‘ಇದಂ ಪ್ರಥಮಂ’
ಗುಣನಿಗೆ ಈಗ ಒಂದೇ ಚಿಂತೆ -ತಾನು ಪೂವಯ್ಯನ ತರಹ ಆಗೋದು ಯಾವಾಗ ? ಕ್ಲಾಸಿನಲ್ಲಿರುವ ಎಲ್ಲಾ ಹುಡುಗಿಯರು ಯಾವಾಗಲೂ ಪೂವಯ್ಯನ ಬಗ್ಗೆಯೇ ಮಾತಾಡುತ್ತಾರೆ. ಇವತ್ತು ಬೆಳಿಗ್ಗೆ ಸೋಮಣ್ಣ ಹೇಳಿದ್ದು ಕೇಳಿದ ಮೇಲಂತೂ ಅವನ ತಲೆಯೇ ಕೆಟ್ಟಿತ್ತು. ಅವನ ಪ್ರಕಾರ ರೋಸಿ ಬೋಪಯ್ಯ ಮತ್ತು ಪೂವಯ್ಯನ ನಡುವೆ ಏನೋ ನಡೆಯುತ್ತಿದೆ. ನಿನ್ನೆ ಕೊಡವ ಸಮಾಜದಲ್ಲಿ ನಡೆದ ಮದುವೆಯಲ್ಲಿ ಇಬ್ಬರೂ ಜೊತೆಗೇ ಕುಣಿತ್ತಿದ್ದರಂತೆ. ಪೂವಯ್ಯ ಬೀರ್‌ನಿಂದ ವಿಸ್ಕಿಗೆ ಪ್ರಮೋಟ್ ಆಗಿದ್ದಾನೆಂಬುದು ಶಾಲೆಯ ಮೂಲೆ ಮೂಲೆಗೂ ತಿಳಿದಿದ್ದ ರಹಸ್ಯ. ಆದರೆ ಸೋಮಣ್ಣನ ಪ್ರಕಾರ ರೋಸಿಯೂ ನಿನ್ನೆ ಸ್ವಲ್ಪ ಏರಿಸಿದ್ದಳಂತೆ. ಇದಕ್ಕೆ ಪೂವಯ್ಯನ ಕುಮ್ಮಕ್ಕೇ ಕಾರಣ ಎಂಬುದು ಅವನ ವಿಚಾರ.
‘ನೀನು ನೋಡ್ಬೇಕ್ಕಿತ್ತು ಅವರ ಆಟ. ನನಗೆ ಹೊಟ್ಟೆ ಉರಿತಾ ಇತ್ತು. ಗಂಗೆ ಪೂಜೆ ಟೈಮಿಗೆನೇ ಅವ್ರಿಬ್ರೂ ಟೈಟಾಗಿದ್ರು.......’ ಸೋಮಣ್ಣನ ಮಾತು ಕೇಳುತ್ತ ಗುಣನ ಕೋಪ ಏರುತ್ತಾ ಇತ್ತು.
‘ಛೇ! ನಾನೂ ಹೋಗ್ಬೇಕಿತ್ತು ನಿನ್ನೆ ಮದುವೆಗೆ. ಅಮ್ಮನ ಮಾತು ಕೇಳಿ ......’ ಗುಣ ಮನಸಿನಲ್ಲಿಯೇ ಯೋಚಿಸುತ್ತಿದ್ದ. ಅವನೇನೂ ಮದುವೆಗೆ ಹೋಗಲೇಬೇಕೆಂದೇ ಅಂದುಕೊಂಡಿದ್ದ. ಆದರೆ ಬೆಳಿಗ್ಗೆ ಅಮ್ಮನ ಪಿರಿಪಿರಿ ಶುರುವಾಗಿತ್ತು ‘ಆ ಕೊಡಗರ ಮದುವೆಗೆ ಹೋಗಲೇ ಬೇಕಾ? ಬರೀ ಕುಡ್ದು, ಹಂದಿಮಾಂಸ ತಿಂದು, ಹಣ ಕಟ್ಟಿ ಮದುವೆ ಮುಗಿಸ್ತಾವೆ ಅವು. ಅಲ್ಲಿಗೆ ನಾವೆಲ್ಲಾ ಹೋಗಲೇಬಾರ್ದು’.
