ಹಾಕಿಕೊಂಡಳು. ನಂತರ ಮುಷ್ಟಿರೂಪದಲ್ಲಿದ್ದ ತನ್ನ ಹಸ್ತವನ್ನು ಪ್ರಹ್ಲಾದರ ಮುಂದೆ ಚಾಚಿ, ನಿಧಾನವಾಗಿ ಬೆರಳುಗಳನ್ನು ತೆಗೆದಳು. ಅವಳ ಪುಟ್ಟ ಅಂಗೈಯಲ್ಲಿ ಐದು ರೂಪಾಯಿನ ಒಂದು ನಾಣ್ಯ ಇತ್ತು. ಪ್ರಹ್ಲಾದರು ಆ ನಾಣ್ಯವನ್ನೇ ಸ್ವಲ್ಪ ಹೊತ್ತು ನೋಡುತ್ತಾ ಕುಳಿತರು.

ಪ್ರೀತಿ ಗೊಂದಲದಿಂದ, "ಏನಾಯ್ತು ತಾತ? ಆ ಕರ್ಚೀಫ್ ಗೆ ಇದು ಸಾಕಾಗಲ್ವ?" ಎಂದು ಕೇಳಿದಳು. ಒಂದೆರಡು ಕ್ಷಣ ಮೈಮರೆತ ಪ್ರಹ್ಲಾದರು ಎಚ್ಚೆತ್ತುಕೊಂಡು, "ಹಾ? ಸಾಕಾಗತಮ್ಮ. ನಾನೇ ನಿಂಗೆ ಚೇಂಜ್ ಕೊಡ್ಬೇಕು" ಎಂದು ಅವರ ವಾಲೆಟ್ ಅನ್ನು ತೆಗೆದರು. ಎರಡು ರೂಪಾಯಿನ ಒಂದು ನಾಣ್ಯವನ್ನು ಹುಡುಕಿ ಅದನ್ನು ಪ್ರೀತಿಯ ಕೈಗೆ ಕೊಟ್ಟರು. "ಅಯ್ಯೋ, ನಂದ್ ದುಡ್ ಮರತೇ ಬಿಟ್ರಲ್ಲಾ" ಎಂದು ಹೇಳಿ ಪ್ರೀತಿ ಪ್ರಹ್ಲಾದರ ಸೂಟಿನ ಜೇಬಿನಲ್ಲಿ ಐದು ರೂಪಾಯಿಯ ನಾಣ್ಯವನ್ನು ಹಾಕೇಬಿಟ್ಟಳು. ಪ್ರಹ್ಲಾದರು ತಮ್ಮ ಕೈಯಲ್ಲಿದ್ದ ರೇಷ್ಮೆಯ ಕರವಸ್ತ್ರವನ್ನು ಪ್ರೀತಿಗೆ ಕೊಟ್ಟರು. ಅವಳು ಅದನ್ನು ತೆಗೆದುಕೊಂಡು ಒಮ್ಮೆ ಪ್ರಹ್ಲಾದರ ಕಡೆ ನೋಡಿದಳು.

"Thank you ತಾತ" ಎಂದು ಹೇಳಿ ಕರವಸ್ತ್ರವನ್ನು ತನ್ನ ನವಿಲು ಚೀಲದಲ್ಲಿ ಜೋಪಾನವಾಗಿ ಹಾಕಿಕೊಂಡು, ಅವಳ ತಂದೆ ತಾಯಿ ಕೂತಿದ್ದ ಜಾಗಕ್ಕೆ ನಗು ನಗುತ್ತಾ ಓಡಿ ಹೋದಳು. ಪ್ರಹ್ಲಾದರ ಕಣ್ಣುಗಳು ಯಾಕೋ ಇದ್ದಕ್ಕಿದ್ದಂತೆ ಒದ್ದೆಯಾದವು.

