ಪ್ರಾಣಿಗಳೆ ಗುಣದಲಿ ಮೇಲು, ಮಾನವನದಕಿಂತ ಕೀಳು!


ಮಂಗನಿಂದ ಮಾನವ ಎನ್ನುವುದು ವಿಕಾಸದ ಮಾತು. ಆದರೆ, ಮಂಗನ ಕೃತಜ್ಞತೆ ಮನುಷ್ಯನಿಗೆ ಬಂದಿದೆಯಾ?

  • ಎಚ್.ಆರ್.ಚಂದ್ರವದನರಾವ್
Animal proposes, man disposesಸಿದ್ಧರಾಮ ಒಬ್ಬ ಯುವಕ. ಅವನೊಬ್ಬ ಒಳ್ಳೆಯ ಶಿಕಾರಿ. ಕಾಡೆಮ್ಮೆ,ಕಾಡುಹಂದಿಗಳಲ್ಲದೆ ಹಳ್ಳಿಗೆ ನುಗ್ಗಿದ್ದ ಒಂದು ಹುಲಿಯನ್ನೂ ಸಿದ್ಧರಾಮ ಕೊಂದಿದ್ದ. ಹಳ್ಳಿಯವರಿಗೆ ಅವನನ್ನು ಕಂಡರೆ ಹೆಮ್ಮೆ.

ಕೆಲವು ವರ್ಷಗಳು ಕಳೆದವು. ಈಗ ಅವನಲ್ಲಿ ಬೇಟೆಯಾಡಲು ಬೇಕಾದ ಶಕ್ತಿ ಸಾಮರ್ಥ್ಯವಿಲ್ಲ, ಉತ್ಸಾಹವೂ ಇಲ್ಲ. ಪಕ್ಕದ ಕಾಡಿನ ಹುಲಿಯೊಂದು ಮೇಯಲು ಹೋಗಿದ್ದ ಒಂದು ಹಸುವನ್ನು ಎಳೆದುಕೊಂಡು ಹೋದುದನ್ನು ದನ ಮೇಯಿಸುವವನು ಹೇಳಿದ. ಇದಾದ ನಂತರ ಅದು ದೊಡ್ಡಿಯಲ್ಲಿದ್ದ ಎರಡು ಕುರಿಗಳನ್ನು, ಒಂದು ಎಮ್ಮೆಯ ಕರುವನ್ನೂ ಹೊತ್ತುಕೊಂಡು ಹೋಯಿತು.

ಹಳ್ಳಿಯವರು ಸಿದ್ಧರಾಮನ ಬಳಿ ಬಂದರು. ‘ಸಿದ್ಧರಾಮ, ನೀನು ಒಳ್ಳೆಯ ಶಿಕಾರಿ. ನೀನು ಕೊಂದಿರುವ ಕಾಡು ಮೃಗಗಳಿಗೆ ಲೆಕ್ಕವಿಲ್ಲ. ನೀನು ತೊಂದರೆ ಕೊಡುತ್ತಿರುವ ಹುಲಿಯನ್ನು ಕೊಲ್ಲಬೇಕು, ನಮ್ಮ ಜಾನುವಾರುಗಳನ್ನು ಉಳಿಸಬೇಕು’ ಎಂದು ಕೇಳಿಕೊಂಡರು. ಸಿದ್ಧರಾಮ ಹಿರಿಯರ ಕೋರಿಕೆಗೆ ಒಪ್ಪಲೇಬೇಕಾಯಿತು.

ಸಿದ್ಧರಾಮ ಕಾಡಿನ ಮಧ್ಯದಲ್ಲಿ ಒಂದು ಮೇಕೆ ಮರಿಯನ್ನು ಕಟ್ಟಲು ಹೇಳಿದ. ರಾತ್ರಿ ಅದನ್ನು ತಿನ್ನಲು ಬರುವ ಹುಲಿಯನ್ನು ಕೊಲ್ಲುವ ಹಂಚಿಕೆ ಅವನದು. ಮೇಕೆ ಅರಚುತ್ತಿತ್ತು. ಸಿದ್ಧರಾಮ ಮರದ ಮೇಲೆ ಕುಳಿತುಕೊಂಡು ಮೇಕೆಯನ್ನು ತಿನ್ನಲು ಬರುವ ಹುಲಿಯನ್ನು ಹೊಡೆಯಬೇಕೆಂದುಕೊಂಡ. ಆದರೆ, ಹುಲಿ ಇದ್ದಕ್ಕಿದ್ದಂತೆ ಪ್ರತ್ಯಕ್ಷವಾಯಿತು. ಅವನು ಹುಲಿಯನ್ನು ನೋಡಿದ.

ಕೋವಿ ಹಿಡಿದಿದ್ದ ಅವನನ್ನು ಹುಲಿ ನೋಡಿತು. ಸ್ವಾಭಾವಿಕವಾಗಿ ಅದಕ್ಕೆ ಅನುಮಾನ ಬಂತು.

ಹುಲಿ ಸಿದ್ಧರಾಮನ ಕಡೆ ಓಡುತ್ತಾ ಬಂತು. ಕೋವಿ ಜಾರಿ ಹೋಯಿತು. ಸಿದ್ಧರಾಮ ಓಡುತ್ತಾ ಓಡುತ್ತಾ ಹತ್ತಿರದಲ್ಲಿದ್ದ ಎತ್ತರವಾದ ಮರವನ್ನು ಏರಿದ. ಮರ ಹತ್ತಲಾರದೆ ಹುಲಿ ಅವನು ಇಳಿದು ಬರುವವರೆಗೂ ಅಲ್ಲಿಯೇ ಕಾಯಲು ನಿರ್ಧರಿಸಿತು.

