• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ದಯಾಮರಣ (ಭಾಗ 2)

By * ತ್ರಿವೇಣಿ
|

(ಕಥೆ ಮುಂದುವರಿದಿದೆ...)

ಇದೇ ರೀತಿ ಎರಡು ವರ್ಷಗಳು ಮಂಜುನಾಥಯ್ಯನವರನ್ನು ಮನೆಯಲ್ಲೇ ಇರಿಸಿ ಚಿಕಿತ್ಸೆ ನೀಡುತ್ತಿದ್ದರು. ಈಗ ಎರಡು ವಾರಗಳ ಹಿಂದೆ ಅವರ ಗಂಟಲಿನಲ್ಲಿ ಏನೋ ತೊಂದರೆಯಾಗಿ ನೀರು, ಆಹಾರ ಏನೂ ಇಳಿಯದಂತಾದಾಗ ಪುನಃ ಅವರನ್ನು ಸುದರ್ಶನರ ನರ್ಸಿಂಗ್‌ ಹೋಂಗೆ ತಂದು ಸೇರಿಸಿದ್ದರು. ಅವರ ಅನ್ನನಾಳದಲ್ಲಿದ್ದ ಅಡೆತಡೆಯನ್ನು ಶಸ್ತ್ರಚಿಕಿತ್ಸೆಯ ಮೂಲಕ ನಿವಾರಿಸಿದ ಮೇಲೆ ಈಗೆರಡು ದಿನದಿಂದ ದ್ರವಾಹಾರವನ್ನು ನಳಿಕೆಯ ಸಹಾಯ ಇಲ್ಲದೆ ನೀಡಲು ಸಾಧ್ಯವಾಗಿತ್ತು. ಇನ್ನು ನಾಲ್ಕುದಿನಗಳ ನಂತರ ಮೊದಲಿನಂತೆ ಗಟ್ಟಿ ಆಹಾರವನ್ನು ಸೇವಿಸಬಹುದೆಂದೂ, ಅಮೇಲೆ ಮನೆಗೆ ಕಳಿಸುವುದಾಗಿಯೂ ಸುದರ್ಶನ್‌ ಹೇಳಿದ ಮೇಲೆಯೇ ಪ್ರಾರಂಭವಾದದ್ದು ಮಂಜುನಾಥಯ್ಯನವರ ವಿಚಿತ್ರ ಕೋರಿಕೆ.

ಎರಡು ವರ್ಷಗಳಿಂದ ಸತತವಾಗಿ ನೋವನುಭವಿಸುತ್ತಿದ್ದರೂ ಮಂಜುನಾಥಯ್ಯನವರ ವಿಚಾರಶಕ್ತಿ , ಬುದ್ಧಿಶಕ್ತಿಗಳೇನೂ ಕುಂಠಿತವಾಗಿರಲಿಲ್ಲ. ಆ ನೋವಿನಿಂದ ಮೈಮೇಲಿನ ಪ್ರಜ್ಞೆ ತಪ್ಪಿದ್ದರಾದರೂ ಅವರು ಎಷ್ಟೋ ಸುಖಿಯಾಗಿರುತ್ತಿದ್ದರೇನೋ. ಬೆಂಬಿಡದ ಘೋರ ನೋವಿನಿಂದಾಗಿ ಅವರಿಗೆ ನಿದ್ರೆ ಕೂಡಾ ಬರುತ್ತಿರಲಿಲ್ಲ. ಎಷ್ಟೇ ನಿದ್ರಾಕಾರಕಗಳನ್ನು ಕೊಟ್ಟರೂ ಅದರಿಂದ ಫಲವಿರಲಿಲ್ಲ.

ಡಾಕ್ಟರು ನಾಲ್ಕು ದಿನಗಳ ನಂತರ ಡಿಸ್‌ಚಾರ್ಜ್‌ ಮಾಡುತ್ತೇನೆಂದು ಹೇಳಿದಾಗಿನಿಂದ ಅವರ ಚಿಂತೆ ಹೆಚ್ಚಾಗಿತ್ತು. ಮನೆಗೆ ಹೋಗಿ ನಾನು ಏನು ಮಾಡುವುದಿದೆ? ಈ ನೋವಿನ ಬೆಟ್ಟವನ್ನು ಹೊತ್ತು ನಾನು ಅಲ್ಲಿ ಏಕಾಂಗಿಯಾಗಿ ಇರುವುದಾದರೂ ಹೇಗೆ? ಅದರಿಂದ ಲಾಭವಾದರೂ ಏನು? ಎಂದು ಅವರ ಮನಸ್ಸು ರೋದಿಸುತ್ತಿತ್ತು.

