ನ್ಯಾನೊ ಕಥೆಗಳು:ಗೋಪಕುಮಾರ್ ವಿ. ಮೈಸೂರು
ಇದು ವಿಜ್ಞಾನವಲ್ಲ, ಬದುಕು ನನಗೆ ನಿತ್ಯ ಕೊಡುತ್ತಿರುವ ಸುಜ್ಞಾನ!
ಗೋಪಕುಮಾರ್ ವಿ. ಮೈಸೂರು
ಉಡುಗೊರೆ
ಬೋರ್ಡಿ೦ಗ್ ಸ್ಕೂಲಿನಲ್ಲಿ ಓದುತ್ತಿರುವ ಮಗನ ಹುಟ್ಟುಹಬ್ಬದಂದು ಅವನಿಗಾಗಿ ವಿಶೇಷವಾಗಿ ತಯಾರಿಸಿದ ಕೇಕನ್ನು ಡ್ರೈವರ್ ಬಳಿ ಕೊಟ್ಟು ಕಳುಹಿಸಿದ ತಂದೆ. ಕೇಕಿನ ಒಂದು ತುಂಡನ್ನೂ ರುಚಿಸಿ ನೋಡದೆ ಸಕ್ಕರೆ ಕಡಿಮೆಯಿದೆಯೆಂದು ವಾಪಸ್ ಕಳುಹಿಸಿದ ಮಗ. ತಕ್ಷಣ ಆತನ ತಂದೆ ಬೇಕರಿಯವನ ಫೋನ್ ನಂಬರಿಗಾಗಿ ಹುಡುಕಾಡಿದ.
ಬೆಳದಿಂಗಳು ಮತ್ತು ಮಳೆ
ಬಡತನದ ದಿನಗಳಲ್ಲಿ ಒಂಟಿಕೋಣೆಯ ಮನೆಯ ಮುಂದೆ ಕುಳಿತು, ಬೆಳದಿಂಗಳಿನಲ್ಲಿ ಊಟ ಮಾಡುತ್ತಿರಲು, ಹೂವಿನಂತಹ ಮಳೆ ಬಂದು ಊಟ ಮಳೆಯಲ್ಲಿ ಮಿಂದದ್ದು, ಜೊತೆಯಾಗಿ ಕುಳಿತು ಅದೇ ಊಟವನ್ನು ಸವಿದದ್ದು! ಎಂತಹ ದಿನಗಳವು! ಇಂದು ಪರಿಸ್ಥಿತಿ ಬದಲಾಗಿದೆ. ಶ್ರೀಮಂತಿಕೆ ನೆರಳಿನಂತೆ ಜೊತೆಯಲ್ಲಿದೆ. ಸಮಯದ ವಿಷಯದಲ್ಲಿ ಆತನೀಗ ಬಲು ಜಿಪುಣ. ಒಮ್ಮೆ ಆತ ಕೇಳಿದ. ಈ ಮನೆಯಲ್ಲಿ ನಿನಗೇನಿದೆ ಕೊರತೆ? ಮೌನಿಯಾಗಿದ್ದ ಅವಳಂದು ಉತ್ತರಿಸಿದಳು, ಬೆಳದಿಂಗಳು ಮತ್ತು ಮಳೆ
ಕೌತುಕ
ತನ್ನೊಂದಿಗೆ ಸ್ಕೂಟರಿನಲ್ಲಿ ಹೇಗೆ ಕುಳಿತುಕೊಳ್ಳಬೇಕೆಂದು ತಂದೆ ಮಗನಿಗೆ ಹೇಳಿಕೊಡುತ್ತಿದ್ದಾಗ ಆ ಪುಟ್ಟ ಕಣ್ಣುಗಳಲ್ಲಿ ಕೌತುಕ. ಕೆಲವು ವರ್ಷಗಳ ನಂತರ ಅಪ್ಪನಿಗೆ ವಿಮಾನದಲ್ಲಿ, ಸೀಟ್ ಬೆಲ್ಟ್ ಹಾಕುವುದು ಹೇಗೆಂದು ಮಗ ಹೇಳಿಕೊಡುವಾಗ ತಂದೆಯ ಕಣ್ಣುಗಳಲ್ಲೂ ಸಹ ಅದೇ ಕೌತುಕತೆ.