ಗುಣ ಅಲ್ಲಿ ಬೇರೆ ಅಡಿಗೆ ಮಾಡ್ಸಿರುತ್ತಾರೆ ಅಂತ ಹೇಳಿದ್ರೂ ‘ಅಡಿಗೆ ಬೇರೆ ಆದ್ರೆ ಏನು...ಅದೇ ಪಾತ್ರೆ, ಅದೇ ಸವ್‌ಟು. ಹಂದಿ ಬೇಯಿಸ್ದ ಪಾತ್ರೆನ ಸರಿಯಾಗಿ ತೊಳಿತಾರೊ ಇಲ್ವೋ’ ಅಂತ ಹೇಳಿದ ಮೇಲೆ ಮದುವೆಗೆ ಹೋಗೋದೇ ಬೇಡಾಂತ ಮನೇಲೇ ಇದ್ದ. ಆದರೆ ತಾನು ಹೋಗದ ಆ ಮದುವೆಯಲ್ಲಿ ಪೂವಯ್ಯ ಇಂಥ ಗಾಂಚಾಲಿ ಮಾಡ್ತಾನೇಂತ ಗೊತ್ತಿದ್ರೆ ಖಂಡಿತ ಹೋಗ್ಬೋದಿತ್ತು ಅಂತ ಯೋಚಿಸ್ತಾ ಇದ್ದ.
ಇದ್ದಕ್ಕಿದ್ದ ಹಾಗೇ ಕಾಫಿಗೆ ಬೆಲೆ ಏರಿದಾಗ ಹುಟ್ಟಿದ ಶ್ರೀಮಂತರಲ್ಲಿ ಪೂವಯ್ಯನ ತಂದೆಯೂ ಒಬ್ಬರು. ಅಕಸ್ಮಾತಾಗಿ ಬಂದ ದುಡ್ಡನ್ನು ಹೇಗೆ ಖರ್ಚು ಮಾಡಬೇಕು ಎನ್ನುವ ಗೊಂದಲದಿಂದಲೇ ಬಹುಶಃ ಮಗನಿಗೆ ಪಾಕೇಟ್ ಮನಿ ಕೊಡುವುದನ್ನು ಜಾಸ್ತಿ ಮಾಡಿದರು. ಅದನ್ನೇ ಹುಡುಗಿಯರನ್ನು ಪಟಾಯಿಸುವ ಅಸ್ತ್ರವನ್ನಾಗಿ ಮಾಡಿಕೊಂಡಿದ್ದಾನೆಂಬುದು ಗುಣನಿಗೆ ಅಸಾಧ್ಯ ಸಿಟ್ಟು. ‘ಏನೋ ಪಟ್ಟ..’ ಅಂತ ಪೂವಯ್ಯ ತನ್ನನ್ನು ಕರೆಯುತ್ತಿದ್ದ ರೀತಿಯೇ ಅವನಿಗೆ ಹಿಡಿಸುತ್ತಿರಲಿಲ್ಲ. ಇತ್ತೀಚೆಗಂತೂ ಪೂವಯ್ಯ ಜಾಸ್ತಿ ಆಡ್ತಿದ್ದಾನೆಯೆಂಬುದೇ ಅವನ ವಿಚಾರ. ಫಿಲಿಂಫೇರ್ ತಂದು ಕ್ಲಾಸಿನಲ್ಲಿ ಎಲ್ಲರಿಗೂ ಕೊಡುವುದು, ಹೊಸ ಫಿಚ್ಚರ್‌ನ ಕ್ಯಾಸೆಟ್ ಕೊಂಡುಕೊಳ್ಳುವುದು ಎಲ್ಲಾ ಶೋಕಿಗೆಂದೇ ಅಂತ ಗುಣನ ಅಚಲ ನಂಬಿಕೆ.
