ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನನ್ನ ಬಗ್ಗೆ ಎರಡು ಮಾತು : ನಾ. ಡಿಸೋಜ ಭಾಷಣ-2

By Mahesh
|
Google Oneindia Kannada News

ನನ್ನ ಮನೆ ಮಾತು ಕೊಂಕಣಿ. ಗೋವೆಯಲ್ಲಿ ಧಾರ್ಮಿಕ ವಿಚಾರಣೆ ಅನ್ನುವಂತಹ ತುಸು ಕ್ರೂರವಾದ ಒಂದು ಪ್ರಕ್ರಿಯೆ ನಡೆದಾಗ ಅದನ್ನ ಎದುರಿಸಲಾರದೆ ಕೊಂಕಣಿ ಜನ ಕರ್ನಾಟಕಕ್ಕೆ ಓಡಿ ಬಂದಾಗ ಇಲ್ಲಿಯ ಇಕ್ಕೇರಿ ದೊರೆಗಳು ನಮಗೆ ಆಶ್ರಯ ನೀಡಿದರು. ಅಲ್ಲಿಂದ ವಿವಿಧ ವೃತ್ತಿ ಧರ್ಮಗಳನ್ನ ನಂಬಿದ ಕೊಂಕಣಿ ಜನ ಇಲ್ಲಿ ಇಲ್ಲಿಯವರೇ ಆಗಿ ಬದುಕಿದ್ದಾರೆ. ಅವರ ಭಾಷೆ, ಸಂಸ್ಕೃತಿ, ಜೀವನ ವಿಧಾನ ತುಸು ಬೇರೆ. ಆದರೂ ಕನ್ನಡ ನಾಡಿನವರೇ ಆಗಿ ಇಂದು ಉಳಿದಿದ್ದಾರೆ. ಉದ್ಯಮಿಗಳು, ಬ್ಯಾಂಕರುಗಳು, ಲೇಖಕರು, ಕಲಾವಿದರು ಕೊಂಕಣಿಯನ್ನ ಮಾತನಾಡುತ್ತಲೇ ಕನ್ನಡದ ಸೇವೆ ಮಾಡಿದ್ದಾರೆ.