ತೀರ್ಪು
ಅಪರಾಧಿಯಾಗಿದ್ದೂ ನಿರಪರಾಧಿಯೆಂದು ಕೋರ್ಟ್ ಘೋಷಿಸಿದ ನಂತರ ವಿಜಯೋತ್ಸವ ಆಚರಿಸಿ ಮನೆಗೆ ಮರಳುವ ವೇಳೆ ಅಪಘಾತದಲ್ಲಿ ಆತ ಸಾವನ್ನಪ್ಪಿದ. ಜನರು ಹೇಳಿದರು. ಇತ್ತೀಚೆಗೆ ದೇವರ ಕೋರ್ಟಿನಲ್ಲಿ ಕಂಪ್ಯೂಟರ್ ಬಂದಿದೆ ಅನ್ಸುತ್ತೆ.
ಆ ದಿನಗಳು
ಇಂದವನು ನನ್ನ ಸೌಂದರ್ಯಕ್ಕೆ ಕಾಂಪ್ಲಿಮೆಂಟ್ ನೀಡಿದ ಎಂದು ಗರ್ವದಿಂದ ಮಗಳು ಹೇಳಿದಾಗ, ಅಮ್ಮನಿಗೆ ಕಾಲೇಜಿನ ಅವಳಿ ಅಶೋಕಮರದ ಬಳಿ ತನಗಾಗಿ ದಿನವೂ ಪುಟ್ಟ ನಗುವೊಂದನ್ನು ಸನ್ಮಾನಿಸಲು ನಿಂತಿರುತ್ತಿದ್ದ ಕೋಲು ಮುಖದವನು ಸುಮ್ಮನೆ ನೆನಪಾದ.
ಒಳ್ಳೆಯ ಕಾಲ
ನಮಗೂ ಒಳ್ಳೆಯ ಕಾಲ ಬಂದೇ ಬರುತ್ತೆ ಎಂದು ಹೇಳುತ್ತಿದ್ದರು ದಂಪತಿಗಳು. ಬಾಗಿಲು ಬಡಿದ ಶಬ್ದವಾಯಿತು. ಯಾರು ಬಾಗಿಲು ತೆರೆಯಬೇಕು? ಇಬ್ಬರಲ್ಲೂ ಜಗಳ ಪ್ರಾರಂಭವಾಯಿತು. ಜಗಳ ಮುಗಿಯುವಷ್ಟರಲ್ಲಿ ಬಾಗಿಲು ಬಡಿಯುವ ಶಬ್ದ ನಿಶ್ಚಲವಾಯಿತು.
ಹುಡುಕಾಟ
ತುಂಬಾ ದಿನಗಳ ಹುಡುಕಾಟದ ನಂತರ ಅವನಿಗದು ದೊರಕಿತು. ಹುಡುಕಾಟದ ನಂತರ ಅವನಿಗದು ದೊರಕಿತು. ಹುಡುಕಾಟದ ರುಚಿ ಹತ್ತಿದ್ದ ಆತನಿಗೆ ಮರುಕ್ಷಣದಲ್ಲೇ ಮತ್ತೊಂದು ಯೋಚನೆ ಹೊಳೆಯಿತು. ಇನ್ನೂ ಹುಡುಕಿದರೆ ಇದಕ್ಕಿಂತ ಒಳ್ಳೆಯದು ದೊರೆಯಬಹುದೇನೋ.
ಮರೆವು
ಮೊಬೈಲ್ ಫೋನ್ ಒಂದು ಪುಟ್ಟ ಪ್ರಪಂಚ. ಇದರಿಂದ ವಿಶ್ವದ ಯಾವ ಮೂಲೆಗಾದರೂ ಸಂದೇಶ ಕಳುಹಿಸಬಹುದು, ಯಾರೊಂದಿಗೆ ಬೇಕಾದರೂ ಮಾತನಾಡಬಹುದು ಎಂದಿದ್ದ ಅವನು ಅದೇ ಫೋನಿನಿಂದ ತನ್ನ ವೃದ್ಢ ತಂದೆ ತಾಯಿಯರೊಂದಿಗೆ ಮಾತನಾಡಬಹುದೆಂಬುದನ್ನು ಯಾಕೋ ಮರೆತಿದ್ದ.