ಮನೆಯಲ್ಲಿ ಮಂಜುನಾಥಯ್ಯನವರ ಮೇಲೆ ಯಾರಿಗೂ ತಾತ್ಸಾರ ಮನೋಭಾವವಿರದಿದ್ದರೂ, ಎಲ್ಲರಿಗೂ ಇವರಲ್ಲಿ ಪ್ರೀತಿ, ಕನಿಕರಗಳಿದ್ದರೂ ಎಷ್ಟೆಂದು ಅವರು ಇವರ ಮುಂದೆಯೇ ಕುಳಿತಿರಲು ಸಾಧ್ಯ? ಇವರ ನೋವನ್ನು ಇವರ ಹೊರತಾಗಿ ಮತ್ತೊಬ್ಬರು ಹಂಚಿಕೊಳ್ಳಲಾರರಲ್ಲ! ಚಂದ್ರಮತಿಯೂ ಬಹುಕಾಲದ ರಜೆಯ ನಂತರ ಮತ್ತೆ ತಮ್ಮ ಉದ್ಯೋಗವನ್ನು ಮುಂದುವರೆಸಿದ್ದರು. ಅವರಿಗೇನೂ ಅದರಿಂದ ಬರುವ ಹಣದ ಅಗತ್ಯ ಇರದಿದ್ದರೂ ಮನಸ್ಸಿನ ಕೊರಗನ್ನು ಮರೆಯಲು, ಮನೆಯಿಂದ ಸ್ವಲ್ಪ ಕಾಲವಾದರೂ ಹೊರಗಿರಲು ಅವರಿಗೆ ಆ ಉದ್ಯೋಗ ಒಂದು ಆಸರೆಯಾಗಿತ್ತು.

ಎಲ್ಲರೂ ಅವರವರ ಕೆಲಸ ಕಾರ್ಯಗಳಲ್ಲಿ ನಿರತರಾಗಿದ್ದಾಗ ಮಂಜುನಾಥಯ್ಯ ತಮ್ಮ ವಿಶಾಲವಾದ ಕೋಣೆಯಲ್ಲಿ ಜೀವ ಹಿಂಡುವ ಈ ನೋವಿನ ಸಂಗಾತಿಯಾಡನೆ ನವೆದು ಹೋಗುತ್ತಿದ್ದರು. ಮತ್ತೆ ಮನೆಗೆ ಹೋಗಿ ಆ ಕೋಣೆಯಲ್ಲಿ ಕೊಳೆಯಬೇಕಾದ ಕಲ್ಪನೆಯೇ ಅವರಿಗೆ ನಡುಕ ತರಿಸುತ್ತಿತ್ತು.

ಸುದರ್ಶನ್‌ ಆದಿನ ಬಂದಿದ್ದಾಗ ಆರ್ತರಾಗಿ ಹೇಳಿದ್ದರು ಮಂಜುನಾಥಯ್ಯ-

'ಡಾಕ್ಟರೇ, ನನ್ನ ಸ್ಥಿತಿ ನೀವೇ ನೋಡ್ತಾ ಇದೀರಾ. ನಾನು ಈ ರೀತಿ ಬದುಕಿರೋದನ್ನು ಬದುಕು ಅಂತೀರಾ? ನಾನು ಈ ಭಯಂಕರ ಯಾತನೆಯನ್ನು ಸಹಿಸಿಕೊಳ್ಳುತ್ತಲೇ ನೂರುವರ್ಷ ಇದ್ದೇಬಿಡ್ತೀನೇನೋ ಅಂತ ನನಗೆ ಭಯವಾಗ್ತಿದೆ. ನನ್ನನ್ನು ಹೇಗಾದರೂ ಮಾಡಿ ಸಾಯಿಸಿಬಿಡಿ ಡಾಕ್ಟರ್‌. ಅದಕ್ಕೆ ಸಂಬಂಧಿಸಿದ ಕಾಗದಪತ್ರಗಳಲ್ಲಿ ನಾನೇ ಸಹಿ ಹಾಕಿ ಕೊಟ್ಟು, ನಿಮಗೆ ಯಾವ ತೊಂದರೆಯೂ ಆಗದ ಹಾಗೆ ವ್ಯವಸ್ಥೆ ಮಾಡ್ತೀನಿ." ತಮ್ಮ ಎರಡು ಕೈಗಳನ್ನೂ ಹಿಡಿದು ದೀನರಾಗಿ ಯಾಚಿಸುತ್ತಿರುವ ಮಂಜುನಾಥಯ್ಯನವರನ್ನು ಕಂಡು ಸುದರ್ಶನರ ಕಣ್ಣೂ ಹನಿಗೂಡಿತ್ತು.