***

ಆ ಮಧ್ಯಾಹ್ನ ತುಂಬಾ ಸುಂದರವಾಗಿತ್ತು. ಸೂರ್ಯ ಪೂರ್ಣ ಹುಮ್ಮಸ್ಸಿನಿಂದ ಹೊಳೆಯುತ್ತಿದ್ದ. ಅಪ್ಪ ಮಗ ಇಬ್ಬರೂ ಗಾಂಧಿ ಬಜಾರಿನ ಒಂದು ಬೇಕರಿಯನ್ನು ಪ್ರವೇಶಿಸಿದರು. ಅಪ್ಪ ಮನೆಗೆ ಒಂದಿಷ್ಟು ಸಿಹಿತಿಂಡಿಗಳನ್ನು ಕೊಳ್ಳಲು ಕೌಂಟರಿನ ಒಂದು ಕೊನೆಗೆ ಹೋದರು. ಅವರ ಎಂಟು ವರ್ಷದ ಮಗ, ತಂದೆಯ ಕೈಯನ್ನು ಬಿಡಿಸಿಕೊಂಡು, ಕೌಂಟರಿನ ಇನ್ನೊಂದು ಕೊನೆಯತ್ತ ನಡೆದ. ಹುಡುಗ ಕೈಗಳನ್ನು ಹಿಂದೆ ಕಟ್ಟಿಕೊಂಡು ಕೌಂಟರ್ ಕೆಳಗೆ ಗಾಜಿನ ಪೆಟ್ಟಿಗೆಗಳಲ್ಲಿದ್ದ ಸಿಹಿ ತಿಂಡಿಗಳನ್ನು, ಶಾಲೆಯ ಹೆಡ್ ಮಾಸ್ಟರ್ ವಿದ್ಯಾರ್ಥಿಗಳನ್ನು ಪರಿಶೀಲಿಸುವಂತೆ, ಒಮ್ಮೆ ಪರಿಶೀಲಿಸಿದ. ಕೌಂಟರ್ ಕೊನೆಯಲ್ಲಿ ಕೂತಿದ್ದ ಬೇಕರಿ ಮಾಲೀಕರಾದ ತಾತ, ಶಾಲೆಯ ಯುನಿಫಾರ್ಮ್ ಮತ್ತು ಚೀಲ ಧರಿಸಿ, ನೀಟಾಗಿ ಅಮ್ಮನಿಂದ ಕೂದಲು ಬಾಚಿಸಿಕೊಂಡ ಪುಟ್ಟ ಹೆಡ್ ಮಾಸ್ಟರ್ ಅನ್ನು ಕುತೂಹಲದಿಂದ ಗಮನಿಸಿದರು.

ಹುಡುಗ ಒಂದು ಆಯ್ಕೆಯನ್ನು ಮಾಡಿ, ತಾತನ ಹತ್ತಿರ ಬಂದು, "ತಾತ. ಎರಡು ಜಾಮೂನ್" ಎಂದನು. ತಾತ ಎರಡು ಜಾಮೂನ್ ಗಳನ್ನು ಒಂದು ಪುಟ್ಟ ಡಬ್ಬಿಯಲ್ಲಿ ಹಾಕಿ ಹುಡುಗನಿಗೆ ಕೊಟ್ಟರು. ಡಬ್ಬಿಯನ್ನು ಹುಡುಗ ತನ್ನ ಶಾಲೆಯ ಚೀಲದಲ್ಲಿ ಜೋಪಾನವಾಗಿ ಹಾಕಿಕೊಂಡನು. ನಂತರ ಸ್ವಲ್ಪ ಗಂಭೀರವಾಗಿ, "ಎಷ್ಟು ತಾತ?" ಎಂದು ಕೇಳಿದ. ತಾತ ನಗುತ್ತಾ, "ಒಂದು ರೂಪಾಯ್" ಎಂದರು. ಹುಡುಗ, "ಒಂದ್ ನಿಮ್ಷ" ಎಂಬಂತೆ ಸಂಜ್ಞೆ ಮಾಡಿ, ತನ್ನ ಯುನಿಫಾರ್ಮ್ ಚಡ್ಡಿಯ ಚಿಕ್ಕ ಜೇಬಿನಿಂದ ಎರಡು ನಾಣ್ಯಗಳನ್ನು ತೆಗೆದು, ಕಾಲ್ಬೆರಳುಗಳ ಮೇಲೆ ನಿಂತು, ತಾತನ ಕೈಗೆ ಕೊಟ್ಟನು. ತಾತ ಬಾಡಿಹೋದ ಆ ಒಂದು ಪೈಸೆಯ ನಾಣ್ಯಗಳನ್ನು ಒಂದೆರಡು ಕ್ಷಣ ದಿಟ್ಟಿಸಿ ನೋಡಿದರು.