ಉಪದೇಶ
ವ್ಯಾಪಾರ ಮಾಡಬೇಕೆಂದಿದ್ದೇನೆ, ಉಪದೇಶ ನೀಡಿ .ಸ್ವಾಮೀಜಿ ನಿನ್ನ ಕೈನಲ್ಲಿರುವ ಮೊಬೈಲನ್ನು ಆ ಗೋಡೆಗೆ ರಭಸವಾಗಿ ಎಸೆ.ಮೊಬೈಲ್ ನೂರು ಚೂರಾಗಿ ಕೆಳಗೆ ಬಿತ್ತು. ಆತನ ಕಣ್ಣಲ್ಲಿ ಆಶ್ಚರ್ಯ ಮತ್ತು ದುಃಖ. ಸ್ವಾಮೀಜಿ ಹೇಳಿದರು. ಇದೇ ವ್ಯಾಪಾರದ ಮೊದಲ ಮಂತ್ರ, ಕಣ್ಣುಮುಚ್ಚಿಕೊಂಡು ಯಾರನ್ನೂ ನಂಬಬೇಡ.
ನಿಗೂಢ
ತಿಂಗಳಿಗೆ ಲಕ್ಷ ದುಡಿಯುವ ಅಪ್ಪ, ತಾತನ ಮನೆಗೆ ಹೋಗುವಾಗ ಮಾತ್ರ ದುಬಾರಿ ಕಾರನ್ನು ಬಿಟ್ಟು ರೈಲಿನಲ್ಲಿ ಹೋಗುವುದು ಎಂದೂ ನಿಗೂಢವಾಗಿ ಉಳಿದಿತ್ತು ಮಗನಿಗೆ. ತಾತನ ಮನೆಯಿಂದ ಮರಳಿ ಬರುವಾಗ ಅವರು ರೈಲು ಯಾತ್ರೆಯ ಖರ್ಚಿಗೆಂದು ಪ್ರೀತಿಯಿಂದ ಕೊಡುತ್ತಿದ್ದ ನೂರು ರುಪಾಯಿಗೆಂದು ಅಪ್ಪ ಹೇಳಿದಾಗ ಮಗನಿಗೆ ನಂಬಲಾಗಲಿಲ್ಲ.
ವಿದಾಯ
ವಿದಾಯ ಹೇಳುವ ದಿನ ಅವನ ಆಟೋಗ್ರಾಫ್ ಪಡೆಯಲು ಹೋದಾಗ ಆತ ಎಂದಿನ ನಗುಮೊಗದಿಂದ ನೀಡಿದ್ದ. ಆಕೆ ತನ್ನ ಆಟೋಗ್ರಾಫ್ ಆತನ ಬಳಿಗೆ ಚಾಚಿದಾಗ ಒಮ್ಮೆ ಮನತುಂಬಿ ನಕ್ಕುಬಿಡು, ಕಣ್ಣುತುಂಬಿಸಿಕೊಂಡು ಬಿಡುತ್ತೇನೆ, ಅದಕ್ಕಿಂತ ದೊಡ್ಡ ಆಟೋಗ್ರಾಫ್ ಬೇರೊಂದಿಲ್ಲ ಅಂದಿದ್ದ. ಇಬ್ಬರೂ ನಕ್ಕಿದ್ದರು. ನಗುವಿನ ಕೊನೆಯಲ್ಲಿ ಇಬ್ಬರ ಕಣ್ಣೂ ನೆನೆದದ್ದು ಒಬ್ಬರಿಗೊಬ್ಬರು ತೋರ್ಪಡಿಸಿರಲಿಲ್ಲ.
