ಕಸ ಬಾಚೋ ಕೃಷ್ಣನ ಕಷ್ಟ ಸುಖ!
ನಂಗೆ ಅವನ ಮುಂದೆ ಮುಖ ತಗ್ಗಿಸೋ ಹಾಗಾಯ್ತು. ಥೂ ಎಂತ ಕಂತ್ರಿ ಜನಗಳಪ್ಪ, ದೊಡ್ಡದಾಗಿ ನನ್ನೆದ್ರಿಗೆ ಆಯ್ತು, ಆಯ್ತು ಕೊಡೋಣ ಅಂತ ಹೇಳಿ, ಒಳಗೇ ಬತ್ತಿ ಹೊಸ್ದಿದಾರೆ, ದೊಡ್ಡ ದೊಡ್ಡ ಮನೇಲಿರೋ ತೀರಾ ಸಣ್ಣ ಜನಗಳು. ಇನ್ನು ಇವರ ಮನೆ ಬಾಗಿಲಿಗೆ ಹೋಗಬಾರ್ದು ಅನ್ನಿಸ್ತು. ಮುಂದೆ..
- ಸುವರ್ಣ ಮೂರ್ತಿ, ಮೈಸೂರು
ಕಸ ಒಯ್ಯುವ ಕೃಷ್ಣನ ಧ್ವನಿ ಕೇಳಿತು. ಸದ್ಯ, ಇವತ್ತಾದ್ರು ಬಂದ್ನಲ್ಲಾ, ಎರಡು ದಿನದಿಂದ ಎಲ್ಲಿ ಹಾಳಾಗಿ ಹೋಗಿದ್ನೊ ಅಂತ ಕುಡಿಯುತ್ತಿದ್ದ ಕಾಫಿಯನ್ನು ಅಲ್ಲೇ ಇಟ್ಟು ಕಸ ಕೊಡಲು ಹೋದೆ. ‘ಘೂಯ್’ ಎಂದು ನೊಣ ಹಾರಾಡಿದವು. ಮಾವಿನ ಹಣ್ಣಿನ ಕಾಲವಾದ್ದರಿಂದ ಅವಕ್ಕೆಲ್ಲ ಹಬ್ಬ. ತಿಂದು ಬಿಸಾಕಿದ ಮಾವಿನ ಹಣ್ಣಿನ ಸಿಪ್ಪೆ, ಗೊರಟು ಕೊಳೆತು ನಾರುತ್ತಿತ್ತು. ಹೊಟ್ಟೆ ತೊಳಸಿ ವಾಂತಿ ಬರೋ ಹಾಗಾಯ್ತು. ಎರಡು ದಿನದಿಂದ ಚಕ್ಕರ್ ಹೊಡೆದ ಕೃಷ್ಣನ ಮೇಲೆ ವಿಪರೀತ ಕೋಪ ಬಂತು.
‘‘ಏನೋ ನಿನ್ನ ಮನಸ್ಬಂದಾಗ ಬರೋದು ಬಿಡೋದು ಮಾಡ್ತೀಯಲ್ಲ. ಹೇಳೋರು ಕೇಳೋರು ಯಾರೂ ಇಲ್ಲಾಂತನಾ? ಪಾಪ ಅಂತ ಹದಿನೈದರಿಂದ ಇಪ್ಪತ್ತು ರುಪಾಯಿಗೆ ನಿನ್ನ ಸಂಬಳ ಜಾಸ್ತಿ ಮಾಡ್ಸಿದ್ನಲ್ಲ, ಅದಕ್ಕೇ ನಿಂಗೆ ಕೊಬ್ಬು, ಏನೋ, ದೊಡ್ಡ ಸಂಸಾರ, ತಿಂಗಳಿಗೆ ನಾವು ಕೊಡೋ ಹದಿನೈದು ರೂಪಾಯಿ ತುಂಬಾ ಕಮ್ಮಿ ಅನ್ಸಿ ಎಲ್ಲರ ಮನೆಗೆ ನಾನೇ ಹೋಗಿ, ಇನ್ನೊಂದು ಐದು ರೂಪಾಯಿ ಜಾಸ್ತಿ ಕೊಡಿ ಅಂತ ನಿನ್ನ ಪರವಾಗಿ ನಾನು ಕೇಳಿಕೊಂಡೆನಲ್ಲ, ಅದೇ ನನ್ನ ತಪ್ಪು’’ ಅಂತ ಕೂಗಾಡಿದೆ.
