• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ವಂಶದಕುಡಿ

By Staff
|

ಪಾಂಡುರಂಗನನ್ನು ಮನೆಮಂದಿ ಮತ್ತು ಸ್ನೇಹಿತರೆಲ್ಲರೂ ಪ್ರೀತಿಯಾಗಿ ಪಾಂಡು ಅಂತ ಕರೆಯುತ್ತಿದ್ದರು. ತುಂಬಾ ಬುದ್ಧಿವಂತ, ಶಾಲಾಕಾಲೇಜುಗಳಲ್ಲಿ ಎಂದೂ ಮೊದಲನೇ ಸ್ಥಾನವನ್ನು ಇತರರಿಗೆ ಬಿಟ್ಟು ಕೊಟ್ಟವನಲ್ಲ. ಬಿ.ಕಾಂ. ಪದವಿ ಪಡೆದ ಕೂಡಲೇ ಅಕೌಂಟೆಂಟ್‌ ಜನರಲ್‌ ಆಫೀಸಿನಲ್ಲಿ ಆಡಿಟರ್‌ ಆಗಿ ಕೆಲಸ ಸಿಕ್ಕಿತ್ತು. ಮುಂದೆ ಓದಲು ಎಲ್ಲ ರೀತಿಯ ಅವಕಾಶಗಳಿದ್ದರೂ ಕೆಲಸ ಸಿಕ್ಕಿದುದರಿಂದಲೇನೋ ಓದಿಗೆ ಶರಣು ಹೊಡೆದ. ಅಲ್ಲಿಯಾದರೋ ಅವನ ಅದೃಷ್ಟವೆಂಬಂತೆ ಅವನನ್ನು ಆಡಿಟ್‌ ಇಲಾಖೆಗೆ ಪೋಸ್ಟಿಂಗ್‌ ಮಾಡಿದರು.

ಮೊದಲನೆಯ ದಿನದಿಂದಲೇ ಆಡಿಟ್‌ ಕೆಲಸ. ತಿಂಗಳಲ್ಲಿ ಮೂರು ವಾರಗಳು ಆಡಿಟ್‌ ಕೆಲಸ. ಇನ್ನುಳಿದ ಒಂದು ವಾರದಲ್ಲಿ ಮೇಲಧಿಕಾರಿಗಳಿಗೆ ರಿಪೋರ್ಟ್‌ ಕೊಡುವುದು ಮತ್ತು ಅದು ಇದು ಕೆಲಸ ಮಾಡುವುದು. ಆರಾಮಿನ ಜೀವನ. ಕೈತುಂಬಾ ಸಂಬಳ, ಅದರ ಮೇಲೆ ಆಡಿಟ್‌ನಲ್ಲಿರುವಾಗ ಪ್ರತಿ ದಿನವೂ ಭತ್ಯೆ. ಅದರಲ್ಲೇ ತನ್ನ ಖರ್ಚೆಲ್ಲವೂ ಆಗಿ ಹೋಗುತ್ತಿತ್ತು. ಅದಲ್ಲದೇ ಆಡಿಟ್‌ಗೆಂದು ಹೋದಾಗ ಆಯಾ ಡಿಪಾರ್ಟ್‌ಮೆಂಟ್‌ನವರೇ ಊಟ ತಿಂಡಿ ಸಕಲವನ್ನೂ ವ್ಯವಸ್ಥೆ ಮಾಡುತ್ತಿದ್ದರು. ಹೀಗಾಗಿ ತಿಂಗಳಿಂದ ತಿಂಗಳಿಗೆ ಬ್ಯಾಂಕಿನ ಖಾತೆಯಲ್ಲಿ ಹಣ ಮೇಲೇರುತ್ತಿತ್ತೇ ಹೊರತು ಇಳಿಮುಖ ಕಾಣುತ್ತಲೇ ಇರಲಿಲ್ಲ. ಇನ್ನು ಮನೆ ಕಡೇ ಅನುಕೂಲಸ್ಥರೇ.