ಇಂತಹದಕ್ಕೆಲ್ಲಾ ಮಾಮೂಲು ಹುಡುಗಿಯರು ಬೀಳಬಹುದು ಆದರೆ ಹುಟ್ಟಾ ಶ್ರೀಮಂತ ಮನೆತನದ ರಾಯಲ್ ಫ್ಯಾಮಿಲಿಯ ರೋಸಿ ಬೋಪಯ್ಯ ಬೀಳಬಹುದೆಂಬ ಐಡಿಯಾವೇ ಅವನಿಗಿರಲಿಲ್ಲ. ಆದರೆ ಸೋಮಣ್ಣನ ಮಾತಿನಿಂದ ರೋಸಿ ಪೂವಯ್ಯನ ಗಿಲೀಟಿಗೆ ಮಾರುಹೋಗಿರುವುದು ನಿಜವೆಂದೇ ಅವನಿಗೆ ಅನಿಸಿತು.
‘ಪೂವಯ್ಯನ ಮುಖ ನೋಡ್ಬೇಕಿತ್ತು. ಅವನು ಅದು ಮಾಡಿದ್ದಾನೆ ಅಂತ ಚೆನ್ನಾಗಿ ಗೊತ್ತಾಗತ್ತಿತ್ತು’ ಸೋಮಣ್ಣ ಮತ್ತೊಂದು ಶಾಕ್ ನೀಡುತ್ತಿದ್ದ. ‘ಅದೂ ಮಾಡಿಬಿಟ್ನಾ ಅವ್ನು’ ಗುಣನ ಬಾಯಿಂದ ಮಾತು ಮೆಲ್ಲಗೆ ಹೊರಬರುತ್ತಿತ್ತು. ‘ನಾನು ನಿನಗೆ ಹೇಳ್ತಾ ಇದ್ದೆ. ಮಾಡು ಅಂತ, ನೀನು ಏನು ಮಾಡೋಲ್ಲಾ .. ಪುಕ್ಕಲು ಪಟ್ಟ ’ ಸೋಮಣ್ಣ ಅವನನ್ನ ಗೇಲಿ ಮಾಡಲು ಶುರು ಮಾಡಿದ. ಗುಣನಿಗೆ ‘ಅದು’ ಮಾಡಬೇಕೆಂದು ಬಹಳ ದಿನಗಳಿಂದ ಅನ್ನಿಸ್ತಾ ಇತ್ತು. ಆದರೆ ಏನೋ ಹೆದರಿಕೆ. ಆ ಬಗ್ಗೆ ಹಿಂದೊಮ್ಮೆ ಅವನು ಸೋಮಣ್ಣನೊಂದಿಗೆ ಮಾತಾಡಿಯೂ ಇದ್ದ.
‘ಮೊದಲ ಸಲ ರಕ್ತ ಬರುತ್ತಂತೆ ಹೌದಾ’ ಅಂತ ಕೇಳಿದಕ್ಕೇ ಸೋಮಣ್ಣ ‘ಹೌದು ಗುಣ. ತುಂಬಾ ಹುಷಾರಾಗಿಬೇಕು’ ಅಂತ ಉಪದೇಶಿಸಿಯೂ ಇದ್ದ. ಸೋಮಣ್ಣನನ್ನು ‘ನೀನೂ ಅದನ್ನ ಮಾಡಿದ್ದೀಯಾ?’ ಅಂತ ಕೇಳಿದ್ದಕ್ಕೆ
‘ಛೇ! ಹಾಗೇನಿಲ್ಲ. ಆದರೆ ಅದನ್ನ ಬೇರೆಯವರು ಮಾಡೋದನ್ನ ನೋಡಿದ್ದೀನಿ’ ಅಂದಿದ್ದ. ಯಾರು, ಎಲ್ಲಿ, ಹೇಗೆ-ವಿಚಾರಿಸಬೇಕು ಅನ್ನಿಸಿದರೂ ಯಾಕೋ ಸುಮ್ಮನಾಗಿದ್ದ. ಆದರೆ ಇವತ್ತು ಪೂವಯ್ಯ ‘ಅದು’ ಮಾಡಿದ್ದಾನೆ ಅಂತ ತಿಳಿದ ಮೇಲೂ ಸುಮ್ಮನೆ ಕೂರುವುದು ಸರಿಯಲ್ಲ. ತಾನು ‘ಅದು’ ಮಾಡಬೇಕಂತ ಅವನಿಗೆ ಅನ್ನಿಸತೊಡಗಿತು.