ಮರದ ಬುಡದಲ್ಲಿ ಕುಳಿತು ಮೇಲೆ ನೋಡುತ್ತಿತ್ತು. ಹುಲಿಗೆ ಮರದ ಮೇಲೆ ಒಂದು ಕಪಿ ಕಾಣಿಸಿತು.

ಹುಲಿ ‘ತಮ್ಮಾ, ನಿನ್ನ ಮರದ ಮೇಲೆ ಒಬ್ಬ ಮನುಷ್ಯ ಹತ್ತಿ ಕುಳಿತಿದ್ದಾನೆ. ಕಂಡೆಯಾ’ ಎಂದಿತು.

‘ಹೌದು. ಅವನನ್ನು ನೋಡಿದೆ.’ ಎಂದಿತು ಮಂಗ.

‘ಮರ ನಿನ್ನ ಮನೆಯಲ್ಲವೇ? ನಿನ್ನ ಮನೆಗೆ ನುಗ್ಗುವುದಕ್ಕೆ ಅವನಿಗೇಕೆ ಅವಕಾಶ ಕೊಟ್ಟೆ. ಅವನನ್ನು ಕೆಳಗೆ ದಬ್ಬು.’

‘ಇಲ್ಲ ಅವನು ನನ್ನ ಅತಿಥಿ’

‘ನೋಡು, ನಾನು ಮಾಂಸಾಹಾರಿ ಇರಬಹುದು. ಆದರೆ ನಾನೂ ಕೂಡ ನಿನ್ನ ಹಾಗೆ ನಾಲ್ಕು ಕಾಲಿನ ಪ್ರಾಣಿ. ನಮ್ಮಿಬ್ಬರ ಸಂಬಂಧ ಹೆಚ್ಚು. ಎರಡು ಕಾಲಿನ ಕುಹಕ ಪ್ರಾಣಿಯ ಮೇಲೇಕೆ ನಿನಗೆ ಪ್ರೀತಿ. ಅವನನ್ನು ಮರದಿಂದ ದಬ್ಬು. ಅವನು ಬಿದ್ದೊಡನೆ ಅವನನ್ನು ನಾನು ಕೊಂದು ತಿನ್ನುತ್ತೇನೆ.’

‘ಇಲ್ಲ. ಮನೆಗೆ ಬಂದವರನ್ನು ಹೊರಗೆ ನೂಕಿ ಶತ್ರುವಿನ ಬಾಯಿಗೆ ಒಪ್ಪಿಸಲಾರೆ.’

ಹುಲಿ ಏನು ಹೇಳಿದರೂ ಕಪಿ ಮನುಷ್ಯನನ್ನು ಬಿಟ್ಟುಕೊಡಲು ಒಪ್ಪಲಿಲ್ಲ. ರಾತ್ರಿ ಸಿದ್ಧರಾಮನಿಗೆ ನಿದ್ದೆ. ಅವನು ನಿದ್ದೆಯಲ್ಲಿ ಕೆಳಗೆ ಬೀಳಬಾರದೆಂದು ಕಪಿ ಅವನನ್ನು ಬಿಗಿಯಾಗಿ ತಬ್ಬಿಕೊಂಡಿತ್ತು.

ಸೂರ್ಯೋದಯವಾಯಿತು. ಸಿದ್ಧರಾಮ ನಿದ್ದೆ ಮಾಡಿ ಲವಲವಿಕೆಯಿಂದ ಎದ್ದ. ಈಗ ಕಪಿಗೆ ನಿದ್ದೆ.

ಹುಲಿ ಈಗ ಸಿದ್ಧರಾಮನೊಡನೆ ‘ಅಣ್ಣಯ್ಯ, ನನಗೆ ಹಸಿವು. ನಿನ್ನನ್ನು ತಿನ್ನೋಣ ಎಂದುಕೊಂಡಿದ್ದೆ. ನೀನು ಮರ ಏರಿದೆ. ನಿನ್ನನ್ನು ಮರದಿಂದ ತಳ್ಳು ಎಂದರೂ ಕಪಿ ತಳ್ಳಲಿಲ್ಲ. ನನಗೆ ತಿನ್ನುವುದಕ್ಕೆ ಏನಾದರೂ ಬೇಕು. ನರಮಾಂಸವೇ ಬೇಕು ಎಂದು ನನ್ನ ಹಠವೇನೂ ಇಲ್ಲ. ಮಂಗನ ಮಾಂಸವಾದರೂ ಆದೀತು. ಹೇಗೂ ಕಪಿ ನಿದ್ದೆ ಮಾಡುತ್ತಿದೆ. ಅದನ್ನು ಕೆಳ ದಬ್ಬು’ ಎಂದು ವಿನಂತಿಸಿತು.

‘ಪಾಪ, ಹುಲಿಗೆ ಹಸಿವಾಗಿದೆ. ಅದಕ್ಕೆ ಆಹಾರ ಒದಗಿಸಬೇಕು’ ಎನ್ನುತ್ತಾ ಸಿದ್ಧರಾಮ ಕಪಿಯನ್ನು ಕೆಳಗೆ ನೂಕಿದ. ಕೆಳಗೆ ಬಿದ್ದ ಕಪಿಯನ್ನು ಹುಲಿ ಗಬಕ್ಕನೆ ಹಿಡಿದು ಕೊಂದಿತು.

ಮಂಗನಿಂದ ಮಾನವ ಎಂದು ಓದಿದ್ದೇವೆ. ಆದರೆ ಮಂಗನಿಗಿರುವ ಕೃತಜ್ಞತೆ ಮಾನವರಲ್ಲಿ ಇರುವುದಿಲ್ಲವಲ್ಲ ; ಇದಕ್ಕೇನು ಹೇಳಬೇಕು?

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+