ಕಳೆದುಹೋದಳು ಸಂಗಾತಿ!
- ಅ.ಮ. ಮಹೇಶ, ಬೆಂಗಳೂರು.
ತನ್ನ ದೇಹ-ಮನಸ್ಸೆಲ್ಲಾ ನನಗೇ ಅರ್ಪಿಸಿದಾಕೆ.
ಹಗಲೆಲ್ಲಾ ನನ್ನ ಜೇಬು ಎಂಬ ಮನಸಲ್ಲಿ ಪವಡಿಸುತ್ತಿದ್ದಳು.
ರಾತ್ರಿ ನನ್ನ ನಿದ್ರೆಗೆ ಬಿಟ್ಟು ಮಗ್ಗುಲಲಿ ತಾ ಎಚ್ಚರವಿರುತ್ತಿದ್ದಳು.
ನಾ ಬೇಗೇಳಬೇಕೆಂದಾಗ ತಾನು ಅಲಾರಮ್ ಆಗಿ
ಕೋಳಿಯಂತೆ ಕೂಗಿ, ಹಕ್ಕಿಯಂತೆ ಹಾಡಿ ಎಬ್ಬಿಸುತ್ತಿದ್ದಳು.
ಸಮಯವನ್ನು ತಿಳಿಸುತ್ತಿದ್ದಳು.
ತಾನಿದ್ದಷ್ಟು ಕಾಲ ಅವಳು ನನ್ನ ಸ್ನೇಹಿತರ,
ಬಂಧುಗಳ ಜೊತೆ ಚೆನ್ನಾಗಿದ್ದಳು-
ಅವರ ಸಂಪರ್ಕವನ್ನು ನನಗೆ ಕಲ್ಪಿಸಿಕೊಡುತ್ತಿದ್ದಳು.
ಅವಳೇನು ಬಲ್ಲಳು ಪಾಪ!
ಪರಿಚಯವಿಲ್ಲದವರೂ ತಪ್ಪಿ ಮಾತನಾಡಿದರೂ
ಅವರೊಡನೆಯೂ ಮಾತಿಗಿಳಿಸುತ್ತಿದ್ದಳು.
ನನಗೆ ಬೇಜಾರಾದಾಗ ನನ್ನೊಂದಿಗೆ ಕೇರಂ ಆಡುತ್ತಿದ್ದಳು,
ಇಷ್ಟಪಟ್ಟರೆ ಸಿನಿಮಾದ ಹಾಡಿನ ಸಾಹಿತ್ಯವಲ್ಲ
ಅದರ ರಾಗದ ತುಣುಕೊಂದನ್ನು ಅಂದವಾಗಿ ಹಾಡಿಬಿಡುತ್ತಿದ್ದಳು.
ಆಕೆ ನನ್ನಿಂದ ಏನೂ ನಿರೀಕ್ಷಿಸುತ್ತಿರಲಿಲ್ಲ;
ಸಂಬಳ ಬಂದಾಗಲೂ- ಬರೀ ಖರ್ಚು-ವೆಚ್ಚದ
ಲೆಕ್ಕ ಮಾಡಿಕೊಡುತ್ತಿದ್ದಳು ಅಷ್ಟೆ.
ನಾನೇ ತಿಂಗಳು ಒಂದಕ್ಕೋ-ಎರಡಕ್ಕೋ
ಇಪ್ಪತ್ತೈದು ರೂಪಾಯಿಗೆ ಅವಳನ್ನು ತೃಪ್ತಿಪಡಿಸುತ್ತಿದ್ದೆ!
ಆಜೀವನ ಪರ್ಯಾಂತ ನನಗೆ ಸಂಗಾತಿಯಾಗಿ ಬಂದವಳಾಕೆ,
ನನ್ನ ಖಾಲಿ ಕಿಸೆಗೆ ಬಹುಶ: ಮನಸ್ಸಲ್ಲೇ ಬೇಜಾರುಪಟ್ಟುಕೊಂಡಿರಬಹುದು.
ಬಸ್ಸಿನ ರಸ್ಸಿನಲಿ ನನ್ನ ಕೈಬಿಟ್ಟು ಮತ್ತೊಬ್ಬನ ಕೈಸೇರಿಹೋಗಿದ್ದಳು.ಅಲ್ಲ! ಆತ ನನ್ನ ಯಾಮಾರಿಸಿ ಅವಳನ್ನು ಕದ್ದೊಯ್ದ!
ಬೇಜಾರಾಯಿತು, ಕಳೆದುಹೋದದ್ದು ಸಿಗುವುದಿಲ್ಲವೆಂದು
ಕಣ್ಣೊರೆಸಿ ಸುಮ್ಮನಾದೆ.
ಅವಳು ಸಾಮಾನ್ಯಳಲ್ಲ, ಕುಬೇರನ ಮಗಳು!
ನೋಕಿಯಾ ಎಂಬ ಹೆಸರು ಹೊತ್ತ
ದೊಡ್ದ ಕಂಪನಿಯ ಮಾಲೀಕನ ಪುತ್ರಿ-
ಕೇವಲ ಎರಡು ಸಾವಿರಕ್ಕೆ ನನಗೆ ಒಲಿದಿದ್ದಳು!!!
ಅವಳ ಹೆಸರು ನೊಕಿಯಾ 1110
ಅವಳ ಸಂಪರ್ಕದ ಸಂಖ್ಯೆ 9945128967.












Click it and Unblock the Notifications