ಅವನ ತಂದೆ ರಾಮಸ್ವಾಮಯ್ಯನವರು ತುಮಕೂರಿನ ಹತ್ತಿರದ ಒಂದು ಸಣ್ಣ ಹಳ್ಳಿಯಲ್ಲಿ ವ್ಯವಸಾಯ ನೋಡಿಕೊಳ್ಳುತ್ತಿದ್ದರು. ಅವರಿಗೆ ಹೊಟ್ಟೆ ಬಟ್ಟೆಗೇನೂ ಕೊರತೆ ಇಲ್ಲ. ಹೆಂಡತಿ ಲಕ್ಷ್ಮೀದೇವಿ ಗಂಡನಿಗೆ ತಕ್ಕಂತಿದ್ದಳು. ಇರುವನೊಬ್ಬನೇ ಮಗ. ಪಾಂಡು 10ನೇ ತರಗತಿಯವರೆವಿಗೆ ಹಳ್ಳಿಯಲ್ಲೇ ವಿದ್ಯಾಭ್ಯಾಸ ಮಾಡಿ, ಮುಂದೆ ಕಾಲೇಜನ್ನು ತುಮಕೂರಿನಲ್ಲಿ ಮುಗಿಸಿ ಕೆಲಸಕ್ಕಾಗಿ ಬೆಂಗಳೂರಿಗೆ ಬಂದಿದ್ದನು. ಅಲ್ಲಿ ಒಂದು ಸಣ್ಣ ಮನೆಯನ್ನು ಮಾಡಿಕೊಂಡಿದ್ದನು.

ಹೇಗೂ ಮಗನ ಓದು ಮುಗಿದು ಒಳ್ಳೆಯ ಕಡೆ ಕೆಲಸ ಸಿಕ್ಕಿದ್ದಾಗಿದೆ. ಇನ್ನು ಕೈ ಬಾಯಿ ಸುಟ್ಟುಕೊಂಡು ಹೊಟ್ಟೆ ಹೊರೆಯುವ ಬದಲು ಮದುವೆ ಮಾಡಿಬಿಟ್ಟರೆ ಸರಿ, ತಮ್ಮ ಪಕ್ಕದ ಮನೆಯ ಹುಡುಗಿ ಜಯಲಕ್ಷ್ಮಿಯೇ ಸರಿಯಾದ ಜೋಡಿ ಎಂದು ಲಕ್ಷ್ಮೀದೇವಿ ತನ್ನ ಗಂಡನಿಗೆ ತಿಳಿಸಿದಳು. ಗಂಡನಾದರೋ ಇದಕ್ಕೇ ಕಾಯುತ್ತಿದ್ದವನಂತೆ ತಕ್ಷಣ ಒಪ್ಪಿಗೆ ಸೂಚಿಸಿದ. ಪಕ್ಕದ ಮನೆಯ ಜಯಲಕ್ಷಿಯ ತಂದೆಯಾದ ನರಸಿಂಹ ಮೂರ್ತಿಗಳಿಗೆ ಸ್ವರ್ಗ ಮೂರೇ ಗೇಣಿನಂತೆ ತೋರಿತು. ಇಷ್ಟು ಸುಲಭವಾಗಿ ಕನ್ಯಾಸೆರೆ ಬಿಡುವುದೇ ಎಂದು ಕನಸಿನಲ್ಲೂ ಅಂದುಕೊಂಡಿರಲಿಲ್ಲ. ಆದರೂ ಹುಡುಗನನ್ನು ಒಂದು ಮಾತು ಕೇಳಿ ಎಂದು ನರಸಿಂಹ ಮೂರ್ತಿಗಳು ರಾಮಸ್ವಾಮಯ್ಯನವರಿಗೆ ಹೇಳಿದರು. ಅದಕ್ಕೆ ಅವರು ‘ಅಯ್ಯೋ, ಅವನನ್ನೇನು ಕೇಳೋದು, ಇನ್ನೂ ಹುಡುಗು ಮುಂಡೇದು. ನಾನು ಅವನ ಪರವಾಗಿ ಹೇಳ್ತಿದ್ದೀನಿ, ಹುಡುಗ ಒಪ್ಪಿದ ಹಾಗೆಯೇ. ನೀವು ಬರುವ ಚೈತ್ರ ಮಾಸದಲ್ಲಿ ಮದುವೆ ಇಟ್ಟುಕೊಳ್ಳಿ, ಅದಕ್ಕೆ ಬೇಕಾದ ಎಲ್ಲ ಸಲಕರಣೆಗಳನ್ನೂ ಜೋಡಿಸಿಕೊಳ್ಳಿ’ ಎಂದರು.

