ಕನಸ ನೇಯುವ ಕಾಯಕ
- ಡಾ .ಉಷಾ ಪಾಠಕ್, ಮೈಸೂರು
ಕನಸುಗಳ ಕಟ್ಟುವುದಿಲ್ಲ ಬದಲು ನೇಯುತ್ತೇನೆ.ಅಲ್ಲಿ ಜೇಡನ ಕಲೆಗಾರಿಕೆಯಿದೆ
ನಾ ನೇಯ್ದ ಕನಸುಗಳಲ್ಲಿ ಸಿಕ್ಕಿಕೊಳ್ಳುವಾಸೆ.
ನನಗೆ ಗೊತ್ತು ಕನಸುಗಳೆಂದೂ ವಾಸ್ತವವಲ್ಲ
ಆದರೂ ಕನಸುಗಳ ನೇಯುವುದ ನಾ ಬಿಡಲಿ ಹೇಗೆ
ಒಂದಲ್ಲ ಒಂದು ದಿನ ಒಂದಾದರೂ ಕನಸು
ಬಲೆಗೆ ಬೀಳದೇ ಇದ್ದೀತೇ ಎಂಬ ಮತ್ತೊಂದು ಕನಸು
ನನ್ನದಿದು ಹಗಲುಗನಸು, ಇದಕ್ಕೆ ನನ್ನದೇ ಚಿತ್ತಾರ
ಆ ರಾತ್ರಿಯದಕ್ಕೆ ನನ್ನ ಹಂಗಿಲ್ಲ, ಅನೈಚ್ಛಿಕ
ನಸು ಬೆಳಕಿನಲ್ಲಿ ಸೋನೆಯ ಜಿನುಗಿನಂತೆ
ಕನಸ ನೇಯುತ್ತೇನೆ ನಸುನಗುತ್ತ ಅಳು ನುಂಗುತ್ತ
ನಾನಂದು ಕಂಡಿದ್ದ ನನ್ನದೇ ತುಣುಕ
ಒಮ್ಮೆಯಾದರೂ ಕಂಡೇನೆಂಬ ತವಕ
ಉಸಿರಾಗಿದ್ದೆನದಕ್ಕೆ ಬಸಿರಾಗಿದ್ದೆ
ಹಸಿಯಾಗಿದ್ದಾಗಲೇ ಉಸಿರಚೆಲ್ಲಿ ಹೋದದ್ದು
ಮತ್ತೆ ಬಿಸಿಯಾಗದಂತೆ.
ಕನಸುಗಳು ಅನಾಥವಾಗಿ ಸಾಗುವುದ ಕಂಡೂ
ನಸುನಕ್ಕು ನಸುಕಿನಲ್ಲಿ ಮತ್ತೆ ನೇಯುತ್ತೇನೆ
ಎಂದೂ ಹೊಸತೇ ಆಗಿ ಕಾಣುವ ಕನಸೊಂದನು












Click it and Unblock the Notifications