ಈ ಶ್ರಮಕ್ಕೆ ಆಶ್ರಮ
ವೃದ್ಧಾಶ್ರಮ, ನಗರ ಜೀವನ ಮತ್ತು ಹೆತ್ತವರ ಬೇಜವಾಬ್ದಾರಿಗಳ ಸುತ್ತ ಒಂದು ಅರ್ಥಪೂರ್ಣ ಪದ್ಯ
ಗುಂಗುರು ಕೂದಲ ಪಿಳಿಪಿಳಿ ಕಂಗಳನೆವವಿಲ್ಲದೆ ನಗುವ ಹವಳದ ತುಟಿಗಳ
ಹಡೆದವ್ವ ಇದ್ದೂ ಇಲ್ಲದ ಕಂದಮ್ಮ
ನಿನ ಬಿಟ್ಟು ನಾ ಹ್ಯಾಂಗ ಹೋದೇನು
ನಿನ ತಂದಿ ತಾಯ್ಗಳು ಪಟ್ಟಣದ ಬದುಕಲ್ಲಿ
ಒತ್ತೆಯಾಳಾಗಿಹರು ಹಣವನೆಣಿಸುತ್ತ
ನೀ ಹುಟ್ಟಿದ ಘಳಿಗಿ ನಾನು ಹತ್ತಿರವಾದೆ
ನಿನ ಬಿಟ್ಟು ನಾ ಹ್ಯಾಂಗ ಹೋದೇನು
ಬಾಳಂತಿ ತನಕಂತ ಕರಕೊಂಡು ಬಂದರು
ಸೇವಂತಿ ಹೂ ನಿನ್ನ ಮಡಿಲಿಗಿಟ್ಟರು
ಸೇವಾ ಬೇಕಾದಾಗ ನೆಪ್ಪಾತು ಮುದುಕೀದು
ನಿನ ಬಿಟ್ಟು ನಾ ಹ್ಯಾಂಗ ಹೋದೇನು
ಮಕ್ಕಳ ಮಂಟಪದಿ ನಿನ್ನ ಬಿಡತಾರಂತ
ಹೊಕ್ಕುಳ ಬಳ್ಳಿಯ ಒಣಗಿಸುತಾರಂತ
ವರುಷ ನಿನಗಾತಂತ ನನ ಸೇವಾ ಸಾಕಂತ
ನಿನ ಬಿಟ್ಟು ನಾ ಹ್ಯಾಂಗ ಹೋದೇನು
ಹೊತ್ತು ಹೊತ್ತಿಗೂ ಅಲ್ಲಿ ಹಾಲ ಕೊಡತಾರೇನ
ಸುತ್ತ ಮುತ್ತಲ ಮಂದಿ ನಮ್ಮವರೇನ
ನಿದ್ದಿ ಬಂದರ ಪದವ ಹಾಡ್ಯಾರೇನ ಮತ್ತ
ನಿನ ಬಿಟ್ಟು ನಾ ಹ್ಯಾಂಗ ಹೋದೇನು
ನಿನ ಹಾಂಗ ಅಲ್ಲಿ ಏಟೊಂದು ಹೂಗಳು
ನನ ಹ್ಯಾಂಗ ಒಬ್ಬಜ್ಜಿ ಅಲ್ಲಿಲ್ಲ
ಸೊಂಟಕ್ಕೇರಿಸಿಕೊಂಡು ಚಂದ್ರಮನ ತೋರ್ವಾರೆ
ನಿನ ಬಿಟ್ಟು ನಾ ಹ್ಯಾಂಗ ಹೋದೇನು
ಸಕ್ಕರೆಯ ಗೊಂಬೀನೀ ಹತಭಾಗ್ಯ ಅಜ್ಜೀನಾ
ನನ ಒಯ್ದು ಆಶ್ರಮದಿ ಬಿಡತಾರಂತ
ಶಿವನಿಚ್ಛೆ ಇದ್ದರೆ ಮತ್ತೊಮ್ಮೆ ಬಂದೇನು
ವೃದ್ಧರಾಶ್ರಮಕೆ ಹ್ಯಾಂಗೆ ಹೋದೇನು












Click it and Unblock the Notifications