ಆದರೂ ನರಸಿಂಹ ಮೂರ್ತಿಗಳು, ‘ಇನ್ನು ಹುಡುಗನಿಗೆ ವರೋಪಚಾರ ಎಂದೇನಾದರೂ ಬೇಕೋ ಹೇಗೆ ಕೇಳಿದರೆ ಒಳಿತು. ನೀವು ತಪ್ಪು ತಿಳಿಯದಿದ್ದರೆ ನಾನೇ ಒಂದು ಘಳಿಗೆ ಬೆಂಗಳೂರಿಗೆ ಹೋಗಿ ಪಾಂಡುವನ್ನು ನೋಡಿ ಬರುವೆ’ ಎಂದರು.

ಅದಕ್ಕೆ ಪ್ರತಿಯಾಗಿ ರಾಮಸ್ವಾಮಿಗಳು, ‘ ಸರಿ, ನಿಮಗೆ ಹೇಗೆ ಬೇಕೋ ಹಾಗೆ ಮಾಡಿ. ಆದರೆ ವರದಕ್ಷಿಣೆ ಅಂತೆಲ್ಲಾ ನಮಗೇನೂ ಬೇಡ. ನಾನಿರುವವರೆಗೂ ಪಾಂಡುವೂ ಅದೇನನ್ನು ಕೇಳುವ ಹಾಗಿಲ್ಲ. ಹೇಗಿದ್ದರೂ ಅವನು ಆಡಿಟ್‌ ಮುಗಿಸಿ ಬೆಂಗಳೂರಿನಲ್ಲೇ ಇದ್ದಾನೆ, ನಾಳೆಯೇ ಹೋಗಿ ಬನ್ನಿ’ ಎಂದರು.

ಆದರೂ ಮೂರ್ತಿಗಳ ಒಳ ಮನಸ್ಸು ಇದು ಏನೋ ಸರಿ ಇಲ್ಲ ಅಂತಲೇ ಇತ್ತು. ಅದೇನೆಂದು ಅವರಿಗೂ ಸರಿಯಾಗಿ ಚಿಂತಿಸಲಾಗುತ್ತಿಲ್ಲ. ಸರಿ ದೇವರಿಟ್ಟ ಹಾಗಾಗಲಿ, ಎಂದು ಮಾರನೆಯ ದಿನದ ಮೊದಲನೆ ಬಸ್ಸಿಗೇ ಬೆಂಗಳೂರಿಗೆ ಪ್ರಯಾಣ ಬೆಳೆಸಿದರು.

ನರಸಿಂಹ ಮೂರ್ತಿಗಳ ಏಕೈಕ ಪುತ್ರಿ ಜಯಲಕ್ಷ್ಮಿ ಹುಟ್ಟಿದ ವರುಷದಲ್ಲಿಯೇ ಅಮ್ಮನನ್ನು ಕಳೆದುಕೊಂಡಿದ್ದಳು. ಮಗಳಿಗೆ ಮಲತಾಯಿಯ ಕಾಟ ತಾಗಬಾರದೆಂದು ಮೂರ್ತಿಗಳು ಮತ್ತೆ ಮದುವೆಯಾಗಲಿಲ್ಲ. ಮಗಳನ್ನು ಅಂಗೈಯಲ್ಲಿ ಇಟ್ಟು ಸಾಕಿದರು. ಹೆಣ್ಣಿಲ್ಲದ ಮನೆಯಲ್ಲಿ ಹೆಣ್ಣು ಮಗುವನ್ನು ಸಾಕುವುದು ಅಷ್ಟು ಸುಲಭವೇ? ಪಕ್ಕದಲ್ಲೇ ಇದ್ದ ಲಕ್ಷ್ಮೀದೇವಿಯವರು ಜಯಲಕ್ಷ್ಮಿಯನ್ನು ನೋಡಿಕೊಳ್ಳುತ್ತಿದ್ದರು. ಹಾಗಾಗಿ ಲಕ್ಷ್ಮೀದೇವಿಯವರಿಗೆ ಜಯಲಕ್ಷ್ಮಿ ಬಲು ಮೆಚ್ಚುಗೆಯ ಹುಡುಗಿಯಾಗಿದ್ದಳು. ಅವಳೇ ತನ್ನ ಸೊಸೆಯಾಗಬೇಕೆಂದು ಬಹಳ ಹಿಂದೆಯೇ ಮನಸ್ಸು ಮಾಡಿದ್ದರು. ಆದರೆ ಈ ವಿಷಯವನ್ನು ಯಾರೊಂದಿಗೂ ಅರುಹಿರಲಿಲ್ಲವಷ್ಟೆ. ಮಧ್ಯೆ ಮಧ್ಯೆ ಅವಳೊಂದಿಗೆ ಪಾಂಡುವಿನ ವಿಷ್ಯವನ್ನೇನಾದರೂ ಹೇಳುತ್ತಿದ್ದರೆ ತದೇಕಚಿತ್ತಳಾಗಿ ಹುಡುಗಿ ಆಲಿಸುವುದು ನೋಡಿ ಅವರ ನಿರ್ಧಾರ ಇನ್ನೂ ಬಲವಾಗಿತ್ತು. ಈಗ ಪಕ್ಕದ ಮನೆಯಿಂದ ತನ್ನ ಮನೆಗೆ ಹೆಣ್ಣುಮಗುವನ್ನು ತುಂಬಿಸಿಕೊಳ್ಳುವ ಕಾಲ ಕೂಡಿ ಬಂದಿತ್ತು.