ಅವಳ ಮದುವೆಯ ದಿನದಂದು ಆತ ಒಮ್ಮೆಲೆ ಪ್ರತ್ಯಕ್ಷನಾದ. ಅವಳ ಕಣ್ಣಲ್ಲಿ ಮಿಂಚು ಮತ್ತು ಮಳೆ. ಎಲ್ಲಿದ್ದೆ ಇಲ್ಲೀ ತನಕ ಮನಸ್ಸು ಕೇಳಬೇಕೆನಿಸಿತು. ಬನ್ನಿ, ಯಾವಾಗ ಬಂದಿರಿ? ಊಟ ಮಾಡಿಕೊಂಡೇ ಹೋಗಬೇಕು ಅಂದೂ ಸಹ ಮನಸ್ಸಿನಲ್ಲಿದ್ದುದು ಬಾಯಿಗೆ ಬರಲಿಲ್ಲ.
ಮನಸ್ಸು
ಕಣ್ಣುಕಾಣದ ಮುದುಕಿಯನ್ನು ರಸ್ತೆ ದಾಟಿಸಿ, ಬಸ್ ಹತ್ತಿಸಿ ಕಳುಹಿಸಿದಕ್ಕೆ ಹದಿನೈದು ನಿಮಿಷ ಕೆಲಸಕ್ಕೆ ತಡ. ಬಾಸ್‌ನ ಕೋಣೆಯಿಂದ ಹೊರಬರುವಾಗ ಅವರಾಡಿದ ಮಾತು ಮನಸ್ಸಿನಲ್ಲಿಯೇ ಮರುಧ್ವನಿಸಿತು. ಯಾರ ಜೊತೆ ಸುತ್ತುತ್ತಿದ್ದಿರಿ ಇಷ್ಟೊತ್ತು? ಪಾಪ ಕಣ್ಣು ಕಾಣದವರು ಮನಸ್ಸು ಉತ್ತರಿಸಿತು.
ಸಾವು
ನನ್ನ ಪ್ರೀತಿಗೆ ಸಾವೇ ಇಲ್ಲವೆಂದು ಹೇಳುತ್ತಿದ್ದವನು, ಆ ಪ್ರೀತಿ ನಷ್ಟವಾದಾಗ ಅದೇ ಸಾವಿಗೆ ಶರಣಾದನು.
ನಾಳೆ
ನಾಳೆಯೇ ಇಲ್ಲವೆಂದು ಬದುಕುತ್ತಿದ್ದವನು ಮತ್ತು ನಾಳೆಯ ಬಗ್ಗೆಯೇ ಯೋಚಿಸುತ್ತಾ ಬದುಕುತ್ತದ್ದವನು, ಇಬ್ಬರೂ ಸೇರಿ ಒಂದು ದಿನ ಪ್ರಯಾಣಕ್ಕೆ ಹೊರಟರು. ಪ್ರಯಾಣ ಅಂತ್ಯಗೊಂಡದ್ದು ಅಪಘಾತದಲ್ಲಿ. ಜನರು ಹೇಳಿದರು, ಅಯ್ಯೊ, ಇವರು ಇಂದೇ ಪ್ರಯಾಣಕ್ಕೆ ಹೊರಡಬೇಕಿತ್ತೇ? ನಾಳೆ ಹೊರಟಿದ್ದರೆ ಈ ಗತಿ ಬರುತ್ತಿರಲಿಲ್ಲ.
ರುಚಿ
ಒಲವಿನ ವಸಂತಕಾಲದಲ್ಲಿ ಅವಳೊಂದಿಗೆ ಪಾರ್ಕಿನಲ್ಲಿ ಕುಳಿತು ಮಾತನಾಡುವಾಗ, ಸುಮ್ಮನೆ ಬಾಯಿಗಿಡುತ್ತಿದ್ದ ಹುಲ್ಲಿನ ರುಚಿಯೇ ರುಚಿ! ಮದುವೆಯ ನಂತರ ಅವಳ ಅಡಿಗೆಯ ರುಚಿ ನೋಡಿದವನೇ ಹೇಳಿದ, ಇದಕ್ಕಿಂತ ಪಾರ್ಕಿನ ಹುಲ್ಲೇ ಎಷ್ಟೋ ವಾಸಿ.












Click it and Unblock the Notifications