‘ಸೋಮು, ನಾನು ಮಾಡ್ಬೇಕು’ ಗುಣ ದೃಢವಾಗಿ ಹೇಳಿದ.
‘ಗುಡ್, ನನ್ಗೆ ಗೊತ್ತಿತ್ತು. ಹೇಳು ಯಾವಾಗ ? ನನ್ನ ಮನೆಯಲ್ಲಿ ಯಾರೂ ಇರೋಲ್ಲಾ...ಬೇಕಿದ್ರೆ ಎಲ್ಲಾ ಎರೇಂಜ್ ಮಾಡ್ತೀನಿ’
ಗುಣನಿಗೆ ಯಾಕೋ ಇದು ಇಷ್ಟವಾಗಲಿಲ್ಲ. ಪ್ರತಿದಿನ ತನ್ನ ಮನೆಯಲ್ಲಿ ಕನ್ನಡಿಯ ಮುಂದೆ ನಿಂತಾಗ ‘ಯಾವಾಗ..ಯಾವಾಗ’ ಅಂತ ಅವನ ಪ್ರತಿಬಿಂಬ ಅವನನ್ನ ಕೇಳುತ್ತಿತ್ತು. ಮೊದಲ ಬಾರಿಗೆ ‘ಅದನ್ನು’ ತನ್ನ ಮನೆಯಲ್ಲಿಯೇ ಮಾಡಬೇಕೆಂದು ಅವನಿಗೆ ಅನ್ನಿಸ್ತಾ ಇತ್ತು. ಅದೂ ಅಲ್ಲದೆ ಈ ಸೋಮಣ್ಣ ಜೊತೆಗಿದ್ದರೆ ಅವನದೇ ನೂರಾರು ಸಲಹೆಗಳು. ಕೊನೆಗೆ ಯೋಚಿಸಿ.
‘ನಾಡಿದ್ದು ಮನೆಯವರೆಲ್ಲಾ ಊರಿಗೆ ಹೋಗ್ತಾರೆ. ನಮ್ ಮನೇಲಿಯೇ ಸರಿ’ ಅಂದ
‘ನಿನ್ನಿಷ್ಟ, ಆದ್ರೆ ಎಲ್ಲಾ ವಿಷ್ಯ ಗೊತ್ತಿದೆಯಲ್ಲಾ. ತುಂಬಾ ಹುಷಾರಾಗಿರಬೇಕು’
‘ನನಗೆಲ್ಲಾ ಗೊತ್ತು ಕಣೋ. ಆದ್ರೆ ಅದಕ್ಕೆ ಬೇಕಾದ ಆ ವಸ್ತು. ಅದನ್ನ ಎಲ್ಲಿಂದ ತರೋದು?’
‘ನಮ್ಮನೇಲಿ ಇದೆ. ತರ್ಲಾ’ ಸೋಮಣ್ಣ ಅಂದ ಮಾತಿಗೆ ಗುಣನಿಗೆ ಯೋಚನೆ ಶುರುವಾಯ್ತು.