‘‘ಅಯ್, ಇಪ್ಪತ್ತು ರೂಪಾಯಿ ಯಾರು ಕೊಡ್ತಾರೆ ಅಮ್ಮಾರೆ, ಕೊಡೋ ಹದಿನೈದು ರೂಪಾಯಿನೇ ಎರಡೋ ಮೂರೋ ತಿಂಗಳಿಗೊಂದಸಲ ಕೊಟ್ರೆ ನನ್ನ ಪುಣ್ಯ’’ ಎಂದು ನಕ್ಕ.
‘‘ಏನಂದೆ, ಯಾರೂ ಕೊಡ್ತಾ ಇಲ್ವಾ? ಸುಳ್ಳು ಹೇಳ್ತೀಯಾ, ಎಲ್ರೂ ಖಂಡಿತ ಕೊಡೋಣಾಂತ ನನ್ನ ಹತ್ರನೇ ಹೇಳಿದಾರೆ. ನಾನು ನಿಂಗೆ ಮೂರು ತಿಂಗಳಿಂದ 20 ರೂಪಾಯಿ ಕೊಡ್ತಿಲ್ವಾ?’’
‘‘ನೀವೊಬ್ಬರೇ ಕೊಡ್ತಿರೋದು ಅಷ್ಟೇ, ಇಪ್ಪತ್ತು ರೂಪಾಯಿ ಕೊಡೋದಾದ್ರೆ ದಿನಾ ಬೀದಿ ಗುಡಿಸಬೇಕು ಅಂದ್ರು, ಅದೆಲ್ಲ ನನ್ನ ಕೈಯಿಂದ ಎಲ್ಲಿ ಆಗುತ್ತೆ, ದಿನಾ ಬೀದಿ ಗುಡಿಸ್ತಾ ಕೂತ್ರೆ, ನಾನು ಕೂಲಿ ಕೆಲ್ಸಕ್ಕೆ ಹೋಗಾಕ್ಕಾಗಕಿಲ್ಲ. ಹೇಗೋ ಎಲ್ಡು ದಿನ ಕಸ ಬಿಸಾಕಿ ಹೋಗ್ತೀನಿ ಅಷ್ಟೆ. ದಿನಾ ಗುಡಿಸಕ್ಕೆ ಎಲ್ಲಾಯ್ತದೆ ಬಿಡಿ ಅಮ್ಮಾರೆ’’
ನಂಗೆ ಅವನ ಮುಂದೆ ಮುಖ ತಗ್ಗಿಸೋ ಹಾಗಾಯ್ತು. ಥೂ ಎಂತ ಕಂತ್ರಿ ಜನಗಳಪ್ಪ, ದೊಡ್ಡದಾಗಿ ನನ್ನೆದ್ರಿಗೆ ಆಯ್ತು, ಆಯ್ತು ಕೊಡೋಣ ಅಂತ ಹೇಳಿ, ಒಳಗೇ ಬತ್ತಿ ಹೊಸ್ದಿದಾರೆ, ದೊಡ್ಡ ದೊಡ್ಡ ಮನೇಲಿರೋ ತೀರಾ ಸಣ್ಣ ಜನಗಳು. ಇನ್ನು ಇವರ ಮನೆ ಬಾಗಿಲಿಗೆ ಹೋಗಬಾರ್ದು ಅನ್ನಿಸ್ತು.
