ನಿಮ್ಮ ಬೊಗಸೆಗೆ ಒಂದೈದು ಮಳೆ ಹನಿಗಳು!
ಮತ್ತೆ ಮಳೆ ಸುರಿಯುತಿದೆ... ಎಲ್ಲ ನೆನಪಾಗುತಿದೆ...
ಹನಿ 1 ಮೊದಲು ತಲೆ ಸವರಿದ
ನಾನು ಅಮ್ಮನೆಂದುಕೊಂಡೆ!
ಆಮೇಲೆ ಹಣೆಗೆ ಮುತ್ತಿಟ್ಟ...
ಕೆನ್ನೆ ಸವರಿದ..
ಅರೇರೇರೇ...
ತುಟಿಗೆ ತುಟಿ ಸೇರಿಸಿದ...
ಮೈತುಂಬ ಅವನ ಮುತ್ತಿನ ಮುದ್ರೆಗಳು!
ಸಹಿಸಲಾರೇ ಈ ಅತ್ಯಾಚಾರ..
ನಾನು ನನ್ನ ಹುಡುಗನಿಗಷ್ಟೇ ಸ್ವಂತ!
ಸಂಜೆಯೇ ಅಂಗಡಿಗೆ ಹೋಗಿ ಛತ್ರಿ ತಂದೆ!
ಇನ್ನು ನಾನು ನನ್ನಿಷ್ಟ!
ಹನಿ 2
ಬಾ ಎಂದಾಗ ಬರಲಿಲ್ಲ
ಎರಡು ಹನಿಗಳನ್ನು ಚೆಲ್ಲಲಿಲ್ಲ
ಬೇಡ ಎಂದಾಗ ಬಂದೆ...
ಹೋಗು ಎಂದರೂ ಹೋಗಲಿಲ್ಲ...
ಈಗ ನಿನಗೇನು ತಲೆಕೆಟ್ಟಿದೆಯಾ?
ನಿನ್ನ ಹುಡುಗಿ ಕೈ ಕೊಟ್ಟಳೆಂದು
ಅಳುತ್ತಿರುವೆಯಾ?
ಹನಿ 3
ಅವಳು ಮಳೆ!
ಅವಳು ಬಂದಾಗಲೆಲ್ಲಾ
ನಾ ಕುಣಿಯುತ್ತೇನೆ!
ನಾ ಕುಣಿಯಲೆಂದೇ
ಅವಳು ಬರುತ್ತಾಳೆ!
ಅವಳು ಬರಲೆಂದೇ
ನಾನು ಕುಣಿಯುತ್ತೇನೆ!
ಹನಿ 4
ಮೋಡ ಮೋಡ ಡಿಕ್ಕಿ ಹೊಡೆದಾಗ
ಭಯಾನಕ ಗುಡುಗು...
ನನ್ನೆದೆಯಲ್ಲಿ ನಡುಕ!
ಗುಡುಗಿನ ಭಯಕ್ಕೆ
ಅವನ ತೆಕ್ಕೆಯಲ್ಲಿ ನಾನು
ನನ್ನ ತೆಕ್ಕೆಯಲ್ಲಿಅವನು!
ಹನಿ 5
ಮಳೆಯ ಒಂದೊಂದೇ ಹನಿಗಳನ್ನು
ಜೋಪಾನವಾಗಿ ಸಂಗ್ರಹಿಸುತ್ತಿರುವೆ.
ಆ ಹನಿಗಳ ಮಣಿಗಳಂತೆ ಪೋಣಿಸಿ
ಹಾರ ಮಾಡುವ, ಆ ಹಾರದಿಂದಲೇ
ನನ್ನ ಹುಡುಗಿಯ ಸಿಂಗರಿಸುವ
ಹಂಬಲ,ಆಕಾಂಕ್ಷೆ, ಅತಿಯಾಸೆ ನನ್ನದು!












Click it and Unblock the Notifications