ತೇಜಸ್ವಿನಿ ಹೆಗಡೆ ಸಣ್ಣಕಥೆ : ಜೀವತಂತು (ಭಾಗ 4)
(ಕಥೆ ಮುಂದುವರಿದಿದೆ...)
"ನೋಡು, ನೀನು ಹೀಗೆ ಉಪವಾಸ ಕೂತ್ರೆ ಮಗುವನ್ನ ನೋಡ್ಕೊಳೋರು ಯಾರು? ಅದು ಬೇಗ ಹುಷಾರಾಗತ್ತೆ. ಭಯ ಬೇಡ. ಈಗಷ್ಟೇ ಡಾಕ್ಟ್ರು ಅಂದ್ರಲ್ಲಾ ಮಗು ಔಟ್ ಆಫ್ ಡೇಂಜರ್ ಅಂತ... ನಾಳೆ ವಾರ್ಡ್‌ಗೆ ಶಿಫ್ಟ್ ಮಾಡ್ತಾರಂತೆ. ಅದ್ಕೂ ಮೊದ್ಲು ನೀ ಸ್ವಲ್ಪ ಸುಧಾರಿಸ್ಕೋ ಶುಭಾ..." ಸುಮತಿ ಮೇಡಮ್ ಇನ್ನಿಲ್ಲದಂತೆ ಅವಳಿಗೆ ತಿಂಡಿ ತಿನ್ನಿಸಲು ಪ್ರಯತ್ನಿಸುತ್ತಿದ್ದರು. ಐ.ಸಿ.ಯೂ. ವಾರ್ಡ್‌ನ ಪಕ್ಕದಲ್ಲಿದ್ದ ರೆಸ್ಟ್ ರೂಂನ ಬೆಂಚಿನ ಮೇಲೆ ಕುಳಿತು, ಗೋಡೆಗೆ ತಲೆಯಾನಿಸಿಕೊಂಡು, ನಿಸ್ತೇಜ ಕಂಗಳಲ್ಲಿ ಎಲ್ಲೋ ದಿಟ್ಟಿಸುತ್ತಿದ್ದ ಶುಭಾಳನ್ನು ಕಂಡು ಮಾನಸಳಿಗೆ ಹೊಟ್ಟೆ ಕಿವುಚಿದಂತಾಯಿತು. "ಶುಭಾ..." ಆರ್ದ್ರತೆಯಿಂದ ಕರೆದ ಮಾನಸಳ ಧ್ವನಿಗೆ ಅತ್ತ ತಿರುಗಿದವಳೇ, ಸಮೀಪಿಸಿದ ಅವಳನ್ನು ಗಟ್ಟಿಯಾಗಿ ಅಪ್ಪಿಕೊಂಡುಬಿಟ್ಟಳು.
"ಹೇಯ್! ಬಿ ಬ್ರೇವ್ ಕಣೆ... ಎಲ್ಲಾ ಸರಿಯಾಗತ್ತೆ... ನಾವೆಲ್ಲಾ ಇದ್ದೀವಿ... ಮಗೂ ಹುಷಾರಾಗ್ತಿದೆಯಂತಲ್ಲಾ... ಮತ್ಯಾಕೆ ಭಯ ಹೇಳು?" ಕಣ್ತುಂಬಿಕೊಂಡೇ ಅವಳನ್ನು ಸಂತೈಸಿದಳು ಮಾನಸ. "ಸುಮತಿ ಮೇಡಮ್... ಇವ್ಳ ಅಣ್ಣ, ಅತ್ಗೆ ಎಲ್ಲಿದ್ದಾರೆ? ಸೌರಭ ಎಲ್ಲಿ?" ಮಾನಸಳ ಮಾತಿಗೆ ಅಸಹಾಯಕ ನೋಟ ಬೀರಿದರು ಸುಮತಿ. "ಶುಭಾ ಸೌರಭ್ ಹೊರಗೆ ಹೋಗಿದ್ದಾರಾ?" ಪಕ್ಕದಲ್ಲಿ ಕುಳ್ಳಿರಿಸಿಕೊಂಡು ಗೆಳತಿಯ ಬೆನ್ನು ಸವರುತ್ತಾ ನಯವಾಗಿ ಪ್ರಶ್ನಿಸಿದಳು ಮಾನಸ.