ಮೂರ್ತಿಗಳು ಪಾಂಡುವಿನ ಮನೆ ತಲುಪಿದಾಗ ಪಕ್ಕದ ಮನೆಯವರು ತಿಳಿಸಿದ್ದು, ಹಿಂದಿನ ರಾತ್ರಿ ಅವನು ಆಡಿಟ್‌ ಗೆಂದು ಬೆಳಗಾವಿಗೆ ಹೋಗಿದ್ದಾನೆ, ಬರುವುದು ಇನ್ನೂ ಬಹಳ ದಿನಗಳಾಗುತ್ತದೆ ಎಂದು. ಅಂದೇ ಊರಿಗೆ ವಾಪಸ್ಸಾಗಿ ರಾಮಸ್ವಾಮಿಗಳಿಗೆ ವಿಷಯವನ್ನು ಅರುಹಿದರು. ಆಗ ರಾಮಸ್ವಾಮಿಗಳು, ‘ನಾನು ಬೇಡಾಂದ್ರೂ, ನೀವ್ಯಾಕೆ ಹೋದ್ರಿ, ಅವನು ನನ್ನ ಮಗ, ನಾನು ಹೇಳಿದ ಮೇಲೆ ಮುಗಿದುಹೋಯ್ತು. ನೀವು ಮದುವೆಗೆ ತಯಾರಿ ಮಾಡಿಕೊಳ್ಳಿ’.

ಎರಡು ದಿನಗಳ ನಂತರ ರಾತ್ರಿ ಪಾಂಡು ತನ್ನಮ್ಮನಿಗೆ ಬೆಳಗಾವಿಯಿಂದ ಫೋನ್‌ ಮಾಡಿದ್ದ. ಅಮ್ಮ ಅವನ ಮದುವೆ ಬಗ್ಗೆ ತಿಳಿಸಿದಾಗ, ಮೊದಲು ಅವನು ‘ಅಯ್ಯೋ ಈಗಲೇ ಬೇಡಮ್ಮ, ನಾನಿನ್ನೂ ಎಸ್‌.ಎ.ಎಸ್‌. ಪರೀಕ್ಷೆ ತೆಗೆದುಕೊಳ್ಳಬೇಕು. ಅದರಲ್ಲಿ ಪಾಸಾದರೆ ಆಫೀಸರ್‌ ಆಗಬಹುದು, ಅದೇ ತನ್ನ ಉದ್ದೇಶ’ ಎಂದಿದ್ದ. ಅದಕ್ಕೆ ಅವರಮ್ಮ, ಈ ವಿಷಯದಲ್ಲಿ ನಾನು ಮಾತನಾಡೋಲ್ಲ, ಅವರೇ ಮಾತಾಡ್ತಾರೆ, ಕೇಳಿಸಿಕೋ ಎಂದು ರಿಸೀವರ್‌ ಅನ್ನು ತನ್ನ ಗಂಡನ ಕೈಗೆ ಕೊಟ್ಟಿದ್ದಳು. ರಾಮಸ್ವಾಮಿಗಳದ್ದು ಸ್ವಲ್ಪ ಮುಂಗೋಪದ ಸ್ವಭಾವ. ಮಗನ ಮೊದಲ ಮಾತನ್ನು ಕೇಳುತ್ತಿದ್ದಂತೆಯೇ, ಕೋಪಗೊಂಡು, ಈ ಮನೆಯಲ್ಲಿ ನಾನು ಹೇಳಿದ್ದೇ ಕೊನೆ, ದೂಸರಾ ಮಾತನಾಡೋ ಹಕ್ಕು ಯಾರಿಗೂ ಇಲ್ಲ. ಇನ್ನು ಎರಡು ತಿಂಗಳಿಗೆ ಮದುವೆ ನಿಷ್ಕರ್ಷೆ ಆಗಿದೆ, ರಜೆ ಹಾಕಿ ಊರಿಗೆ ಬರಬೇಕು ಅಷ್ಟೆ ಎಂದು ಪಾಂಡುವಿನಿಂದ ಮುಂದಿನ ಮಾತು ಕೇಳಿಸಿಕೊಳ್ಳುವ ಮುನ್ನವೇ ರಿಸೀವರ್‌ ಕೆಳಗೆ ಇಟ್ಟುಬಿಟ್ಟಿದ್ದರು.