ಕನ್ನಡದ ಪ್ರಖ್ಯಾತ ಚುಟುಕು ಕವಿ ದಿನಕರ ದೇಸಾಯಿ ಹೇಳಿದ್ದಾರೆ-
ಕನ್ನಡದ ಜೊತೆಗೆ ಕೊಂಕಣಿ ಮಾತನಾಡಿ
ಒಂದುಗೂಡಿದವು ಎರಡು ಜೀವನಾಡಿ
ಎರಡು ಪಕಳೆಯ ಹೂವು ಹಣ್ಣಾಗಿ ಕಾಯಿ
ಕಾಯಿ ಹಣ್ಣಾದೊಡನೆ ಜೀವನ ಮಿಠಾಯಿ.
ಹೀಗೆ ಕೊಂಕಣಿಯ ಜೊತೆಗೆ ಕನ್ನಡ ಮಾತನಾಡಿ ತಮ್ಮ ಜೀವನವನ್ನ ಮಿಠಾಯಿ ಮಾಡಿ ಕೊಂಡವರು ಬಹಳ ಜನ ಇದ್ದಾರೆ. ಗೋವಿಂದ ಪೈಗಳು, ಗೌರೀಶ ಕಾಯ್ಕಿಣಿ, ಗೋಪಾಲ ಕೃಷ್ಣ ಪೈ, ಸಂತೋಷ ಕುಮಾರ ಗುಲ್ವಾಡಿ, ಯಶವಂತ ಚಿತ್ತಾಲ, ಜಯಂತ ಕಾಯ್ಕಿಣಿ, ಇನ್ನೂ ಹಲವರು ಕೊಂಕಣಿ ಮನೋಭಾವದ ಕನ್ನಡಿಗರು. ಕನ್ನಡದ ಸೇವೆ ಮಾಡಿದವರು. ಕೊಂಕಣಿ ಬಹಳ ಪುರಾತನವಾದ ಭಾಷೆ, ಬಹಳ ಅಪರೂಪದ ಜಾನಪದ ಹಿನ್ನೆಲೆಯನ್ನ ಉಳ್ಳಂತಹದು, ಇದರ ಪ್ರಯೋಜನವನ್ನ ಈ ಕೊಂಕಣಿ ಜನ ಕನ್ನಡಕ್ಕೆ ಧಾರೆ ಎರೆದು ಕನ್ನಡವನ್ನ ಶ್ರೀಮಂತ ಗೊಳಿಸಿದ್ದಾರೆ. ನಾನು ಕೂಡ ನನ್ನ ಅಮ್ಮ ನನಗೆ ಹೇಳುತ್ತಿದ್ದ ಕೊಂಕಣಿಯ ಅದ್ಭುತ ಕತೆಗಳನ್ನ ಕೇಳಿ ಬೆಳೆದವನು. ಕೊಂಕಣಿ ಹಾಡು, ಗಾದೆ, ಒಗಟು ನನಗೆ ಪ್ರಿಯವಾಗಿತ್ತು. ಜೊತೆ ಜೊತೆಗೆ ಪ್ರಾಥಮಿಕ ಶಾಲೆಯ ಶಿಕ್ಷಕರಾಗಿದ್ದ ನನ್ನ ತಂದೆ ನನಗೆ ಕನ್ನಡದ ಕಡೆಗೆ ಕರೆದು ಕೊಂಡು ಹೋದರು. ಮಕ್ಕಳಿಗೆ ಕಲಿಸಲೆಂದೇ ಅವರು ಬರೆದು ಇರಿಸಿ ಕೊಂಡ ಪುಸ್ತಕದ ಒಂದು ಕವಿತೆ ನನ್ನನ್ನ ಹೊಸದೊಂದು ಪ್ರಪಂಚಕ್ಕೆ ಕರೆದೊಯ್ದಿತು.

ತೆಂಗಿನ ಮರಗಳು ಕುಳ್ಳಾಗಿದ್ದು
ಕಾಯ್ಗಳು ಕೈಗೆ ಸಿಗುವಂತಿದ್ದು
ಕೊಬ್ಬರಿ ಎಲ್ಲ ಮೇಲ್ಗಡೆ ಇರಲು
ಎಳನೀರಿನ ಮುಚ್ಚಳ ತೆಗೆದಿರಲು
ಎಷ್ಟೋ ಚೆನ್ನಾಗಿರುತ್ತಿತ್ತು ಇನ್ನೂ ಚೆನ್ನಾಗಿರುತ್ತಿತ್ತು
ಅನ್ನುವ ಈ ಕವಿತೆ ಕನ್ನಡದ ಎಳನೀರಿನ ಪರಿಚಯ ನನಗೆ ಮಾಡಿ ಕೊಟ್ಟಿತು.

