ಅಂಥಿಂಥ ಹೆಣ್ಣು ನೀನಲ್ಲ!! ಹೌದೌದು!
ಇತ್ತೀಚಿನ ಚಲನಚಿತ್ರಗಳಲ್ಲಿ ಹಾಡಿಗಿಂತಲೂ ವಾದ್ಯಗಳದ್ದೇ ದೊಡ್ಡ ಸದ್ದು! ಕೇಳುವುದಕ್ಕೆ ಕರ್ಣ ಕಠೋರ! ಸಾಹಿತ್ಯ ಮತ್ತು ಸಂಗೀತ ಎರಡೂ ಕೆಟ್ಟಿವೆ ಎಂದು ಮನೆಯಲ್ಲಿನ ಹಿರಿ ತಲೆಗಳು ಆಗಾಗ ಹೇಳುತ್ತಿರುತ್ತವೆ. ಆ ಮಾತು ಒಂದರ್ಥದಲ್ಲಿ ನಿಜವೂ ಹೌದು. ಬೇಕಿದ್ದರೇ, 1964ರಲ್ಲಿ ತೆರೆಕಂಡ ತುಂಬಿದ ಕೊಡ ಚಿತ್ರದ ಅಂಥಿಂಥ ಹೆಣ್ಣು ನೀನಲ್ಲ ಹಾಡನ್ನು ನೆನಪಿಸಿಕೊಳ್ಳಿ....
ಅಂದ ಹಾಗೇ ಈ ಚಿತ್ರಕ್ಕೆ ಸಂಗೀತ ನೀಡಿದ್ದು; ಜಿ. ಕೆ. ವೆಂಕಟೇಶ್. ಕೆ.ಎಸ್.ನರಸಿಂಹಸ್ವಾಮಿ ಅವರ ದೀಪದ ಮಲ್ಲಿ ಸಂಕಲನದಲ್ಲಿರುವ ಈ ಪದ್ಯಕ್ಕೆ, ತಮ್ಮ ಶ್ರೀಮಂತ ಕಂಠದಿಂದ ಜೀವ ತುಂಬಿದ್ದು; ಕಾಳಿಂಗ ರಾವ್.
ಅಂಥಿಂಥ ಹೆಣ್ಣು ನೀನಲ್ಲ;ನಿನ್ನಂಥ ಹೆಣ್ಣು ಇನ್ನಿಲ್ಲ.
ಹೆಡೆಹೆಡೆಯ ಸಾಲು ತುರುಬೆಲ್ಲ,
ಗುಡಿನಿಂದ ಹೂವು ಮೇಲೆಲ್ಲ,
ತೆರೆತೆರೆಯ ಹೊರಳು ಕುರುಳೆಲ್ಲ,
ಸುಳಿಮಿಂಚು ಕಣ್ಣ ಹೊರಳೆಲ್ಲ!
ಮಣಿಮಾಲೆ ಕೊರಳ ದನಿಯೆಲ್ಲ,
ಹೊಂಬಾಳೆ ಆಸೆ ಒಳಗೆಲ್ಲ.
ಒತ್ತಾಯವಿಲ್ಲ: ಒಲವೆಲ್ಲ!
ನಿನ್ನಂಥ ಹೆಣ್ಣು ಹಲವಿಲ್ಲ.
ಎದೆಮಟ್ಟ ನಿಂತ ಹೂ ಬಳ್ಳಿ;
ಎಷ್ಟೊಂದು ಹೂವು ಅದರಲ್ಲಿ!
ಉಸಿರುಸಿರು ಮೊಗ್ಗು ಹೂವೆಲ್ಲ;
ನೀ ಬಳ್ಳಿ ಬೆಳಕು ಬದುಕೆಲ್ಲ!
ನಡುಬೆಟ್ಟದಲ್ಲಿ ನಿನ್ನೂರು;
ಅಲ್ಲಿಹವು ನವಿಲು ಮುನ್ನೂರು.
ಮುನ್ನೂರು ನವಿಲು ಬಂದಂತೆ
ನೀ ಬಂದರೆನಗೆ; ಸಿರಿವಂತೆ.
ನಡುದಾರಿಯಲ್ಲಿ ನನ್ನೂರು;
ಕುಡಿಮಿಂಚಿನೂರು ಹೊನ್ನೂರು
ಮುನ್ನೂರು ಮಿಂಚು ಹೊಳೆದಂತೆ
ನೀ ಬಂದರೆನಗೆ, ಸಿರಿವಂತೆ.
ಬಲುದೂರ ದೂರ ನೀನಾಗಿ,
ಹೊಂಗನಸು ನಡುವೆ ದನಿತೂಗಿ,
ಕಾದಿರಲು ನಾನು ನಿನಗಾಗಿ
ನೀ ಬರುವೆ ಚೆಲುವೆ ಹೊಳೆಯಾಗಿ.
ಏನಂಥ ಚೆಲುವೆ ನೀನಲ್ಲ.
ನೀನಲ್ಲ? ಚೆಲುವೆ ಇನ್ನಿಲ್ಲ!
ಹಾಡಲ್ಲ, ನೀನು ಕನಸಲ್ಲ;
ನಿನ್ನಿಂದ ಹಾಡು ಕನಸೆಲ್ಲ.












Click it and Unblock the Notifications