ಅಪ್ಪನ ಒತ್ತಾಯದ ಮೇರೆಗೆ ಪಾಂಡು ಏಪ್ರಿಲ್‌ನಲ್ಲಿ ಒಂದು ವಾರದ ಮಟ್ಟಿಗೆ ರಜೆ ಹಾಕಿ ಊರಿಗೆ ಬಂದಿದ್ದ. ಮದುವೆಯನ್ನು ಊರಿನಲ್ಲೇ ಮಾಡಿ ಮುಗಿಸಿದ್ದರು. ಇಷ್ಟವಿಲ್ಲದ ಪಾಂಡು ತನ್ನ ಹೆಂಡತಿಯಾಡನೆ ಸರಿಯಾಗಿ ಮಾತನ್ನೂ ಆಡಿರಲಿಲ್ಲ. ಮದುವೆ ಮುಗಿದ ಕೂಡಲೇ ಹೆಂಡತಿಯನ್ನೂ ಕರೆದೊಯ್ಯದೇ ತುರ್ತಾಗಿ ಕೆಲಸವಿದೆಯೆಂದು ಬೆಂಗಳೂರಿಗೆ ಹೊರಟುಹೋಗಿದ್ದ. ಹೋಗುವಾಗ ಜಯಲಕ್ಷಿಗೆ ಒಂದು ಮಾತನ್ನೂ ಹೇಳಿರಲಿಲ್ಲ. ಪೆಚ್ಚು ಮೋರೆ ಹಾಕಿದ್ದ ಜಯಲಕ್ಷ್ಮಿಗೆ ಅವಳತ್ತೆ ‘ನೀನೇನೂ ಬೇಜಾರು ಮಾಡ್ಕೋಬೇಡ. ಅವನ ಸ್ವಭಾವೇ ಹಾಗೆ. ಎಲ್ಲರೆದುರಿಗೆ ಜಾಸ್ತಿ ಮಾತನಾಡೋಲ್ಲ. ಅದೂ ಅಲ್ಲದೇ ಇಲ್ಲಿ ಅವನಪ್ಪನ ಭಯ ಅವನಿಗಿದೆ. ನಾವೇ ನಿನ್ನನ್ನು ಬೆಂಗಳೂರಿಗೆ ಕರೆದೊಯ್ಯುವೆವು. ಅಲ್ಲಿಗೆ ಹೋಗಿ ಮನೆತುಂಬಿಸಿಕೊಂಡ ಮೇಲೆ ಎಲ್ಲ ತನಗೆ ತಾನೇ ಸರಿ ಹೋಗುತ್ತದೆ’ ಎಂದಿದ್ದರು. ಇಷ್ಟು ದಿನಗಳು ಅವರನ್ನು ಹತ್ತಿರ ನೋಡಿದ್ದ ಜಯಲಕ್ಷ್ಮಿಗೆ ಅವರೇ ತನ್ನ ತಾಯಿಯೇನೋ ಎನ್ನುವಂತಾಗಿ ಕಣ್ಣಲ್ಲಿ ಆನಂದಭಾಷ್ಪ ಇಣುಕಿ ನೋಡಿತ್ತು. ಯಾರಿಗೂ ಕಾಣಿಸದಂತೆ ಕಣ್ಣೊರೆಸಿಕೊಂಡಿದ್ದಳು.