ನಾನು 5ನೇ ವಯಸ್ಸಿನಲ್ಲಿ ಕನ್ನಡದ ಮೋಹಕ್ಕೆ ಒಳಗಾದೆ. ಅಂದು ನಾನು ಬೆಳೆಸಿ ಕೊಂಡ ಈ ಮೋಹ ಇಂದು ನನ್ನನ್ನ ಇಲ್ಲಿಗೆ ಕರೆತಂದು ನಿಲ್ಲಿಸಿದೆ. ಆದರೆ ಇದು ನಾನು ಒಂಟಿಯಾಗಿ ಮಾಡಿದ ಪಯಣವಲ್ಲ. ನನ್ನ ಬರವಣಿಗೆಗೆ ನನ್ನ ಮಿತ್ರರು, ಪತ್ರಿಕಾ ಸ್ನೇಹಿತರು ಸಾಥ್ ನೀಡಿದ್ದಾರೆ. ನನ್ನನ್ನ ಹುರಿದುಂಬಿಸಿದ್ದಾರೆ, ನಾನು ಬರೆದುದನ್ನ ಮೆಚ್ಚಿ ಕೊಂಡಿದ್ದಾರೆ. ನನ್ನ ನೋವಿಗೆ ಮಿಡಿದಿದ್ದಾರೆ. ಅವರೆಲ್ಲರನ್ನ ಸ್ಮರಿಸುವುದು ನನ್ನ ಕರ್ತವ್ಯ. ಇಂತಹಾ ಒಂದು ಸ್ಥಾನವನ್ನ ನನಗೆ ದೊರಕಿಸಿ ಕೊಡಲು ಕಾರಣರಾದ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಿಗೆ ಮತ್ತು ಎಲ್ಲ ಪದಾಧಿಕಾರಿಗಳಿಗೆ, ಜಿಲ್ಲಾ ಅಧ್ಯಕ್ಷರುಗಳಿಗೆ, ಈ ಕಾರ್ಯಕ್ಕೆ ಕೈಜೋಡಿಸಿದ ಎಲ್ಲರಿಗೆ, ನನಗೆ ಈ ಸ್ಥಾನ ಲಭ್ಯವಾಗಿದೆ ಅನ್ನುವುದನ್ನ ಕೇಳಿ ಸಂಭ್ರಮಿಸಿದ ಸಮಸ್ತ ಕನ್ನಡ ಕುಲ ಬಾಂಧವರಿಗೆ ನಾನು ನನ್ನ ಕೃತಜ್ಞತೆಯನ್ನ ಹೇಳುತ್ತಿದ್ದೇನೆ. ನೀವು ತೋರಿದ ಈ ಪ್ರೀತಿ ಕನ್ನಡ ಭಾಷೆಯ ಬಗ್ಗೆ ನೀವು ವ್ಯಕ್ತ ಪಡಿಸಿದ ಪ್ರೀತಿ ಎಂದು ತಿಳಿಯುತ್ತೇನೆ.

80th Kannada Sahitya Sammelana Madikeri President Norbert D'Souza Speech

ಸಾಹಿತ್ಯ ಮತ್ತು ಕಲೆ : ನಮ್ಮ ಜನ ಯಾವತ್ತೂ ಸಾಹಿತ್ಯಕ್ಕೆ ಹೆಚ್ಚಿನ ಸ್ಥಾನಮಾನವನ್ನ ಕೊಡುತ್ತ ಬಂದಿದ್ದಾರೆ. ಸಾಹಿತ್ಯ ಸಮ್ಮೇಳನ ಅಂದರೆ ಇಡೀ ನಾಡಿನ ಉದ್ದಕ್ಕೂ ಒಂದು ಸಂಚಲನ ಕಾಣಿಸುತ್ತದೆ. ಸಾಹಿತ್ಯ ಸಮ್ಮೇಳನಗಳನ್ನ ಸಂತೆ ಜಾತ್ರೆ ಎಂದು ಕೆಲವರು ಕರೆದರೂ ಅದಕ್ಕೆ ಬರುವ ಜನ ಕಡಿಮೆ ಆಗಿಲ್ಲ. ಸಮ್ಮೇಳನದ ಗೋಷ್ಠಿಗಳಲ್ಲಿ ಜನ ಭಾಗವಹಿಸುತ್ತಾರೆ, ಕವಿ ಗೋಷ್ಠಿಯನ್ನ ಕೇಳುತ್ತಾರೆ. ಪುಸ್ತಕ ಪ್ರದರ್ಶನದ ಪ್ರಯೋಜನ ಪಡೆದು ಕೊಳ್ಳುತ್ತಾರೆ.ಸಮ್ಮೇಳನ ದಿನದಿಂದ ದಿನಕ್ಕೆ ತನ್ನ ಜನಪ್ರಿಯತೆಯನ್ನ ಹೆಚ್ಚು ಮಾಡಿ ಕೊಳ್ಳುತ್ತದೆ.

