ನವಿಲುಗರಿ ಸೋಮು ಅವರ ಕವನ
*ನವಿಲುಗರಿ ಸೋಮು, ಬೆಂಗಳೂರು
ನೀನೆಂದರೇ
ಒಂದು ಪುಸ್ತಕ
ಅಲ್ಲಿರುವುದೆಷ್ಟು
ಹಾಳೆಗಳೋ..!
ಮತ್ತು ನೀನೆಂದರೇ
ಅಲ್ಲಿರುವ ಅಷ್ಟೂ
ಹಾಳೆಗಳಲ್ಲಿರುವ
ಪ್ರೀತಿಯ ಘಜಲ್ಲುಗಳು.!
ಮತ್ತು ಅಷ್ಟೂ ಘಜಲ್ಲುಗಳಲ್ಲಿ
ಬಿಕ್ಕಳಿಕೆಗೆ ಅಗ್ರಸ್ಥಾನ.
ನೀನೆಂದರೇ
ಸಮಸ್ತ ದೇವರುಗಳು,
ಅದೆಷ್ಟು ದೇವರುಗಳೋ
ಲೆಕ್ಕವಿಟ್ಟಿಲ್ಲ ಇಲ್ಲಿಯವರೆಗೆ..
ಮತ್ತೆ ನೀನೆಂದರೇ,
ದೇವರು ನನಗೆ ಇದಿರಾಗಿ
ನಿನ್ನ ಕುರಿತಾದ ನನ್ನ ಕೆಲವು
ಬೇಡಿಕೆಗಳಿಗೆ ಅಸ್ತು ಅನ್ನುವುದು.!
ಯಾಕೋ ದೇವರಿದ್ದಾನೆ ಅನ್ನುವ
ನಂಬಿಕೆಗೂ ಗೆದ್ದಲು ಹಿಡಿದಿದೆ.
ನೀನೆಂದರೇ ನನ್ನ
ಒಂದೇ ಒಂದು ಹಾಡು
ಇಲ್ಲಿರುವ ಭಾವಗಳೆಷ್ಟೋ !
ಮತ್ತೆ ನೀನೆಂದರೇ ನೀನೆ ಬರೆದ
ನನ್ನ ಮತ್ತೂ ಒಂದು ಹಾಡು,
ಇಲ್ಲಿನ ಸಾಹಿತ್ಯಕ್ಕೆ
ಕೊಂಚ ಪ್ರೀತಿ ಕಮ್ಮಿ!
ನೀನೆಂದರೇ ಒಟ್ಟು ನನ್ನ
ಜೀವನದ ಒಂದು ಹಾಡು ಅಷ್ಟೇ
ಆದರೇ ಒಂದೇ ಒಂದು ಸಾಲು
ನೆನಪಾಗುತ್ತಿಲ್ಲ..ನಿನ್ನ ಸಹಾಯಕ್ಕೆ ದಿಕ್ಕಾರ.
ನೀನೆಂದರೇ
ಒಂದು ಮೈದಾನ !
ಅಲ್ಲಿ ಪ್ರೀತಿಯ
ಕುರಿತಾದ ಎಲ್ಲಾ
ಆಟಪಾಠಗಳನ್ನು
ನಿಷೇಧಿಸಲಾಗಿದೆ.
ಮತ್ತು ಅಲ್ಲಿನಾನಿಡಬೇಕಾದ
ಹೆಜ್ಜೆಗಳಿಗೀಗಾಗಲೇ ಕೋಳಗಳನ್ನ
ತಯಾರಿಸಿಡಲಾಗಿದೆಯಂತೆ.!
ನೀನೆಂದರೇ ಬೆಳಕು
ಆದರೂ ಏನು ಕಾಣಿಸುತ್ತಿಲ್ಲ..
ನೀನೆಂದರೇ ಅಮ್ಮ !
ಗುಮ್ಮ ಬಂದರೂ
ಎತ್ತಿಕೊಳ್ಳುತ್ತಿಲ್ಲ..
ನೀನೆಂದರೇ ಪ್ರೀತಿಯ
ಲೆಖ್ಖದ ಮಾಸ್ತರ್ !
ಏನು ಅರ್ಥವಾಗದು.
ನೀನೆಂದರೇ ಥೇಟು
ತುಂಬಿದ ಕೋರ್ಟು !
ಅಲ್ಲಿ ನೀನು ಎತ್ತುವ
ಎಲ್ಲ ಪ್ರಶ್ನೆಗಳಿಗೂ
ಹತ್ತಿಪ್ಪತ್ತು ಉತ್ತರಗಳು
ಮತ್ತೆ ನನಗೆ ಒಂದೂ
ಪ್ರಶ್ನೆಯಿಲ್ಲದೆ ಮರಣದಂಡನೆ.












Click it and Unblock the Notifications