ನನ್ನ ಕನಸಿನ ಊರು : ವಿಪಿ ಬಳಿಗಾರ್

ಎಓಎಲ್ ಪ್ರಾಯೋಜಿತ ಡಿವೈನ್ ಕರ್ನಾಟಕ ಪ್ರಾಜೆಕ್ಟ್ ವತಿಯಿಂದ ಗ್ರಾಮೀಣ ಜನರ ಜೀವನಮಟ್ಟ ಸುಧಾರಿಸುವ ಚಿಂತನ ಗೋಷ್ಠಿ ಇತ್ತು. ಈ ಸಂದರ್ಭದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ವತಿಯಿಂದ ಹೊರಡಿಸಲಾದ ಒಂದು ಸುತ್ತೋಲೆ "ದುಡ್ಡಿಲ್ಲದೆ ಮಾಡಬಹುದಾದ ದೊಡ್ಡ ಕೆಲಸಗಳು" ಪರಿಪತ್ರವನ್ನು ಸಭಿಕರಿಗೆ ಹಂಚಲಾಯಿತು. ಅದರ ಜತೆಗೆ , ವಿ ಪಿ ಬಳಿಗಾರರು ರಚಿಸಿದ "ನನ್ನ ಕನಸಿನ ಊರು" ಕವನವಿತ್ತು. ಆ ಕವನ ಇಲ್ಲಿ ನಿಮಗಾಗಿ- ಸಂಪಾದಕ
ನನ್ನ ಕನಸಿನ ಊರಿನಲ್ಲಿ ನೋಟಿಗೆ ಓಟುಗಳ ಮಾರಾಟವಿಲ್ಲ
ಹೆಂಡ ಸಾರಾಯಿ ಹೊಳೆ ಹರಿಯುವುದಿಲ್ಲ
ಓಣಿ ಓಣಿಗಳ ಮಧ್ಯೆ ಕಂದಕಗಳಿಲ್ಲ
ಮೇಲು ಕೀಳು ಮೈಲಿಗೆ ಭಾವಗಳಿಲ್ಲ
ಮಂದಿರದ ಪ್ರಾರ್ಥನೆ ಜಾಗಟೆಗಳು
ಮಸೀದಿಯ ನಮಾಜು ಮೈಕುಗಳು
ದ್ವೇಷ ಬಿತ್ತುವುದಿಲ್ಲ, ಶಾಂತಿ ಕದಡುವುದಿಲ್ಲ
ಹಬ್ಬ ಹರಿದಿನಗಳಲ್ಲಿ ಪ್ರಾಣಿಗಳ ಬಲಿಯಿಲ್ಲ
ಮಾಟ ಮಂತ್ರಗಳಿಗೆ ಎಳ್ಳಷ್ಟೂ ಒಲವಿಲ್ಲ
ನನ್ನೂರಿನ ಬಾಲ ಬಾಲೆಯರು ಶಾಲೆ ಬಿಟ್ಟು ಕೂಲಿ ಮಾಡುವುದಿಲ್ಲ
ಆಟಪಾಠ ಓಟಗಳಲಿ ಹಿಂದೆ ನೋಡಿಲ್ಲ
ಶಿಕ್ಷಕ ಶಿಕ್ಷಕಿಯರು ಕಲಿಸುವುದನ್ನು ಬಿಟ್ಟು ಕಾದಾಡುವುದು ಮಾಡುವುದಿಲ್ಲ
ಶಾಲೆಗಳ ಹಂಚುಗಳು ಹಾರಿ ಹೋಗಿಲ್ಲ, ಗೋಡೆಗಳು ಬಿರುಕು ಬಿಟ್ಟಿಲ್ಲ
ವೈದ್ಯ ದಾದಿಯರು ರೋಗಿಗಳ ರಕ್ತ ಹೀರುವುದಿಲ್ಲ
ಹೆಣದ ಕಿಸೆಗೆ ಕೈ ಹಾಕುವುದಿಲ್ಲ, ಮಾತ್ರೆಗಳ ಮಾರಾಟ ಮಾಡುವುದಿಲ್ಲ
ವ್ಯಾಪಾರಿಗಳು ಅನ್ಯಾಯದ ತಕ್ಕಡಿ ತೂಗುವುದಿಲ್ಲ
ಗ್ರಾಮ ಲೆಕ್ಕಿಗ ರೈತ ರೈತರ ನಡುವೆ ಜಗಳ ಹಚ್ಚುವುದಿಲ್ಲ
ಊರ ಪಂಚಾಯಿತಿಯಲ್ಲಿ ಗ್ರಾಮ ಸಭೆಗಳಿಲ್ಲದೆ ಯೋಜನೆಗಳ ರಚನೆಯಿಲ್ಲ
ನನ್ನೂರಿನಲ್ಲಿ ಬಡವರಿಗೆ ಕೊಟ್ಟ ಮನೆಗಳು ವರುಷಗಳಾದರಿನ್ನೂ ಮುರಿದು ಬಿದ್ದಿಲ್ಲ
ಎಮ್ಮೆ ಹಸುಗಳು ಬರಡಾಗಿ ನಿಂತಿಲ್ಲ
ಬೀದಿದೀಪಗಳು ಹಗಲಿನಲ್ಲಿ ಉರಿಯುವುದಿಲ್ಲ
ನಲ್ಲಿನೀರು ಪೋಲಾಗಿ ಹರಿಯುವುದಿಲ್ಲ
ಕೂಲಿಗಾಗಿ ಬಂದ ಕಾಳು ಕಾಳಸಂತೆ ಸೇರುವುದಿಲ್ಲ
ಬರ ಪರಿಹಾರದ ಕೆರೆ ಕಟ್ಟೆ ಒಡ್ಡುಗಳು
ಭಾರಿ ಮಳೆಗೂ ಒಡೆದು ಹೋಗುವುದಿಲ್ಲ
ನನ್ನ ಕನಸಿನ ಊರಿನಲ್ಲಿ ನೋಟಿಗೆ ಓಟುಗಳ ಮಾರಾಟವಿಲ್ಲ












Click it and Unblock the Notifications