ಮುಂದೆ ಇನ್ನೊಂದು ತಿಂಗಳವರೆಗೆ ಪಾಂಡುವಿನಿಂದ ಏನೂ ವಿಷಯ ತಿಳಿಯದಿರಲು, ರಾಮಸ್ವಾಮಿಗಳು ಲಕ್ಷ್ಮೀದೇವಿಯವರು, ಮತ್ತು ನರಸಿಂಹಮೂರ್ತಿಗಳು ಜಯಲಕ್ಷ್ಮಿ ಕರೆದುಕೊಂಡು ಬೆಂಗಳೂರಿಗೆ ಬಂದಿದ್ದರು. ಆಗ ಪಾಂಡು ಊರಿನಲ್ಲೇ ಇದ್ದ. ಲಕ್ಷ್ಮೀದೇವಿಯವರು ತನ್ನ ಗಂಡನಿಗೆ ಪಾಂಡುವನ್ನು ಯಾರ ಮುಂದೆಯೂ ಬೈಬೇಡಿ ಎಂದೂ ಅದರಿಂದ ಸೊಸೆಗೇ ತೊಂದರೆ ಆಗಬಹುದೆಂದೂ ತಿಳಿಸಿದ್ದರು. ಅವರೇ ಪಾಂಡುವಿಗೆ ಸ್ವಲ್ಪ ಬುದ್ಧಿ ಹೇಳಿ ಇನ್ನು ಮುಂದೆ ಸೊಸೆಯಾಂದಿಗೆ ಸರಿಯಾಗಿ ಇರಲು ಹೇಳಿದ್ದರು. ಎರಡು ದಿನ ಎಲ್ಲರೂ ಅಲ್ಲಿಯೇ ಇದ್ದು, ನಂತರ ಊರಿಗೆ ವಾಪಸ್ಸಾಗಿದ್ದರು.

ಜಯಲಕ್ಷ್ಮಿ ಗಂಡನ ಮುಂದೆ ಭಯದಿಂದಲೇ ಇರುತ್ತಿದ್ದಳು. ಸ್ವಲ್ಪ ದಿನಗಳಲ್ಲೇ ಜಯ ಗರ್ಭವತಿಯಾಗಿದ್ದಳು. ಇಲ್ಲಿ ಯಾರೂ ನೋಡುವವರಿಲ್ಲವೆಂದೂ, ಆಡಿಟ್‌ ಎಂದು ಮಗ ಅಲ್ಲಿ ಇಲ್ಲಿ ಅಲೆಯುತ್ತಿರುತ್ತಾನೆಂದೂ ಲಕ್ಷ್ಮೀದೇವಿಯವರು 4 ನೇ ತಿಂಗಳಿನಲ್ಲೇ ಸೊಸೆಯನ್ನು ಊರಿಗೆ ಕರೆದೊಯ್ದಿದ್ದರು. ಅತ್ತೆಯ ಆರೈಕೆಯಿಂದ ಗಂಡು ಮಗುವೇ ಹುಟ್ಟಿತ್ತು. ಮಗು ಹುಟ್ಟಿದಾಗಲೊಮ್ಮೆ ಪಾಂಡು ಊರಿಗೆ ಬಂದವನು, ಮತ್ತೆ ಈ ಕಡೆ ತಲೆಯೇ ಹಾಕಿರಲಿಲ್ಲ. ಮಗುವಿನ ಆರೈಕೆ ನೋಡಲು ಬೆಂಗಳೂರಿನಲ್ಲಿ ಯಾರೂ ಇಲ್ಲವೆಂದು ಲಕ್ಷ್ಮೀದೇವಿಯವರು ಸೊಸೆಯನ್ನೂ ಬೆಂಗಳೂರಿಗೆ ಹೋಗಲು ಬಿಡಲಿಲ್ಲ. ಹಾಗೇ ಜಯಗೂ ಅತ್ತೆಯ ಸನಿಹವೇ ಸುಖ ಸಿಕ್ಕಿತ್ತು. ಎಂದೂ ಮಗುವಿನ ಜೊತೆಗೇ ಇದ್ದು ಗಂಡನನ್ನು ಮರೆತೇ ಬಿಟ್ಟಿದ್ದಳು.