‘ಅದು’ ಮಾಡಲು ‘ ಆ’ ವಸ್ತು ಬೇಕೇ ಬೇಕು. ಮನೇಲಿ ಹುಡುಕಿದ್ರೆ ಆರಾಮಾಗಿ ಸಿಗಲೂ ಬಹುದು. ಆದರೆ ಆಮೇಲೆ ಮನೆಯಲ್ಲಿರುವವರಿಗೆ ಗೊತ್ತಾದರೆ ಫಜೀತಿ. ಇಷ್ಟು ಚಿಕ್ಕವರಿಗೆಲ್ಲಾ ಯಾಕೋ ಇದೆಲ್ಲಾ ಅಂತ ರಾಮಾಯಣ ಶುರುವಾಗಬಹುದು. ಬೇಡ ಅಂತ ಯೋಚಿಸಿ ‘ಫಸ್ಟ್ ಟೈಮ್ ಅಲ್ವೇನೋ.. .ಹೊಸಾದೇ ತೆಕ್ಕೊಳ್ಳುವಾ’
‘ಅದೇ ಕರೆಕ್ಟ್. ಹೊಸದರ ಮಜಾನೇ ಬೇರೆ’ ಅಂದ ಸೋಮಣ್ಣ ತಿಳಿದವನಂತೆ.
‘ಎಷ್ಟು ಬೇಕಾಗಬಹುದು ಹೊಸದ್ದಕ್ಕೆ ?’
‘ಈಗೆಲ್ಲಾ ಬೇರೆ ಬೇರೆ ವೆರೈಟಿ ಸಿಗುತ್ತೆ ಕಣೋ. ಮೊದಲಿನ ಹಾಗೆ 50ಪೈಸೆಯ ಒಂದೇ ಬ್ರ್ಯಾಂಡ್ ಅಲ್ಲ. ಆದ್ರೊ ಒಳ್ಳೆಯದಕ್ಕೆ 300ಬೇಕಾಗ್ಬಹುದು.’
‘ಮುನ್ನೂರಾ...? ತುಂಬಾ ಜಾಸ್ತಿಯಲ್ವೇನೋ?’ ಗುಣನಿಗೆ ಚಿಂತೆ.
‘ಯೇ...ನೀನೇನು ಒಂದೇ ಸಾರಿ ಅದನ್ನ ಮಾಡ್ತಿಯಾ? ಪದೇ ಪದೇ ಬೇಕಾಗುತ್ತದೆ. ಒಂದು ಫುಲ್ ಪ್ಯಾಕೇಟ್ ತೆಗೆದುಕೊಳ್ಳೋಣ’.
‘ ಆಯ್ತು. ಆದ್ರೆ ಅಂಗಡಿಯಲ್ಲಿ ಹೇಗೆ ಕೇಳೋದು?’
‘ಅದರಲ್ಲೇನಿದೆ. ಡೈರೆಕ್ಟಾಗಿ ಕೇಳಿದ್ರಾಯ್ತಪ್ಪಾ.’
‘ಅಂಗಡಿಯವರಿಗೆ ಡೌಟ್ ಬರೋಲ್ವ?’
‘ಅವನ ಅಂಗಡಿಯಲ್ಲಿ ಅದನ್ನ ಇಟ್ಟಿರೋದೇ ಮಾರೋಕೆ.’
‘ಆದ್ರೂ ನಾವು ಚಿಕ್ಕವರು ಹೋಗ್ಬಿಟ್ಟು ಕೇಳಿದ್ರೆ ಕೊಡ್ತಾರೇನೋ?’
‘ಅಯ್ಯಾ ಯಾಕೋ ನಾಚಿಕೆ? ಎಲ್ಲಾ ಪೇಪರಲ್ಲಿ, ಟೀವಿನಲ್ಲಿ ಬರೋಲ್ವಾ. ಈಗೆಲ್ಲಾ ಓಪನ್ ಜನ ಕಣೋ.’
