ಕವನ: ಆಗಸಕು ಆಗುತಿದೆ, ಪ್ರಸವದಭಿಲಾಷೆ!
*ಶ್ರೀನಿಧಿ.ಡಿ.ಎಸ್, ಬೆಂಗಳೂರು
ಕಿಟಕಿಯಾಚೆಗೆ ಮೇಲೆ ಕಟ್ಟಿಹುದು ಮಳೆಮೋಡ,
ನೀರ ಗರ್ಭವ ಹೊತ್ತು ತೂಗುತಿದೆ ಮುಗಿಲು
ಬಣ್ಣ ಗಾಜಿನ ಹೊರಗೆ, ಆಗಸಕು ಬಣ್ಣವಿದೆ
ಸಂಜೆಗಿರಣಗಳೆಲ್ಲ ಬಾನೊಳಗೆ ಸೆರೆಯು.
ಕೆಳಗೆ ರಸ್ತೆಯ ಮೇಲೆ, ಚಕ್ರವೇಗವು ಜೋರು
ಮನೆಗೆ ಸೇರುವ ತವಕ ಸಹಜ ತಾನೆ,
ಹಲವು ಬಣ್ಣದ ಬಾನು, ದಟ್ಟ ಕಪ್ಪಾಗುತಿದೆ
ಭುವಿಯೆಡೆಗೆ ಹೊರಟಿಹುದು, ಮಳೆಯ ಮೇನೆ.
ಇನ್ನು ಹಲವರಿಗಿಲ್ಲಿ, ನೆನೆದು ನಡೆಯುವ ಬಯಕೆ
ಮುಂಗಾರ ತೇರೊಳಗೆ ಕೊಳೆಯ ಕಳೆವಾಸೆ.
ಚಿತ್ರಚಿತ್ತಾರದಾ ಮಿಂಚುಗಳು ಮೂಡುತಿರೆ
ಆಗಸಕು ಆಗುತಿದೆ, ಪ್ರಸವದಭಿಲಾಷೆ!
ಸೈಕಲಿನ ಹುಡುಗ, ಕಡಲೆ ಮಾರುವ ಮುದುಕ
ಹೂ ಹುಡುಗಿ- ಎಲ್ಲರೂ ನಿಂತಿಹರು ಮರದ ಕೆಳಗೆ
ಒದ್ದೆಯಾದೇವೆಂಬ ಚಿಂತೆಯಿದ್ದಂತಿಲ್ಲ
ಮಳೆಯ ಪ್ರತಿಫಲನವಿದೆ, ಕಣ್ಣಪಾಪೆಗಳೊಳಗೆ.
ನಾನು ಹೊರಟಿದ್ದೇನೆ, ಅಲ್ಲಿ- ರಸ್ತೆಯ ಕಡೆಗೆ
ತೋಯ್ದು ಬಿಡಲೆನ್ನನು, ಮಳೆಯು ಕುಂಭದ್ರೋಣ.
ಒಳಗಿರುವರೆಲ್ಲ ಅಲ್ಲೆ ಇರಿ, ಬರಿದೆ ಕನಸುತ್ತ,
ಇಷ್ಟವಿದ್ದರೆ ಬನ್ನಿ- ಜೊತೆಗೆ ನೆನೆಯೋಣ!












Click it and Unblock the Notifications