"ಯಾರೂ ಬರಲ್ಲ ಮಾನು... ಅಣ್ಣ, ಅತ್ಗೆ, ಸೌರಭ್ ಎಲ್ಲಾ ಬಿಟ್ಹೋದ್ರು... ಈಗ ನಾನು ಅಕ್ಷರಶಃ ಒಂಟಿ, ಅನಾಥೆ. ತಕ್ಕ ಶಾಸ್ತಿಯಾಯ್ತು ಬಿಡು ಈ ಪಾತಕಿಗೆ, ಕೊಲೆಗಡುಕಿಗೆ... ಪಿಶಾಚಿ ಕಣೆ ನಾನು..." ಗೋಡೆಗೆ ತಲೆ ಚಚ್ಚಿಕೊಂಡು ಅಳಹತ್ತಿದವಳ ಮಾತಿಗೆ ಬೆಪ್ಪಾದಳು ಮಾನಸ. ಅಷ್ಟು ಹೊತ್ತೂ ಮೌನದೊಳಡಗಿದ್ದ ಅವಳ ಆಕ್ರೋಶ, ಅಸಹಾಯಕತೆ, ತಿರಸ್ಕಾರ, ಈಗ ಸ್ಫೋಟಿಸತೊಡಗಿತ್ತು.
"ಅಯ್ಯೋ, ತಲೆಗೆ ಪೆಟ್ಟಾಗತ್ತೆ ಶುಭಾ... ಏನಾಯ್ತೇ? ಯಾಕೆ ಎಲ್ರೂ ಬಿಟ್ಹೋದ್ರು? ನೀನ್ಯಾಕೆ ನಿನ್ನೇ ಬೈಕೋತಿದ್ದೀಯಾ? ಪ್ಲೀಸ್, ಸರಿಯಾಗಿ ಬಿಡಿಸಿ ಹೇಳಮ್ಮಾ... ನಾನಿರ್ತೀನಿ ನಿನ್ಜೊತೆ ಆಯ್ತಾ?" ಅವಳನ್ನ ಬಳಸಿ ಕೆಂಪಾಗಿದ್ದ ಹಣೆಯನ್ನು ಸವರತೊಡಗಿದಳು. "ಹೇಯ್ ಮಾನು... ನಿಜ್ವಾಗ್ಲೂ ನೀನು ನನ್ನ ಬಿಟ್ಹೋಗಲ್ವಾ?" ದುಃಖ ಉಮ್ಮಳಿಸಿಬರುತ್ತಿತ್ತು, ಬಿಕ್ಕಳಿಕೆಯ ನಡುವೆಯೇ ತಡೆತಡೆದು ಬರುತ್ತಿದ್ದ ಅವಳನ್ನು ಸುಧಾರಿಸಲು ನೀರನ್ನು ಕುಡಿಯಲು ತಂದಳು. ಅದನ್ನೂ ತಿರಸ್ಕರಿಸಿದ ಶುಭಾ ಕೈಗಳಿಂದ ಕಣ್ಣೀರು ಒರೆಸಿಕೊಂಡಿದ್ದೇ, ಒಳಗಿನ ಲಾವಾರಸವನ್ನು ಹೊರಹಾಕತೊಡಗಿದಳು.
"ಸೌರಭ್‌ನ ನಂಬಿ ನಾ ಮೋಸೆ ಹೋದೆ ಕಣೆ... ಅವನ ಹಠಮಾರಿತನ, ಅಹಂ, ಡಾಮಿನೇಟೀಂಗ್ ವ್ಯಕ್ತಿತ್ವ ತಡವಾಗಿ ಗೊತ್ತಾಯ್ತು. ಅರಿವಾಗುವಷ್ಟರಲ್ಲಿ ಕಾಲ ಮಿಂಚಿತ್ತು! ಇದಕ್ಕೆ ಕಾರಣ ನನ್ನ ಕುರುಡು ಮೋಹ... ನಾನವನನ್ನು ಬಿಟ್ಟು ಬರಲೂ ಆಗದಿದ್ದಷ್ಟು ಪ್ರೇಮಪಾಶದಲ್ಲಿ ಬಂಧಿಯಾಗಿಬಿಟ್ಟಿದ್ದೆ. ಈ ಕಣ್ಕಟ್ಟು ಅಂತಾರೆ ನೊಡು... ಅದೇ ನಂಗೂ ಆಗಿದ್ದು. ಅಂವ ಇಲ್ದೇ ಬದುಕೋದೇ ಸಾಧ್ಯವಿಲ್ಲ ಅನ್ನೋ ಸ್ಥಿತಿಗೆ ತಲುಪಿಬಿಟ್ಟಿದ್ದೆ. ಆದ್ರೂ, ಪ್ರೆಗ್ನೆಂಟ್ ಅಂತ ಗೊತ್ತಾಗೋವರೆಗೂ ಹೇಂಗೋ ಸಹನೀಯವಾಗಿತ್ತು. ಆದರೆ ತಾಯಿಯಾಗೋದು ಗೊತ್ತಾದ್ಮೇಲಿಂದ ನರಕವಾಗ್ಹೋಯ್ತು ನನ್ನ ಬದ್ಕು.












Click it and Unblock the Notifications