ಸಿಕ್ಕ ಸಿಕ್ಕ ಖಾಲಿ ಸೈಟುಗಳಲ್ಲೆಲ್ಲ, ರೋಡುಗಳಲ್ಲಿ ಕಸ ಬಿಸಾಕುವಾಗ, ಉಪಯೋಗಿಸಿದ ನ್ಯಾಪ್‌ಕಿನ್‌ಗಳು, ಹರಿದ ಬಟ್ಟೆ ಚೂರುಗಳು, ಕೊಳೆತ ಮೊಟ್ಟೆ, ಸಮಾರಂಭದ ಊಟದ ಎಲೆಗಳು ಕಾಲಿಗೇ ತಡರುತ್ತಿದ್ದ ರಸ್ತೆಯಲ್ಲಿ ಓಡಾಡೋದೆ ಅಸಹ್ಯವಾಗುತ್ತಿತ್ತು. ಕಸದ ರಾಶಿಯ ಮಧ್ಯೆ ಹಾಲಿನ ಕವರ್ಸ್ ಖಾಲಿ ಪ್ಲಾಸ್ಟಿಕ್ ಬಾಟಲಿಗಳನ್ನು ಆರಿಸುತ್ತಿದ್ದ ಕೃಷ್ಣನನ್ನು ಕರೆದು ಮಾತಾಡಿ, ಎಲ್ಲರ ಮನೆ ಕಸ ತೆಗೆದುಕೊಂಡು ಕಾರ್ಪೊರೇಷನ್ ತೊಟ್ಟಿಗೆ ಬಿಸಾಕಿ ಜೊತೆಗೆ ವಾರಕ್ಕೆರೆಡು ದಿನ ಬೀದಿ ಗುಡಿಸುವ ವ್ಯವಸ್ಥೆ ಮಾಡಿ ಪ್ರತಿಯಾಂದು ಮನೆಯವರೂ ತಿಂಗಳಿಗೆ ಹದಿನೈದು ರೂ.ಗಳನ್ನು ಕೃಷ್ಣನಿಗೆ ಕೊಡತಕ್ಕದೆಂದು, ಪ್ರತಿಯಾಂದು ಮನೆಗೂ ಹೋಗಿ ಕೇಳಿ ಒಪ್ಪಿಗೆ ಪಡೆದೇ ಇವನನ್ನು ನಿಯಮಿಸಿದ್ದಲ್ಲವೇ.
ಅಂದಿನಿಂದ ಇಂದಿನವರೆಗೂ ರಸ್ತೆ ಎಷ್ಟೋ ಶುಚಿಯಾಗಿದೆ. ಇದೆಲ್ಲ ಆಗಿ 8-9 ವರ್ಷಗಳೇ ಕಳೆದಿದೆ. ಇಷ್ಟು ವರ್ಷದ ಮೇಲೆ ಕೇವಲ ಐದು ರೂಪಾಯಿ ಜಾಸ್ತಿ ಕೊಡಿ ಅಂದದ್ದಕ್ಕೆ ಜನ ಎಷ್ಟು ಒದ್ದಾಡ್ತಾರಲ್ಲಾಂತ ತುಂಬಾ ಬೇಸರವಾಯ್ತು.
‘‘ಅದಿರ್ಲಿ, ಎರಡು ದಿನದಿಂದ ಯಾಕೋ ಬಂದಿಲ್ಲಾ?’’ ಅಂದೆ.
‘‘ಮಗಂಗೆ ಹುಸಾರಿಲ್ಲ ಅಮ್ಮಾ, ನಾಲ್ಕು ದಿನದಿಂದ ವಾಂತಿ, ಬೇಧಿನೇ ನಿಂತಿಲ್ಲಾ, ಆಸ್ಪತ್ರೆಗೆ ಆಕವ್ನಿ. ಒಂದು ನೂರು ರೂಪಾಯಿ ಇದ್ರೆ ಕೊಡಿ, ತಿಂಗಳ ತಿಂಗಳ ಮುರ್ಕಳ್ರಂತೆ’’ ಅಂದ.
‘‘ಅದ್ಯಾಕೋ ಇವತ್ತಾಗಲೇ 5ನೇ ತಾರೀಖು. ಎಲ್ರ ಮನೇಲೂ ಕೇಳು, ಕೊಡ್ತಾರೆ, ನಾನ್ಯಾಕೆ ನೂರು ರೂಪಾಯಿ ಕೊಡ್ಬೇಕು?’’
‘‘ಏ, ಇವತ್ತು ಶುಕ್ರವಾರ ಅಲ್ವಾ, ಇವತ್ತ್ಯಾರು ಕಾಸ್ ಕೊಡ್ತಾರೆ ನಮ್ಮಂಥೋರಿಗೆ, ಇವತ್ತು ಕಾಸು ಕೊಟ್ರೆ ಲಕ್ಷ್ಮಿ ಮನೆಬಿಟ್ಟು ಹೋಗಾಕಿಲ್ವಾ’’
‘‘ಇರು, ಅಂತ ಒಳಗೆ ಹೋಗಿ ನೂರು ರೂಪಾಯಿ ತಂದುಕೊಟ್ಟು, ಲಕ್ಷ್ಮಿ ನಮ್ಮ ಮನೆ ಬಿಟ್ಟು ಹೋದ್ರೆ’’ ಅಂದೆ. ಕೃಷ್ಣ ನಗುತ್ತಾ ಮುಂದೆ ನಡೆದ.












Click it and Unblock the Notifications