ಹೀಗೇ ಒಂದು ವರ್ಷ ಕಳೆಯುತ್ತಿರಲು, ಪಾಂಡುವಿನಿಂದ ಒಂದು ಫೋನ್‌ ಬಂದಿತ್ತು. ತಾನು ಎಸ್‌.ಎ.ಎಸ್‌ ಪರೀಕ್ಷೆಯಲ್ಲಿ ಪಾಸಾಗಿದ್ದೇನೆಂದೂ ಒಂದು ತಿಂಗಳುಗಳಲ್ಲೇ ಪ್ರಮೋಶನ್‌ ಆಗುವುದೆಂದೂ ನವದೆಹಲಿಗೆ ಪೋಸ್ಟಿಂಗ್‌ ಕೊಟ್ಟಿರುವುದಾಗಿ ಮೊದಲು ಅಲ್ಲಿಗೆ ತಾನೊಬ್ಬನೇ ಹೊರಡಲು ತಯಾರಿ ನಡೇಸಿದ್ದೇನೆಂದೂ ತಿಳಿಸಿದ್ದನು. ಎಲ್ಲರಿಗೂ ಒಂದು ಕಡೆ ತಮ್ಮವನು ದೆಹಲಿಯಲ್ಲಿ ಆಫೀಸರ್‌ ಆಗಿರುವನೆಂದು ಸಂತೋಷವಾದರೂ ಇನ್ನೊಂದೆಡೆ ಸಂಸಾರದಿಂದ ವಂಚಿತನಾಗುತ್ತಿದ್ದಾನಲ್ಲಾ ಎಂಬ ಕೊರಗೂ ಇತ್ತು.

ಊರಿನ ಕಡೆ ಬರದೇ ಪಾಂಡು ದೆಹಲಿಗೆ ಹೊರಟು ಹೋಗಿದ್ದ. ನಾಲ್ಕು ತಿಂಗಳ ಬಳಿಕ ರಾಮಸ್ವಾಮಿಗಳು ಹೃದಯಾಘಾತದಿಂದ ನಿಧನ ಹೊಂದಿದ್ದರು. ಆಗ ಪಾಂಡು ಊರಿಗೆ ಬರಲೇ ಬೇಕಾಗಿತ್ತು. ಎಲ್ಲ ಕಾರ್ಯಗಳೂ ಮುಗಿದ ಮೇಲೆ, ಲಕ್ಷ್ಮೀದೇವಮ್ಮನವರು ಜಯಾಳನ್ನೂ ಮಗುವನ್ನೂ ದೆಹಲಿಗೆ ಕರೆದೊಯ್ಯುವಂತೆ ಪಾಂಡುವಿಗೆ ತಿಳಿಸಿದರು. ಅದಕ್ಕೆ ಅವನು, ಅಮ್ಮ ನೀನಂತೂ ವರುಷ ಕಳೆಯುವವರೆಗೂ ಮನೆ ಬಿಡೋ ಹಾಗಿಲ್ಲ, ಹಾಗೇ ಅಲ್ಲಿಗೆ ಬರೋದಿಕ್ಕಾಗೋಲ್ಲ. ಅಲ್ಲಿಯಾದರೋ ಹಿಂದಿ ಇಂಗ್ಲೀಷ್‌ ಬಿಟ್ಟು ಬೇರೆ ಭಾಷೆಗಳಲ್ಲಿ ಮಾತನಾಡುವವರು ಇಲ್ಲವೇ ಇಲ್ಲ. ನಾನಂತೂ ನನ್ನ ಕೆಲಸಗಳಲ್ಲಿ ಮುಳುಗಿಹೋಗಿರ್ತೀನಿ. ಈ ಹಳ್ಳಿಗೊಡ್ಡು ಅಲ್ಲಿ ಹೇಗೆ ಸಂಸಾರ ನಡೆಸುತ್ತಾಳೆ. ಅವಳನ್ನು ನಾನು ಕರೆದೊಯ್ಯಾಲ್ಲ. ಮುಂದೆ ಯಾವಾಗಲಾದರೂ ನೋಡೋಣ ಎಂದು ಕೈಯಾಡಿಸಿ ಹೊರಟೇಬಿಟ್ಟ.

ಈಗ ಅವನನ್ನು ಕೋಪ ಮಾಡಿಕೊಂಡು ಬಯ್ಯಲು ಅವರಪ್ಪ ಇಲ್ವಲ್ಲ. ಅವನಿಗೆ ಹೇಳುವವರು ಕೇಳುವವರು ಯಾರಿದ್ದಾರೆ ...

‘’ಯ ಮೊದಲ ಭಾಗ

‘’ಯ ಎರಡನೇ ಭಾಗ

ಮುಖಪುಟ / ಸಾಹಿತ್ಯ-ಸಂಸ್ಕೃತಿ

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ

Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more