ಅರ್ಧ ಸತ್ಯದ ಹುಡುಗಿ
- ಜಾನಕೀಸುತ(ಸೌಜನ್ಯ ಎಚ್.ಪಿ.)

ಅರ್ಧಂಬರ್ಧ ಬದುಕಿ,
ಬದುಕು ಪೂರ್ತಿಯಾಗುವ
ಮೊದಲೇ, ಖಾಲಿಯಾಗಿಬಿಟ್ಟದ್ದು ಸತ್ಯ
ಬ್ರಿಟೀಷ್ ರಾಜವಂಶದ
ಬೀಜವನ್ನು ಉದರದಲ್ಲಿಟ್ಟು,
ಹೆತ್ತು, ಹೊತ್ತು, ಮಕ್ಕಳ್ಳಿನ್ನು
ಮಡಿಲು ಬಿಡುವ ಮೊದಲೇ
ಮಗ್ಗುಲಾದಳು, ಪ್ರಿಯಕರನೆಡೆಗೆ,
ಅವನೆಡೆಗೆ ದಿಗಂತದೆಡೆಗೆ!
ಕಂಡು, ಗಂಡನ ಕಾಮಕೇಳಿ,
ಇನ್ನೊಬ್ಬಳೊಡನೆ ಕೆರಳಿ.
ಅಣು ಬಾಂಬ್‌ನ ಸ್ಫೋಟದಂತೆ
ಸಿಡಿದುಹೋಯ್ತು ರಾಜಮನೆತನದ
ಮರ್ಯಾದೆ, ಒಳಗುಟ್ಟು,
ಒಳಗಿನ ಹುಳುಕು,
ಅದರ ಮೇಲೆ ರತ್ನಗಂಬಳಿ
ಹಾಸಿದ ವೈಭವೋಪೇತ ಬದುಕು,
ಎಲ್ಲವೂ ಒಮ್ಮೆಲೆ.
ಸುದ್ದಿಗೊಂದು ವಸ್ತುವಾಗಿ,
ಸುದ್ದಿ ಸುಬ್ಬಕ್ಕನಾಗಿ,
ಯಾರದೋ ಕೈ ಕುಲುಕಿದ್ದು,
ಯಾರೆಡೆಗೋ ಕಣ್ ಮಿಟುಕಿಸಿದ್ದು,
ಎಲ್ಲವೂ ಸುದ್ದಿಯಾಗಿ
ಸುದ್ದಿಗೊಂದು ಗುದ್ದಿಯಾಯ್ತು,
ಪಾಪರಾತ್ಸಿಗಳು ಬೆನ್ನಟ್ಟಿ.
ಇಲ್ಲಿ ಕಾಣದ ಉಳಿದರ್ಧ
ಬದುಕ ಕಾಣುವ,
ಇಲ್ಲಿ ಸಿಗದ ಪ್ರೇಮ
ಎಲ್ಲೋ ಹುಡುಕುವ,
ತುಡಿತ ಹೆಚ್ಚಾದವಳಂತೆ
ಹೇಳದೆ, ಕೇಳದೆ ಹೋಗಿಬಿಟ್ಟಳು
ಪ್ರೇಮ ವಂಚಿತೆ ರಾಜಕುಮಾರಿ.
ಜೀವವಿದ್ದಾಗ ಬದುಕಲಿಲ್ಲ;
ಜೀವ ಹೋದ ಮೇಲೆ ಸಾಯಲಿಲ್ಲ,
ಎನ್ನುವುದು ಮಾತ್ರ ಪೂರ್ತಿ ಸತ್ಯ!
(*ಮೈಸೂರಿನ ಸಿರಿಗನ್ನಡ ವೇದಿಕೆಯವರು ನಡೆಸಿದ ರಾಜ್ಯಮಟ್ಟದ ಯುಗಾದಿ ಕವನ ಸ್ಫರ್ಧೆ-2004ರಲ್ಲಿ ಪ್ರಥಮ ಬಹುಮಾನ ಪಡೆದ ಕವಿತೆ)












Click it and Unblock the Notifications