ಈ ಸಮ್ಮೇಳನವನ್ನ ಬೇರೊಂದು ರೀತಿಯಲ್ಲಿ ನಡೆಸಬೇಕು ಅನ್ನುವ ಮಾತು ಇದೆಯಾದರೂ ಅದಕ್ಕೊಂದು ಪರ್ಯಾಯ ರೂಪ ಕೊಡಲು ಯಾರಿಂದಲೂ ಆಗಿಲ್ಲ. ಇದಕ್ಕೆ ಕಾರಣ, ಮೊದಲನೆಯದು ಸಾಹಿತ್ಯ ಬದುಕನ್ನ ಪ್ರತಿ ಬಿಂಬಿಸುತ್ತದೆ ಅನ್ನುವುದು; ಎರಡನೆಯದು ಅದೊಂದು ಭಾಷೆಯನ್ನ ಅವಲಂಬಿಸಿ ಕೊಂಡಿದೆ ಅನ್ನುವುದು. ಈ ಬದುಕು ನಮಗೆ ಬಹಳ ಪ್ರಿಯವಾದದ್ದು. ನಮ್ಮ ಸುಖ, ನೋವು, ಕಷ್ಟ, ತಾಪತ್ರಯಗಳು ಅದೆಷ್ಟೇ ಇರಲಿ ಬದುಕಿಗೆ ವಿಮುಖವಾಗಿ ಹೋಗಲಿಕ್ಕೆ ನಾವು ಬಯಸುವುದಿಲ್ಲ. ನಮ್ಮಲ್ಲಿ ಬದುಕನ್ನ ಧಿಕ್ಕರಿಸಿ ಸನ್ಯಾಸಿಗಳಾಗುವವರು ಕೆಲವರೇ ಆದರೆ ಉಳಿದವರೆಲ್ಲ ಪರಿಸ್ಥಿತಿ ಏನೇ ಬರಲಿ ಬದುಕ ಬೇಕು ಅನ್ನುವವರು. ಆತ್ಮಹತ್ಯಗೆ ನಮ್ಮಲ್ಲಿ ಗೌರವ ಇಲ್ಲ. ಇರಬೇಕು ಇದ್ದು ಜಯಿಸ ಬೇಕು ಅನ್ನುವುದು ನಮ್ಮ ಧ್ಯೇಯ. ಮಾನವ ಜನ್ಮ ದೊಡ್ಡದು ಇದ ಹಾನಿ ಮಾಡಿ ಕೊಳ್ಳಬೇಡಿ ಹುಚ್ಚಪ್ಪಗಳಿರಾ ಎಂದು ನಮ್ಮ ದಾಸರು ಹೇಳಿದ್ದಾರೆ. ಇಂತಹಾ ಬದುಕಿನ ಬಗ್ಗೆ ನಮಗೆ ನೇರವಾಗಿ ತಿಳಿಸಿ ಕೊಡುವುದು ಸಾಹಿತ್ಯ. ನಮ್ಮಲ್ಲಿ ಸದಾ ಮತ್ತೊಬ್ಬರು ಬದುಕನ್ನ ಹೇಗೆ ಎದುರಿಸಿದರು ಅನ್ನುವುದರ ಬಗ್ಗೆ ಕುತೂಹಲ ಇರುತ್ತದೆ. ಈ ಕುತೂಹಲವನ್ನ ತಣಿಸೋದು ಸಾಹಿತ್ಯ. ಈ ಕೆಲಸವನ್ನ ಬೇರೆ ಕಲಾ ಮಾಧ್ಯಮಗಳು ಮಾಡಿದರೂ ಕೂಡ ಒಂದು ಕ್ರಮದಲ್ಲಿ ಒಂದು ಮಾದರಿಯಲ್ಲಿ ಸರಳವಾಗಿ ಈ ಕೆಲಸ ಮಾಡುವುದು ಸಾಹಿತ್ಯ. ಇದಕ್ಕಾಗಿ ಸಾಹಿತ್ಯದ ಬಗ್ಗೆ ನಮಗೆ ಗೌರವ.

English summary
The three day Kannada Sahitya Sammelana inaugurated today (Jan.7). Here is the part 2 of complete text of speech by eminent Kannada writer and novelist President for 80th Kannada Sahitya Sammelana Norbert D'Souza.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X