ಹುಡುಗ ಸ್ವಲ್ಪ ಆತಂಕದಿಂದ ಕೇಳಿದ, "ಏನಾಯ್ತು ತಾತ?" ಏನೋ ಯೋಚಿಸುತ್ತಿದ್ದ ತಾತ ಎಚ್ಚೆತ್ತುಕೊಂಡು, "ಹಾ? ಏನಿಲ್ಲ. ಚೇಂಜ್ ಕೊಡ್ಬೇಕು ಈಗ" ಎಂದರು. ಹುಡುಗ ಇದನ್ನು ಕೇಳಿ ಸಮಾದಾನದಿಂದ, "ಓ" ಎಂದು ಉದ್ಗರಿಸಿ ಚೇಂಜಿಗಾಗಿ ಕಾಯುವಂತೆ ಸುತ್ತಾ ಮುತ್ತಾ ನೋಡಿಕೊಂಡು ನಿಂತನು. ತಾತ ಮರದ ಡ್ರಾಯರ್ ನಿಂದ ಒಂದು ನಾಣ್ಯವನ್ನು ತೆಗೆದು ಹುಡುಗನ ಪುಟ್ಟ ಹಸ್ತದಲ್ಲಿ ಇಟ್ಟರು. ಹುಡುಗ ಆ ನಾಣ್ಯವನ್ನು ಜೋಪಾನವಾಗಿ ತನ್ನ ಜೇಬಿನಲ್ಲಿಟ್ಟುಕೊಂಡನು. ನಂತರ ತಾತನ ಕಡೆ ನೋಡಿ, ನಗುತ್ತಾ ಟಾಟಾ ಮಾಡಿದ. ತಾತ ವಾಪಸ್ಸು ಟಾಟಾ ಮಾಡಿದರು. ಕೌಂಟರಿನ ಇನ್ನೊಂದು ಕೊನ್ನೆಯಿಂದ ಅಪ್ಪ ಕರೆದರು, "ಏನ್ ಮಾಡ್ತಿದ್ಯೋ ಅಲ್ಲಿ? ಎಲ್ಲಾ ತೊಗೊಂಡಾಯ್ತು. ಬಾ ಈಗ...". ಹುಡುಗ ಅಪ್ಪನ ಹತ್ತಿರ ಓಡಿ ಹೋಗಿ, ಅವರ ಕೈಯನ್ನು ಹಿಡಿದುಕೊಂಡನು.

***

"Sir.... Excuse me, Sir".

"Hmmm....Yes", ಪ್ರಹ್ಲಾದರು ಮುಂದೆ ನಿಂತಿದ್ದ ಫ್ಲೈಟ್ ಅಟೆಂಡೆಂಟ್ ಹುಡುಗಿಯ ಕಡೆ ನೋಡಿದರು.

"Your flight is boarding now", ಎಂದಳು ಹುಡುಗಿ.

"Ok. Thanks". ಪ್ರಹ್ಲಾದರು ತಮ್ಮ ಬ್ಯಾಗ್ ಮತ್ತು ಲ್ಯಾಪ್ಟಾಪ್ ಅನ್ನು ತೆಗೆದುಕೊಂಡು ಎದ್ದು ನಿಂತರು. ಒಮ್ಮೆ ಲೌಂಜಿನ ಸುತ್ತಾ ನೋಡಿದರು. ಮತ್ತ್ಯಾರೂ ಇರಲಿಲ್ಲ. ಪ್ರಹ್ಲಾದರು ಸ್ವಲ್ಪ ಆಶ್ಚರ್ಯದಿಂದ ಏನನ್ನೋ ಕೇಳುವಂತೆ ಫ್ಲೈಟ್ ಅಟೆಂಡೆಂಟ್ ಕಡೆ ನೋಡಿದರು. ಆದರೆ ಯಾವ ಪದವೂ ಹೊರ ಬರಲಿಲ್ಲ. ಮೌನವಾಗಿ ಹೊರಗೆ ಹೋಗುವ ದ್ವಾರದ ಕಡೆ ನಡೆದರು. ನಡೆಯುತ್ತಾ ತಮ್ಮ ಫೋನ್ ಅನ್ನು ತೆಗೆದರು. ಅವರ ಮ್ಯಾನೇಜರ್ ನಿಂದ ಒಂದು ಮೆಸೇಜ್ ಬಂದಿತ್ತು. ಮೆಸೇಜ್ ಅನ್ನು ತೆಗೆಯದೆ, ಕಾಂಟಾಕ್ಟ್ ಲಿಸ್ಟ್ ಗೆ ಹೋದರು. ಅಲ್ಲಿ "ಅಪ್ಪ" ಎನ್ನುವ ಹೆಸರನ್ನು ಒತ್ತಿದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Why hero of the story is getting nasty dream every time when he closes his eyes? Why nothing is working for him? Did he find solution to his problems? A Kannada short story by Madhava Venkatesh.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more