‘ಚೀಟೀಲಿ ಬರೆದು ಕೊಟ್ರೆ..’ ಗುಣನಿಗೆ ಹೊಸ ಐಡಿಯಾ ಹೊಳೆಯಿತು.
‘ಥೂ... ಪಟ್ಟ. ಯಾಕೋ ಪುಳ್‌ಚಾರ್ ಬುದ್ದಿ ಓಡಿಸ್ತಿಯಾ...’
‘ನನ್ನ ಪಟ್ಟ ಅಂತ ಕರೀಬೇಡ.’
‘ ಸಾರಿ...ಏ ನಾವೇನೂ ಹೊಸದಾಗಿ ಮಾಡ್ತೀಲ್ಲ. ಎಲ್ಲಾ ಹುಡುಗರು ಒಂದಲ್ಲಾ ಒಂದು ಟೈಮ್‌ನಲ್ಲಿ ಈ ಕೆಲ್ಸ ಮಾಡೇ ಮಾಡಿರ್ತಾರೆ. ಅದಿಕ್ಕೆಲ್ಲಾ ತಲೆ ಕೆಡ್ಸ್ಕೋಬೇಡ. ಕೂಲ್‌ಆಗು’. ಸೋಮಣ್ಣನ ಮಾತಿಗೆ ಶಾಂತನಾಗಿ ಗುಣ ಯೋಚಿಸಿದ.
‘ಬಾ ಸೋಮು, ಈಗಲೇ ಅಂಗಡಿಗೆ ಹೋಗಿ ಅದನ್ನ ತಂದುಬಿಡುವ’
‘ ಕಮಾನ್...ಅದು ಗಂಡಸಾಗುವ ಹುಡುಗನ ಮೊದಲ ಲಕ್ಷಣ. ನಡಿ’
‘ಆ ಬ್ಯಾರಿಯ ಅಂಗಡಿಗೆ ಹೋಗುವಾ. ಅಲ್ಲಿ ದುಬಾಯಿ ಮಾಲು ಕಮ್ಮಿಗೆ ಸಿಕ್ತದೆ’ ಗುಣನ ಮಾತು ಸೋಮಣ್ಣನಿಗೆ ಅರ್ಥವಾಯ್ತು. ಕಮ್ಮಿ ಬೆಲೆಗಿಂತ ಆ ಅಂಗಡಿ ಮೂಲೆಯಲ್ಲಿದೆ ಎಂಬುದೇ ಗುಣನ ಮಾತಿಗೆ ಕಾರಣವೆಂದು ಗೊತ್ತಿದ್ದೂ ಅವನಿಗೆ ಸಂತೋಷವಾಗಲೆಂದು -‘ ಅದು ಮಾಡಿದ ಮೇಲೆ ನಿನ್ನ ಮುಖದ ಕಳೆ ಹೇಗೆ ಬದಲಾಗುತ್ತದೆ ನೋಡು. ಯು ವಿಲ್ ಫೀಲ್ ಮ್ಯಾನ್ಲಿ’ ಅಂದ. ಮಾತಾಡುತ್ತಾ ಇಬ್ಬರೂ ಬ್ಯಾರಿಯ ಅಂಗಡಿ ತಲುಪಿದಾಗ ಸೋಮಣ್ಣ ‘ ಸರಿಯಾಗಿ ಕೇಳು. ಎಲ್ಲಾ ನೆನಪಿದೆ ತಾನೆ’ ಅಂದಾಗ ಗುಣ ಕಣ್ಣಲ್ಲೇ ಸುಮ್ಮನಿರು ಅನ್ನುತ್ತಾ ಅಲ್ಲಿದ್ದ ಬ್ಯಾರಿಗೆ ‘ಒಂದು ಶೇವಿಂಗ್ ಸೆಟ್ ಕೊಡಿ’ ಅಂತ ಮೆಲ್ಲಗೆ ಹೇಳಿದ.












Click it and Unblock the Notifications