ಮಂಜುನಾಥಯ್ಯನವರು ಹೇಳಿದ್ದು ಸರಿಯಾಗಿಯೇ ಇತ್ತು. ಅವರು ಇಷ್ಟು ದಾರುಣವಾದ ಬಾಧೆ ಅನುಭವಿಸುತ್ತಿದ್ದರೂ ಅವರ ಜೀವಕ್ಕೆ ಯಾವುದೇ ರೀತಿಯಲ್ಲಿಯೂ ಧಕ್ಕೆಯಾದಗಿರಲಿಲ್ಲ. ಅವರ ಹೃದಯ, ಶ್ವಾಸಕೋಶಗಳು, ಮೂತ್ರಪಿಂಡಗಳು, ಜೀರ್ಣಾಂಗ ವ್ಯವಸ್ಥೆ ಯಾವುದೇ ಆರೋಗ್ಯವಂತ ವ್ಯಕ್ತಿಯಲ್ಲಿರುವಂತೆಯೇ ಅತ್ಯಂತ ಸಮರ್ಪಕವಾಗಿ ಕಾರ್ಯ ನಿರ್ವಹಿಸುತ್ತಿದ್ದವು. ಸದ್ಯಕ್ಕೇನೂ ಅವರು ಸಾಯುವಂತಿರಲಿಲ್ಲ. ಮಂಜುನಾಥಯ್ಯನವರು ಭಯಪಟ್ಟಂತೆ ಅವರು ಹಾಸಿಗೆಯ ಮೇಲೆ ಹೀಗೆಯೇ ನವೆಯುತ್ತಾ ಹತ್ತಾರು ವರ್ಷ ಬದುಕುವ ಸಾಧ್ಯತೆಯೇ ಹೆಚ್ಚಾಗಿತ್ತು.

ಆದರೆ ವೈದ್ಯರಾಗಿ ಇದನ್ನೆಲ್ಲಾ ಸುಮ್ಮನೆ ಅಸಹಾಯಕರಾಗಿ ನೋಡುವ ಬದಲು ತಾವಾದರೂ ಏನು ಮಾಡುವ ಹಾಗಿದೆ? 'ಮರ್ಸಿ ಕಿಲ್ಲಿಂಗ್‌"ಗೆ ವಿದೇಶಗಳಲ್ಲಿ ಅನುಮತಿ ಇರುವ ಹಾಗೆ ನಮ್ಮಲ್ಲೂ ಇರಬಾರದಿತ್ತೇ? ಎಂದು ಮರುಗುವುದರ ಹೊರತಾಗಿ.

ಔಟ್‌ ಪೇಷಂಟ್‌ ವಿಭಾಗದಲ್ಲಿದ್ದ ರೋಗಿಗಳನ್ನೆಲ್ಲ ಪರೀಕ್ಷಿಸಿ ಕಳಿಸಿದ ಮೇಲೆ ವಿಶ್ರಾಂತಿಗೆಂಬಂತೆ ಕಣ್ಣುಗಳನ್ನು ಮುಚ್ಚಿಕೊಂಡು ಮೇಜಿನ ಮೇಲೆ ತಲೆಯೂರಿದ್ದರು ಸುದರ್ಶನ್‌. ಅಷ್ಟರಲ್ಲಿ ಅಲ್ಲಿಗೆ ಬಂದ ಸಿಸ್ಟರ್‌ ಭಾರತಿ-

'ಡಾಕ್ಟರ್‌, ಎಂಟನೆ ನಂಬರ್‌ ವಾರ್ಡಿನಲ್ಲಿರುವ ಮಂಜುನಾಥಯ್ಯನವರ ಪತ್ನಿ ಚಂದ್ರಮತಿ ನಿಮ್ಮೊಡನೆ ಮಾತನಾಡಬೇಕಂತೆ. ನೀವು ರಿಲ್ಯಾಕ್ಸ್‌ ಮಾಡುವುದಾದರೆ ಅವರಿಗೆ ಆಮೇಲೆ ನೋಡಲು ಹೇಳುತ್ತೇನೆ" ಎಂದಳು.

'ಬೇಡ ಈಗಲೇ ಬರಲು ಹೇಳು" ಎಂದು ಮುಖವನ್ನು ಕರವಸ್ತ್ರದಿಂದ ಒತ್ತಿಕೊಂಡು ಸರಿಯಾಗಿ ಕುಳಿತರು.

ದಯಾಮರಣ : ಕಥೆಯ ಮುಂದಿನ ಭಾಗ »

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more